ರೋಗ ಲಕ್ಷಣ ಕಾಣಿಸುವ ಮೊದಲೇ ಕ್ಯಾನ್ಸರ್ ಪತ್ತೆ ಹಚ್ಚಬಹುದಾ?

First Published 23, Mar 2018, 4:24 PM IST
Is it possible to diagnose caner in the initial stage
Highlights

ಕ್ಯಾನ್ಸರ್‌ನಲ್ಲಿ ಹೆಚ್ಚಿನ ರೋಗಲಕ್ಷಣಗಳು ಕಾಣಿಸಿಕೊಳ್ಳುವುದೇ ಕೊನೆಯ ಹಂತದಲ್ಲಿ. ಆದರೆ ನಮ್ಮ ದೇಹದ ಬಗ್ಗೆ ನಮಗೆ ತಿಳಿದಿರುತ್ತದೆ. ದೇಹದಲ್ಲಿ ಏನಾದರೂ ಬದಲಾವಣೆ ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸಿ.

ಡಾ. ಪಿಯೂಷ್ ಗೌಡ, ಆಂಕಾಲಜಿಸ್ಟ್ , ಹೆಚ್ಚುವರಿ ವೈದ್ಯಕೀಯ ನಿರ್ದೇಶಕ ಫೋರ್ಟಿಸ್ ಆಸ್ಪತ್ರೆ, ಬೆಂಗಳೂರು

ಬಹುತೇಕ ಕೇಸ್‌ಗಳಲ್ಲಿ ಯಾಕೆ ಕ್ಯಾನ್ಸರ್ ಕೊನೆಯ ಸ್ಟೇಜ್‌ನಲ್ಲೇ ಗೊತ್ತಾಗುತ್ತೆ, ಮೊದಲೇ ತಿಳಿಯುವ ಟೆಕ್ನಿಕ್ ಏನಾದರೂ ಇದೆಯಾ?
ಇಲ್ಲ. ಕ್ಯಾನ್ಸರ್‌ನಲ್ಲಿ ಹೆಚ್ಚಿನ ರೋಗಲಕ್ಷಣಗಳು ಕಾಣಿಸಿಕೊಳ್ಳುವುದೇ ಕೊನೆಯ ಹಂತದಲ್ಲಿ. ಆದರೆ ನಮ್ಮ ದೇಹದ ಬಗ್ಗೆ ನಮಗೆ ತಿಳಿದಿರುತ್ತದೆ. ದೇಹದಲ್ಲಿ ಏನಾದರೂ ಬದಲಾವಣೆ ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸಿ. ಕೆಲವೊಂದು ಕ್ಯಾನ್ಸರ್‌ಗೆ ಮೊದಲೇ ಸ್ಕ್ರೀನಿಂಗ್ ಮಾಡಿ ರೋಗ ಪತ್ತೆ ಮಾಡಬಹುದು. ಸರ್ವೈಕಲ್ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಫ್ರಾಸ್ಟೇಟ್ ಕ್ಯಾನ್ಸರ್, ಸಿಟಿ ಸ್ಕಾನ್‌ಗಳಿಂದಲೂ ರೋಗ ಲಕ್ಷಣ ಕಾಣಿಸುವ ಮೊದಲೇ ಕ್ಯಾನ್ಸರ್ ಪತ್ತೆ ಮಾಡಬಹುದು.

ಇಂಥ ವಯಸ್ಸಲ್ಲಿ ಇಂಥ ಟೆಸ್ಟ್ ಮಾಡಬೇಕು ಅನ್ನೋದೇನಾದರೂ ಇದೆಯಾ?
ಖಂಡಿತಾ ಇದೆ. 21 ವಯಸ್ಸಿನ ಬಳಿಕ ಮಹಿಳೆ ಯರು ಸರ್ವಿಕಲ್ ಕ್ಯಾನ್ಸರ್ ಪತ್ತೆ ಹಚ್ಚುವ 'ಪಾಪ್ ಸ್ಮಿಯರ್' ಟೆಸ್ಟ್ ಮಾಡಿಸಬೇಕು. 40ನೇ ವಯಸ್ಸಿನ ಬಳಿಕ ಹೆಂಗಸರು ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲು 'ಮ್ಯಾಮೊಗ್ರಾಮ್' ಮಾಡಿಸಬೇಕು. 50 ವಯಸ್ಸು ದಾಟಿದ ಗಂಡಸರು ಫ್ರಾಸ್ಟ್ರೇಟ್ ಕ್ಯಾನ್ಸರ್ ಪತ್ತೆ ಹಚ್ಚುವ ಪಿಎಸ್‌ಎ ಪರೀಕ್ಷೆಗೊಳಪಡುವುದು ಉತ್ತಮ. ಹಾಗೇ ಧೂಮಪಾನಿಗಳು ಸಿಟಿಸ್ಕಾನ್ ಮೂಲಕ ಕ್ಯಾನ್ಸರ್ ಸಾಧ್ಯತೆಗಳನ್ನು ಪತ್ತೆ ಹಚ್ಚಬಹುದು.

