ಉದ್ಯೋಗ ಏಕೆ ಬದಲಿಸ್ತಿದೀರಾ ಎಂಬ ಪ್ರಶ್ನೆಗೆ ಏನುತ್ತರಿಸಬೇಕು?

ಪ್ರಾಮಾಣಿಕತೆ ಇರಲಿ, ಆದರೆ ನಿಮ್ಮನ್ನು ನೀವು ಮಾರ್ಕೆಟಿಂಗ್ ಮಾಡಿಕೊಳ್ಳಲು ಹಿಂಜರಿಕೆ ಬೇಡ. ಸಂದರ್ಶನದ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸಿ ಸೈ ಎನಿಸಿಕೊಳ್ಳಲು ಸರಿಯಾದ ತಯಾರಿ ಅಗತ್ಯ.

How Should I Answer why Are You Looking For A Job Change In An Interview

ಸಂದರ್ಶನಕ್ಕೆ ಹೋದ ಗೋಪಿಗೆ ಕೆಲಸಕ್ಕೆ ಸಂಬಂಧಿಸಿದ ಯಾವ ಪ್ರಶ್ನೆ ಕೇಳಿದರೂ ಆತಂಕವಿಲ್ಲ. ಎಲ್ಲದಕ್ಕೂ ಉತ್ತರಿಸುವ ಆತ್ಮವಿಶ್ವಾಸ ಅವನದು. ಆದರೆ, ಕೆಲಸ ಏಕೆ ಬದಲಿಸ್ತಿದೀರಾ ಎಂದ್ರೆ ಮಾತ್ರ ಸಂಬಳ ಹೆಚ್ಚಿಸಿಕೊಳ್ಳೋಕೆ ಅಂದ್ರೆ ತಪ್ಪಾಗಬಹುದು, ತಾನಿರುವ ಕಂಪನಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನೋದು ಸರಿಯಲ್ಲ, ಬಾಸ್‌ನ ಕಿರಿಕಿರಿ ಬಗ್ಗೆ ಹೇಳಿದರೆ ಹೇಗೋ ಹೇಳದಿರೆ ಹೇಗೋ ಎಂದೆಲ್ಲ ಒದ್ದಾಡುತ್ತಾನೆ. ಬೇರೆ ಉತ್ತರ ಹೇಳೋಕೆ ಅಪ್ರಾಮಾಣಿಕ ಎನಿಸಿದರೆ ಎಂಬ ಚಿಂತೆ. ಒಟ್ಟಿನಲ್ಲಿ ಈ ಪ್ರಶ್ನೆ ಬಂದ ಕೂಡಲೇ ಬೆಬ್ಬೆಬ್ಬೆ ಎನ್ನುತ್ತಾನೆ. ಹಾಗಿದ್ದರೆ ಸಾಮಾನ್ಯವಾಗಿ ಎಲ್ಲ ಸಂದರ್ಶನಗಳಲ್ಲೂ ಎದುರಾಗುವ ಈ ಪ್ರಶ್ನೆಗೆ ಏನೆಂದು ಉತ್ತರಿಸಿದರೆ ಸರಿಯಾಗುತ್ತದೆ? ನಿಮಗೂ ಈ ಪ್ರಶ್ನೆ ಕಾಡುತ್ತಿದೆಯಾದರೆ ಇಲ್ಲಿದೆ ನೋಡಿ ಇದಕ್ಕೊಂದು ಪರಿಹಾರ. 

ಉದ್ಯೋಗ ಬದಲಿಸಲು ಬಾಸ್‌ನ ಕಿರಿಕಿರಿ, ಸಹೋದ್ಯೋಗಿಗಳ ಗಾಸಿಪ್, ನಿಮ್ಮನ್ನು ನಡೆಸಿಕೊಳ್ಳುವ ರೀತಿ ಇತ್ಯಾದಿ ಕಾರಣಗಳಿದ್ದಾಗ ಅದನ್ನು ಹೇಳಿದರೆ ಸಂದರ್ಶನದಲ್ಲಿ ಅವರ ಬಗ್ಗೆ ತಿಳಿಸಿಕೊಟ್ಟಂತಾಗುತ್ತದೆಯೇ ಹೊರತು, ನಿಮ್ಮ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ. ನೀವು ನಿಮ್ಮೊಂದಿಗೆ ಕೆಲಸ ಮಾಡುವವರನ್ನು ದೂರುವ ಗುಣವುಳ್ಳವರು ಎಂಬುದಷ್ಟೇ ನಿಮ್ಮ ಬಗ್ಗೆ ತಿಳಿಯುವುದು. ಹಾಗಾಗಿ, ಉದ್ಯೋಗ ಏಕೆ ಬದಲಿಸುತ್ತಿದ್ದೀರಾ ಎಂಬ ಪ್ರಶ್ನೆಯನ್ನು ನಿಮ್ಮ ಮುಂದಿರುವ ಉದ್ಯೋಗಕ್ಕೆ ನಿಮ್ಮ ಬಳಿ ಸರಿಯಾದ ಕೌಶಲ್ಯಗಳಿವೆ ಎಂಬುದನ್ನು ತಿಳಿಸಿಕೊಡಲು ಅವಕಾಶವಾಗಿ ಬಳಸಿಕೊಳ್ಳಿ. 

