ಮಾತು ನಮ್ಮ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಅದು ಬಳಕೆಯನ್ನು ಹೊಂದಿಕೊಂಡಿದೆ ಅಷ್ಟೆ. ಮನಸ್ಸುಗಳ ನಡುವಿನ ಸಂವಹನ ಸೇತುವಲ್ವೇ? ಬಾಯಿಯಿಂದ ಉದುರುವ ನುಡಿಮುತ್ತುಗಳು? ಭಾವನೆಗಳನ್ನು ಮನಸ್ಸಿನಿಂದ ಮನಸ್ಸಿಗೆ ದಾಟಿಸಲು ಮಾತು ಮಾತ್ರ ವಾಹಕವಲ್ಲ ಹಾಗೆಂದು ಮಾತನಾಡದೇ ಇದ್ದರೆ ಕೆಲವೊಂದು ವಿಚಾರಗಳು ಅರ್ಥವಾಗಲೂ ಅಸಾಧ್ಯ. ಯಾರೋ ಒಬ್ಬರು ಘನ ಗಾಂಭೀರ್ಯ ಆವಾಹಿಸಿಕೊಂಡ ಮಹಾಶಯನನ್ನು ನೀವು ನೋಡಿರುತ್ತೀರಿ, ಗಂಭೀರ ನಿಲುವು, ಆತ್ಮವಿಶ್ವಾಸ ಹೊಂದಿದ ಭಂಗಿ, ಅಚ್ಚುಕಟ್ಟಾದ ಉಡುಪು, ಹೀಗೆ... ಮಾತನಾಡದೇ ಇದ್ದರೂ ದಿನಾ ಅವರನ್ನು ನೋಡಿ ಅಪ್ರಚೋದಿತವಾಗಿ ನಿಮಗೊಂದು ಕಲ್ಪನೆ ಇರುತ್ತದೆ, ಈ ವ್ಯಕ್ತಿತ್ವ ಹೀಗೆ ಅಂತ...

ಇನ್ನೂ ಒಂದು ವರ್ಗದವರಿದ್ದಾರೆ. ಮಾತಿನಲ್ಲೇ ಹತ್ತಿರವಾಗುವವರು. ಚೆಂದದ ಮಾತು, ಅರ್ಥೈಸಿಕೊಳ್ಳುವಷ್ಟು ಮೃದು ಮಧುರ, ಪರೋಪಕಾರಿಗಳೆಂಬಂಥ ನಿಲುವು, ಅತಿಯಾದ ಗೌರವ ನೀಡುವ ಉದಾರತೆ, ಮಹಾತ್ಮರ ಮಾತುಗಳನ್ನು ಉದ್ಧರಿಸುತ್ತಾ, ಭಗವದ್ಗೀತೆಯ ಸಾಲುಗಳನ್ನು ಆಗಾಗ ಸ್ಮರಿಸುತ್ತಾ, ಸಣ್ಣ ಸಣ್ಣ ತಪ್ಪುಗಳಿಗೂ ಕ್ಷಮೆ ಕೇಳುತ್ತಾ ಮಾತಿನಲ್ಲೇ ಸಕಲರ ಮನ ಗೆಲ್ಲುವಂಥವರು. ಆದರೆ... ಯಾವತ್ತೋ ಒಮ್ಮೆ ಕಷ್ಟಕಾಲದಲ್ಲಿ ತಪ್ಪಿಸಿಕೊಂಡಾಗ, ಕೊಟ್ಟ ಸಾಲ ವಾಪಾಸೂ ನೀಡದೆ, ಆ ಬಗ್ಗೆ ಪಶ್ಚಾತ್ತಾಪವೂ ಇಲ್ಲದೆ, ತಲೆ ಮರೆಸಿಕೊಂಡು ಓಡಾಡತೊಡಗಿದಾಗ, ಅಮಲಿನಲ್ಲೋ, ಸಿಟ್ಟಿನಲ್ಲೋ ಬಾಯಿಗೆ ಬಂದ ಹಾಗೆ ಮಾತನಾಡಿ ವಿಶ್ವರೂಪ ದರ್ಶನ ನೀಡಿದಾಗಲೆಲ್ಲಾ ಕೊನೆಗೂ ಅರ್ಥವಾಗುತ್ತದೆ.
