Real estate tips: ಸ್ವಂತ ಮನೆ ಕೊಳ್ಳುವುದು ಪ್ರತಿಯೊಬ್ಬರ ಜೀವಮಾನದ ಕನಸು. ಆದರೆ, ಕೇವಲ ಮನೆಯ ಸೌಂದರ್ಯ ಮತ್ತು ಇಂಟೀರಿಯರ್ ನೋಡಿ ನಿರ್ಧಾರ ಮಾಡಿದರೆ ಭವಿಷ್ಯದಲ್ಲಿ ನೆಮ್ಮದಿ ಕಳೆದುಕೊಳ್ಳಬೇಕಾಗಬಹುದು. ಮನೆ ಖರೀದಿಸುವಾಗ ತಪ್ಪಿಯೂ ಆಯ್ಕೆ ಮಾಡಬಾರದ ಆ 5 ಸೂಕ್ಷ್ಮ ಪ್ರದೇಶಗಳು ಯಾವುವು? ಖರೀದಿಯ ಮುನ್ನ ತಿಳಿಯಲೇಬೇಕಾದ ರಿಯಲ್ ಎಸ್ಟೇಟ್ ಟಿಪ್ಸ್ ಇಲ್ಲಿದೆ.
ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಜೀವಮಾನದ ದೊಡ್ಡ ಕನಸು. ಆದರೆ, ಮನೆ ಅಥವಾ ಫ್ಲ್ಯಾಟ್ ಖರೀದಿಸುವಾಗ ಕೇವಲ ಅದರ ಬೆಲೆ, ಇಂಟೀರಿಯರ್ ಮತ್ತು ಆಕರ್ಷಕ ವಿನ್ಯಾಸವನ್ನು ಮಾತ್ರ ನೋಡಿದರೆ ಸಾಲದು, ಅದರ ಸುತ್ತಮುತ್ತಲಿನ ಪರಿಸರ ಹೇಗಿದೆ ಎಂಬುದನ್ನು ಪರಿಶೀಲಿಸುವುದು ಅಷ್ಟೇ ಮುಖ್ಯ. ರಿಯಾಲ್ಟರ್ ಲೋಕೇಶ್ ಖಂಡೇಲ್ವಾಲ್ ಅವರ ಪ್ರಕಾರ, ಈ ಕೆಳಗಿನ 5 ಸೂಕ್ಷ್ಮ ಪ್ರದೇಶಗಳಲ್ಲಿ ಮನೆ ಖರೀದಿಸಿದರೆ ನಿತ್ಯದ ನೆಮ್ಮದಿ ಹಾಳಾಗುವ ಸಾಧ್ಯತೆ ಹೆಚ್ಚು..
1. ರೈಲ್ವೆ ಹಳಿಗಳ ಸಮೀಪ
ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಮನೆಯಿದ್ದರೆ ನಿರಂತರವಾಗಿ ರೈಲುಗಳ ಅತಿಯಾದ ಶಬ್ದ ಕೇಳಿಬರುತ್ತದೆ. ವಿಶೇಷವಾಗಿ ರಾತ್ರಿ ಮತ್ತು ಮುಂಜಾನೆ ನಿದ್ದೆಗೆ ತೀವ್ರ ಭಂಗ ಉಂಟಾಗುತ್ತದೆ. ಕೆಲವೊಮ್ಮೆ ರೈಲು ಚಲಿಸುವಾಗ ಉಂಟಾಗುವ ಕಂಪನಗಳು (vibrations) ಮನೆಯ ನೆಮ್ಮದಿಯನ್ನೇ ಕಸಿದುಕೊಳ್ಳುತ್ತವೆ.
2. ಡಂಪಿಂಗ್ ಯಾರ್ಡ್ (ಕಸದ ತೊಟ್ಟಿ) ಹತ್ತಿರ
ತ್ಯಾಜ್ಯ ಸಂಗ್ರಹಿಸುವ ಜಾಗಗಳ ಸಮೀಪ ಫ್ಲ್ಯಾಟ್ ಖರೀದಿಸಿದರೆ ಸದಾ ಕಾಲ ಅಸಹನೀಯ ದುರ್ವಾಸನೆ ಇರುತ್ತದೆ. ಇದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿ, ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಇದು ಕುಟುಂಬದ ಹಿರಿಯರು ಮತ್ತು ಮಕ್ಕಳ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ.
