ಜೀವನದಲ್ಲಿ ಸಣ್ಣ ಸಣ್ಣ ಅಡ್ಜೆಸ್ಟ್‌ಮೆಂಟ್‌ಗಳಿಂದ ಮನಸ್ಸಿಗೆ ಹಿತ ನೀಡುವ ಕೆಲಸ ಮಾಡಬಹುದು. ಆದರೂ ಕೇಲವರು ತಮ್ಮ ಜೀವನದಲ್ಲಿ ಅಡ್ಜೆಸ್ಟ್‌ಮೆಂಟ್‌ ಎಂಬ ಪದಕ್ಕೆ ಜಾಗವಿಲ್ಲ ಎಂಬಂತೆ ವರ್ತಿಸುತ್ತಾರೆ.

ನನ್ನ ಬಾಳಿನಲ್ಲಿ ಈ ಹೊಂದಾಣಿಕೆ ಎಂಬ ಬುಗುರಿಯ ಸುತ್ತ ಸುತ್ತುವ ಘಟನೆ ನಡೆದದ್ದು ಇದೇ ತಿಂಗಳ 14 ರಂದು. ಸಂಜೆ ಪರೀಕ್ಷೆಯ ನಿಮಿತ್ತ ಗೆಳೆಯನ ಜೊತೆ ಬಂಗಳೂರಿಗೆ ಪಯಣ ಬೆಳೆಸಿದ್ದೆ. ಮುಂಗಡ ಟ್ರೈನ್‌ ಟಿಕೆಟ್‌ ಬುಕ್‌ ಮಾಡದ ಕಾರಣ ಜನರಲ್‌ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣ ಬೆಳೆಸುವುದು ಅನಿವಾರ್ಯ ಎದುರಾಯಿತು.

ಹೃದಯಕೂ ಮನಸಿಗೂ ಸಂಬಂಧ ಉಂಟೇ?

ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಗಾಳಿ ಸೂಸುವ ಫ್ಯಾನ್‌, ನೀರೇ ಕಾಣದ ಬಾತ್‌ರೂಮ್‌ಗಳು, ಅಲ್ಲಲ್ಲಿ ಪಾನ್‌ ಪರಾಗದಿಂದ ಬಿಡಿಸಿದ ಚಿತ್ತಾರಗಳು, ವಿಭಿನ್ನ ಭಾಷೆ ಸಂಸ್ಕೃತಿಯ ಜನರಿಂದ ತುಂಬಿ ತುಳುಕುತ್ತಿದ್ದ ಜನ ಜಂಗುಳಿ, ಏಕ ಕಾಲಕ್ಕೆ ಹಳ್ಳಿಯಿಂದ ದಿಲ್ಲಿಯ ದರ್ಶನವಾದಂತಿತ್ತು. ಮಗದೊಂದು ಕಡೆ ಸೀಟು ಸಿಗದೆ ಒಂಟಿ ಕಾಲಿನ ಮೇಲೆ ಪ್ರಯಾಣ ಬೆಳೆಸಬೇಕಾಯ್ತು ಎಂಬ ಆತಂಕದಲ್ಲಿ ಸ್ನೇಹಿತನಿದ್ದ. ಆದರೂ ಮೊಂಡು ಧೈರ್ಯಮಾಡಿ ಒಳ ಪ್ರವೇಶಿಸಿದ್ದೆವು.

ದೇವರು ನನ್ನ ಸ್ನೇಹಿತನ ಯಾತನೆ ಆಲಿಸಿರಬೇಕು ಹಾಗಾಗಿ ಇಬ್ಬರಿಗೂ ಒಂದು ಮೂಲೆಯಲ್ಲಿ ಕೂರಲು ವ್ಯವಸ್ಥೆಯಾಯಿತು. ಈತನ್ಮಧ್ಯೆ ಅಲ್ಲಲ್ಲಿ ಸೀಟಿನ ಮೇಲೆ ಗಡದ್ದಾಗಿ ನಿದ್ದೆ ಮಾಡುವವರ ಸಂಖ್ಯೆ ಏನು ಕಡಿಮೆಯಾಗಿರಲಿಲ್ಲ. ಹೀಗೆ ಪ್ರಯಾಣದ ಮಧ್ಯೆ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗತೊಡಗಿತ್ತು. ಇದರಿಂದಾಗಿ ಕಂಪಾರ್ಟಮೆಂಟ್‌ನಲ್ಲಿ ಕಾಲೂರಲು ಜಾಗ ಇಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಸಾಮಾನ್ಯವಾಗಿ ಹಳ್ಳಿಗಳಿಗೆ ಒಂದೇ ಬಸ್‌ ಇದ್ದಾಗ ದೊಡ್ಡಿಯಂತೆ ತುಂಬುವ ನೇತಾಡುವ ಜನರ ದಿಂಡಿನಂತೆ ಕಾಣುತ್ತಿತ್ತು.

