Asianet Suvarna News Asianet Suvarna News

ವಿಪರೀತ ಮೊಬೈಲ್ ಬಳಸೋರು ಜತೆಗಿದ್ದರೂ ಬರುತ್ತೆ ರೋಗ

ಆತ್ಮೀಯರೆದುರು ಮೊಬೈಲ್ ಬಳಸಿದರೆ ಎಷ್ಟೊಂದು ಹಾನಿಯಿದೆ, ಗೊತ್ತಾ?

over use of mobile bring psychological problem

ಸಾಗರಿಯ ಚಿಕ್ಕಮ್ಮ ಯಾರನ್ನೋ ಕಾಣಲೆಂದು ಬೆಂಗಳೂರಿಗೆ ಬಂದವರು ಸಾಗರಿ ಮನೆಗೂ ಬಂದಿದ್ದರು. ಅವರು ಬರುವ ಹೊತ್ತಿಗೆ ಇವಳು ಫೋನ್‌ನಲ್ಲಿ ಬ್ಯುಸಿ. ಅವರನ್ನು ಕಂಡಿದ್ದೇ ಮುಖದಲ್ಲಿ ಬಲವಂತದ ನಗುವನ್ನು ತುಳುಕಿಸಿ ಫೋನ್‌ನಲ್ಲಿ ಮಾತನಾಡುತ್ತಲೇ ಕೂರಲು ಸನ್ನೆ ಮಾಡಿದಳು. ಮತ್ತೆ ಮಾತನಾಡುತ್ತಲೇ ಹೊರ ಹೋದವಳು ಒಂದಿಷ್ಟು ಹೊತ್ತು ಒಳಗೆ ಬರಲೇ ಇಲ್ಲ. ಸಾಗರಿಯನ್ನು ನೋಡುತ್ತಿದ್ದವರಿಗೆ ಸಾಗರಿಯ ಈ ವರ್ತನೆಗೆ ಅರ್ಥವಾಗಲಿಲ್ಲ. ಅಷ್ಟು ದೂರದಿಂದ ಇವಳನ್ನು ಕಾಣಲು ಬಂದರೆ ಒಂದು ಮಾತೂ ಆಡಿಸದೇ ಈ ಥರ ಅವಮಾನ ಮಾಡುತ್ತಿದ್ದಾಳಲ್ಲ ಅಂತ ನೋವು. ಆಕೆ ಫೋನ್‌ನಲ್ಲಿ ಒನ್‌ಸೆಕೆಂಡ್ ಅಂದು, ಇವರತ್ತ ತಿರುಗಿ, 'ಕಾಫಿ ಮಾಡಲಾ' ಅಂದಳು. 

ಚಿಕ್ಕಮ್ಮ ಬೆಪ್ಪಾಗಿ ತಲೆಯಾಡಿಸುವ ಮೊದಲೇ ಫೋನನ್ನು ಭುಜದಿಂದ ಬ್ಯಾಲೆನ್ಸ್ ಮಾಡುತ್ತ ಕಾಫಿ ಬೆರೆಸುತ್ತಿದ್ದಳು. ಮಾತನಾಡುತ್ತಲೇ ಅವರೆದುರು ಕಾಫಿ
ಇಟ್ಟು ಲೈನ್‌ನಲ್ಲಿದ್ದವರಿಗೆ ಬಾಯ್ ಹೇಳಿ ಚಿಕ್ಕಮ್ಮನ ಎದುರು ಕುಳಿತಳು. ಅವಳಲ್ಲಿ ಏನೆಲ್ಲ ಮಾತನಾಡಬೇಕೆಂದು ಬಂದ ಚಿಕ್ಕಮ್ಮನಿಗೆ ಈಗ ಮಾತನಾಡುವ ಆಸಕ್ತಿ ಇರಲಿಲ್ಲ. ಇಬ್ಬರೂ ಮಾತಿಗೆ ತಡವರಿಸುತ್ತ ಸ್ವಲ್ಪ ಹೊತ್ತು ಕಳೆಯುವಷ್ಟರಲ್ಲಿ ಸಾಗರಿ ಮತ್ತೆ ಫೋನ್ ತೆಗೆದು ಯಾರ ಜೊತೆಗೋ ಚಾಟಿಂಗ್‌ನಲ್ಲಿ ಮಗ್ನಳಾದಳು. ಚಿಕ್ಕಮ್ಮ ಹೊರಡಲು ಮೇಲೆದ್ದರು. ಈಕೆ ಫೋನ್‌ಗೊಂದು ಪುಟ್ಟ ಬ್ರೇಕ್ ಕೊಟ್ಟು, ಇವತ್ತು ಇಲ್ಲೇ ಇರಬಹುದಿತ್ತು, ನಿಮ್ಗೆ ಅರ್ಜೆಂಟೇನೋ, ಸರಿ, ರಾತ್ರಿ ಕಾಲ್ ಮಾಡ್ತೀನಿ' ಎಂದು ಬೀಳ್ಕೊಟ್ಟಳು. ಎದುರಿರುವಾಗ ಮಾತನಾಡದೇ ಫೋನ್‌ನಲ್ಲಿ ಮಾತಾಡ್ತೀನಿ ಅನ್ನೋ ಇವಳ ವರ್ತನೆಯಿಂದ ಚಿಕ್ಕಮ್ಮನಿಗೆ ಆದ ಅವಮಾನ, ನೋವು ಕಡಿಮೆಯದಲ್ಲ.