3. ಕಲ್ಯಾಣ ಮಂಟಪಗಳ ಪಕ್ಕ
ಮನೆಯ ಸಮೀಪದಲ್ಲೇ ಮ್ಯಾರೇಜ್ ಹಾಲ್ ಇದ್ದರೆ, ಅಲ್ಲಿ ಸದಾ ನಡೆಯುವ ಮದುವೆ-ಸಮಾರಂಭಗಳ ಕರ್ಕಶ ಸಂಗೀತ, ಡಿಜೆ ಶಬ್ದ ಹಾಗೂ ಪಟಾಕಿಗಳ ಸದ್ದು ರಾತ್ರಿಯ ನಿದ್ದೆಗೆ ಅಡ್ಡಿಪಡಿಸುತ್ತದೆ. ಅಲ್ಲದೆ ವಾಹನಗಳ ಪಾರ್ಕಿಂಗ್ ದಟ್ಟಣೆಯಿಂದ ನಿತ್ಯ ಓಡಾಟಕ್ಕೆ ಕಿರಿಕಿರಿಯಾಗುತ್ತದೆ.
4. ತೆರೆದ ಚರಂಡಿ / ರಾಜಕಾಲುವೆಗಳ ಬಳಿ
ತೆರೆದ ಚರಂಡಿಗಳ ಪಕ್ಕದಲ್ಲಿರುವ ಮನೆಗಳಲ್ಲಿ ನೈರ್ಮಲ್ಯದ ಸಮಸ್ಯೆ ಸದಾ ಇರುತ್ತದೆ. ದುರ್ವಾಸನೆ ಮತ್ತು ಸೊಳ್ಳೆಗಳ ಕಾಟದ ಜೊತೆಗೆ, ಮಳೆಗಾಲದಲ್ಲಿ ಒಳಚರಂಡಿ ನೀರು ಉಕ್ಕಿ ಹರಿದು ರಸ್ತೆಗೆ ಅಥವಾ ಮನೆಗೆ ನುಗ್ಗುವ ಭೀತಿ ಎದುರಾಗುತ್ತದೆ.
5. ಹೈ-ಟೆನ್ಷನ್ ವಿದ್ಯುತ್ ತಂತಿಗಳ ಕೆಳಗೆ
ಭಾರೀ ವೋಲ್ಟೇಜ್ ವಿದ್ಯುತ್ ತಂತಿಗಳ ಸಮೀಪ ಮನೆ ನಿರ್ಮಿಸುವುದು ಅಥವಾ ಖರೀದಿಸುವುದು ಜೀವಕ್ಕೆ ಅತ್ಯಂತ ಅಪಾಯಕಾರಿ. ವಿದ್ಯುತ್ ಇಲಾಖೆಯ ಸುರಕ್ಷತಾ ನಿಯಮಗಳ ಪ್ರಕಾರ ಕಟ್ಟಡ ಹಾಗೂ ತಂತಿಗಳ ನಡುವೆ ನಿಗದಿತ ಅಂತರವಿರಲೇಬೇಕು.
ನೆನಪಿರಲಿ: ಮನೆ ಫೈನಲ್ ಮಾಡುವ ಮುನ್ನ ಕೇವಲ ಒಮ್ಮೆ ಮಾತ್ರ ಹೋಗಿ ಬರಬೇಡಿ. ಬೆಳಗ್ಗೆ, ಸಂಜೆ ಹಾಗೂ ರಾತ್ರಿ ವೇಳೆ ಭೇಟಿ ನೀಡಿ ಪರಿಶೀಲಿಸಿ. ಮುಖ್ಯವಾಗಿ ಮಳೆಗಾಲದಲ್ಲಿ ಆ ಜಾಗದಲ್ಲಿ ನೀರು ನಿಲ್ಲುತ್ತದೆಯೇ ಎಂದು ನೋಡಿ, ಸ್ಥಳೀಯರ ಜೊತೆ ಮಾತನಾಡಿದ ನಂತರವೇ ಖರೀದಿಯ ಅಂತಿಮ ನಿರ್ಧಾರ ತೆಗೆದುಕೊಳ್ಳಿ.
