ಹಬ್ಬದ ಸಮಯದಲ್ಲಿ ಮಿಕ್ಕಿದ ಪಾಯಸವನ್ನು ಸಂಗ್ರಹಿಸುವುದು ಒಂದು ಸವಾಲು. ಹಾಲಿನ ಮತ್ತು ತೆಂಗಿನ ಹಾಲಿನ ಪಾಯಸವನ್ನು ಫ್ರಿಡ್ಜ್‌ನಲ್ಲಿ ಎಷ್ಟು ದಿನ ಇಡಬಹುದು ಮತ್ತು ಆರೋಗ್ಯ ಕೆಡದಂತೆ ಅದನ್ನು ಸಂಗ್ರಹಿಸಿ, ಮರುಬಳಕೆ ಮಾಡುವ ಸರಿಯಾದ ವಿವರ.
ಈಗ ಶ್ರಾವಣ ತಿಂಗಳು ಒಂದೊಂದಾಗಿಯೇ ಹಬ್ಬಗಳು ಬರಲು ಆರಂಭವಾಗುತ್ತದೆ. ಈ ಹಂತದಲ್ಲಿ ಪ್ರತಿಯೊಬ್ಬ ಗೃಹಿಣಿಯ ಮನಸ್ಸಿನಲ್ಲಿ ಮೂಡುವ ದೊಡ್ಡ ಆತಂಕವೆಂದರೆ ಮಿಕ್ಕಿದ ಅಡುಗೆಯನ್ನು ಏನು ಮಾಡೋದು ಅನ್ನೋದು. ಮಿಕ್ಕಿದ ಸಾಂಬಾರ್, ರಸಂಗಳನ್ನು ಮರುದಿನಕ್ಕೆ ಬಳಸಬಹುದಾದರೂ, ಬೃಹತ್ ಪ್ರಮಾಣದಲ್ಲಿ ಮಿಕ್ಕಿಹೋಗುವ 'ಪಾಯಸ'ವನ್ನು ಕೆಡದಂತೆ ಕಾಯ್ದುಕೊಳ್ಳುವುದು ನಿಜಕ್ಕೂ ದೊಡ್ಡ ಸವಾಲು.
ಸಾಮಾನ್ಯವಾಗಿ ಎಲ್ಲರೂ ಮಿಕ್ಕಿದ ಪಾಯಸವನ್ನು ಫ್ರಿಡ್ಜ್‌ನಲ್ಲಿಟ್ಟು ದಿನಗಟ್ಟಲೆ ಸೇವಿಸುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಆದರೆ ಪಾಯಸದ ಮಾದರಿಯನ್ನು ಆಧರಿಸಿ ಅದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸದಿದ್ದರೆ, ಅದು ಹೊಟ್ಟೆನೋವು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪಾಯಸವನ್ನು ಎಷ್ಟು ದಿನಗಳ ಕಾಲ ಫ್ರಿಡ್ಜ್‌ನಲ್ಲಿಡಬಹುದು ಮತ್ತು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತ ಮಾಹಿತಿ ಇಲ್ಲಿದೆ.
ಫ್ರಿಡ್ಜ್‌ನಲ್ಲಿ ಪಾಯಸ ಎಷ್ಟು ದಿನ ಇಡಬಹುದು?
ಪಾಯಸಕ್ಕೆ ಬಳಸುವ ಪದಾರ್ಥಗಳ ಆಧಾರದ ಮೇಲೆ ಅದರ ಬಾಳಿಕೆ (Self-life) ನಿರ್ಧಾರವಾಗುತ್ತದೆ
ಹಾಲು ಮತ್ತು ಮಿಲ್ಕ್ ಮೈಡ್ ಪಾಯಸ (2 ರಿಂದ 3 ದಿನಗಳು): ಹಾಲು, ಶಾವಿಗೆ, ಹಾಲಿನಿಂದ ಮಾಡಿದ ಪುಡಿ ಅಥವಾ ಮಿಲ್ಕ್ ಮೈಡ್ ಬಳಸಿದ ಪಾಯಸಗಳನ್ನು 2 ರಿಂದ 3 ದಿನಗಳಿಗಿಂತ ಹೆಚ್ಚು ಕಾಲ ಇಡುವುದು ಸೂಕ್ತವಲ್ಲ. ಹಸುವಿನ ಹಾಲು ಬೇಗನೆ ಹುಳಿಯಾಗುವುದರಿಂದ ಇವು ಬೇಗ ಕೆಡುವ ಸಾಧ್ಯತೆ ಇರುತ್ತದೆ.
ತೆಂಗಿನಹಾಲು ಮತ್ತು ಬೆಲ್ಲದ ಪಾಯಸ (3 ರಿಂದ 4 ದಿನಗಳು): ತೆಂಗಿನಹಾಲು ಮತ್ತು ಬೆಲ್ಲ ಬಳಸಿ ಚೆನ್ನಾಗಿ ಕುದಿಸಿ ಮಾಡಿದ ಪಾಯಸಗಳನ್ನು 3 ರಿಂದ 4 ದಿನಗಳ ಕಾಲ ಫ್ರಿಡ್ಜ್‌ನಲ್ಲಿ ಸುರಕ್ಷಿತವಾಗಿಡಬಹುದು. ಹಸುವಿನ ಹಾಲಿಗೆ ಹೋಲಿಸಿದರೆ ತೆಂಗಿನಹಾಲಿನ ಪಾಯಸ ಕೊಂಚ ಹೆಚ್ಚು ದಿನ ಬಾಳಿಕೆ ಬರುತ್ತದೆ.
