ಮನೋ ದೈಹಿಕ ರೋಗವೆಂದರೇನು ಗೊತ್ತಾ?

First Published 15, Mar 2018, 6:42 PM IST
Know about somatoform disorder
Highlights

ಬೇರೆಯವರು ಮುಟ್ಟಿ ನೋಡಿದರೆ ಮೈ ಬಿಸಿ ಇಲ್ಲ. ರಾತ್ರಿ ನಿದ್ರೆಯೂ ಕಡಿಮೆಯೇ. ನಾಲ್ಕೈದು ತರಹದ ಬೇರೆ ಬೇರೆ ತಜ್ಞ ವೈದ್ಯರ ಬಳಿ ತೋರಿಸಿದ್ದಾಯ್ತು. ಎಲ್ಲಾ ಪರೀಕ್ಷೆಗಳೂ ಆದವು. ಎಲ್ಲವೂ ನಾರ್ಮಲ್ ಎಂದೇ ಬರುತ್ತದೆ. ವೈದ್ಯರೂ ನಾಲ್ಕೈದು ದಿನದ ಮಾತ್ರೆ ಕೊಡುತ್ತಾರೆ. ಏನೋ ಸ್ವಲ್ಪ ಕಡಿಮೆಯಾದ ಹಾಗೆ ಅನ್ನಿಸುತ್ತೆ, ಅಷ್ಟೆ. ಮತ್ತೆ ಮಾರನೆಯ ದಿನದಿಂದ ಸಮಸ್ಯೆಗಳು ಪ್ರಾರಂಭ. ಸಂಗೀತಾಳಿಗೆ ನರಳುವುದಂತೂ ತಪ್ಪುತ್ತಿಲ್ಲ. 

- ಡಾ. ಕೆ.ಎಸ್. ಶುಭ್ರತಾ, ಮನೋವೈದ್ಯರು, ಶಿವಮೊಗ್ಗ 

ಮೂವತ್ತೆಂಟು ವರ್ಷದ ಸಂಗೀತಾ ಎರಡು ಮುದ್ದು ಮಕ್ಕಳ ತಾಯಿ. ಗಂಡ, ಅತ್ತೆ, ಮಾವ ಮತ್ತು ಮಕ್ಕಳ ಸಂಸಾರ ಅವಳ. ಗಂಡನಿಗೆ ಮದ್ಯಪಾನ ಅಭ್ಯಾಸವಿದೆ. ಎಷ್ಟು ಹೇಳಿದರೂ ಗಂಡ ಬಿಡಲೊಲ್ಲ. ಸಂಗೀತಾಳೂ ಹೇಳಿ ಹೇಳಿ ಬೇಸತ್ತು ಸುಮ್ಮನಾಗಿದ್ದಾಳೆ. ಕಳೆದ ಒಂದೆರಡು ವರ್ಷಗಳಿಂದ ಸಂಗೀತಾಳ ಆರೋಗ್ಯವೂ ಸರಿಯಿಲ್ಲ. ಒಂದು ಸಲ ತಲೆನೋವು ಎಂದಾದರೆ, ಮತ್ತೊಂದು ಬಾರಿ ಕುತ್ತಿಗೆ ನೋವು. ಮಗದೊಂದು ಬಾರಿ ಕಾಲು ನೋವು. ಮೈ ಕೈ ಎಲ್ಲಾ ನೋವೇ. ಅದೂ ಸೆಳೆತದ ಹಾಗೆ ಆಗುತ್ತದೆ. ಜ್ವರ ಬಂದ ಹಾಗೆ ಭಾಸವಾಗುತ್ತದೆ. 

ಆದರೆ, ಬೇರೆಯವರು ಮುಟ್ಟಿ ನೋಡಿದರೆ ಮೈ ಬಿಸಿ ಇಲ್ಲ. ರಾತ್ರಿ ನಿದ್ರೆಯೂ ಕಡಿಮೆಯೇ. ನಾಲ್ಕೈದು ತರಹದ ಬೇರೆ ಬೇರೆ ತಜ್ಞ ವೈದ್ಯರ ಬಳಿ ತೋರಿಸಿದ್ದಾಯ್ತು. ಎಲ್ಲಾ ಪರೀಕ್ಷೆಗಳೂ ಆದವು. ಎಲ್ಲವೂ ನಾರ್ಮಲ್ ಎಂದೇ ಬರುತ್ತದೆ. ವೈದ್ಯರೂ ನಾಲ್ಕೈದು ದಿನದ ಮಾತ್ರೆ ಕೊಡುತ್ತಾರೆ. ಏನೋ ಸ್ವಲ್ಪ ಕಡಿಮೆಯಾದ ಹಾಗೆ ಅನ್ನಿಸುತ್ತೆ, ಅಷ್ಟೆ. ಮತ್ತೆ ಮಾರನೆಯ ದಿನದಿಂದ ಸಮಸ್ಯೆಗಳು ಪ್ರಾರಂಭ. ಸಂಗೀತಾಳಿಗೆ ನರಳುವುದಂತೂ ತಪ್ಪುತ್ತಿಲ್ಲ. 

