ಡಾ. ಪ್ರಭುದೇವ್ ಎಂ. ಸೋಲಂಕಿ,  ಸೀನಿಯರ್ ಕನ್ಸಲ್ಟೆಂಟ್ ಯುರಾಲಜಿ

- ನಮ್ಮ ಬದಲಾದ ಲೈಫ್‌ಸ್ಟೈಲ್‌ನಿಂದ ಯುರಾಲಜಿ(ಮೂತ್ರಕ್ಕೆ) ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತಿವೆಯಾ?

ಖಂಡಿತಾ. ಇತ್ತೀಚೆಗೆ 20 ರಿಂದ 40 ವಯಸ್ಸಿನವರಲ್ಲೇ ಯುರಾಲಜಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿವೆ. ಕಿಡ್ನಿಸ್ಟೋನ್‌ನಿಂದ ಹಿಡಿದು ಪ್ರಾಸ್ಟ್ರೇಟ್ ಕ್ಯಾನ್ಸರ್ ತನಕ ಹಲವು ಸಮಸ್ಯೆಗಳಿವೆ. ರೋಗದ ಪ್ರಮಾಣ ಹೆಚ್ಚುವುದಕ್ಕೆ ಕಾರಣ ನಮ್ಮ ಲೈಫ್‌ಸ್ಟೈಲೇ. ಮುಖ್ಯವಾಗಿ ಸಿಟ್ರಸ್‌ನ ಅಂಶ ಇರುವ  ಹಣ್ಣುಗಳ ಸೇವನೆ ಕಡಿಮೆಯಾಗುತ್ತಿದೆ.

- ಮಸಾಲೆ ಆಹಾರ, ಕಾರ್ಬೊನೇಟೆಡ್ ಡ್ರಿಂಕ್‌ಗಳು (ರೆಡಿಮೇಡ್ ತಂಪು ಪಾನೀಯಗಳಲ್ಲಿ ಕಾರ್ಬೊನೇಟೆಡ್ ದ್ರಾವಣವನ್ನು ಹೆಚ್ಚು ಬಳಸುತ್ತಾರೆ) ಕೆಫಿನ್ ಅಂಶಗಳಿರುವ ಪೇಯಗಳನ್ನು ಹೆಚ್ಚೆಚ್ಚು ಸೇವಿಸುವುದು ಇದಕ್ಕೆ ಮುಖ್ಯ ಕಾರಣ. ಇದಕ್ಕೆ ಪರಿಹಾರ ನಿಯಮಿತ ಆಹಾರ ಸೇವನೆ, ನೀರು ಹೆಚ್ಚೆಚ್ಚು ಕುಡಿಯೋದು, ವ್ಯಾಯಾಮ ಹೀಗೆ ಆರೋಗ್ಯಕರ  ಜೀವನಶೈಲಿ ರೂಢಿಸಿಕೊಳ್ಳಿ.

- ನೀರು ಕುಡಿಯದೇ ಇದ್ದರೆ ಕಿಡ್ನಿ ಸ್ಟೋನ್ ಆಗುತ್ತೆ ಅಂತಾರೆ, ಅದು ನಿಜವಾ?

ನೀರಿನಂಶ ಕಡಿಮೆಯಾಗೋದೂ ಕಿಡ್ನಿಸ್ಟೋನ್‌ಗೆ ಮುಖ್ಯಕಾರಣ. ಜೊತೆಗೆ ಇತರ ಕಾರಣಗಳೂ ಇವೆ. ನಾನು ಆಗಲೇ ಹೇಳಿದಂತೆ ನಮ್ಮ ಬದಲಾದ ಜೀವನಶೈಲಿ- ಆಫೀಸ್‌ನಲ್ಲಿ ಎಸಿ ಇರುತ್ತೆ, ಹಾಗಾಗಿ ನೀರು ಕುಡಿಯಬೇಕು ಅನಿಸಲ್ಲ. ಆದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತೆ. ಕಿಡ್ನಿ ಸ್ಟೋನ್ ಆಗಲು ಇದೂ ಒಂದು ಕಾರಣ ಇರಬಹುದು. ಹಾಗಾಗಿ ನೀರಿನಂಶ ದೇಹಕ್ಕೆ ಹೆಚ್ಚೆಚ್ಚು ಹೋಗುವಂತೆ ನೋಡಿಕೊಳ್ಳಿ

- ಒಮ್ಮೆ ಬಂದ ಮೇಲೆ ಪದೇ ಪದೇ ಕಿಡ್ನಿಸ್ಟೋನ್ ಕಾಣಿಸಿಕೊಳ್ಳೋದು ಯಾಕೆ?

