Asianet Suvarna News Asianet Suvarna News

ಪೊಲೀಸರ ಖಿನ್ನತೆ ಮತ್ತು ಆತ್ಮಹತ್ಯೆಗೆ ಕಾರಣ ಏನು?

ಈ ನಡುವೆ ಪೊಲೀಸ್‌ ಅಧಿಕಾರಿಗಳ ಆತ್ಮಹತ್ಯೆ ಹೆಚ್ಚುತ್ತಿದೆ. ಏಕಾಗಿ ಈ ಆತ್ಮಹತ್ಯೆ? ಯಾವ ಕಾರ್ಯ ಸಾಧನೆಗಾಗಿ ಪೊಲೀಸ್‌ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಬೇಕು? ಆತ್ಮಹತ್ಯೆ ಮಾಡಿಕೊಳ್ಳುವಂತಹ ಖಿನ್ನತೆಯಾದರೂ ಏಕಾಗಿ ಬರುತ್ತಿದೆ? ಇಲಾಖೆಯು ಎಲ್ಲಿ ಎಡವುತ್ತಿದೆ ಅಥವಾ ಪೊಲೀಸ್‌ ಅಧಿಕಾರಿಗಳಿಗೆ ಒತ್ತಡವನ್ನು ಮೀರುವಂತಹ ತಂತ್ರಗಳು ಗೊತ್ತಾಗುತ್ತಿಲ್ಲವಾ ಎಂಬ ಪ್ರಶ್ನೆಗಳು ನಮ್ಮೆದುರು ಮೂಡುತ್ತಿವೆ.

Reason behind why police fell in Depression and commit to suicide
Author
Bengaluru, First Published Aug 2, 2020, 4:24 PM IST

ಈ ನಡುವೆ ಪೊಲೀಸ್‌ ಅಧಿಕಾರಿಗಳ ಆತ್ಮಹತ್ಯೆ ಹೆಚ್ಚುತ್ತಿದೆ. ಏಕಾಗಿ ಈ ಆತ್ಮಹತ್ಯೆ? ಯಾವ ಕಾರ್ಯ ಸಾಧನೆಗಾಗಿ ಪೊಲೀಸ್‌ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಬೇಕು? ಆತ್ಮಹತ್ಯೆ ಮಾಡಿಕೊಳ್ಳುವಂತಹ ಖಿನ್ನತೆಯಾದರೂ ಏಕಾಗಿ ಬರುತ್ತಿದೆ? ಇಲಾಖೆಯು ಎಲ್ಲಿ ಎಡವುತ್ತಿದೆ ಅಥವಾ ಪೊಲೀಸ್‌ ಅಧಿಕಾರಿಗಳಿಗೆ ಒತ್ತಡವನ್ನು ಮೀರುವಂತಹ ತಂತ್ರಗಳು ಗೊತ್ತಾಗುತ್ತಿಲ್ಲವಾ ಎಂಬ ಪ್ರಶ್ನೆಗಳು ನಮ್ಮೆದುರು ಮೂಡುತ್ತಿವೆ.

ದೆಹಲಿಯಲ್ಲಿ ವಿಷ್ಣುದತ್ತ ವೈಷ್ಣೋಯಿ ಎಂಬ ಪೊಲೀಸ್‌ ಅಧಿಕಾರಿ, ತಿರುವನಂತಪುರದಲ್ಲೊಬ್ಬ ಅಧಿಕಾರಿ, ನನ್ನ ಬ್ಯಾಚ್‌ಮೇಟ್‌ ಶೇಷಪ್ಪ, ನಮ್ಮ ಸ್ನೇಹಿತ ಗಣಪತಿ ಎಂಬುವರೂ ಆತ್ಮಹತ್ಯೆ ಮಾಡಿಕೊಂಡರು. ಈಗ ಹಾಸನದ ಚನ್ನರಾಯಪಟ್ಟಣದಲ್ಲಿ ಒಬ್ಬ ಪಿಎಸ್‌ಐ ಶ್ರೀಕಿರಣ್‌ ನೇಣಿಗೆ ಕೊರಳೊಡ್ಡಿದರು. ಇವೆಲ್ಲವೂ ಏಕಾಗಿ ನಡೆಯುತ್ತಿವೆ? ಸಿಗುವ ಏಕೈಕ ಉತ್ತರ ‘ಒತ್ತಡ’. ಈ ಒತ್ತಡ ಯಾಕಾಗಿ ಪೊಲೀಸ್‌ ಅಧಿಕಾರಿಗಳನ್ನು ಹೆಚ್ಚು ಕಾಡುತ್ತಿದೆ?

