ಮಂಡ್ಯ (ಜ.09): ಕಡುಗಪ್ಪು ಬಣ್ಣದ ಕೋಳಿಗಳಿವು. ಇವುಗಳ ರಕ್ತ, ಮಾಂಸ, ಅಷ್ಟೇ ಏಕೆ  ಮೂಳೆಯ ಬಣ್ಣವೂ ಕಪ್ಪು! ಇಡುವ ಮೊಟ್ಟೆಗಳೂ ಕಪ್ಪು. ಮಧ್ಯಪ್ರದೇಶದ ಆದಿವಾಸಿ ಜನಾಂಗದವರ ಬಳಿಯಲ್ಲಿದ್ದ ಈ ಖಡಕ್‌ನಾತ್ ಕುಕ್ಕುಟಗಳು ಈಗ ಮಳವಳ್ಳಿ ತಾಲ್ಲೂಕಿನ ಬಾಚನಹಳ್ಳಿಯಲ್ಲಿವೆ. ಬಹಳ ಅಪರೂಪದ ಹಲವು ಆರೋಗ್ಯಕರ ಗುಣಗಳುಳ್ಳ ಈ ಕೋಳಿಗಳನ್ನು ಆ ಊರಿನ ಮೂವರು ಮಹಿಳೆಯರು ಮಧ್ಯಪ್ರದೇಶದಿಂದ ತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲೇ ಮೊದಲಬಾರಿಗೆ ಖಡಕ್ ನಾಥ್ ಕೋಳಿ ಫಾರಂ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಕವಿತಾ ಸಂತೋಷ್, ರಾಧಾ ಮತ್ತು ಸುಧಾ ಈ ಸಾಹಸಕ್ಕಿಳಿದ ಮಹಿಳೆಯರು. ಒಂದೂವರೆ ಎಕರೆ ಜಮೀನಿನಲ್ಲಿ ಕೋಳಿ ಸಾಕಾಣಿಕೆಗೆ ಅಗತ್ಯವಿರುವ ಶೆಡ್‌ಗಳನ್ನು ನಿರ್ಮಾಣ ಮಾಡಿ, 300 ಕ್ಕೂ ಹೆಚ್ಚು ಕೋಳಿ ಮರಿಗಳನ್ನು ಸಾಕುತ್ತಿದ್ದಾರೆ. ಮೊದಲ ಪ್ರಯತ್ನ ವಿಫಲವಾಗಿತ್ತು!:

ಖಡಕ್‌ನಾಥ್ ಕೋಳಿಗಳನ್ನು ಸಾಕುವುದಕ್ಕೂ ಮುನ್ನ ಅವುಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದರು. ಕವಿತಾ ಸಂತೋಷ್. ಬಳಿಕ ಮಳವಳ್ಳಿಯ ಕೋಳಿ ಸಂವರ್ಧನಾ ಕೇಂದ್ರದಲ್ಲಿ ತರಬೇತಿಯನ್ನು ಪಡೆದುಕೊಂಡು ಕೌಶಲ್ಯತೆ ಪಡೆದುಕೊಂಡರು. ಬಳಿಕ ಮಧ್ಯಪ್ರದೇಶದ ಜಾಗ್ವಾ ಜಿಲ್ಲೆಯಿಂದ ಆರಂಭದಲ್ಲಿ 300 ಮರಿಗಳನ್ನು ರೈಲಿನ ಮೂಲಕ ತರಿಸಿಕೊಂಡರು. ಇವುಗಳಲ್ಲಿ 150  ಮರಿಗಳು ಸಾವನ್ನಪ್ಪಿದ್ದವು. ಆದರೂ ಇವರು ಎದೆಗುಂದಲಿಲ್ಲ. ಅವುಗಳನ್ನು ಸಾಕಣೆ ಮಾಡುವ ಮೂಲಕ ತಮಗಾದ ನಷ್ಟವನ್ನು ತುಂಬಿಕೊಂಡರು. ಒಂದು ಸಲಕ್ಕೆ 80 ಮೊಟ್ಟೆಗಳು!: ಈ ಕೋಳಿಗಳು ಒಂದು ಸಲಕ್ಕೆ 65 ರಿಂದ 80 ರವರೆಗೆ ಮೊಟ್ಟೆಗಳನ್ನು ಇಡುತ್ತದೆ. ಎರಡೂವರೆಯಿಂದ ನಾಲ್ಕು ತಿಂಗಳಿಗೊಮ್ಮೆ ಮೊಟ್ಟೆ ಇಡುತ್ತೆ. ಆದರೆ ಒಂದು ಸಮಸ್ಯೆ ಎಂದರೆ ಇವು ಕಾವು ಕೊಟ್ಟು ಮರಿಮಾಡಲ್ಲ. ಕೃತಕವಾಗಿ ಕಾವು ಕೊಟ್ಟು ಮರಿಮಾಡಬೇಕಾಗುತ್ತದೆ. ಊರಿನ ನಾಟಿಕೋಳಿಗಳಿಂದ ಕಾವು ಕೊಡಿಸಿ ಮರಿ ಮಾಡಿಸಲೂಬಹುದು.