ಪಾಯಸ ಫ್ರಿಡ್ಜ್‌ನಲ್ಲಿಡುವಾಗ ಮಾಡಬಾರದ ತಪ್ಪುಗಳು
ಬಿಸಿಯಾಗಿದ್ದಾಗ ಫ್ರಿಡ್ಜ್‌ನಲ್ಲಿಡಬೇಡಿ
ಮಿಕ್ಕಿದ ಪಾಯಸವನ್ನು ಎಂದಿಗೂ ಬಿಸಿ ಇರುವಾಗಲೇ ಫ್ರಿಡ್ಜ್‌ನಲ್ಲಿಡಬಾರದು. ಹೀಗೆ ಮಾಡುವುದರಿಂದ ಫ್ರಿಡ್ಜ್ ಒಳಗಿನ ತಾಪಮಾನ ಏರಿಕೆಯಾಗಿ ಬ್ಯಾಕ್ಟೀರಿಯಾಗಳು ವೇಗವಾಗಿ ಹರಡಲು ಕಾರಣವಾಗುತ್ತದೆ. ಪಾಯಸ ಕೋಣೆಯ ಸಾಮಾನ್ಯ ತಾಪಮಾನಕ್ಕೆ (Room Temperature) ತಣ್ಣಗಾದ ನಂತರವೇ ಫ್ರಿಡ್ಜ್‌ಗೆ ವರ್ಗಾಯಿಸಿ.
ಪೂರ್ಣ ಪಾಯಸವನ್ನು ಮತ್ತೆ ಮತ್ತೆ ಬಿಸಿ ಮಾಡಬೇಡಿ
ಫ್ರಿಡ್ಜ್‌ನಿಂದ ಪಾಯಸದ ಪಾತ್ರೆಯನ್ನು ಹೊರತೆಗೆದು ಇಡೀ ಪಾಯಸವನ್ನು ಬಿಸಿ ಮಾಡಿ, ಮತ್ತೆ ಮಿಕ್ಕಿದ್ದನ್ನು ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ತಪ್ಪು. ಇದರಿಂದ ಪಾಯಸ ತಕ್ಷಣವೇ ಹಾಳಾಗುತ್ತದೆ. ನೀವು ಎಷ್ಟು ಸೇವಿಸುತ್ತೀರೋ ಅಷ್ಟು ಪ್ರಮಾಣವನ್ನು ಮಾತ್ರ ಪ್ರತ್ಯೇಕ ಸಣ್ಣ ಪಾತ್ರೆಗೆ ತೆಗೆದುಕೊಂಡು ಬಿಸಿ ಮಾಡಿ.
ತೆರೆದ ಪಾತ್ರೆಗಳಲ್ಲಿ ಇಡಬೇಡಿ
ಫ್ರಿಡ್ಜ್‌ನಲ್ಲಿ ಮುಚ್ಚಳವಿಲ್ಲದ ಪಾತ್ರೆಗಳಲ್ಲಿ ಪಾಯಸವನ್ನು ಇಟ್ಟರೆ, ಫ್ರಿಡ್ಜ್‌ನಲ್ಲಿರುವ ಇತರ ಆಹಾರ ಪದಾರ್ಥಗಳ ವಾಸನೆ ಮತ್ತು ಬ್ಯಾಕ್ಟೀರಿಯಾಗಳು ಪಾಯಸಕ್ಕೆ ಸೇರಿಕೊಳ್ಳುತ್ತವೆ. ಯಾವಾಗಲೂ ಗಾಳಿಯಾಡದ 'ಏರ್‌ಟೈಟ್' (Air-tight) ಗ್ಲಾಸ್ ಅಥವಾ ಫುಡ್-ಗ್ರೇಡ್ ಕಂಟೇನರ್‌ಗಳನ್ನೇ ಬಳಸಿ.
ಮತ್ತೆ ಬಿಸಿ ಮಾಡುವಾಗ ಎಚ್ಚರ
ಫ್ರಿಡ್ಜ್‌ನಿಂದ ತೆಗೆದ ತೆಂಗಿನಹಾಲಿನ ಪಾಯಸವನ್ನು ಮತ್ತೆ ಬಿಸಿ ಮಾಡುವಾಗ ಹೆಚ್ಚಿನ ಉರಿಯಲ್ಲಿ (High Flame) ಕುದಿಸಬಾರದು. ಹೀಗೆ ಮಾಡಿದರೆ ತೆಂಗಿನಹಾಲು ಒಡೆದುಹೋಗುವ ಸಾಧ್ಯತೆ ಇರುತ್ತದೆ. ಯಾವಾಗಲೂ ಸಣ್ಣ ಉರಿಯಲ್ಲಿ (Low Flame) ಹಗುರವಾಗಿ ಮಾತ್ರ ಬಿಸಿ ಮಾಡಬೇಕು.


