Asianet Suvarna News Asianet Suvarna News

ಬುದ್ಧಿ ಬೆಳೆಸಿ, ಗಳಿಸಿದ್ದಲ್ಲಿ ಉಳಿಸಿ : ಹಣ ಉಳಿಸುವ ಸುಲಭ ಮಾರ್ಗಗಳು

ಉದ್ಯೋಗಕ್ಕೆ ಸೇರಿ ದಶಕ ಕಳೆದ ಬಳಿಕವೂ ಹಣ ಉಳಿಸಲು ಸಾಧ್ಯವಾಗಿರದಿದ್ದಲ್ಲಿ ಕೊರಗಬೇಕಾಗಿಲ್ಲ. ಕಳೆದ ಸಮಯದಲ್ಲಿ ನಷ್ಟವಾದ ಹಣವನ್ನು ಲೆಕ್ಕ ಹಾಕುತ್ತಾ ಕೂರದಿರಿ. ಯೋಜನೆಯೇ ಇಲ್ಲದೆ ದಿನಗಳೆಯುವುದು ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಹೊತ್ತು ಹಾಕಿದಂತೆ. ಇನ್ನೂ ಕಾಲ ಮಿಂಚಿಲ್ಲ. ಎಚ್ಚೆತ್ತುಕೊಂಡರೆ ಭವಿಷ್ಯ ಸುಂದರ.

Simple tips for money saving

‘‘ಬದುಕು ಎಷ್ಟೋ ಬಾರಿ ಲೆಕ್ಕಾಚಾರವಿಲ್ಲದೆ ಕಳೆದುಹೋಗುತ್ತದೆ. ಛೇ ಅಂದು ನಾನು ಸುಖಾಸುಮ್ಮನೆ ಖರ್ಚು ಮಾಡುವ ಬದಲು ಕೊಂಚ ಉಳಿಸಿದ್ದರೆ ಈಗ ಎಷ್ಟು ಅನುಕೂಲವಾಗುತ್ತಿತ್ತು? ಎಂದು ಅನ್ನಿಸುವ ಮೊದಲೇ ಎಚ್ಚೆತ್ತುಕೊಳ್ಳುವುದು ಮುಖ್ಯ. ಈಗಷ್ಟೇ ಉದ್ಯೋಗಕ್ಕೆ ಸೇರಿರುವವರು ಮೊದಲ ತಿಂಗಳಿಂದಲೇ ಹೂಡಿಕೆಯ ಬಗ್ಗೆ ಆಲೋಚಿಸುತ್ತಾ ಹೋದಲ್ಲಿ ಭವಿಷ್ಯ ಸುಂದರವಾಗುತ್ತದೆ. ಉದ್ಯೋಗಕ್ಕೆ ಸೇರಿ ದಶಕ ಕಳೆದ ಬಳಿಕವೂ ಹಣ ಉಳಿಸಲು ಸಾಧ್ಯವಾಗಿರದಿದ್ದಲ್ಲಿ ಕೊರಗಬೇಕಾಗಿಲ್ಲ. ಕಳೆದ ಸಮಯದಲ್ಲಿ ನಷ್ಟವಾದ ಹಣವನ್ನು ಲೆಕ್ಕ ಹಾಕುತ್ತಾ ಕೂರದಿರಿ. ಯೋಜನೆಯೇ ಇಲ್ಲದೆ ದಿನಗಳೆಯುವುದು ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಹೊತ್ತು ಹಾಕಿದಂತೆ. ಇನ್ನೂ ಕಾಲ ಮಿಂಚಿಲ್ಲ. ಎಚ್ಚೆತ್ತುಕೊಂಡರೆ ಭವಿಷ್ಯ ಸುಂದರ.