ಪೊಲೀಸರೂ ಎಲ್ಲರಂತೆ ಮನುಷ್ಯರು

ಒಬ್ಬ ಪೊಲೀಸ್‌ ಅಧಿಕಾರಿ ಈ ಸಮಾಜದ ಆಸ್ತಿ. ಪೊಲೀಸ್‌ ಅಧಿಕಾರಿಯ ಮುಖ್ಯ ಕೆಲಸ; ಸಮಾಜದ ಜನರ ಪ್ರಾಣ, ಮಾನ, ಆಸ್ತಿಗಳ ರಕ್ಷಣೆ ಹಾಗೂ ಸಂವಿಧಾನಬದ್ಧವಾದ ಶಾಸನಗಳು ಪಾಲನೆಯಾಗುವಂತೆ ನೋಡಿಕೊಳ್ಳುವುದು. ಒಬ್ಬ ಪೊಲೀಸ್‌ ಅಧಿಕಾರಿಯು ಒಂದು ಸರ್ಕಾರದ ಮುಖವಾಣಿಯೇ ಆಗಿ ಈ ನೆಲದ ಕಾನೂನು ಕಟ್ಟಳೆಗಳನ್ನು ಜಾರಿಗೆ ತಂದು ಜನರ ಜೀವ, ಆಸ್ತಿಗಳನ್ನು ಉಳಿಸುವಂಥ ಮಹತ್ಕಾರ್ಯ ಮಾಡುತ್ತಿರುತ್ತಾನೆ. ಹಾಗಾಗಿ ಅಧಿಕಾರಿಯು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದರೆ ಆತನಿಗಿಂತಲೂ ಹೆಚ್ಚು ಮುತುವರ್ಜಿಯಿಂದ ಈ ಸಮಾಜವು ಆ ಪೊಲೀಸ್‌ ಅಧಿಕಾರಿಯನ್ನು ಪೋಷಿಸಬೇಕಾಗುತ್ತದೆ. ಇದು ಕೇವಲ ಮಾತಲ್ಲ, ಇಂದು ಇದು ಅನಿವಾರ್ಯ. ಎಲ್ಲರನ್ನೂ ರಕ್ಷಿಸುವ ಪೊಲೀಸ್‌ ಅಧಿಕಾರಿಗೇ ರಕ್ಷಣೆ ಇಲ್ಲವೆಂದರೆ ಈ ಸಮಾಜವನ್ನು ರಕ್ಷಿಸುವವರಾದರೂ ಯಾರು ಎಂಬ ಪ್ರಶ್ನೆ ಮೂಡುತ್ತದೆ. ಒಬ್ಬ ಪೊಲೀಸ್‌ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂದರೆ ಅದೊಂದು ಸಂಕೀರ್ಣ ವಿಚಾರ. ಇದರಿಂದ ಸಮಾಜಕ್ಕೆ ಆಘಾತವಾಗುವಂತಹ ಸಂದೇಶ ರವಾನೆಯಾಗುವುದರಲ್ಲಿ ಸಂದೇಹ ಇಲ್ಲ.

ಸಿಗದ ರಿಲೀವಿಂಗ್ ಆರ್ಡರ್ : ಪೊಲೀಸ್ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ಹಾಗಿದ್ದರೆ ಪೊಲೀಸ್‌ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದೆ ಎಂದು ಪ್ರಶ್ನಿಸಿದರೆ ಅವರೂ ಮಾನವಹಸಜ ಮನೋವ್ಯಾಪಾರಗಳಿಂದ ಹೊರತಲ್ಲ ಎಂಬುದು ನಿಜ. ಆದರೆ, ಅವರು ಮೇಲ್ನೋಟಕ್ಕೆ ಸದೃಢರಾಗಿದ್ದರೂ, ಮಾನಸಿಕವಾಗಿ ಗಟ್ಟಿಗರಾಗಿದ್ದರೂ ಕೆಲವು ಸಮಯ ಸಂದರ್ಭಗಳು ಅವರನ್ನೂ ಸಹ ಅಧೀರರನ್ನಾಗಿ ಮಾಡಿಬಿಡುತ್ತವೆ. ಒಬ್ಬ ಪೊಲೀಸ್‌ ಅಧಿಕಾರಿ ತನ್ನ ವ್ಯಾಪ್ತಿಯಲ್ಲಿ ಬಲು ಉತ್ತಮವಾಗಿಯೇ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದರೂ, ಯಾವುದೋ ಒಂದು ಪ್ರಕರಣ ಅವನನ್ನು ಅಕ್ಷರಶಃ ಬೆದರಿಸಿಬಿಟ್ಟಿರುತ್ತದೆ. ಇಷ್ಟುದಿನ ಗಳಿಸಿದ ಮಾನ, ಗೌರವಗಳೆಲ್ಲವೂ ಇಂದು ಮಣ್ಣು ಪಾಲಾದರೆ, ನಾಳೆ ಹೇಗೆ ಜನರಿಗೆ ಮುಖ ತೋರಿಸುವುದು ಎಂಬ ಖಿನ್ನತೆಗೂ ಆತನು ಒಳಗಾಗಿ, ಶಾಶ್ವತವಾಗಿ ಈ ಸಮಾಜಕ್ಕೆ ಮುಖ ತೋರಿಸುವುದರಿಂದ ತಪ್ಪಿಸಿಕೊಳ್ಳುವ ಕೃತ್ಯಕ್ಕೆ ಕೈಹಾಕಬಹುದು.

ಜೊತೆಗೆ ಒಬ್ಬ ಪೊಲೀಸ್‌ ಕೇವಲ ತನ್ನ ಮೇಲಿನ ಅಧಿಕಾರಿಗಳಿಗೆ ಮಾತ್ರವೇ ಉತ್ತರದಾಯಿಯಾಗಿರುವುದಿಲ್ಲ. ಜೊತೆಗೆ ತನ್ನ ಸಿಬ್ಬಂದಿಗೆ, ತಾನೇ ಟಿಪ್ಪಣಿ ಕೊಟ್ಟು ಪೋಸ್ಟ್‌ ಮಾಡಿಸಿಕೊಂಡಂತಹ ರಾಜಕಾರಣಿಗಳಿಗೆ, ಸಮಾಜಕ್ಕೆ, ತನ್ನ ಕುಟುಂಬಕ್ಕೆ, ಪತ್ರಕರ್ತರಿಗೆ ಹೀಗೆ ಸಮಾಜದ ಎಲ್ಲ ಸ್ತರದವರಿಗೂ ಉತ್ತರದಾಯಿ ಆಗಿರುತ್ತಾನೆ. ಆತ ಎಲ್ಲ ಸ್ತರದವರನ್ನೂ ಬಹಳ ಚೆನ್ನಾಗಿಟ್ಟುಕೊಂಡು, ನೋಡಿಕೊಂಡು, ಬಳಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ. ಇಂತಹ ಸ್ತರಗಳಲ್ಲಿ ಎಲ್ಲಿಯಾದರೂ ಬಿರುಕು ಬಂದರೆ ಅಧೀರನಾಗುತ್ತಾನೆ. ಕೆಲವು ಕಹಿ ಸಮಯದಲ್ಲಿ ಒತ್ತಡ ತಾಳಲಾರದೆ ಖಿನ್ನತೆಯ ಆಳಕ್ಕೆ ಕುಸಿಯುತ್ತಾನೆ.

ಒತ್ತಡ ಹಾಕುವವರು ಯಾರು?

ಪೊಲೀಸ್‌ ಅಧಿಕಾರಿಗೆ ನೇಮಕಾತಿ ವೇಳೆ ನೀಡುವ ತರಬೇತಿಯಲ್ಲೇ ಒತ್ತಡಗಳನ್ನು ನಿವಾರಿಸಿಕೊಳ್ಳುವ ಬಗೆ, ಖಿನ್ನತೆಯನ್ನು ಮೆಟ್ಟಿನಿಲ್ಲುವ ಬಗೆಗೂ ತರಬೇತಿ ನೀಡಿರುತ್ತಾರೆ. ಆದರೆ ತರಬೇತಿಯ ನಂತರ ನಾವು ಮೈದಾನಕ್ಕೆ ಬಂದು ಕಾನೂನು ಸುವ್ಯವಸ್ಥೆ ಕಾಪಾಡುವಾಗ ಬರುವ ಅಡೆತಡೆಗಳು, ರಾಜಕೀಯ ಒತ್ತಡಗಳು, ದೂಷಣೆಗಳು, ಬ್ಲಾಕ್‌ಮೇಲ್‌ಗಳು ಹೀಗೆ ಹಲವು ಅಂಶಗಳು ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತವೆ. ಕೆಲವು ಹಿರಿಯ ಅಧಿಕಾರಿಗಳು, ಕೆಲವು ರಾಜಕಾರಣಿಗಳು, ಕೆಲವು ಹಿತಾಸಕ್ತಿಗಳೂ ಸಹ ಪೊಲೀಸ್‌ ಅಧಿಕಾರಿಗಳ ಮೇಲೆ ಒತ್ತಡ ತಂದು ಮಾನಸಿಕವಾಗಿ ಕುಬ್ಜರನ್ನಾಗಿಸಿ ಇಂಥ ವಿಪ್ಲವಗಳಿಗೆ ಕಾರಣರಾಗುವುದುಂಟು.

ಬೆನ್ನಿನ ಮೇಲೆ ಹೊಡೆದು ಕೆಲಸ ಮಾಡಿಸುವುದಕ್ಕಿಂತ ಬೆನ್ನು ತಟ್ಟಿಕೆಲಸ ಮಾಡಿಸುವಂತಹ ಮೇಲಧಿಕಾರಿಗಳು, ಏನಾದರೂ ಆಗಲಿ ನಾವಿದ್ದೇವೆ ಎಂದು ಸ್ಫೂರ್ತಿ ತುಂಬುವ ಗೆಳೆಯರು, ಎಲ್ಲಾ ಕಷ್ಟ-ಸುಖಗಳನ್ನು ಸಮನಾಗಿ ಹಂಚಿಕೊಳ್ಳುತ್ತೇವೆ, ಹೆದರಬೇಡ ಎಂಬ ವಿಶ್ವಾಸ ತುಂಬುವ ಬಂಧು-ಬಳಗದವರ ಮಾತುಗಳು ಎಲ್ಲಾ ಪೊಲೀಸ್‌ ಅಧಿಕಾರಿಗಳಿಗೂ ಅವಶ್ಯ.

ಎಲ್ಲಕ್ಕೂ ಮಿಗಿಲಾಗಿ ಪೊಲೀಸರು ಸಂವಿಧಾನ ಹಾಗೂ ಕಾನೂನಿಗೆ ಮಾತ್ರ ಬದ್ಧರಾಗಿ, ಬೇರೆ ಒತ್ತಡ ಆಮಿಷಗಳಿಗೆ ಬಲಿಯಾಗದೆ ಕೆಲಸ ಮಾಡುವ ಅನಿವಾರ್ಯತೆಯಿದೆ. ಯಾವುದೋ ದುರ್ಬಲ ಕ್ಷಣದಲ್ಲಿ ಬೇರೆಯವರನ್ನು ಮೆಚ್ಚಿಸಲು ಅಥವಾ ಒತ್ತಡಕ್ಕೆ ಬಲಿಯಾಗಿ ಕಾನೂನಿಗೆ ವಿರುದ್ಧವಾದ ರಹಸ್ಯ ಕೆಲಸಗಳನ್ನು ಮಾಡಿದರೆ ಮುಂದೆ ಅವೇ ಬೆಳಕಿಗೆ ಬಂದು ಹದ್ದಿನಂತೆ ಕುಕ್ಕಬಹುದು. ಆಗ ಗೌರವಕ್ಕೆ ಕಳಂಕವುಂಟಾಗುವ ಭೀತಿ ಆತ್ಮಹತ್ಯೆಗೆ ಪ್ರಚೋದಿಸಬಹುದು.