ಕಡೆಗೆ ಮನೋವೈದ್ಯರ ಬಳಿ ತೋರಿಸಿದಾಗ ತಿಳಿದದ್ದು, ಇದು ಮನೋದೈಹಿಕ ಸಮಸ್ಯೆಎಂದು. ಈಗ ಒಂದು ತಿಂಗಳಿನಿಂದ ಚಿಕಿತ್ಸೆ ತೆಗೆದುಕೊಂಡು ಆರಾಮಾಗಿದ್ದಾಳೆ. ಗಂಡನಿಗೂ ಬಿಡದೇ ಮದ್ಯವ್ಯಸನಕ್ಕೆ ಚಿಕಿತ್ಸೆ ಕೊಡಿಸಿ, ಅವನೂ ಈ ವ್ಯಸನದಿಂದ ಮುಕ್ತನಾಗಿದ್ದಾನೆ. 

ಮಾನಸಿಕ ಸಮಸ್ಯೆ ಬಗ್ಗೆ ಗಮನ ಇರಲಿ: 

ಸಂಗೀತಾಳ ಸಮಸ್ಯೆ  somatoform disorder ಎನ್ನುವಂತದ್ದು. ಈ ಸಮಸ್ಯೆಯಿಂದ ನರಳುವ ವ್ಯಕ್ತಿಯಲ್ಲಿ ಹಲವಾರು ದೈಹಿಕ ಅಸ್ವಸ್ಥತೆಯ ಲಕ್ಷಣಗಳಿದ್ದು, ಅದಕ್ಕಾಗಿ ಪರೀಕ್ಷೆ ಮಾಡಿದರೆ ಫಲಿತಾಂಶ ನಾರ್ಮಲ್ ಎಂದೇ ಬರುತ್ತದೆ. ಉದಾಹರಣೆಗೆ ವ್ಯಕ್ತಿಗೆ ಹಲವಾರು ನೋವಿದ್ದು, ಯಾವುದೇ ಪರೀಕ್ಷೆ ಮಾಡಿದರೆ ಅದು ನಾರ್ಮಲ್ ಎಂದೇ ಬರುತ್ತದೆ.

ಈ ಮನೋದೈಹಿಕ ಸಮಸ್ಯೆಗಳನ್ನು ಮಹಿಳೆಯರಲ್ಲಿ ಹೆಚ್ಚಾಗಿ ಕಾಣುತ್ತೇವೆ. ಪರೀಕ್ಷೆಗಳು ನಾರ್ಮಲ್‌ಎಂದು ಬಂದರೂ ವ್ಯಕ್ತಿಗೆ ಕಷ್ಟವಂತೂ ಆಗುತ್ತಲಿರುತ್ತದೆ. ಬಹಳಷ್ಟು ಬಾರಿ ಈ ಸಮಸ್ಯೆಯಿಂದ ನರಳುವ ವ್ಯಕ್ತಿಗೆ ಕುಟುಂಬದಲ್ಲಿ ಯಾವುದೇ ರೀತಿಯ ಒತ್ತಡ ಇರುತ್ತದೆ. ಮನಸ್ಸಿನಲ್ಲಿ ಇರುವ ಹೇಳಿಕೊಳ್ಳದ ಕಷ್ಟಗಳು/ನೋವುಗಳು, ಈ ರೀತಿ ದೈಹಿಕ ಲಕ್ಷಣಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತೆ. ಸಮಸ್ಯೆ ಇರುವ ವ್ಯಕ್ತಿ, ಈ ಲಕ್ಷಣಗಳನ್ನು ನಾಟಕ ಮಾಡುತ್ತಿಲ್ಲವೆಂದು ಕುಟುಂಬದವರು ಅರಿಯುವುದು ಅವಶ್ಯಕ. ಆ ವ್ಯಕ್ತಿಗೆ ಆಗುತ್ತಿರುವ ಕಷ್ಟದ ಬಗ್ಗೆ ಅನುಭೂತಿ ತೋರಿಸುವುದು ಚಿಕಿತ್ಸೆಯಲ್ಲಿ ಮೊದಲ ಹೆಜ್ಜೆ. ಮನೋವೈದ್ಯರನ್ನು ಕಂಡರೆ ಸೂಕ್ತವಾದ ಚಿಕಿತ್ಸೆ, ಆಪ್ತ ಸಮಾಲೋಚನೆ ನೀಡುತ್ತಾರೆ. ಆ ವ್ಯಕ್ತಿಗೆ ಕೊರೆಯುತ್ತಿರುವ ಒತ್ತಡದ ಪರಿಹಾರಕ್ಕೂ ಪ್ರಯತ್ನ ಅಗತ್ಯ.

