ಸಂಬಂಧವನ್ನು ಹಾಳು ಮಾಡುತ್ತೆ ಫಬ್ಬಿಂಗ್ ಫೋಬಿಯಾ

Phubbing phobia harmful to relationship and friendship
Highlights

ಫಬ್ಬಿಂಗ್ ಈ ಕಾಲದ ರೋಗ. ಜೀವಿತದ ಕ್ಷಣ ಕ್ಷಣವನ್ನೂ ಮೊಬೈಲ್‌ನಲ್ಲಿ ಕಳೆದು ವೇಸ್ಟ್ ಮಾಡುವವರು ಈ ರೋಗಿಗಳು. ಮೊಬೈಲ್ ಗೀಳಿನಿಂದ ಆತ್ಮೀಯರಿಗೆ ಬಹಳ ಘಾಸಿಯಾಗುತ್ತದೆ. ಅವರ ಜೊತೆಗೆ ಫಬ್ಬಿಂಗ್ ಮಾಡುವವರಿಗೂ ಹಲವು ಮಾನಸಿಕ ಸಮಸ್ಯೆ ಬರುತ್ತೆ. 

‘ಬಹಳ ಕಾಲದ ನಂತರ ಕ್ಲೋಸ್ ಫ್ರೆಂಡ್ ಒಬ್ಬಳು ಸಿಕ್ಕಿದ್ದಾಳೆ. ಮಾತಾಡೋಣ ಅಂದರೆ ಅವಳು ನಾನಿಲ್ಲಿರುವುದನ್ನೂ ಮರೆತು ಮೊಬೈಲ್ ನೋಡ್ತಿದ್ದಾಳೆ. ನನ್ನ ಮಾತಿಗೆ ಹ್ಞಾಂ, ಹ್ಞೂಂಗಳ ಉತ್ತರ. ಗಮನವೆಲ್ಲ ಮೊಬೈಲ್ ಕಡೆ. ಎಷ್ಟೋ ವರ್ಷದ ನಂತರ ಸಿಕ್ಕವಳು ಅಂತ ಆಸೆಯಿಂದ ಮಾತನಾಡಲು ಬಂದರೆ ಅವಳು ನನ್ನನ್ನು ನೆಗ್ಲೆಕ್ಟ್  ಮಾಡ್ತಿದ್ದಾಳೆ. ನನ್ನ ಬಗ್ಗೆ ಅವಳಿಗ್ಯಾಕೆ ನಿರ್ಲಕ್ಷ್ಯ. ಅವಳ್ಯಾಕೆ ನನ್ನ  ಅವಾಯ್ಡ್ ಮಾಡ್ತಿದ್ದಾಳೆ. ನನ್ನಲ್ಲಿ, ನನ್ನ ಫ್ರೆಂಡ್‌ಶಿಪ್‌ನಲ್ಲಿ ಏನಾದ್ರೂ ಕೊರತೆ ಇದ್ಯಾ, ಅವಳಿಗೆ ಯಾರಾದರೂ ನನ್ನ ಬಗ್ಗೆ ಚುಚ್ಚಿ ಕೊಟ್ಟಿದ್ದಾರಾ?’ -ಹೀಗೆ ಹಳ್ಳಿ ಹಿನ್ನೆಲೆಯಿಂದ ಬಂದ ಸೂಕ್ಷ್ಮ ಮನಸ್ಸಿನ ಹೆಣ್ಮಗಳೊಬ್ಬಳು ತನ್ನ ಗೆಳತಿಯ ವರ್ತನೆಯಿಂದ ಬಹಳ ನೋವು ಅನುಭವಿಸಿದಳು.

‘ಮೊದಲು ನನ್ನ ಒಂದು ಮಾತಿಗೆ, ಒಂದು ಪ್ರೀತಿಯ ನೋಟಕ್ಕೆ ಹಂಬಲಿಸುತ್ತಿದ್ದ ಹುಡುಗ ಮದುವೆಯಾಗಿ ಸ್ವಲ್ಪ ದಿನಕ್ಕೇ ಬದಲಾಗಿ ಬಿಟ್ಟ. ಆಫೀಸ್‌ನಿಂದ ಬಂದ ಕೂಡಲೇ ಫೋನ್ ಹಿಡ್ಕೊಂಡ್ರೆ ಮುಗೀತು. ಹೆಂಡತಿ, ಮನೆ ಯಾವ್ದೆ ನೆನಪಿರಲ್ಲ. ನಾನು ಏನಾದ್ರೂ ಮಾತನಾಡಿಸಿದ್ರೂ ಉಡಾಫೆಯ ಉತ್ತರ. ಜೀವನಕ್ಕೊಬ್ಬ ಫ್ರೆಂಡ್ ಸಿಕ್ಕಿದ ಅಂತ ಖುಷಿಯಿಂದಿದ್ದೆ. ಈಗ ಅವನ ವರ್ತನೆಯಿಂದ ಘಾಸಿಯಾಗಿದೆ. ಏನೆಲ್ಲ ಯೋಚನೆ ಬಂದು ನನ್ನೊಳಗೆ ಕೀಳರಿಮೆ  ಹುಟ್ಟಿ ಅದು ಡಿಪ್ರೆಶನ್‌ಗೊಳಗಾಗಿದ್ದೇನೆ’ -ತನ್ನಿಷ್ಟದ ಹುಡುಗನ ಜೊತೆಗೆ ಮದುವೆಯಾಗಿಯೂ ಅವನ ನಿರ್ಲಕ್ಷ್ಯದಿಂದ ಡಿಪ್ರೆಶನ್‌ಗೆ ಒಳಗಾದ ಹೆಣ್ಣೊಬ್ಬಳ ಮಾತು.