ಆ್ಯಂಜಲಿನಾ ಜೋಲಿ ಸ್ತನ ಕ್ಯಾನ್ಸರ್‌ನ ಮುನ್ಸೂಚನೆ ಪಡೆದು ಆಪರೇಶನ್ ಮಾಡಿಸಿಕೊಂಡರಲ್ಲ, ಆ ಸೌಲಭ್ಯ ನಮ್ಮಲ್ಲೂ ಇದೆಯಾ?
ಖಂಡಿತಾ ಇದೆ. ಆಕೆಯ ಅಮ್ಮನಿಗೆ ಸ್ತನ ಕ್ಯಾನ್ಸರ್ ಇತ್ತು. ಆ ಸೂಚನೆ ಮೇರೆಗೆ ಈಕೆ ಸ್ಕ್ರೀನಿಂಗ್ ಮಾಡಿಸಿದಾಗ ಈಕೆಗೂ ಕ್ಯಾನ್ಸರ್ ಬರುವ ಸಾಧ್ಯತೆ ಪತ್ತೆಯಾಯ್ತು. ಹೀಗೆ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಬಂದ ಹಿಸ್ಟರಿ ಇದ್ದರೆ ಅಂಥವರು ದಯವಿಟ್ಟು ಸ್ಕ್ರೀನಿಂಗ್ ಮಾಡಿಸಿಕೊಳ್ಳಿ. ರಿಸ್ಕ್ ಅಸೆಸ್‌ಮೆಂಟ್ ಅಂಥ ನಾವು ಟೆಸ್ಟ್ ಮಾಡ್ತೀವಿ. 

ಕ್ಯಾನ್ಸರ್ ಬಗ್ಗೆ ಸಾಮಾನ್ಯರಿಗೆ ತಿಳಿಯದ ಒಂದು ವಿಚಾರ?
ಸ್ಕ್ರೀನಿಂಗ್. ದಯವಿಟ್ಟು ನಿಮ್ಮ ದೇಹದಲ್ಲೇನಾದರೂ ವ್ಯತ್ಯಾಸವಾದರೆ, ಫ್ಯಾಮಿಲಿಯಲ್ಲಿ ಕ್ಯಾನ್ಸರ್ ಹಿಸ್ಟರಿ ಇದ್ದರೆ ಹಾಗೂ ಆಯಾ ವಯಸ್ಸಿನಲ್ಲಿ ಮಾಡಬೇಕಾದ ಸ್ಕ್ರೀನಿಂಗ್ ಮಾಡಿಸದೇ ಇದ್ದರೆ ಖಂಡಿತಾ ಟೆಸ್ಟ್ ಮಾಡಿಸಿ.

ಈಗ ಕ್ಯಾನ್ಸರ್‌ನಲ್ಲಿ ಯಾವ ಹಂತದವರೆಗೂ ಮೆಡಿಕೇಶನ್ ಇದೆ?
ಮೆಡಿಕೇಶನ್ ಇರುತ್ತೆ. ಆದರೆ 3ನೇ ಹಂತದವರೆಗಿನ ಕ್ಯಾನ್ಸರ್‌ಅನ್ನು ಮಾತ್ರ ಕ್ಯೂರ್ ಮಾಡಬಹುದು. ಟೆಸ್ಟಿಕ್ಯುಲರ್ ಕ್ಯಾನ್ಸರ್, ಲಿಂಪೊಮಾ ಕ್ಯಾನ್ಸರ್‌ಗಳನ್ನು ನಾಲ್ಕನೇ ಸ್ಟೇಜ್ ನಲ್ಲೂ ಗುಣಪಡಿಸಬಹುದು. ಆದರೆ ಉಳಿದದ್ದರಲ್ಲಿ ಬದುಕಿನ ಅವಧಿಯನ್ನು ಸ್ವಲ್ಪ ಹೆಚ್ಚು ಮಾಡಬಹುದಷ್ಟೇ.
 

loader