ಇದು ಕೂಡ ಗಮನದಲ್ಲಿರಲಿ
1. ಕಾನೂನು ದಾಖಲೆಗಳ ಪರಿಶೀಲನೆ (Legal Verification)
ರೇರಾ (RERA) ನೋಂದಣಿ: ಯಾವುದೇ ಪ್ರಾಜೆಕ್ಟ್ ಆದರೂ ಅದು 'RERA' ಅಡಿಯಲ್ಲಿ ನೋಂದಣಿಯಾಗಿದೆಯೇ ಎಂದು ಆನ್ಲೈನ್ನಲ್ಲಿ ಚೆಕ್ ಮಾಡಿ.
ಖಾತಾ ಮತ್ತು ಇಸಿ (EC): ‘ಎ-ಖಾತಾ’ (A-Khata) ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಳೆದ 15-30 ವರ್ಷಗಳ ‘Encumbrance Certificate’ (ತನಿಖಾ ಪತ್ರ/EC) ಪಡೆದು, ಆಸ್ತಿಯ ಮೇಲೆ ಯಾವುದೇ ಬ್ಯಾಂಕ್ ಸಾಲ ಅಥವಾ ವ್ಯಾಜ್ಯಗಳಿಲ್ಲ ಎಂಬುದನ್ನು ವಕೀಲರಿಂದ ಪರಿಶೀಲಿಸಿ.
2. ನೀರಿನ ಲಭ್ಯತೆ ಪರೀಕ್ಷಿಸಿ (Water Source)
ಮನೆ ಸುಂದರವಾಗಿದ್ದರೂ ಕುಡಿಯಲು ನೀರಿಲ್ಲದಿದ್ದರೆ ವ್ಯರ್ಥ. ಅಲ್ಲಿ ಕಾವೇರಿ/ಮುನ್ಸಿಪಾಲಿಟಿ ನೀರು ಬರುತ್ತದೆಯೇ ಅಥವಾ ಕೇವಲ ಬೋರ್ವೆಲ್/ಟ್ಯಾಂಕರ್ ನೀರೇ ಗತಿಯೇ ಎಂಬುದನ್ನು ಮೊದಲೇ ತಿಳಿದುಕೊಳ್ಳಿ. ಬೋರ್ವೆಲ್ ನೀರಾದರೆ, ನೀರಿನ ಗುಣಮಟ್ಟ (TDS level) ಪರೀಕ್ಷಿಸಿ.
3. ಮಳೆಗಾಲದ ಭೇಟಿ (Monsoon Check)
ಫ್ಲ್ಯಾಟ್ ಖರೀದಿಸುವ ಮುನ್ನ ಭಾರೀ ಮಳೆ ಬಂದಾಗ ಒಮ್ಮೆ ಆ ಪ್ರದೇಶಕ್ಕೆ ಭೇಟಿ ನೀಡಿ. ರಸ್ತೆಯಲ್ಲಿ ನೀರು ನಿಲ್ಲುತ್ತದೆಯೇ? ಬೇಸ್ಮೆಂಟ್ ಪಾರ್ಕಿಂಗ್ಗೆ ನೀರು ನುಗ್ಗುವ ಸಾಧ್ಯತೆ ಇದೆಯೇ? ಎಂಬುದು ಆಗಲೇ ತಿಳಿಯುತ್ತದೆ.