ಉಳಿಕೆಯೇ ಪ್ರಥಮ: ಸಾಮಾನ್ಯವಾಗಿ ಏನಾಗಿಬಿಡುತ್ತದೆಂದರೆ ಈ ತಿಂಗಳ ಸಂಬಳದಲ್ಲಿ ಇಷ್ಟು ದುಡ್ಡನ್ನು ಉಳಿಸಿ ತಿಂಗಳ ಕೊನೆಗೆ ಎಲ್ಲಾದರೂ ಹೂಡುತ್ತೇನೆ ಅಥವಾ ನನ್ನಿಷ್ಟದ ವಸ್ತುವನ್ನು ಕೊಂಡುಕೊಳ್ಳುತ್ತೇನೆ ಎಂದಾದಲ್ಲಿ ನೀವು ಮೂರ್ಖತನ ಮಾಡುತ್ತಿದ್ದೀರಿ ಎಂದರ್ಥ. ದುಡ್ಡು ಯಾವ್ಯಾವುದೋ ರೀತಿಯಲ್ಲಿ ಖರ್ಚಾಗಿ ತಿಂಗಳ ಕೊನೆಗೆ ನೀವು ಮತ್ತೆ ಸಂಬಳಕ್ಕೆ ಕಾಯುತ್ತಾ ಕೂರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಸಂಬಳ ಬಂದ ಕೂಡಲೇ ಮಾಡಬೇಕಾದ ಮೊದಲ ಕಾರ್ಯವೆಂದರೆ ನಿಮ್ಮ ತಿಂಗಳ ಪ್ಲಾನ್ ಮಾಡಿಕೊಂಡು ಉಳಿದದ್ದನ್ನಷ್ಟೇ ಕೈಯಲ್ಲಿ ಇಟ್ಟುಕೊಳ್ಳುವುದು. ಇದರರ್ಥ ಎಲ್ಲವನ್ನೂ ಉಳಿಸಿ ಬರಿಗೈ ದಾಸರಾಗಬೇಕೆಂದಲ್ಲ. ಅಗತ್ಯ ಸಂದರ್ಭಗಳಲ್ಲಿ ಏನು ಮಾಡಬಹುದು ಎಂಬ ಬಗ್ಗೆಯೂ ಸ್ಪಷ್ಟತೆ ಇರಬೇಕು.

ಎಷ್ಟು ಉಳಿಸಬೇಕು?: ಇಷ್ಟೇ ಉಳಿಸಬೇಕು, ಅಷ್ಟೇ ಉಳಿಸಬೇಕು ಎಂಬುದಾಗಿ ನಿಖರವಾದ ನಿಯಮಗಳಿಲ್ಲ. ಉಳಿಸಿದಷ್ಟೂ ಅನುಕೂಲವೇ. ಆದರೆ ಏನಿಲ್ಲವೆಂದರೂ ಇಷ್ಟಾದರೂ ಉಳಿಸುವುದು ಅನಿವಾರ್ಯ ಎಂಬುದಷ್ಟೇ ಇಲ್ಲಿರುವ ತರ್ಕ. ಸಾಮಾನ್ಯವಾಗಿ 25ರ ಹರೆಯದಲ್ಲಿ ಉದ್ಯೋಗಕ್ಕೆ ಸೇರಿದವರು ಪ್ರಾರಂಭದ ದಿನಗಳಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ. ದಿನಗಳು ಎಲ್ಲವೂ ಅಂದುಕೊಂಡಂತಿರುವುದಿಲ್ಲ. ತೆರಿಗೆ ಕಡಿದು ಉಳಿಯುವ ಆದಾಯದಲ್ಲಿ ಕನಿಷ್ಟವೆಂದರೂ ಶೇ.10ರಷ್ಟನ್ನಾದರೂ ಉಳಿಸುವಲ್ಲಿ ಯಶಸ್ವಿಯಾದಲ್ಲಿ ಮುಂದೆ ಉತ್ತಮ ದಿನಗಳನ್ನು ನಿರೀಕ್ಷಿಸಬಹುದು. ಆದಾಯ ಹೆಚ್ಚುತ್ತಾ ಹೋದಂತೆಲ್ಲಾ ನಿಮ್ಮ ಗುರಿ ಈಡೇರಿಕೆಗಾಗಿ ಉಳಿಕೆಯನ್ನು ಶೇ.15, ಶೇ. 20ಕ್ಕೆ ಹೆಚ್ಚಿಸುತ್ತಾ ಹೋಗುವುದು ಮುಖ್ಯ. ಜೀವಮಾನ ಪೂರ್ತಿ ಶೇ.10ರಲ್ಲೇ ದಿನದೂಡುವುದು ಅಸಾಧ್ಯ. ಮಧ್ಯವಯಸ್ಕರು ಎದುರಿರುವ ಭಾರಿ ವೆಚ್ಚಗಳನ್ನು ಸರಿದೂಗಿಸಿದ ಮೇಲೂ ಶೇ.35ರಷ್ಟು ಉಳಿಕೆ ಮಾಡುವುದು ಬಹಳ ಮುಖ್ಯ ಎಂದು ಅಧ್ಯಯನಗಳು ತಿಳಿಸುತ್ತವೆ.

