ಐದನೇ ತರಗತಿಯ ಹುಡುಗಿ ಅಳುತ್ತಾ ಕೂತಿದ್ದಳು. ಏನಾಯ್ತೆಂದು  ಅವರ ಟೀಚರ್ ಕೇಳಿದಾಗ, ‘ನನ್ನ ಬಟ್ಟೆಯೆಲ್ಲ ಗಲೀಜಾಗಿದೆ, ನನ್ನ  ಫ್ರೆಂಡ್ಸ್ ಎಲ್ಲರೂ ನಾನು ಪೀ ಮಾಡಿದೀನಿ ಅಂತ ರೇಗಿಸ್ತಿದಾರೆ’ ಅಂತ ಅಳುತ್ತ ಆ ಮುಗ್ಧ ಹುಡುಗಿ ಹೇಳಿದಳು. ಅವಳಿಗೆ ಮೊದಲ ಬಾರಿಗೆ ಮುಟ್ಟಾಗಿರಬೇಕು ಎಂದು ಅರಿತ ಟೀಚರ್ ಅವಳ ಅಮ್ಮನಿಗೆ ಕರೆ ಮಾಡಿ ಶಾಲೆಗೆ  ಬರಲು ಹೇಳಿದರು.

ಇದು ಒಂದು ಹುಡುಗಿಯ ಕತೆಯಲ್ಲ. ಚಿಕ್ಕವಯಸ್ಸಿನಲ್ಲಿ ಮೊದಲ ಮುಟ್ಟು  ಪಡೆಯುವ ಎಲ್ಲ ಹೆಣ್ಣುಮಕ್ಕಳ ಸಮಸ್ಯೆ. ಬದಲಾದ ಜೀವನಶೈಲಿಯಿಂದ ಇಂದಿನ  ಹುಡುಗಿಯರಿಗೆ ಬೇಗ ಋತುಚಕ್ರ ಆರಂಭವಾಗುತ್ತದೆ. ಆದರೆ ಅವರಿಗೆ ಮುಟ್ಟು
ಎಂದರೇನು ಎಂಬುದರ ಅರಿವಿರುವುದಿಲ್ಲ. ಮುಟ್ಟಿಗೆ ಒಳಗಾದಾಗ ಬರೀ ದೈಹಿಕ  ಬದಲಾವಣೆಗಳಲ್ಲದೆ ಮಾನಸಿಕ ಬದಲಾವಣೆಗಳಿಗೂ ಒಳಗಾಗುತ್ತಾರೆ.  ಊಹೆಗಳನ್ನು ಮಾಡುವ, ನಿಷೇಧವಾಗಿ ಪರಿಗಣಿಸಲು ಪ್ರಾರಂಭಿಸುವ ಮೊದಲು,
ಈ ವಿಷಯದ ಕುರಿತು ಅವರೊಡನೆ ಚರ್ಚೆ ನಡೆಸುವುದು ಒಳ್ಳೆಯದು. 

 ಮುಟ್ಟಿನ ವಿಷಯ ಮಗಂಗೂ ಗೊತ್ತಿರಲಿ

ಇಂದಿನ ಹೆಣ್ಮಕ್ಕಳಲ್ಲಿ ಹೆಚ್ಚಿನವರಿಗೆ 11 ವರ್ಷಕ್ಕೆಲ್ಲ ಮೊದಲ ಪೀರಿಯಡ್ಸ್ ಆಗುತ್ತೆ. ಹಾಗಾಗಿ ೧೦ ವರ್ಷವಾದಾಗಲೇ ಅವರಲ್ಲಿ ಅರಿವು ಮೂಡಿಸುವುದು ಸೂಕ್ತ. ಬೆಳೆಯುವ ಹುಡುಗಿಯರಲ್ಲಿ ತನ್ನ ಬದಲಾಗುವ ದೈಹಿಕತೆ ಬಗ್ಗೆ ಅರಿವು ಮೂಡಿಸಿ. ಪೀರಿಯಡ್ಸ್ ಬಗ್ಗೆ ಭಯ ಹುಟ್ಟಿಸುವುದಾಗಲೀ, ಅದನ್ನು ನೆಗೆಟಿವ್ ಆಗಿ ಬಿಂಬಿಸುವುದಾಗಲೀ ಮಾಡಿದಾಗ ಆಕೆಯಲ್ಲಿ ಕೀಳರಿಮೆ, ಸಂಕೋಚ ಬೆಳೆಯುತ್ತ ಹೋಗುತ್ತದೆ. ಅದರ ಬದಲಾಗಿ ಈ ವಿಚಾರವನ್ನು ತೀರಾ ಸಾಮಾನ್ಯ  ಎಂಬಂತೆ ಹೇಳುವುದು ಉತ್ತಮ.