ಇದರ ನಡುವೆ ಆಗ ತಾನೇ ಒಳ ಪ್ರವೇಶಿಸಿದ ತಾಯಿ ಮತ್ತು ಇಬ್ಬರು ಪುಟ್ಟಕಂದಮ್ಮಗಳು ಕಾಲಿಡಲು ಜಾಗವಿಲ್ಲದೇ ಒದ್ದಾಡುತ್ತಿದ್ದರು. ಇದರಲ್ಲಿದ್ದ ಪುಟ್ಟಹುಡುಗಿ ನಿಂತಲ್ಲಿಯೇ ನಿದ್ದೆಗೆ ಜಾರಿದಳು. ಇದನ್ನು ಗಮನಿಸುತ್ತಿದ್ದ ನನಗೇ ಅತ್ತ ಕರುಣೆಯಿಲ್ಲದೆ ಗಡದ್ದಾಗಿ ನಿದ್ದೆ ಮಾಡುವವರಿಗೆ ಎದ್ದೇಳಿಸಿ ಎರಡು ಬಾರಿಸಿ ಬಿಡಲೇನೋ ಎನ್ನುವಷ್ಟುಕೋಪ ಆವರಿಸಿತು.

ಪಾಠದ ಬದಲು ಸೀರೆಯ ಅಂದ ನೋಡಿದಾಗ; ತುಂಟತನ ಚೆಂದ ಹಿಡಿತದಲ್ಲಿದ್ದಾಗ!

ಆದರೂ ಕೊಪಕ್ಕೆ ಕೈ ಕೊಡದೆ ಅವರಿಗೆ ಸೀಟು ಅಡ್ಜೆಸ್ಟ್‌ಮೆಂಟ್‌ ಮಾಡುವ ಇರಾದೆ ಮಾಡಿದೆ. ನಂತರ ನನ್ನ ಪಕ್ಕದಲ್ಲಿ ಇದ್ದ ವ್ಯಕ್ತಿಯ ಸಹಾಯ ಪಡೆದು ಆ ಕಂದಮ್ಮಗಳಿಗೆ ಕೂರಲು ವ್ಯವಸ್ಥೆ ಮಾಡಿಸಿದೆ. ಆಗ ನನ್ನ ಮೊಗದಲ್ಲಿ ಏನೋ ಸಂತೋಷದ ಭಾವನೆ ಅರಳತೊಡಗಿತು.

ಈ ಜನಜಂಗುಳಿಯಲ್ಲಿ ಪ್ರಯಾಣ ಬೆಳೆಸಿ, ನಾನೂ ನನ್ನ ಸ್ನೇಹಿತ ರಾಜಧಾನಿಯನ್ನು ಮುಟ್ಟಿದೆವು. ಬೆಳಗ್ಗೆ ಫ್ರೆಂಡ್‌ ರೂಮ್‌ನಲ್ಲಿ ಫ್ರೆಶ್‌ ಆಗಿ, ಪರೀಕ್ಷೆ ಬರೆದು ಅಲ್ಲಿಲ್ಲಿ ತಿರುಗಾಡಿ, ಒಂದಿಷ್ಟುಪರ್ಜೇಸ್‌ ಮಾಡಿ, ನಮ್ಮೂರಿಗೆ ಮತ್ತೆ ಪ್ರಯಾಣ ಬೆಳೆಸಿದೆವು.

- ಶ್ರೀನಿವಾಸ ಬಿ ಔಂಟಿ ಬೀದರ, ಪತ್ರಿಕೋದ್ಯಮ ವಿದ್ಯಾರ್ಥಿ ಗುವಿವಿ