rid of spider webs : ಮನೆಯ ಸೌಂದರ್ಯವನ್ನು ಜೇಡರ ಬಲೆ ಹಾಳು ಮಾಡುತ್ತೆ. ಅಲ್ಲಿ ಇಲ್ಲಿ ಅಂತ ಅಲ್ಲ ಎಲ್ಲ ಕಡೆ ಬಲೆ ಕಟ್ಟುವ ಈ ಜೇಡನಿಂದ ಮುಕ್ತಿ ಹೇಗೆ ಗೊತ್ತಾ? ಇಲ್ಲಿದೆ ಸರಳ ಉಪಾಯ.

ಮನೆಯ ಒಂದು ಮೂಲೆ ಕ್ಲೀನ್‌ ಮಾಡ್ತಿದ್ದಂತೆ ಇನ್ನೊಂದು ಮೂಲೆಯಲ್ಲಿ ಜೇಡರ ಬಲೆ ಕಟ್ಟಿಕೊಂಡಿರುತ್ತೆ. ಕೆಲವೊಮ್ಮೆ ಬೆಳಗಾಗೋದ್ರಲ್ಲಿ ಹಾಲ್‌ ನಲ್ಲೊಂದು ಜೇಡರ ಬಲೆ ನೇತಾಡ್ತಿರುತ್ತೆ. ಕೆಲವೇ ನಿಮಿಷದಲ್ಲಿ ಬಲೆ ಕಟ್ಟುವ ಈ ಜೇಡನನ್ನು ಮನೆಯಿಂದ ಓಡಿಸೋದು ತಲೆನೋವಿನ ಕೆಲ್ಸ. ಜೇಡರ ಬಲೆ ಸಮಸ್ಯೆಯನ್ನು ಕಡಿಮೆ ಮಾಡಲು ಒಂದು ಸರಳ ಮನೆಮದ್ದು ಇಲ್ಲಿದೆ.

ಜೇಡರ ಬಲೆಗೆ ಇಲ್ಲಿದೆ ಪರಿಹಾರ

ಮನೆಯ ಮೂಲೆ ಮೂಲೆಯಲ್ಲಿ ಕಟ್ಟುವ ಜೇಡರ ಬಲೆಯನ್ನು ತೆಗೆಯಲು ನೀವು ಮನೆಯಲ್ಲಿರುವ ವಸ್ತುಗಳನ್ನೇ ಬಳಸಬಹುದು. ತಂಬಾಕಿನ ಎಲೆ ಅಥವಾ ಸ್ವಲ್ಪ ತಂಬಾಕು, ಒಂದು ಕಪ್ ನೀರು, ನಿಂಬೆ ರಸ ಅಥವಾ ವಿನೆಗರ್, ಅರ್ಧ ಟೀಸ್ಪೂನ್ ತೆಂಗಿನೆಣ್ಣೆ ಮತ್ತು ಒಂದು ಸ್ಪ್ರೇ ಬಾಟಲ್ ಬೇಕಾಗುತ್ತದೆ.

ದ್ರಾವಣ ತಯಾರಿಸುವುದು ಹೇಗೆ?

ಮೊದಲು ಒಂದು ಕಪ್ ನೀರಿಗೆ ತಂಬಾಕಿನ ಎಲೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಹಾಕಿ. ಇದನ್ನು 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ನಂತರ ಇದಕ್ಕೆ ನಿಂಬೆ ರಸ ಅಥವಾ ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸೋಸಿಕೊಂಡು ಅದಕ್ಕೆ ಅರ್ಧ ಟೀಸ್ಪೂನ್ ತೆಂಗಿನೆಣ್ಣೆ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಸ್ಪ್ರೇ ಬಾಟಲ್ಗೆ ಹಾಕಿಕೊಳ್ಳಿ.

ಹೇಗೆ ಬಳಸಬೇಕು?

ಮನೆಯ ಮೂಲೆಗಳು, ಗೋಡೆ, ಮೇಲ್ಛಾವಣಿ, ಕಿಟಕಿಗಳ ಸುತ್ತಮುತ್ತ ಹಾಗೂ ಜೇಡರ ಬಲೆ ಕಾಣಿಸುವ ಜಾಗಗಳಲ್ಲಿ ಈ ದ್ರಾವಣವನ್ನು ಲಘುವಾಗಿ ಸ್ಪ್ರೇ ಮಾಡಬಹುದು. ಕೆಲವು ನಿಮಿಷಗಳ ಬಳಿಕ ಬಲೆಗಳನ್ನು ಸ್ವಚ್ಛಗೊಳಿಸಿ. ಬಲೆಗಳನ್ನು ಮಾತ್ರ ತೆಗೆಯುವುದಕ್ಕಿಂತ ಜೇಡಗಳು ಅಡಗಿಕೊಳ್ಳಬಹುದಾದ ಮೂಲೆಗಳನ್ನೂ ಚೆನ್ನಾಗಿ ಸ್ವಚ್ಛಗೊಳಿಸುವುದು ಮುಖ್ಯ. ಮನೆಯ ಮೂಲೆಗಳು ಮತ್ತು ಕಡಿಮೆ ಬಳಕೆಯಾಗುವ ಜಾಗಗಳನ್ನು ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಜೇಡರ ಬಲೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯವಾಗಬಹುದು.