ದೀರ್ಘಕಾಲದ ಹೆಚ್ಚಿನ ಶಬ್ದಗಳಿಂದ ಮನಸ್ಸಿಗೆ ತೊಂದರೆ, ಕಿವುಡುತನ ಹಾಗೂ ಹೃದಯ ಸಂಬಂಧಿ ಸಮಸ್ಯೆಯ ಜೊತೆಗೆ ರಕ್ತದೊತ್ತಡ ಉಂಟಾಗಬಹುದು.ಕೆಲವು ಶಬ್ದಗಳಿಗೆ ಅತಿಸೂಕ್ಷ್ಮವಾಗಿ ಸಂವೇದನಾ ವ್ಯವಸ್ಥೆಯು ಪ್ರತಿಕ್ರಿಯಿಸುತ್ತವೆ. ಇವು ವ್ಯಕ್ತಿಗೆ ಆತಂಕ ಅಥವಾ ಸಿಟ್ಟು ತರಿಸಬಹುದು. ಪ್ರತಿಬಾರಿಯೂ ಈ ತರಹದ ಶಬ್ದಗಳಿಗೆ ಮನಸ್ಸು ಪ್ರತಿಕ್ರಿಯಿಸಿ ಕೋಪ ಅಥವಾ ಆತಂಕವನ್ನು ಸೃಷ್ಟಿ ಮಾಡಿದರೆ ನಿತ್ಯದ ಚಟುವಟಿಕೆಗಳಲ್ಲಿ ತೊಂದರೆ ಉಂಟಾಗುತ್ತದೆ. ಇದೇ ‘ಮಿಸೋಫೋನಿಯಾ’

ನಿರ್ಲಕ್ಷ್ಯ ಮಾಡಬೇಡಿ: ಶಬ್ದದ ಸಾಂದ್ರತೆ ತುಸು ಹೆಚ್ಚಾದರೂ ವ್ಯಕ್ತಿಯಲ್ಲಿ ಅಸಹನೆ, ಕಿರಿಕಿರಿ, ಉದ್ವಿಗ್ನತೆ ಉಂಟಾಗುತ್ತದೆ. ಇದರಿಂದ ಖಿನ್ನತೆಯೂ ಬರಬಹುದು. ಶಕ್ತಿಹೀನತೆ, ನಿರಾಸಕ್ತಿ, ನಿದ್ರಾಹೀನತೆ, ಹಸಿವಿಲ್ಲದಿರುವಿಕೆ, ತೂಕದಲ್ಲಿ ಏರುಪೇರು ಇತ್ಯಾದಿ ಲಕ್ಷಣಗಳೂ ಕಂಡುಬರಬಹುದು. ಶಬ್ದಗಳಿಂದ ಖಿನ್ನತೆ, ಕಿವುಡುತನ ಉಂಟಾಗುವ ಟಿನ್ನಿಟಸ್ ಇದರ ಇನ್ನೊಂದು ಮುಖ. ಮಿಸೋಫೋನಿಯಾ ಇರುವ ವ್ಯಕ್ತಿಗೆ ಕೆಲವೊಂದು ರೀತಿಯ ಅಥವಾ ನಮೂನೆಯ ಶಬ್ದಗಳು ಸೂಕ್ಷ್ಮಸಂವೇದನೆ ಕೆರಳಿಸಿ ನಕರಾತ್ಮಕ ಯೋಚನೆ ಬರುವಂತೆ ಮಾಡುತ್ತದೆ. ಭಾವನೆಗಳಲ್ಲಿ ಏರುಪೇರು ಉಂಟಾಗುತ್ತದೆ. ಕೆಲವೊಮ್ಮೆ ಹಿಂದಿನ ಅಹಿತಕರ ಘಟನೆಯೊಂದಿಗೆ ಕೆಲವೊಂದು ಶಬ್ದಗಳು ಕೂಡಿಕೊಂಡಾಗ ಹಾಗೂ ಅದೇ ತರಹದ ಶಬ್ದಗಳು ಮತ್ತೆ ಕೇಳಿಸಿದಾಗ ಅದರಿಂದ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಹೆಚ್ಚಾಗುತ್ತವೆ. ಎದೆ ಬಡಿತ ಹೆಚ್ಚುವುದು, ಕೈ ನಡುಗುವುದು, ಬಾಯಿ ಒಣಗುವುದು, ಬೆವರುವುದು ಇತ್ಯಾದಿಗಳು ಕಾಣಿಸಿಕೊಳ್ಳುತ್ತದೆ. ವ್ಯಕ್ತಿ ವಿನಾಕಾರಣ ಕೋಪಗೊಳ್ಳಬಹುದು. ನಿದ್ರಾಹೀನತೆ ಯಿಂದಲೂ ಕೂಡ ಈ ರೀತಿಯ ತೊಂದರೆ ಆಗಬಹುದು.