50-20-30 ನೀತಿ: ಹೆಚ್ಚಿನ ಸಂದರ್ಭಗಲ್ಲಿ ನಮ್ಮ ಆದಾಯಕ್ಕೆ ತಕ್ಕಂತೆ ನಮ್ಮ ಲ್ೆಸ್ಟೈಲ್ ಇರುತ್ತದಾದ್ದರಿಂದ ಶೇ.50 ಜೀವನ ನಿರ್ವಹಣೆಗೇ ಸರಿದೂಗುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಖರ್ಚುವೆಚ್ಚಗಳು ಈ ರೇಖೆಯನ್ನು ದಾಟಿ ಹೋಗದಂತೆ ಎಚ್ಚರಿಕೆ ವಹಿಸಿ. ಶೇ. 20ರಷ್ಟನ್ನು ನಿಮ್ಮ ತಕ್ಷಣದ, ಮಧ್ಯಕಾಲೀನ, ದೀರ್ಘಕಾಲೀನ ಗುರಿಗಳ ಈಡೇರಿಕೆಗಾಗಿ ಉಳಿತಾಯ ಮಾಡಿ. ದಿನನಿತ್ಯದ ಬದುಕಿನಲ್ಲಿ ಮನರಂಜನೆ ಅಗತ್ಯವಿರುವುದರಿಂದ ಉಳಿದ ಶೇ.30ನ್ನು ಆಹಾರ, ಪ್ರಯಾಣ, ಪ್ರವಾಸ ಇತ್ಯಾದಿಗಳಿಗೆ ವೆಚ್ಚ ಮಾಡಬಹುದು.

20-4-10 ನೀತಿ: ಒಂದು ಹೊಸ ಕಾರು ಕೊಂಡುಕೊಳ್ಳುವ ಯೋಜನೆ ನಿಮ್ಮ ಮುಂದಿದೆ ಎಂದಾದಲ್ಲಿ ಈ ನೀತಿ ಬಹಳ ಸಹಾಯಕ್ಕೆ ಬರುತ್ತದೆ. ನಿಮ್ಮ ಆದಾಯದ ಶೇ.20ರಷ್ಟು ಉಳಿಕೆಯನ್ನು ಕಾರಿನ ಡೌನ್ ಪೇಮೆಂಟಿಗೆ ಬಳಸಿ. ೈನಾನ್ಸ್ ಮಾಡುವವರು ನೀವು ದೀರ್ಘಕಾಲಕ್ಕೆ ಲೋನ್ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ. ಯಾಕೆಂದರೆ ಅವರಿಗೆ ಅದರಿಂದ ಲಾಭವಿದೆ. ನಿಮಗೆ ಅನುಕೂಲವಿದ್ದಲ್ಲಿ ನೀವು ಕಾರಿನ ಕಂತು ಹೆಚ್ಚು ಕಟ್ಟಿದಷ್ಟೂ ಉತ್ತಮ. ವ್ಯರ್ಥವಾಗಿ ಆರೇಳು ವರ್ಷ ಕಂತು ಕಟ್ಟುತ್ತಾ ಕಾಲ ಕಳೆಯುವುದಕ್ಕಿಂತ 4 ವರ್ಷದಲ್ಲಿ ಮುಗಿಸಿಬಿಡುವುದು ಉತ್ತಮ. ಇಲ್ಲವಾದಲ್ಲಿ ಕಂತು ಮುಗಿಯುವ ಹೊತ್ತಿಗೆ ಕಾರೂ ಗುಜರಿಯಾಗಿರುತ್ತದೆ. ಇನ್ನು ನಿಮ್ಮ ವೇತನದ ಶೇ.10ರಷ್ಟನ್ನು ಕಂತಿನ ಹಣವನ್ನಾಗಿ ಪಾವತಿಸಿದಾಗ ಈ ನೀತಿಗೆ ನ್ಯಾಯ ಒದಗಿಸಿದಂತಾಗುತ್ತದೆ.