ಪೊಲೀಸರ ಖಿನ್ನತೆಗೆ ಪರಿಹಾರಗಳು

ಇಂಥ ಘಟನೆಗಳು ನಡೆಯಬಾರದು ಎಂದರೆ ಮೊದಲಿಗೆ ನಾವು ಸರಿ ಇರಬೇಕು. ಹೇಗೆಂದರೆ; ಪೊಲೀಸರು ರಾಜಕೀಯಕ್ಕೆ ಮನಸ್ಸನ್ನು ಇಳಿಬಿಡದೆ, ಇನ್ನೊಬ್ಬರ ದಾಸರಾಗದೆ ಕಾನೂನು ರೀತ್ಯ ಕೆಲಸ ಮಾಡಬೇಕು. ಒತ್ತಡ ತಡೆದುಕೊಳ್ಳುವ ಬಗ್ಗೆ ಪೊಲೀಸ್‌ ಅಧಿಕಾರಿಗೆ ತಿಂಗಳಿಗೊಮ್ಮೆಯಾದರೂ ಇಲಾಖೆಯಿಂದ ಕೌನ್ಸೆಲಿಂಗ್‌ ಅಥವಾ ತರಬೇತಿ ಇರಬೇಕು. ಹಿರಿಯ ಅಧಿಕಾರಿಗಳು ಕಿರಿಯವರಿಗೆ ಸ್ಫೂರ್ತಿಯಾಗಿ ನಿಂತು, ಬೆನ್ನಿಗೆ ಹೊಡೆಯದೆ, ಬೆನ್ನು ತಟ್ಟಿಕೆಲಸ ಮಾಡಿಸಬೇಕು. ಪೊಲೀಸರಿಗೆ ರಜೆಯಂಥ ವಿರಾಮಗಳು ಸಕಾಲಕ್ಕೆ ಸಿಗಬೇಕು. ಸಮಾಜವೂ ಸಹ ಪೊಲೀಸ್‌ ಅ​ಧಿಕಾರಿಗಳು ಕೂಡ ಈ ಸಮಾಜದ ಅಂಗ ಎಂದು ಗೌರವಿಸಬೇಕು. ಪೊಲೀಸರು ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇಲಾಖೆಯಲ್ಲಿ ಏಳು ಬೀಳುಗಳಿವೆ; ಎಲ್ಲಾ ಏಳು ಬೀಳುಗಳನ್ನು ಸಮಚಿತ್ತದಲ್ಲಿ ಕೊಂಡೊಯ್ದಾಗ ಮಾತ್ರವೇ ಅವನೊಬ್ಬ ಉತ್ತಮ ಅಧಿಕಾರಿಯಾಗಲು ಸಾಧ್ಯ.

ಖಿನ್ನತೆಯನ್ನು ಗೆದ್ದರೆ ನಾಳೆ ಸುಂದರ

ಆತ್ಮಹತ್ಯೆ ಎಂಬುದೊಂದು ಪಾಪದ ಕಾರ್ಯ ಎಂಬ ಕನಿಷ್ಠಜ್ಞಾನ ಎಲ್ಲರಿಗೂ ಇರಬೇಕು. ಹೊಸದಾಗಿ ಪೊಲೀಸ್‌ ಇಲಾಖೆಗೆ ಬಂದಿರುವ ನವ ತರುಣರಲ್ಲಿ ನನ್ನ ಕಳಕಳಿ ಏನೆಂದರೆ; ಮನುಷ್ಯನಿಗೆ ಸಮಯವೇ ನಿಜವಾದ ಗುರು. ಇಂದು ಸೋತವರು ನಾಳೆ ಗೆಲ್ಲಬಹುದು. ನೀವು ನಿಮ್ಮ ಕಾಲಕ್ಕೆ ಕಾಯುವುದು ಸೂಕ್ತವೇ ಹೊರತು, ಆತ್ಮಹತ್ಯೆಯಂಥ ಕೃತ್ಯಗಳಿಗೆ ಕೈ ಹಾಕಬಾರದು. ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಇಂದಿನ ಸೊಲು, ಹತಾಶೆ, ಖಿನ್ನತೆಯನ್ನು ಮೆಟ್ಟಿನಿಂತಲ್ಲಿ ನಾಳೆ ನಿಮ್ಮದೇ ಆಗಿರುತ್ತದೆ. ನಿಮ್ಮನ್ನು ನಂಬಿದವರನ್ನು ಕೈಬಿಟ್ಟು ಪ್ರಕೋಪದ ಪರಿಹಾರ ಹುಡುಕಬೇಡಿ.

- ರವೀಶ್‌ ಚಿಕ್ಕನಾಯಕನ ಹಳ್ಳಿ

ಡಿವೈಎಸ್‌ಪಿ, ಲೋಕಾಯುಕ್ತ, ತುಮಕೂರು

Follow Us:
Download App:
  • android
  • ios