- ಹಳೆಯ ಇಬ್ಬರು ಗೆಳೆಯರು ಬಹಳ ಕಾಲದ ಬಳಿಕ ಮುಖಾಮುಖಿಯಾದರು. ಹಾಯ್, ಹೇಗಿದ್ದೀಯಾ ಎಂದೆಲ್ಲ ವಿಚಾರಣೆಯಾಯ್ತು. ಒಬ್ಬ ಉತ್ಸಾಹದಿಂದ ಹಳೆಯ ಘಟನೆಯನ್ನುನೆನಪಿಸತೊಡಗಿದ. ಇನ್ನೊಬ್ಬ ಅವನ ಮಾತಿಗೆ ಹಾಂ, ಹೂಂ ಅನ್ನುತ್ತ ಮುಖ ನೋಡದೇ ಮೊಬೈಲ್‌ನಲ್ಲೇ ಕಣ್ಣುನೆಟ್ಟು ತಲೆಯಾಡಿಸುತ್ತಿದ್ದ. ಇದನ್ನು ಕಂಡು ಮೊದಲಿನವನ ಮಾತಾಡುವ ಉತ್ಸಾಹ ಕುಸಿಯಿತು. ಗೆಳೆಯ ತನ್ನನ್ನು ಈ ರೀತಿ ನಿರ್ಲಕ್ಷಿಸಲು ಕಾರಣವೇನು ಅಂತ ಅರ್ಥವಾಗಲಿಲ್ಲ. ಅವನೊಳಗೆ ಸಣ್ಣ ಕೀಳರಿಮೆ ಶುರುವಾಯ್ತು.

- ನಿಶ್ಚಿತಾರ್ಥವಾಗಿದ್ದ ಜೋಡಿಯೊಂದು ಮೊದಲ ಬಾರಿ ಹೊಟೇಲ್‌ಗೆ ಉಪಹಾರಕ್ಕೆ ಹೋಯಿತು. ಎದುರು ಬದುರು ಕುಳಿತ ಹುಡುಗ, ಹುಡುಗಿ ಇಬ್ಬರೂ ಮೊಬೈಲ್ ನೋಡುತ್ತಿದ್ದರು. ಅವರಿಬ್ಬರ ನಡುವೆ ಸಣ್ಣ ಪುಟ್ಟ ಮಾತುಕತೆಯೂ ನಡೆಯಲಿಲ್ಲ. ಚಿಗುರಿ ಬೆಳೆಯಬೇಕಿದ್ದ ಸಂಬಂಧವೊಂದು ಹಾಗೇ ಕಮರಿಹೋಯ್ತು.