ತುರ್ತು ನೀತಿ: ದುಡ್ಡಿನ ಅಗತ್ಯ ಯಾವಾಗ ಹೇಗೆ ಬೀಳುತ್ತದೆ ಎಂದು ಹೇಳಲು ಅಸಾಧ್ಯ. ಬದುಕಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ದುಡ್ಡಿನ ಅನಿವಾರ್ಯತೆ ಎದುರಾಗಬಹುದು. ಅದನ್ನು ಇಷ್ಟೇ ಅಂತ ಹೇಳಲು ಬರುವುದಿಲ್ಲ. ಹೀಗಾಗಿ ಎಲ್ಲಾ ಉಳಿಕೆ, ಹೂಡಿಕೆಗಳ ಬಳಿಕವೂ ತುರ್ತು ಸಂದರ್ಭದಲ್ಲಿ ಅನುಕೂಲವಾಗಲು ನಿಮ್ಮಲ್ಲಿ ಹಣ ಇರಲೇ ಬೇಕಾಗುತ್ತದೆ. ಆರೋಗ್ಯ ವಿಮೆ, ವಾಹನ ವಿಮೆಗಳನ್ನೆಲ್ಲಾ ಅಂದುಕೊಂಡ ಕಾಲಕ್ಕೆ ಪಾವತಿಯಾಗುವುದಿಲ್ಲವಾದದ್ದರಿಂದ ಟರ್ನ್ ಓರ್ವ ಮಾಡಲು ಸಾಧ್ಯವಾಗುವಂತಹ ಪ್ಲಾನ್ ಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಉಳಿಕೆಯನ್ನು ನಿರ್ದಿಷ್ಟವಾಗಿ ಇಷ್ಟೇ ಎಂದು ಹೇಳಲು ಬಾರದು. ಆದರೂ ಒಬ್ಬ ವ್ಯಕ್ತಿ ತನ್ನ 3ರಿಂದ 6 ತಿಂಗಳ ದಿನವಹಿ ಖರ್ಚಿಗಾಗುವಷ್ಟು ದುಡ್ಡನ್ನು ಸುರಕ್ಷಿತವಾಗಿಡುವುದು ಮುಖ್ಯ. ಏನಿಲ್ಲವೆಂದರೂ ಉದ್ಯೋಗ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾದಾಗ ಇನ್ನೊಂದು ಕೆಲಸ ಹುಡುಕಿಕೊಳ್ಳುವವರೆಗೆ ಇದು ಉಪಯೋಗಕ್ಕೆ ಬರುತ್ತದೆ.

