ಸೆಕ್ಸ್'ಗೂ ನಿದ್ದೆಗೂ ಏನು ಸಂಬಂಧ: ಇದು ಪ್ರತಿಯೊಬ್ಬರು ತಿಳಿಯಬೇಕಾದ ವಿಷಯ

First Published 22, Feb 2018, 10:07 PM IST
Sex and Sleep
Highlights

ಜಾಸ್ತಿ ನಿದ್ರೆ ಮಾಡಬಾರದು ಎಂಬುದೇನೋ ಒಳ್ಳೆಯದು. ಆದರೆ, ಅತಿ ಕಡಿಮೆ ನಿದ್ರೆ ಮಾಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ರತಿದಿನ ಕಡಿಮೆ ನಿದ್ರೆ ಮಾಡಿದರೆ ನಿರುತ್ಸಾಹ ಹೆಚ್ಚುತ್ತದೆ.

ರಾತ್ರಿ ವಿಶ್ರಾಂತಿದಾಯಕ, ಸುಖಕರವಾದ ನಿದ್ರೆ ಮಾಡಿದರೆ ಮರುದಿನದ ಅರ್ಥಪೂರ್ಣ ಕ್ರಿಯೆಗಳಿಗೆ ಉಲ್ಲಾಸ, ಉತ್ತೇಜನ ಲಭಿಸುತ್ತದೆ. ಒಬ್ಬ ವ್ಯಕ್ತಿ ಇಂತಿಷ್ಟೇ ನಿದ್ರೆ ಮಾಡಬೇಕೆಂಬ ಕಟ್ಟುಬದ್ಧ ನಿಯಮವೇನೂ ಇಲ್ಲ. ಅವರವರ ಅನುಕೂಲ, ಸಮಯಕ್ಕೆ ತಕ್ಕಂತೆ ನಿದ್ರೆ ಮಾಡುತ್ತಾರೆ. ಆದರೆ, ಕಡಿಮೆ ನಿದ್ರೆ ಮಾಡಿದರೆ ಆರೋಗ್ಯ ಕೈ ಕೊಡುವುದಲ್ಲದೇ ಅದರ ಹಿಂದೆಯೇ ಹತ್ತಾರು ಕಾಯಿಲೆಗಳು ವಕ್ಕರಿಸಿಕೊಳ್ಳುತ್ತವೆ.

ವಯಸ್ಸು, ವೃತ್ತಿಯ ಸ್ವರೂಪ, ದೈಹಿಕ ಶ್ರಮ ಹಾಗೂ ಮಾನಸಿಕ ಸ್ಥಿತಿಗತಿ ಅವಲಂಬಿಸಿ ನಿದ್ರೆಯ ಅವಧಿ ನಿಗದಿತವಾಗುತ್ತದೆ. ಮಗುವೊಂದು ದಿನದಲ್ಲಿ 16ರಿಂದ 18 ಗಂಟೆ ನಿದ್ರೆ ಮಾಡಿದರೆ ವಯಸ್ಕರು ಸರಿಸುಮಾರು 4ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುತ್ತಾರೆ. ಕೆಲವು ಕುಂಭಕರ್ಣರು ಎಚ್ಚರ ಇರುವುದ್ದಕ್ಕಿಂತ ಮಲಗುವುದೇ ಹೆಚ್ಚು!

ವೇಳೆ ತಪ್ಪಿಸಬೇಡಿ: 'ಬೇಗ ಮಲಗಿ ಬೇಗ ಏಳು' ಎಂಬುದು ನಾಣ್ಣುಡಿ. ಮಲಗುವ ವೇಳೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೆಲವರಿಗೆ ನಿದ್ರೆ ಬರುವುದಿಲ್ಲ. ಅಷ್ಟೇ ಏಕೆ? ಜಾಗ ಬದಲಾದರೂ ಮಗ್ಗಲು ಬದಲಿಸುವುದು ಕಷ್ಟವಾಗುತ್ತದೆ. ಹೀಗಾಗಿ ಮಲಗುವ ಸ್ಥಳ ಹಾಗೂ ಸಮಯ ಸರಿಯಾಗಿರಲಿ. ಮಧ್ಯಾಹ್ನದ ನಿದ್ರೆ ಹೆಚ್ಚಾದರೂ ರಾತ್ರಿ ಮಲಗಲು ಪರದಾಡಬೇಕಾಗುತ್ತದೆ. ಹೀಗಾಗಿ ಮಧ್ಯಾಹ್ನದ ಕೋಳಿ ನಿದ್ರೆ ಸಮಯ ಮೀರದಿರಲಿ.

