ಕುಟುಂಬದವರನ್ನೇ ಆಗಲಿ, ಅಪರಿಚಿತರನ್ನೇ ಆಗಲಿ ಅಥವಾ ಸಹೋದ್ಯೋಗಿಗಳನ್ನಿರಬಹುದು, ಒಟ್ಟಿಗೆ ತರುವ ಶಕ್ತಿ ಒಂದು ಕಪ್ ಚಹಾಕ್ಕಿದೆ. ಟೀ ಆಫರ್ ಮಾಡುವುದೆಂದರೆ ಹೊಸದೊಂದು ದೋಸ್ತಿಗೆ ಮುನ್ನುಡಿ ಹಾಕಿದಂತೆಯೇ. ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರನ್ನು ಸೆಳೆಯುವ, ಗಾಸಿಪ್ ಟೇಬಲ್‌ಗೊಂದು ಕಳೆ ತರುವ, ಆಫೀಸ್ ಮೀಟಿಂಗ್‌ಗಳಿಗೆ ಆತ್ಮೀಯತೆಯ ಟಚ್ ನೀಡುವ ಚಹಾ ಒಂಥರಾ ಮ್ಯಾಜಿಕ್ ಡ್ರಿಂಕ್. ಅದರಲ್ಲೂ ಮಸಾಲಾ ಚಹಾದ ಅರೋಮಾ, ನಮ್ಮನ್ನು ಆರಾಮಾವೇ ಎಂದು ಕೇಳಿದಂತೆ ಭಾಸವಾಗುತ್ತದೆ. ಆರಾಮಿಲ್ಲದಿದ್ದರೆ ಚಿಂತೆ ಬೇಡ ನಾನಿದ್ದೇನೆ ಎನ್ನುತ್ತದೆ. ಹೌದು, ಮಸಾಲಾ ಟೀಯಲ್ಲಿ ಹಲವಾರು ಆರೋಗ್ಯಕರ ಅಂಶಗಳಿವೆ. 

ಬಾಯಲ್ಲಿ ನೀರು ತರಿಸೋ ಅಪ್ಪೆ ಸಾರಿನ ರೆಸಿಪಿ

ಇದರಲ್ಲಿ ಬಳಸುವ ಬ್ಲ್ಯಾಕ್ ಟೀ ಎಲೆಗಳಲ್ಲಿ ಕೆಫಿನ್ ಇರುತ್ತದೆ. ಆದರೆ, ಇತರೆ ಮಸಾಲೆ ಪದಾರ್ಥಗಳು ಕೆಫಿನ್‌ನ ಅಹಿತಕರ ಸಂಗತಿಗಳನ್ನು ಬ್ಯಾಲೆನ್ಸ್ ಮಾಡುವುದರಿಂದ ಮಸಾಲೆ ಚಹಾ ಸೇವನೆ ನಿಮ್ಮನ್ನು ಇಡೀ ದಿನ ಎನರ್ಜಿಟಿಕ್ ಆಗಿಡಬಲ್ಲದು. ಲವಂಗ ಹಾಗೂ ಚಕ್ಕೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ, ಇನ್ಫೆಕ್ಷನ್ ಹಾಗೂ ಶೀತದಂಥ ಸಾಮಾನ್ಯ ಕಾಯಿಲೆಗಳ ವಿರುದ್ಧ ಹೋರಾಡುತ್ತವೆ. ಶುಂಠಿಯು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ತುಳಸಿ, ಏಲಕ್ಕಿ, ಶುಂಠಿ ಹಾಗೂ ಲವಂಗ ಒಟ್ಟಾಗಿ ಜೀರ್ಣಕ್ರಿಯೆ ಸರಾಗಗೊಳಿಸುತ್ತವೆ. 

ಹಾಗಿದ್ದರೆ ಇಷ್ಟೊಂದು ಟೇಸ್ಟಿಯಾದ ಹೆಲ್ದೀ ಮಸಾಲಾ ಚಾಯ್ ಮಾಡೋದು ಹೇಗೆ?

ಬೇಕಾಗುವ ಸಾಮಾಗ್ರಿಗಳು

- 5 ಏಲಕ್ಕಿ

- 1 ಚಕ್ಕೆ

- 1 ಕರಿಮೆಣಸು ಕಾಳು

- 4 ಲವಂಗ

- 2 ಚಮಚ ಟೀ

- 1 ಚಮಚ ಒಣಗಿಸಿದ ಶುಂಠಿ ಪೌಡರ್

- ಅರ್ಧ ಚಮಚ ಗ್ರೀನ್ ಟೀ ಎಲೆಗಳು

- 4 ಚಮಚ ಸಕ್ಕರೆ

- 1 ಲೋಟ ಹಾಲು.

ಮಾಡುವ ವಿಧಾನ

ಎಲ್ಲ ಮಸಾಲೆ ಪದಾರ್ಥಗಳನ್ನೂ ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ನಂತರ ಕೈ ಪಾತ್ರೆಯಲ್ಲಿ 4 ಲೋಟ ನೀರು ಕುದಿಯಲು ಇಡಿ. ಕುದಿಯುವಾಗ ಟೀ ಪುಡಿ ಹಾಗೂ ಮಸಾಲಾ ಪುಡಿ ಸೇರಿಸಿ. ನಿಮಿಷದ ಬಳಿಕ ಸಕ್ಕರೆ ಹಾಕಿ 4-5 ನಿಮಿಷ ಕುದಿಸಿ. ಕೊನೆಯಲ್ಲಿ ಶುಂಠಿ ಪೌಡರ್ ಹಾಗೂ ಹಾಲು ಹಾಕಿ ಮತ್ತೆ ಕುದಿಸಿ. ಉರಿ ಸಣ್ಣ ಮಾಡಿಟ್ಟು ಫ್ರೆಶ್ ಶುಂಠಿಯನ್ನು ತುರಿದು ಹಾಕಿ. ನಂತರ ಪಾತ್ರೆಗೆ ಮುಚ್ಚಿಟ್ಟು ಎರಡು ನಿಮಿಷ ಬಿಡಿ. ಟೇಸ್ಟ್‌ಬಡ್‌ಗಳನ್ನು ಬಡಿದೇಳಿಸುವ ಮಸಾಲಾ ಚಾಯ್ ರೆಡಿ.