ನಿವೃತ್ತ ಬದುಕಿಗೆಷ್ಟು?: ದುಡಿಯುವುದು ಮತ್ತು ಖರ್ಚು ಮಾಡುವ ನೀತಿಯನ್ನು ಜೀವನಪೂರ್ತಿ ಮಾಡುತ್ತಾ ಕೂರಲಾಗುವುದಿಲ್ಲ. ಉದ್ಯೋಗದಿಂದ ನಿವೃತ್ತಿಯಾದ ಮೇಲೆ ಖರ್ಚು ಮಾಡುವುದಷ್ಟೇ ಪಾಲಿಗೆ ಉಳಿಯುವುದರಿಂದ ಆಗಿನ ಬದುಕಿಗೂ ಕೊಂಚ ಉಳಿಸಿಡುವುದು ಅಗತ್ಯ. ಸ್ವಯಂ ಉದ್ಯೋಗಿಗಳಾದವರು ತಮಗೆ ತಾವೇ ನಿವೃತ್ತಿಯ ವಯಸ್ಸನ್ನು ನಿರ್ಧರಿಸಿಕೊಂಡುಬಿಡಬೇಕು. ವ್ಯಕ್ತಿಯೊಬ್ಬ ತನ್ನ ವಾರ್ಷಿಕ ಆದಾಯದ 20 ಪಟ್ಟು ದುಡ್ಡನ್ನು ನಿವೃತ್ತ ಬದುಕಿಗೆ ಎತ್ತಿಡುವ ಗುರಿ ಹೊಂದಿರಬೇಕು.

ಮನೆಸಾಲದ ಸರಿದೂಗಿಸುವಿಕೆ: ಬದುಕಿನಲ್ಲಿ ಮನೆ ಕಟ್ಟುವುದು ಪ್ರತಿಯೊಬ್ಬನ ಕನಸು. ಆ ಕನಸು ನನಸಾಗಿಸುವ ಹಾದಿಯಲ್ಲಿ ಎಡವಬಾರದು. ಮನೆ ಕೊಳ್ಳುವಾಗ ಶೇ.20ರಷ್ಟು ಡೌನ್ ಪೇಮೆಂಟ್ ಕಟ್ಟಬೇಕಾಗುತ್ತದೆ. ಉಳಿದ ಮನೆ ಸಾಲವನ್ನು ಕಂತಿನ ರೂಪದಲ್ಲಿ ಕಟ್ಟಬೇಕಾಗುತ್ತದೆ. ಆ ಸಂದರ್ಭದಲ್ಲಿ ಕೈಕಟ್ಟಬಾರದು ಎಂದರೆ ಈ ಮೂರು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೈಗೆ ಬರುವ ಪಗಾರ, ಡೌನ್ ಪೇಮೆಂಟ್ ಮತ್ತು ಮನೆ ಸಾಲದ ಬಡ್ಡಿದರ. ರಿಯಲ್ ಎಸ್ಟೇಟ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಇಂದಿನ ದಿನಗಳಲ್ಲಿ ನೀವು ಸಾಧ್ಯವಾದಷ್ಟು ಬೇಗನೇ ಮನೆ ಬಗ್ಗೆ ಯೋಚಿಸುವುದು ಒಳಿತು. ಈಗ ಮನೆಸಾಲದ ಕಂತು ಹೆಚ್ಚು ಅನ್ನಿಸಿದರೂ ನಿಮ್ಮ ಆದಾಯ ಹೆಚ್ಚಾದ ಸಂದರ್ಭದಲ್ಲೂ ಕಂತಿನ ಹಣ ಅಷ್ಚೇ ಇರುವುದುರಿಂದ ಹೊರೆಯಾಗಲಾರದು. ಗೃಹ ಸಾಲದ ಇಎಂಐ ತಿಂಗಳ ಆದಾಯದ ಶೇ.30ಕ್ಕಿಂತ ಕಡಿಮೆ ಇದ್ದರೆ ಒಳಿತು. ಉಳಿದೆಲ್ಲಾ ಸಾಲದ ಕಂತುಗಳೂ ಸೇರಿ ತಿಂಗಳ ಆದಾಯದ ಶೇ.50 ದಾಟಬಾರದು.

(ಗಣೇಶ್ ಪ್ರಸಾದ್ ಕುಂಬ್ಳೆ, ಕನ್ನಡ ಪ್ರಭ)

Follow Us:
Download App:
  • android
  • ios