ಹಾಲು ಕುಡಿದು ಮಲಗಿ: ಮಲಗುವ ಮುನ್ನ ಅಂದರೆ ಊಟದ ಬಳಿಕ ಒಂದು ಲೋಟ ಬಿಸಿ ಹಾಲು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. 'ಅಮೈನೋ ಆಮ್ಲ'ಗಳು ಹಾಲಿನಲ್ಲಿ ಹೆಚ್ಚಾಗಿರುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಅಲ್ಲದೇ ಮಧ್ಯದಲ್ಲಿ ಎಚ್ಚರವಾಗುವ ದುಸ್ಥಿತಿಯೂ ತಪ್ಪುತ್ತದೆ. ಮದ್ಯಪಾನ, ಧೂಮಪಾನ ಮಾಡುವುದರಿಂದ ನಿದ್ರಾಭಂಗವಾಗುತ್ತದೆ. ನಶೆಯ ಕ್ಷಣದಲ್ಲಿ ನಿದ್ರೆ ಅಮಲು ಬಂದರೂ ಎಚ್ಚರವಾದ ಬಳಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆ ಮಾತ್ರೆಯ ಸುದ್ದಿಗೆ ಹೋಗಲೇ ಬೇಡಿ.

ಹೆಚ್ಚು ನಿದ್ರೆ ಅಪಾಯಕಾರಿ: ಸಮಯ ಸಿಕ್ಕಿದೆಯೆಂದು ಹಾಸಿಗೆಯಲ್ಲಿ ಬಿದ್ದುಕೊಳ್ಳುವುದು ಸರಿಯಲ್ಲ. 6ರಿಂದ 8 ಗಂಟೆ ಆರೋಗ್ಯಕರ ನಿದ್ರೆ. ದೈಹಿಕವಾಗಿಯೂ ಹಿತ. ಆದರೆ, ಹೆಚ್ಚು ನಿದ್ರೆ ಮಾಡಿದರೆ ಸ್ನಾಯುಗಳಲ್ಲಿ ಪೌಷ್ಟಿಕಾಂಶ ಕೊರತೆ ಉಂಟಾಗುತ್ತದೆ. ಬೆನ್ನು ನೋವು, ಮಂಡಿ ನೋವು ಸೇರಿದಂತೆ ಇತರೆ ಕಾಯಿಲೆಗಳು ಅಮರಿಕೊಳ್ಳುತ್ತವೆ.

ನಿದ್ರೆ ಮಾಡದಿದ್ದರೂ ಕಷ್ಟ!ಜಾಸ್ತಿ ನಿದ್ರೆ ಮಾಡಬಾರದು ಎಂಬುದೇನೋ ಒಳ್ಳೆಯದು. ಆದರೆ, ಅತಿ ಕಡಿಮೆ ನಿದ್ರೆ ಮಾಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ರತಿದಿನ ಕಡಿಮೆ ನಿದ್ರೆ ಮಾಡಿದರೆ ನಿರುತ್ಸಾಹ ಹೆಚ್ಚುತ್ತದೆ. ಕಾಮಾಸಕ್ತಿ ಕುಗ್ಗುತ್ತದೆ. [ಹಾಗಂತ ಅಗತ್ಯ ನಿದ್ರೆ ಮಾಡುವವರಿಗೆಲ್ಲರಿಗೂ ಸಿಕ್ಕಾಪಟ್ಟೆ ಕಾಮಾಸಕ್ತಿಯಿರುತ್ತದೆಯೆಂದುಕೊಂಡರೆ ತಪ್ಪಾಗಬಹುದು] ನರಗಳ ದೌರ್ಬಲ್ಯ ಆರಂಭವಾಗುತ್ತದೆ. ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನೆನಪಿನ ಶಕ್ತಿ ಕುಂದುತ್ತದೆ. ಹೃದಯರೋಗದ ಸಂಭವ ಹೆಚ್ಚುತ್ತದೆ. ಸುಸ್ತು, ತಲೆನೋವು, ಬೆನ್ನುನೋವು, ಕಣ್ಣು ಉರಿ, ದೇಹ ಉಷ್ಣಾಂಶ ಹೆಚ್ಚಾಗುವ ಸಮಸ್ಯೆ ತಲೆದೋರುತ್ತವೆ. ರೋಗನಿರೋಧಕ ಶಕ್ತಿ ಕುಂದುತ್ತದೆ.