ಮಾಂಸ ಅತ್ಯಂತ ರುಚಿಕರ: ‘ಫಾರ್ಮ್ ಕೋಳಿಗಳಿಗೆ ಹೋಲಿಸಿದರೆ ಇವುಗಳ ಮಾಂಸ ಅತ್ಯಂತ ರುಚಿಕರ’ ಎನ್ನುತ್ತಾರೆ ಈ ಕೋಳಿ ಸಾಕಾಣೆ ಮಾಡುತ್ತಿರುವ ಕವಿತಾ ಅವರ ಪತಿ ಸಂತೋಷ್. ಈ ಕೋಳಿಗಳು ಸುಮಾರು ಒಂದೂವರೆ ಕೆಜಿಯಿಂದ ಎರಡು ಕೆಜಿ ತೂಗುತ್ತವೆ. ಇದರ ಮಾಂಸವು ಕೊಬ್ಬಿನಂಶದಿಂದ ಮುಕ್ತವಾಗಿದೆ.

ಅತ್ಯಧಿಕ ರೋಗ ನಿರೋಧಕ ಶಕ್ತಿ ಹೊಂದಿದೆ. ಇವುಗಳನ್ನು ಔಷಧ ತಯಾರಿಕೆಗೂ ಬಳಸುತ್ತಾರೆ. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು, ನರ ದೌರ್ಬಲ್ಯಕ್ಕೆ, ಅಧಿಕ ರಕ್ತದೊತ್ತಡ, ಹೃದ್ರೋಗ, ನರರೋಗ, ಪಾರ್ಶ್ವವಾಯು, ರಕ್ತ ಹೆಪ್ಪುಗಟ್ಟುವಿಕೆ, ಕಡುಕಪ್ಪು ಬಣ್ಣದ ಖಡಕ್‌'ನಾತ್ ಕೋಳಿಗಳ ಬಗ್ಗೆ ಫೊಟೋ ನೋಡಿ ಸುದ್ದಿ ಓದಿ ಗೊತ್ತಿರಬಹುದು. ಮಧ್ಯಪ್ರದೇಶದ ಈ ತಳಿ ಈಗ ಮದ್ದೂರಿನಲ್ಲಿ ಸದ್ದು ಮಾಡುತ್ತಿದೆ. ಮೂವರು ಮಹಿಳೆಯರು ಈ ಕಡುಗಪ್ಪಿನ ಕೋಳಿಗಳ ಸಾಕಣೆ ಮಾಡಿ ಮಾರಾಟಮಾಡುತ್ತಿದ್ದಾರೆ. ಈ ಕೋಳಿಗಳಿಗೆ ಸಾಕಷ್ಟು ಬೇಡಿಕೆ ಇದೆ.

ಸಾಕಾಣಿಕೆ ಸುಲಭ: ಈ ಕೋಳಿಗಳನ್ನು ಸಾಕೋದು ಕಷ್ಟವೇನಲ್ಲ. ಆರಂಭದಲ್ಲಿ ಎಳೆಯ ಮರಿಗಳಿಗೆ ಮಾತ್ರ ಪ್ರೀ ಸ್ಟಾರ್ಟರ್ ಮತ್ತು ಸ್ಟಾರ್ಟರ್ ಅಂತ ಖಾಸಗಿ ಕಂಪೆನಿಯ ಕಮರ್ಷಿಯಲ್ ಸಿದ್ಧಾಹಾರವನ್ನು ನೀಡಲಾಗುತ್ತದೆ. ಬಳಿಕ ಕಡಿಮೆ ಗುಣಮಟ್ಟದ ಗೋಧಿ, ರಾಗಿ, ಜೋಳ ಇತ್ಯಾದಿಗಳನ್ನು ಮಿಕ್ಸ್ ಮಾಡಿ ಸಂಜೆ ಹೊತ್ತು ಮಾತ್ರ ಕೊಡುತ್ತಾರೆ. ಕಡಿಮೆ ಬೆಲೆಗೆ ಸಿಗುವ ರೇಷ್ಮೆ ಎಲೆಗಳ ಪೌಡರ್‌ಅನ್ನೂ ಈ ಕೋಳಿಗಳಿಗೆ ಹಾಕೋದುಂಟು. ಉಳಿದಂತೆ ಇವು ಹೊಲದಲ್ಲಿ ಸಾಮಾನ್ಯ ಕೋಳಿಗಳಂತೆ ಅಡ್ಡಾಗಿ ಮಣ್ಣು ಕೆದಕಿ ಹುಳ ಹುಪ್ಪಟೆ ತಿನ್ನುತ್ತವೆ. ‘ಮನೆಯಲ್ಲಿ ಉಳಿದ ಪದಾರ್ಥಗಳನ್ನೇ ಇವುಗಳಿಗೂ ನೀಡಬಹುದಾಗಿದ್ದು, ಪ್ರತ್ಯೇಕವಾದ ಫೀಡ್ಸ್‌ನ ಅವಶ್ಯಕತೆ ಇರುವುದಿಲ್ಲ’ ಎನ್ನುತ್ತಾರೆ ಖಡಕ್‌ನಾಥ್ ಕುಕ್ಕುಟೋದ್ಯಮದ ರೂವಾರಿ ಕವಿತಾ ಸಂತೋಷ್.