ಎಷ್ಟೋ ಬಾರಿ ನಮ್ಮ ದೈಹಿಕ ಸಮಸ್ಯೆಗಳಿಗೆ ಮಾನಸಿಕ ಕಾರಣಗಳೂ ಇರಬಹುದು ಎಂಬುದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಇದರಿಂದಾಗಿ ನೋವು ಅನುಭವಿಸುವ ಜೊತೆಗೆ ಮನೆಯವರಿಂದ 'ನಾಟ್ಕ ಮಾಡ್ತಾಳೆ' ಎಂಬ ಕುಹಕವನ್ನು ಸಹಿಸಿಕೊಳ್ಳಬೇಕಾದ ಸಂದಿಗ್ಧತೆ. ವೈದ್ಯಕೀಯಕ್ಕೆ ಸವಾಲಾಗಿರುವ ಈ ಮಾನಸಿಕ ಮೂಲದ ದೈಹಿಕ ಸಮಸ್ಯೆ ಬಗೆಗಿನ ವಿವರಗಳು ಇಲ್ಲಿವೆ.

ಈ ಮನೋ ರೋಗದ ಬಗ್ಗೆ ಮತ್ತಷ್ಟು....

-  ಹೆಚ್ಚು ಒತ್ತಡದಲ್ಲಿ ಬೆಳೆಯುವ ಮಕ್ಕಳಿಗೂ ಈ ಸಮಸ್ಯೆ ಬರಬಹುದು.

- ಚಿಕ್ಕವರಿದ್ದಾಗ ಅನುಭವಿಸಿದ ಒತ್ತಡದಿಂದ ದೊಡ್ಡವರಾದ ಮೇಲೂ ಬರಬಹುದು.

- 30 ವರ್ಷದೊಳಗೇ ಕಾಣಿಸಿಕೊಳ್ಳುವುದು ಜಾಸ್ತಿ.

-  ಇದರಲ್ಲಿ ಮಾನಸಿಕ ಸಮಸ್ಯೆ ದೈಹಿಕ ಲಕ್ಷಣಗಳಲ್ಲಿ ಕಾಣಿಸಿಕೊಳ್ಳುತ್ತೆ.

- ಕೌಟುಂಬಿಕ ವಿಚಾರದಲ್ಲಿ ಅತಿಯಾದ ಒತ್ತಡದಿಂದಲೂ ಇದು ಕಾಣಿಸಿಕೊಳ್ಳಬಹುದು.

ಲಕ್ಷಣಗಳೇನು ಗೊತ್ತಾ?

- ಮೈಯಲ್ಲಿ ನೋವು, ಸುಸ್ತು, ಉಸಿರಾಡಲು ಕಷ್ಟವಾಗೋದು

-ಹೀಗೆ ಒಂದಕ್ಕಿಂತ ಹೆಚ್ಚು ಒಂದಕ್ಕೊಂದು ಸಂಬಂಧವಿಲ್ಲದ ಸಮಸ್ಯೆಗಳು.

- ನರದ ಸಮಸ್ಯೆಗಳು, ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು, ಲೈಂಗಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

- ಎಷ್ಟೇ ನೋವಿದ್ದರೂ ವೈದ್ಯಕೀಯ ಪರೀಕ್ಷೆಗಳಲ್ಲಿ ನಾರ್ಮಲ್ ಫಲಿತಾಂಶ ಬರುತ್ತೆ.

- ಈ ಸಮಸ್ಯೆ ಇರುವವರು ತಮ್ಮ ಅಸಹಜ ದೈಹಿಕ ನೋವಿನ ಬಗ್ಗೆ  ಹೆಚ್ಚು ಚಿಂತಿತರಾಗುತ್ತಾರೆ. ಯಾವುದೋ ದೊಡ್ಡ ರೋಗದ ಲಕ್ಷಣ ಎಂದು ಭೀತರಾಗುವವರು ಅಧಿಕ ಮಂದಿ.

ನೀವೇನು ಮಾಡಬಹುದು?

- ಈ ಸಮಸ್ಯೆ ಇರುವವರ ಬಗ್ಗೆ ಪ್ರೀತಿ ಇರಲಿ. ಇಂಥವರ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಬೇಡಿ.

- ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ.

- ಖಿನ್ನತೆ, ಮಾನಸಿಕ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಬೆಳೆಸಿಕೊಳ್ಳಿ.

- ಜೀವನಶೈಲಿಯಲ್ಲಿ ಬದಲಾವಣೆ ಮಾಡಿ.

loader