ಅಷ್ಟ ಸೂತ್ರ

ಹಗಲಿನಲ್ಲಿ ಸಾಧ್ಯವಾದಷ್ಟು ಕಾಲ್ನಡಿಗೆಯಲ್ಲಿ ಓಡಾಡಿ. ಬೈಕು, ಕಾರುಗಳಿಗೆ ವಿಶ್ರಾಂತಿ ನೀಡಿ. ಬೆಳಗಿನ ವ್ಯಾಯಾಮ, ವಾಕಿಂಗ್ ದೇಹಕ್ಕೆ ಒಳ್ಳೆಯದು.

ಮಲಗಲು ಬರುವ ಮುನ್ನ ಮನಸ್ಸು ಪ್ರಫುಲ್ಲ, ಪ್ರಸನ್ನವಾಗಿರಲಿ. ಕಚೇರಿಯ ಒತ್ತಡ, ಜಂಜಡಗಳನ್ನು ಅಲ್ಲಿಯೇ ಬಿಟ್ಟು ಬನ್ನಿ. ಮನೆಯಲ್ಲೂ ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ.

ಕುಟುಂಬ ಸದಸ್ಯರೊಂದಿಗೆ ಕೆಲವು ಕಾಲ ಸಂತಸದಿಂದ ಕಳೆಯಿರಿ. ಟಿವಿಯಿಂದ ಸಾಧ್ಯವಾದಷ್ಟು ದೂರವಿರಿ.

ನಿಗದಿತ ಸಮಯದಲ್ಲೇ ಮಲಗಲು ಪ್ರಯತ್ನಿಸಿ. ರಾತ್ರಿ 11 ಗಂಟೆ ಹೊತ್ತಿಗೆ ಮಲಗಿ ಬೆಳಗ್ಗೆ 6 ಅಥವಾ 7 ಗಂಟೆ ವೇಳೆಗೆ ಏಳುವ ರೂಢಿ ಮಾಡಿಕೊಳ್ಳಿ.

ದ್ವೇಷ, ಅಸೂಯೆ, ಕ್ರೋಧ, ಭಯ ನಿದ್ರಾಭಂಗಕ್ಕೆ ಕಾರಣವಾಗುತ್ತದೆ. ಹೀಗಾಗಿ ನೆಮ್ಮದಿಯ ನಿದ್ರೆ ಮಾಡಲು ಅವೆಲ್ಲವುಗಳಿಂದ ದೂರವಿರಿ. ಮಾನಸಿಕವಾಗಿ ಆರಾಮವಾಗಿರಿ.

ಮಲಗುವ ಮುನ್ನ ಅತಿಯಾದ ಆಹಾರ ಸೇವಿಸಬೇಡಿ. ಹಿತಮಿತ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಚಹಾ, ಕಾಫಿ ಕುಡಿಯುವ ರೂಢಿ ಇಟ್ಟುಕೊಳ್ಳಬೇಡಿ.

ಮಲಗುವ ಕೋಣೆಗೆ ಗಾಳಿ, ಬೆಳಕು ಚೆನ್ನಾಗಿ ಬರುವ ಹಾಗಿರಲಿ. ಸಿಕ್ಕಾಪಟ್ಟೆ ಕರ್ಕಶ ಶಬ್ದ ಕಿವಿಗೆ ಬೀಳದಂತಿರಲಿ.

ಮೊಬೈಲ್ ಫೋನ್ ಮಗ್ಗುಲಲ್ಲೇ ಇಟ್ಟುಕೊಂಡು ಮಲಗಬೇಡಿ. ಸಾಧ್ಯವಾದರೆ 'ಮ್ಯೂಟ್‌' ಮಾಡಿ ಮಲಗಿಕೊಳ್ಳಿ.

 

loader