ಪೀರಿಯಡ್ಸ್ ವಿಚಾರವನ್ನು ಹೇಗೆ ಹೇಳಬೇಕು?:

ನೇರವಾಗಿ ಪೀರಿಯೆಡ್ಸ್ ಆದಾಗ ಏನಾಗುತ್ತೆ? ಹೆಣ್ಣುಮಕ್ಕಳಿಗೆ ಪೀರಿಯಡ್ಸ್ ಆಗೋದು ಹೇಗೆ? ಅನ್ನುವುದನ್ನು ಆಪ್ತವಾಗಿ ವಿವರಿಸಿ. ಪೀರಿಯೆಡ್ಸ್‌ಗೂ ಮೊದಲು ಆಕೆಯ ದೇಹ ಹಾಗೂ ಮನಸ್ಸಿನಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಅನ್ನುವುದನ್ನು ಹೇಳಿ. ಎಲ್ಲಕ್ಕಿಂತ ಮುಖ್ಯವಾಗಿ ಪೀರಿಯಡ್ಸ್ ಟೈಮ್‌ನಲ್ಲಿ ಪ್ಯಾಡ್‌ಅನ್ನು ಹೇಗೆ ಬಳಸಬೇಕು  ಅನ್ನೋದನ್ನು ಕಲಿಸಿ. ಸಿನಿಮಾ, ಇಂಟರ್‌ನೆಟ್, ಪುಸ್ತಕಗಳ ಸಹಾಯವನ್ನು ಪಡೆಯುವುದು ಒಳ್ಳೆಯದೇ. ಆದರೆ ಎಲ್ಲಾ ಮಾಹಿತಿಯೊಂದಿಗೆ ಒಂದೇ ಬಾರಿಗೆ ನಿಮ್ಮ ಮಗಳ ತಲೆಗೆ ತುಂಬಿ ಅವಳಿಗೆ ಒತ್ತಡ ನೀಡಬೇಡಿ. ಸಂಪೂರ್ಣವಾಗಿ ಈ ಚರ್ಚೆ ಅನೌಪಚಾರಿಕವಾಗಿಯೇ ನಡೆಸಲು ಪ್ರಯತ್ನಿಸಿ.

ಎಂಥ ಪ್ರಶ್ನೆಗಳು ಬರುತ್ತವೆ? 

ತನ್ನ ದೈಹಿಕ ಬದಲಾವಣೆ ಬಗ್ಗೆ ಆಕೆಗೆ ಹಲವಾರು ಸಂದೇಹಗಳಿರಬಹುದು. ‘ಹೊಟ್ಟೆಯಲ್ಲೆಲ್ಲೋ ಗಾಯ ಆಗಿ ರಕ್ತ  ಬರೋದಾ?’,‘ಪೀರಿಯೆಡ್ಸ್ ಆದಾಗ ತುಂಬ ನೋವಾಗುತ್ತಾ?’,‘ಹುಡುಗರಿಗೂ
ಹೀಗಾಗುತ್ತಾ?’, ‘ಅದು ಯಾವಾಗ ನಿಲ್ಲುತ್ತದೆ?’, ‘ನನ್ನ ಸ್ನೇಹಿತರೊಂದಿಗೆ ಇದನ್ನು ನಾನು ಚರ್ಚಿಸಬೇಕೆ?’, ‘ನಾನು ಮುಟ್ಟಾಗುವಾಗ ನಾನು ಎಲ್ಲವನ್ನೂ ತಿನ್ನಬಹುದೇ’?.. ಹೀಗೆ ಹಲವಾರು ಪ್ರಶ್ನೆಗಳು ಬರಬಹುದು. ಎಲ್ಲದಕ್ಕೂ
ತಾಳ್ಮೆಯಿಂದ ಉತ್ತರಿಸಿ, ಅರ್ಥಮಾಡಿಸಿ.

ಪಿರಿಯಡ್ಸ್ ನೋವಿಗೆ ಡಯಟ್ ಹೀಗಿರಲಿ

ನಮ್ಮ ಸಮಾಜದ ಒಂದು ಭಾಗವು ಇನ್ನೂ ಇದನ್ನೇ ಒಂದು ದೊಡ್ಡ ಸಮಸ್ಯೆಯೆಂದು ಭಾವಿಸುತ್ತಿದೆ. ಒಬ್ಬ ಹುಡುಗಿ ತನ್ನ ತಾಯಿಯೊಂದಿಗೆ ಮಾತ್ರ ಈ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು ಎಂಬ ನಿರೀಕ್ಷೆಯಿದೆ. ಆದರೆ ಈ ಅರ್ಥಹೀನ, ಅಸುರಕ್ಷಿತ ನಿಯಮವನ್ನು ಮುರಿಯಬೇಕಿದೆ. ನಿಮ್ಮ ಮಗಳಿಗೆ  ಇದು ನಾಚಿಕೆಪಡುವ ಅಥವಾ ತಲೆತಗ್ಗಿಸುವ ಸಂಗತಿ ಏನೂ ಇಲ್ಲ ಎಂದು ಸರಿಯಾಗಿ ಅರ್ಥ ಮಾಡಿಸಿ. ವಾಸ್ತವವಾಗಿ, ನೀವು ಮನೆಯ ಮಂದಿಯೆಲ್ಲ
ಒಟ್ಟಿಗಿರುವಾಗಲೇ ಪೀರಿಯೆಡ್ಸ್ ವಿಚಾರ ಮಾತನಾಡಬಹುದು. ಆಗ ಪೀರಿಯೆಡ್ಸ್ ಬಗೆಗಿನ ಅಸ್ಪ್ರಶ್ಯತಾ ಭಾವ ತುಸು ಕಡಿಮೆಯಾಗುತ್ತದೆ.  

-ತನ್ಮಯ ಪ್ರಕಾಶ್