ಅತ್ಯುತ್ತಮ ಬೆಲೆ: ಮೊಟ್ಟೆಗೆ 10 ರುಪಾಯಿ ಇದೆ. ಮೊಟ್ಟೆ, ಕೋಳಿಗಳಿಗೆ ಬೆಂಗಳೂರು,ಬಳ್ಳಾರಿ ಸೇರಿದಂತೆ ನಗರೆದೆಲ್ಲೆಡೆ ಬೇಡಿಕೆ ಇದೆ. ಹೈವೇ ಬದಿಯಲ್ಲಿ ಮಾರಿದರೂ ಕೊಳ್ಳುವವರಿದ್ದಾರೆ. ಒಂದು ದಿನದ ಮರಿಗೇ 70 ರೂ. ಇದೆ. ಒಂದು ತಿಂಗಳ ಮರಿ 200 ರೂ. ಹಾಗೂ 45 ದಿನದ ಮರಿ 250 ರೂ. ಬೆಲೆ ಬಾಳುತ್ತದೆ. ಒಂದು ಕೋಳಿ 600 ರಿಂದ 750 ರೂವರೆಗೂ ಮಾರಾಟವಾಗುತ್ತೆ. ಕೆಲವರು ದೃಷ್ಟಿ ಹುಂಜ ಅಂತ ಹೆಚ್ಚು ಬೆಲೆ ನೀಡಿ ಖರೀದಿಸುತ್ತಾರೆ.

ರೈತರಿಗೆ ರಿಯಾಯಿತಿ ದರದಲ್ಲಿ ನೀಡುತ್ತಾರೆ!: ಕವಿತಾ ಸಂತೋಷ್ ಅವರು ರೈತರಿಗೆ ರಿಯಾಯಿತಿ ದರದಲ್ಲಿ ಅಂದರೆ ಶೇ.25 ರ ಡಿಸ್ಕೌಂಟ್‌ನಲ್ಲಿ ಕೋಳಿ ಮಾರಾಟ ಮಾಡುತ್ತಾರೆ. ಸಾಮಾಜಿಕ ಜವಾಬ್ದಾರಿಯ ಕಾರಣಕ್ಕೆ ಹಾಗೂ ಸರ್ಕಾರದಿಂದ ಸಹಾಯಧನದ ನಿರೀಕ್ಷೆಯಲ್ಲಿ ಈ ಕಾರ್ಯ ಮಾಡುತ್ತಿರುವುದಾಗಿ ಕವಿತಾ ಹೇಳುತ್ತಾರೆ. ಒಬ್ಬ ರೈತ ರಿಯಾಯಿತಿ ದರದಲ್ಲಿ 10 ಕೋಳಿ ಪಡೆಯಬಹುದು. ಇನ್ನೂ ಹೆಚ್ಚು ಕೋಳಿ ಬೇಕೆಂದರೆ ಮೊದಲೇ ಆರ್ಡರ್ ನೀಡಬೇಕು, ಅವಕ್ಕೆ ಸಬ್ಸಿಡಿ ಇರಲ್ಲ.

ಸಮಸ್ಯೆಯ ಏನು?: ರೋಗ ನಿರೋಧಕ ಶಕ್ತಿ ಇರುವ ಕಾರಣ ರೋಗ ಇರಲ್ಲ. ಜೊತೆಗೆ ನಾವು 1 ತಿಂಗಳಲ್ಲಿ 3 ವ್ಯಾಕ್ಸಿನೇಶನ್ ಮಾಡಿಯೇ ಕೊಡುವ ಕಾರಣ ರೋಗ ಬರಲ್ಲ. ಆದರೆ ನಮ್ಮ ಜನ ಕಪ್ಪು ಕೋಳಿ ತಿನ್ನಲು ಸ್ವಲ್ಪ ಹಿಂಜರಿಯುತ್ತಾರೆ. ಇದು ಮೊಟ್ಟೆ ಇಡುತ್ತೆ, ಮರಿ ಮಾಡಲ್ಲ. ಹಾಗಾಗಿ ರೈತರು ಬೇಗ ಆಸಕ್ತಿ ಕಳೆದುಕೊಳ್ತಾರೆ. ಹದ್ದು, ನಾಯಿ, ಬೆಕ್ಕಿಗೆ ಸಿಗದಂತಿರಬೇಕು. ವಿವರಗಳಿಗೆ ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9902777375  ಸಂಪರ್ಕಿಸಿ.