- ಅವರಿಬ್ಬರು ಮದುವೆಯಾಗಿ ಐದಾರು ವರ್ಷ ಕಳೆದಿದೆ. ಪತ್ನಿಗೆ ಇತ್ತೀಚೆಗೆ ಆಗಾಗ ಜ್ವರ, ಮೈಕೈ ನೋವು, ಸಿಕ್ಕಾಪಟ್ಟೆ ತಲೆನೋವಿನಂಥ ಸಮಸ್ಯೆ ಅತಿಯಾಗುತ್ತಿದೆ. ವೈದ್ಯರಿಗೆ ಕಾರಣ ತಿಳಿಯುತ್ತಿಲ್ಲ. ಕೊನೆಗೆ ಮಾನಸಿಕ ವೈದ್ಯರಲ್ಲಿ ಹೋದಾಗ ನಿಜ ಕಾರಣ ಗೊತ್ತಾಯ್ತು. ಆಕೆಯ ಈ ಸಮಸ್ಯೆಗೆ ಕಾರಣ ಗಂಡನ ಅತಿಯಾದ ಮೊಬೈಲ್ ಬಳಕೆ. ದಿನವಿಡೀ ಗಂಡ ಆಫೀಸ್‌ನಲ್ಲಿ. ಇವಳು ಮನೆಯಲ್ಲಿ. ಈಗೀಗ ಅವನು ಮನೆಗೆ ಬಂದ ಮೇಲೂ ಇವಳನ್ನು ಸರಿಯಾಗಿ ಮಾತನಾಡಿಸಲ್ಲ, ಸೌಖ್ಯ ವಿಚಾರಿಸಲ್ಲ. ಮೊಬೈಲ್‌ನಲ್ಲೇ ಮುಳುಗಿರುತ್ತಾನೆ. ಇದು ಆಕೆಯಲ್ಲಿ ಕೆಲವು ಮಾನಸಿಕ ಸಮಸ್ಯೆಗೆ ಕಾರಣವಾಗಿದೆ. ಅವಳಿಗರಿವಿಲ್ಲದೇ ಈ ಮಾನಸಿಕ ಸಮಸ್ಯೆ ದೈಹಿಕ ರೂಪಕ್ಕೂ ಇಳಿದಿದೆ. 

ಯಾಕೆ ಹೀಗಾಗುತ್ತೆ?
- ಮೊಬೈಲ್‌ನ ಅತಿಯಾದ ಬಳಕೆಯಿಂದ ಡಿಪ್ರೆಶನ್, ನಿದ್ರಾಹೀನತೆ, ಉದ್ವೇಗದಂಥ ಮಾನಸಿಕ ಸಮಸ್ಯೆಗಳು ಸಾಮಾನ್ಯ. ಕ್ಯಾನ್ಸರ್ ಸಹ ಬರುತ್ತೆ ಅನ್ನೋ ಮಾತಿದೆ. ಇದು ಮೊಬೈಲ್ ಬಳಸುವ ವ್ಯಕ್ತಿಗಾಯಿತು. ಆದರೆ ತಾನು ಮೊಬೈಲ್ ಬಳಸದೇ ಎದುರಿದ್ದ ವ್ಯಕ್ತಿ ಮೊಬೈಲ್ ಬಳಸುತ್ತಿದ್ದರೂ ಅನೇಕ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅನ್ನುವುದು ಇತ್ತೀಚಿನ ಸಮೀಕ್ಷೆಗಳಿಂದ ಸಾಬೀತಾಗಿದೆ. ಎದುರಿಗಿರುವ ವ್ಯಕ್ತಿ ತನ್ನನ್ನು ಮಾತನಾಡಿಸದೇ ಮೊಬೈಲ್‌ನಲ್ಲಿ ಮುಳುಗಿರೋದರಿಂದ ಕೆಲವರಲ್ಲಿ ಕೀಳರಿಮೆ, ಉದ್ವೇಗ, ಖಿನ್ನತೆ ಮೊದಲಾದವು ಶುರುವಾಗುತ್ತದೆ.