4. ವಿಭಿನ್ನ ಸಮಯಗಳಲ್ಲಿ ಭೇಟಿ ನೀಡಿ (Traffic & Noise Check)
ಕೇವಲ ಭಾನುವಾರ ರಜಾದಿನಗಳಲ್ಲಿ ಮಾತ್ರ ಹೋಗಿ ಮನೆ ನೋಡಬೇಡಿ. ಸಾಮಾನ್ಯ ದಿನಗಳಲ್ಲಿ (Weekdays) ಪೀಕ್ ಸಮಯದಲ್ಲಿ (ಬೆಳಗ್ಗೆ 8-10 ಅಥವಾ ಸಂಜೆ 6-8) ಹೋಗಿ ನೋಡಿ. ಇದರಿಂದ ನಿಮ್ಮ ಆಫೀಸ್ಗೆ ಹೋಗುವ ಟ್ರಾಫಿಕ್ ಸಮಸ್ಯೆ ಮತ್ತು ಸುತ್ತಲಿನ ಶಬ್ದದ ಅರಿವಾಗುತ್ತದೆ.
5. ಸ್ಥಳೀಯರನ್ನು ಮತ್ತು ವಾಚ್ಮನ್ಗಳನ್ನು ವಿಚಾರಿಸಿ
ಬಿಲ್ಡರ್ಗಳು ಅಥವಾ ಸೇಲ್ಸ್ ಮ್ಯಾನೇಜರ್ಗಳು ಯಾವಾಗಲೂ ಒಳ್ಳೆಯ ವಿಷಯಗಳನ್ನೇ ಹೇಳುತ್ತಾರೆ. ಆದ್ದರಿಂದ, ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಗಾರ್ಡ್, ಅಕ್ಕಪಕ್ಕದ ಅಂಗಡಿಯವರು ಅಥವಾ ಈಗಾಗಲೇ ಅಲ್ಲಿ ವಾಸಿಸುತ್ತಿರುವವರ ಬಳಿ ಮಾತನಾಡಿ (ವಿದ್ಯುತ್ ಕಡಿತ, ನೀರಿನ ಸಮಸ್ಯೆಗಳ ಬಗ್ಗೆ ನಿಜ ಹೇಳುತ್ತಾರೆ).
6. ಗುಪ್ತ ವೆಚ್ಚಗಳು (Hidden Costs)
ಬಿಲ್ಡರ್ ಹೇಳುವ ಕೋಟಿಂಗ್ಗಿಂತ ಹೆಚ್ಚುವರಿ ಖರ್ಚುಗಳು ಸಾಕಷ್ಟಿರುತ್ತವೆ. ಕಾರ್ ಪಾರ್ಕಿಂಗ್ ಶುಲ್ಕ, ಕ್ಲಬ್ ಹೌಸ್ ಮೆಂಬರ್ಶಿಪ್, ಜಿಎಸ್ಟಿ (GST), ರಿಜಿಸ್ಟ್ರೇಷನ್ ಚಾರ್ಜ್ ಮತ್ತು ಮಾಸಿಕ ನಿರ್ವಹಣಾ ವೆಚ್ಚ (Maintenance) ಎಷ್ಟು ಎಂಬುದನ್ನು ಮೊದಲೇ ಲೆಕ್ಕ ಹಾಕಿ.
7. ಬಿಲ್ಡರ್ ಇತಿಹಾಸ (Builder Track Record)
ಆ ಬಿಲ್ಡರ್ ಈ ಹಿಂದೆ ಪೂರ್ಣಗೊಳಿಸಿದ ಪ್ರಾಜೆಕ್ಟ್ಗಳು ಹೇಗಿವೆ? ಸಮಯಕ್ಕೆ ಸರಿಯಾಗಿ ಫ್ಲ್ಯಾಟ್ ಹಸ್ತಾಂತರ ಮಾಡಿದ್ದಾರಾ? ಕಟ್ಟಡದ ಗುಣಮಟ್ಟ ಹೇಗಿದೆ ಎಂಬುದನ್ನು ಗೂಗಲ್ ರಿವ್ಯೂ ಮೂಲಕ ತಿಳಿದುಕೊಳ್ಳಿ.