ಮಿಸೋಫೋನಿಯಾದಿಂದ ಬಿಡುಗಡೆ ಹೇಗೆ?

- ಯಾವ ಶಬ್ದ ಈ ರೀತಿಯ ಸಂವೇದನೆಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ತಿಳಿದು ಅಂತಹ ಶಬ್ದಗಳಿಂದ ದೂರವಿರುವುದು ಸ್ವಲ್ಪಮಟ್ಟಿಗೆ ಒಳಿತು. ಇಲ್ಲವಾದರೆ ಇಂಥ ಸಂದರ್ಭಗಳಲ್ಲಿ ಕಿವಿ ಮುಚ್ಚಿಕೊಳ್ಳಬಹುದು. ಇದರಿಂದ ಕಿರಿಕಿರಿ ತಪ್ಪುತ್ತೆ.

- ಆ ಶಬ್ದಗಳಿರುವಾಗ ಸಕರಾತ್ಮಕ ಯೋಚನೆಗಳ ಮೂಲಕ ಅಥವಾ ಮನಸ್ಸಿಗೆ ಹಿತಕರವಾದದ್ದನ್ನು ಮಾಡುವ ಕಡೆ ಗಮನಹರಿಸುವುದು. ಇಷ್ಟವಾದ ಮ್ಯೂಸಿಕ್ ಕೇಳಬಹುದು, ಡ್ಯಾನ್ಸ್ ಮಾಡಬಹುದು ಅಥವಾ ಗಾರ್ಡನಿಂಗ್‌ನಲ್ಲಿ ಕಳೆದುಹೋಗಬಹುದು.

- ಕಿವಿ ಮೂಗು ಗಂಟಲು ತಜ್ಞ ವೈದ್ಯರ ಸಲಹೆಯನ್ನು ಪಡೆಯುವುದು. ಇನ್ನೂ ಮನಸ್ಸಿಗೆ ಹೆಚ್ಚಿನ ತೊಂದರೆಯಾಗಿ ಭಾವನೆಯಲ್ಲಿ ಏರುಪೇರು ಅಥವಾ ಖಿನ್ನತೆಯ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಮನೋವೈದ್ಯರನ್ನು ಕಾಣುವುದು.

- ತೊಂದರೆಯನ್ನುಆಪ್ತರೊಂದಿಗೆ ಹಂಚಿಕೊಳ್ಳುವುದು ಉತ್ತಮ ಮನೋವಿಜ್ಞಾನಿಗಳು ಕೌನ್ಸಲಿಂಗ್ ಮೂಲಕ ಮೊದಲ ಹಂತದ ಚಿಕಿತ್ಸೆ ನೀಡುವರು. ಹೆಚ್ಚಿನ ಪ್ರಮಾಣದ ಚಿಕಿತ್ಸೆ ಅವಶ್ಯಕತೆ ಕಂಡರೆ ಅರಿವಿನ ವರ್ತನೆಯ ಚಿಕಿತ್ಸೆ ನೀಡಬಹುದು.

- ಯೋಗ, ಧ್ಯಾನ, ಮೈಂಡ್-ಫುಲ್-ನೆಸ್ ಮೊದಲಾದವುಗಳನ್ನು ಮಾಡಿದರೆ ಒಂದು ಹಂತದವರೆಗೆ ಈ ತೊಂದರೆ ಕಡಿಮೆಯಾಗಬಹುದು. ಮನಸ್ಸನ್ನು ಶಾಂತವಾಗಿದ್ದಷ್ಟು ಸಮಸ್ಯೆಯಿಂದ ದೂರವಿರಬಹುದು.