- ಗಂಡ ಹೆಂಡತಿ ಸಂಬಂಧ ಬಿಗಡಾಯಿಸಲು ಮೊಬೈಲ್‌ನ ಅತಿಯಾದ ಬಳಕೆ ಬಹುಮುಖ್ಯ ಕಾರಣ. ಗಾಢವಾಗಬೇಕಾಗಿರುವ ಸಂಬಂಧ ಇದರಿಂದ ಚದುರುತ್ತ ಹೋಗುತ್ತದೆ. ವೈದ್ಯರೇ ಹೇಳುವ ಪ್ರಕಾರ, ಕೇವಲ ಮಾನಸಿಕ ಕಾರಣಗಳಷ್ಟೇ ಅಲ್ಲ, ಮಾನಸಿಕ ಮೂಲಕವಾದ ದೈಹಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.ಇದಕ್ಕೆ ಸೈಕೊಸೊಮಾಟಿಲ್ ಡಿಸಾರ್ಡರ್ ಅನ್ನುತ್ತಾರೆ. ಯಾವ ವೈದ್ಯರಿಗೂ ಈ ದೈಹಿಕ ಸಮಸ್ಯೆಗೆ ಕಾರಣವೇ ತಿಳಿಯಲ್ಲ. ಇದರಿಂದ ರೋಗಿಯ ಸ್ಥಿತಿ ಗಂಭೀರವಾಗುತ್ತ ಹೋಗುತ್ತದೆ. 

ಮೊಬೈಲ್ ಕಂಟ್ರೋಲ್ ಮಾಡೋದು ಹೀಗೆ
- ಅವಶ್ಯಕತೆ ಇಲ್ಲದಿದ್ದರೆ ಇಡೀ ದಿನ ಮೊಬೈಲ್ ಡಾಟಾ ಆನ್‌ನಲ್ಲಿ ಇಡಬೇಡಿ. ಒಂದುವೇಳೆ ಅನಿವಾರ್ಯವಾಗಿ ಡಾಟಾ ಅವಶ್ಯಕತೆ ಬಿದ್ದರೂ ಬೇಕಿಲ್ಲದ ವಾಟ್ಸಾಪ್ ಗ್ರೂಪ್‌ಗಳನ್ನು ಮ್ಯೂಟ್ ಮಾಡಿ. ಇದರಿಂದ ನಿಮ್ಮ ಗಮನ ಪದೇ ಪದೆ ಮೊಬೈಲ್‌ನತ್ತ ಹೋಗುವುದು, ಆ ಸಂಭಾಷಣೆಗಳಲ್ಲಿ ಮುಳುಗಿ ವಾಸ್ತವ ಮರೆಯುವುದೂ ತಪ್ಪುತ್ತದೆ. 
- ಮನೆಗೆ ಬಂದ ಮೇಲೆ ಕಡ್ಡಾಯವಾಗಿ ಡಾಟಾ ಆಫ್ ಮಾಡಿಡಿ. ಹತ್ತರಿಂದ ಹದಿನೈದು ನಿಮಿಷ ಅದಕ್ಕೆಂದು ಮೀಸಲಿಟ್ಟು ಆ ಸಮಯದಲ್ಲಿ ಮಾತ್ರ ಬಳಸಿ. 
- ಗೆಳೆಯರು, ಬಂಧುಗಳು, ಆತ್ಮೀಯರು ಇರುವಾಗ ಅವರ ಮುಖ ನೋಡಿ ಮಾತನಾಡಿ. ಮೊಬೈಲ್ ನೋಡಿಕೊಂಡು ಮಾತನಾಡುವುದು ಅಮಾನವೀಯ ನಡೆ. ಒಂದು ವೇಳೆ ಎಮರ್ಜೆನ್ಸಿ ಇದ್ದಲ್ಲಿ ಆ ಕಾರಣ ಅವರಿಗೆ ತಿಳಿಸಿ, ಆಗ ಅವರು ಅಪಾರ್ಥ ಮಾಡಿಕೊಳ್ಳುವುದಿಲ್ಲ.
- ಮಕ್ಕಳ ಎದುರಲ್ಲಿ ಮೊಬೈಲ್ ಬಳಕೆ ಆದಷ್ಟು ಕಡಿಮೆ ಮಾಡಿ. ಮಕ್ಕಳೆದುರು ಮೊಬೈಲ್ ನೋಡುತ್ತಿದ್ದರೆ ಅವರಿಗೂ ಮೊಬೈಲ್ ಬಳಸಲು ಪ್ರಚೋದನೆ ಸಿಗುತ್ತದೆ. ಮಕ್ಕಳು ಹೆಚ್ಚೆಚ್ಚು ಮೊಬೈಲ್ ಬಳಸುವುದು ಕೆಲವೊಮ್ಮೆ ಪ್ರಾಣಕ್ಕೂ ಹಾನಿಯುಂಟುಮಾಡುತ್ತೆ.
 

Follow Us:
Download App:
  • android
  • ios