ನಮ್ಮ ಆಹಾರ ಪದ್ಧತಿಯೇ ಮುಖ್ಯಕಾರಣ. ಡಯೆಟರಿ ಕ್ಯಾಲ್ಶಿಯಂ ಹೆಚ್ಚೆಚ್ಚು ದೇಹಕ್ಕೆ ಹೋಗುವುದರಿಂದಲೂ ಕಿಡ್ನಿಸ್ಟೋನ್ ಆಗಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಕಾರಣಗಳು ಭಿನ್ನವಾಗುತ್ತವೆ. ಮೂತ್ರಕೋಶದ ಕಲ್ಲು 4 ಮಿಲಿಮೀಟರ್‌ಗಿಂತ ಕಿರಿದಾಗಿದ್ದರೆ ನೀರಿನ ಮೂಲಕವೇ ಹೊರಹೋಗುವಂತೆ ಮಾಡುತ್ತೇವೆ. 5-6 ಮಿಲಿಮೀಟರ್‌ನಷ್ಟಿದ್ದರೆ ಮೂತ್ರದ ಮೂಲಕ ಹೋಗುವ ಸಾಧ್ಯತೆ ಶೇ.೬೫ರಷ್ಟಿರುತ್ತದೆ. ಹರಳು ಇದಕ್ಕಿಂತ ದೊಡ್ಡದಾಗಿದ್ದರೆ ಸರ್ಜರಿ ಅನಿವಾರ್ಯ.

- ಮಕ್ಕಳಿಗೆ ಯೂರಿನ್ ಇನ್‌ಫೆಕ್ಷನ್ ಆಗೋದು ಹೆಚ್ಚು, ಯಾಕೆ? ಹೀಗಾದಾಗ ಏನು ಮಾಡಬೇಕು?

ಮಕ್ಕಳಲ್ಲೂ ಹಾಗೂ ದೊಡ್ಡವರಲ್ಲೂ ಯೂರಿನ್ ಇನ್‌ಫೆಕ್ಷನ್‌ಗೆ ಕಾರಣಗಳು ಹಲವಿವೆ. ಈ ಸಮಸ್ಯೆ ಹೆಣ್ಮಕ್ಕಳಲ್ಲೇ ಹೆಚ್ಚು. ಜನನಾಂಗದಲ್ಲಿ ಕೆಲವು ಬ್ಯಾಕ್ಟೀರಿಯಾಗಳಿರುತ್ತವೆ. ಅವು ಯೂರಿನ್ ಟ್ರ್ಯಾಕ್‌ಗೆ ಪ್ರವೇಶಿಸಿದರೆ ಇನ್‌ಫೆಕ್ಷನ್ ಆಗುತ್ತೆ. ಹೀಗಾದಾಗ ಜನನಾಂಗದಲ್ಲಿ ಉರಿ, ನೋವು ಕಾಣಿಸಿಕೊಳ್ಳುತ್ತದೆ, ಜ್ವರ ಬರಬಹುದು. ಅಬ್ಸರ್ವೇಶನ್ ಬಳಿಕ ಆ್ಯಂಟಿಬಯಾಟಿಕ್ ನೀಡುತ್ತೇವೆ.

- ಮಗುವಾದ ಬಳಿಕ ತಾಯಂದಿರಲ್ಲಿ ಸೀನುವಾಗ, ಜೋರಾಗಿ ನಗುವಾಗ ಯೂರಿನ್ ಪಾಸ್ ಆಗುತ್ತೆ, ಇದಕ್ಕೇನು ಕಾರಣ? ನಿವಾರಣೆ ಹೇಗೆ?

ಒಂದೇ ಮಗುವಿದ್ದರೆ ಹೀಗಾಗುವುದು ಕಡಿಮೆ. ಅವಳಿಗಳಿಗೆ ಜನ್ಮ ನೀಡಿದಾಗ ಇಂಥ ಸಮಸ್ಯೆ ಬರಬಹುದು. ಹೆರಿಗೆ ಬಳಿಕ ಪೆಲ್ವಿಕ್‌ಫ್ಲೋರ್ ಸ್ನಾಯುಗಳು ದುರ್ಬಲಗೊಂಡರೆ ಹೀಗಾಗುತ್ತದೆ. ಜೊತೆಗೆ ಬೊಜ್ಜುಹೆಚ್ಚಾದಾಗ, ವಯಸ್ಸಾದಾಗಲೂ ಹೀಗಾಗಬಹುದು. ನಿಯಮಿತವಾಗಿ ವ್ಯಾಯಾಮ ಮಾಡಿ ತೂಕ ಇಳಿಸಿಕೊಳ್ಳಿ. ಇದಕ್ಕೆ ಒಂದು ಎಕ್ಸರ್ ಸೈಸ್ ಇದೆ. ಮೂತ್ರ  ವಿಸರ್ಜಿಸುವಾಗ ನಡು ನಡುವೆ ಹಿಡಿದಿಟ್ಟುಕೊಂಡು ವಿಸರ್ಜಿಸಿ. ದಿನದಲ್ಲಿ ಹಲವು ಬಾರಿ ಹೀಗೆ ಮಾಡಬೇಕು. ಇದರಿಂದಲೂ ಮೂತ್ರ ವಿಸರ್ಜನೆಯಲ್ಲಿ ಕಂಟ್ರೋಲ್ ಬರುತ್ತೆ.