ಮಾತು ಮಾತ್ರ ವ್ಯಕ್ತಿತ್ವ ಕಟ್ಟುವ ಸಾಧನವಲ್ಲ ಅಂತ. ದಿನಗಟ್ಟಲೆ ಮೌನಿಯಾಗಿದ್ದವನೂ ಮನಸ್ಸು ನಿಯಂತ್ರಣ ತಪ್ಪಿದಾಗ ದೊಡ್ಡದೊಬ್ಬ ಕೋಪಿಷ್ಠನಾಗಿ ತೋರಬಹುದು, ಅಂಜುಬುರುಕನಾಗಿ ಕಾಣಬಹುದು, ಅಯ್ಯೋ ‘ಕುಯ್ತಾ ಇದ್ದಾನಲ್ಲಾ’ ಎಂದೆನಿಸಬಹುದು. ಭಾವ ತೀವ್ರತೆ ಬಾಯಿಯನ್ನು ಹೇಗ್ಹೇಗೋ ಹರಿಯಬಿಡುವುದೇ ಹೌದಾದರೆ ಆ ಕ್ಷಣಗಳನ್ನು ಮಾತು ದೌರ್ಬಲ್ಯವೆಂದೇ ಕರೆಯಬೇಕಾಗುತ್ತದೆ.
ಸೌಜನ್ಯ, ದಾಕ್ಷಿಣ್ಯ, ಪರರ ಮನೋಧರ್ಮ ಸಹಿಷ್ಣುತೆ, ಶಿಷ್ಟಾಚಾರ ಪಾಲನೆ ಎಲ್ಲವನ್ನೂ ಭಾವತೀವ್ರತೆ ತಿಂದು ಹಾಕಿಬಿಡುತ್ತದೆ. ಪಕ್ಷ ಪಕ್ಷಗಳ ಕಲಹ, ಕೋಮುಗಲಭೆ, ದಾಂಪತ್ಯ ಜಗಳ, ಕೌಟುಂಬಿಕ ಹೋರಾಟಗಳಿಗೂ ಬಹಳಷ್ಟು ಸಾರಿ ನಿಯಂತ್ರಣ ತಪ್ಪಿದ ಮಾತುಗಳೇ ಕಾರಣ ಎಂಬುದು ತಳ್ಳಿ ಹಾಕುವ ಮಾತಲ್ಲ. ಭಾವ ಮಾತಾಗುವ ಮೊದಲು ತುಸು ಶಿಷ್ಟಾಚಾರದ ಹಿತನುಡಿಗೆ ಕಿವಿಕೊಡುವ ತಾಳ್ಮೆ ಅಗತ್ಯ. ಸಲುಗೆಯಿದ್ದಲ್ಲಿ ಜವಾಬ್ದಾರಿ, ಅಧಿಕಾರವಿದ್ದಲ್ಲಿ ವಿವೇಚನೆ, ಸ್ನೇಹವಿದ್ದಲ್ಲಿ ಆಲಿಸುವ ಪ್ರವೃತ್ತಿ, ತನ್ನ ಜಾಗದಲ್ಲಿ ಪರರ ಪರಿಸ್ಥಿತಿಯನ್ನು ಆವಾಹಿಸಿ ಯೋಚಿಸಲು ಸಾಧ್ಯವಾದಲ್ಲಿ ಮಾತು ಹರಿತ ಆಯುಧವಾಗುವುದನ್ನು ತಪ್ಪಿಸಬಹುದು. ಇಲ್ಲವಾದಲ್ಲಿ ಕಷ್ಟಪಟ್ಟಾದರೂ ಮೌನಿಗಳಾಗಲು ಸಾಧ್ಯವಾದರೆ ಆ ಹೊತ್ತಿನ ‘ವಿಶ್ವಯುದ್ಧ’ವನ್ನು ತಪ್ಪಿಸಬಹುದು. ಶಾಂತಿ ಸ್ಥಾಪನೆಯಾದ ಬಳಿಕ ಮತ್ತೆ ಮಾತಿಗೆ ದನಿ ನೀಡಬಹುದು....ಮತ್ತೊಂದು ಅಪಾರ್ಥ ಹುಟ್ಟುವವರೆಗೆ!
-ಕೃಷ್ಣ ಮೋಹನ್ ತಲಂಗಳ