 ಈ ರೀತಿ ಮೊಬೈಲ್‌ನಲ್ಲೇ ಮುಳುಗಿ ಆತ್ಮೀಯರನ್ನು ನೆಗ್ಲೆಕ್ಟ್ ಮಾಡೋದಕ್ಕೆ ‘ಫಬ್ಬಿಂಗ್’ ಅಂತಾರೆ. ನಾವೆಲ್ಲ ಒಂದಲ್ಲ ಒಂದು ರೀತಿ ‘ಪಬ್ಬಿಂಗ್’ಗೊಳಪಟ್ಟವರೇ. ತಿಂಡಿ, ಊಟಕ್ಕೆ ಕೂತಾಗ, ಕೆಲವರು ಟಾಯ್ಲೆಟ್‌ನಲ್ಲೂ ಮೊಬೈಲ್‌ನಲ್ಲಿ ಮುಳುಗಿರುತ್ತಾರೆ. ನಾಲ್ಕು ಜನರೊಂದಿಗೆ ಊಟ ಮಾಡ್ತಿದ್ದರೂ ನಾವು ಒಂಟಿಯೇ ಆಗ್ಬಿಡುತ್ತೇವೆ. ಊಟದ ರುಚಿ ಹೇಗಿದೆ, ಎಷ್ಟು ತಿಂದೆ ಅನ್ನುವುದೂ ನಮ್ಮ ಗಮನಕ್ಕೆ ಬರೋದಿಲ್ಲ. ಟೀನೇಜ್ ಹುಡುಗ್ರು ಇದರಲ್ಲಿ ಎತ್ತಿದ ಕೈ. ಅವರು ಎದುರು ಸಿಕ್ಕಾದ ಒಂದು ಶಬ್ಧ ಮಾತನಾಡಿದರೆ ಹೆಚ್ಚು. ಅದೇ ಮೊಬೈಲ್ ಚಾಟ್ ಮೂಲಕ ಗಂಟೆಗಟ್ಟಲೆ ಮಾತನಾಡಬಲ್ಲರು.

ಈ ಥರ ಫಬ್ಬಿಂಗ್ ಮಾಡೋದರಿಂದ ಇನ್ನೊಬ್ಬರಿಗೆ ಹರ್ಟ್ ಆಗುತ್ತೆ ಅನ್ನೋದು ನಮಗೆ ತಿಳಿಯೋದೇ ಇಲ್ಲ. ಆತ್ಮೀಯರ ಮನಸ್ಸಿಗೆ ಇದು ಬಹಳ ಘಾಸಿ ಮಾಡುತ್ತದೆ. ಹೆಂಡತಿ, ಗಂಡ,ಅಮ್ಮ, ಅಪ್ಪ ಸೇರಿದಂತೆ ಮನೆಯವರಿಗೆ ಇದರಿಂದ ಬಹಳ ನೋವಾಗುತ್ತದೆ. ಕೆಲವರು ಡಿಪ್ರೆಶನ್‌ಗೆ ಒಳಗಾಗೋದೂ ಇದೆ. ಈ ಪಬ್ಬಿಂಗ್ ಗೀಳಿಗೆ ಒಳಗಾದವರಿಗೆ ಪ್ರಕೃತಿ ಸಹಜವಾದ ಹಸಿವು,ಆಹಾರ, ನಿದ್ದೆ,ಮೈಥುನಗಳೇ ಅವಗಣನೆಗೆ ಒಳಗಾಗುತ್ತವೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಬಹಳ ಹಾನಿ ಇದೆ. ತಲೆನೋವು, ಡಿಪ್ರೆಶನ್, ಉದ್ವೇಗ, ನಿದ್ರಾಹೀನತೆ, ಏಕಾಗ್ರತೆ ಕೊರತೆ, ಡಿಪ್ರೆಶನ್‌ನಂಥ ಸಮಸ್ಯೆಗಳು ಬರುತ್ತವೆ. ಜಡತೆ, ಬೊಜ್ಜು, ಹಾರ್ಮೋನಲ್ ಸಮಸ್ಯೆಗೂ ಕಾಣಿಸಿಕೊಳ್ಳಬಹುದು.

 

ಫಬ್ಬಿಂಗ್‌ನಿಂದ  ಹೊರಬರೋದು ಹೇಗೆ?

ಮೊಬೈಲ್ ಅನ್ನು ಕಣ್ಣಿಂದ ದೂರವಿಡಿ. ಪಕ್ಕದ ರೂಮ್’ನಲ್ಲಿಟ್ಟುಬಿಡಿ. ಆಗ ಪದೇ ಪದೇ ನೋಡ್ಬೇಕು ಅನಿಸಲ್ಲ. ಡಾಟಾ ಆಫ್ ಮಾಡಿ. ಮೊಬೈಲ್ ನೋಡ್ಬೇಕು ಅನಿಸಿದಾಗಲೆಲ್ಲ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ.

ನೋಟಿಫಿಕೇಶನ್ ಬರದಂತೆ ಮಾಡಿ.

ಊಟದ ಸಮಯದಲ್ಲಿ, ಮನೆಯವರ ಜೊತೆಗಿರುವಾಗ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿ. ಮೊಬೈಲ್ ಮುಕ್ತ ವಾತಾವರಣ ನಿರ್ಮಿಸಿ. ಮಾತುಕತೆಗೆ ಮಹತ್ವ ನೀಡಿ.

ನಿಮಗಿಷ್ಟದ ಹವ್ಯಾಸಗಳಲ್ಲಿ ಕಳೆದುಹೋಗಿ.

loader