ರೆಡ್ ಫ್ಲ್ಯಾಗ್ ತೋರಲು ಅವಕಾಶ ನೀಡದಿರಿ
'ಕೆಲವೊಮ್ಮೆ ಅವಕಾಶಕ್ಕಾಗಿ ಎದುರು ನೋಡುವವರು ಎಷ್ಟೊಂದು ಪ್ರಾಮಾಣಿಕರಾಗಿ ಬಿಡುತ್ತಾರೆಂದರೆ ತಮ್ಮ ಸಧ್ಯದ ಬಾಸ್‌ನ ದುರ್ಗುಣಗಳನ್ನು ವಿವರಿಸುತ್ತಲೇ ಸಾಗುತ್ತಾರೆ. ಆದರೆ, ಅವರಿಗೆ ತಿಳಿಯದ್ದೇನೆಂದರೆ, ಹೈರಿಂಗ್ ಮ್ಯಾನೇಜರ್‌ಗಳು ಯಾವಾಗಲೂ ರೆಡ್ ಫ್ಲ್ಯಾಗ್ ತೋರಿಸಲು ಕಾತರರಾಗಿರುತ್ತಾರೆ ಎಂದು. ಆದರೆ, ಇದರ ಜೊತೆ ಅವರು ತಾವು ನೋಡುತ್ತಿರುವ ಕೆಲಸವನ್ನು ಸರಿಯಾಗಿ ನಿರ್ವಹಿಸುವ ಛಾತಿ ಹಾಗೂ ಮನೋಧರ್ಮ ನಿಮ್ಮಲ್ಲಿದೆಯೇ ಎಂಬುದನ್ನು ಕೂಡಾ ಗಮನಿಸುತ್ತಿರುತ್ತಾರೆ,' ಎನ್ನುತ್ತಾರೆ ಜಾಬ್ ಸರ್ಚ್ ಕೋಚ್ ಆಶ್ಲಿ ವಾಟ್ಕಿನ್ಸ್. 

ಉದ್ಯೋಗ ಬದಲಾಯಿಸೋದು ಏಕೆ?
ಸಂದರ್ಶನಗಳಲ್ಲಿ ಖಂಡಿತಾ ಈ ಪ್ರಶ್ನೆ ಇದ್ದೇ ಇರುತ್ತದೆ. ಹೀಗೆ ಕೇಳಿದಾಗ ನೀವು ಅಪ್ಲೈ ಮಾಡಿರುವ ಉದ್ಯೋಗಕ್ಕೆ ಬೇಕಾದ ಎಲ್ಲ ಕೌಶಲ್ಯಗಳು ನಿಮ್ಮಲ್ಲಿವೆ, ಅದಕ್ಕೆ ತಕ್ಕುದಾದ ಅನುಭವ ನಿಮ್ಮದಾಗಿದೆ, ಆ ರೋಲ್‌ಗೆ ನೀವೇ ತಕ್ಕ ವ್ಯಕ್ತಿ ಎಂಬುದನ್ನು ಅರ್ಥ ಮಾಡಿಸಿಕೊಡಲು ಪ್ರಯತ್ನಿಸಿ. 

ಕೋಚಿಂಗ್‌ ಇಲ್ಲದೆ ಕೆಎಎಸ್‌ ಪಾಸಾಗಿ ಡಿವೈಎಸ್‌ಪಿ ಆದ ನಿಖಿತಾ!...

ಒಂದು ವೇಳೆ ನೀವು ಕೆಲಸ ಬಿಡಲು ನಿಮ್ಮ ಬಾಸ್‌ನ ನಡುವಳಿಕೆಯೇ ಕಾರಣವಾಗಿದ್ದು, ಅದನ್ನು ಹೇಳಲೇಬೇಕೆಂಬ ಭಾವ ಒತ್ತರಿಸಿಕೊಂಡು ಬರುತ್ತಿದ್ದರೆ- ಆಗ ನಿಮ್ಮ ಬಾಸ್ ತೆಗೆದುಕೊಳ್ಳುವ ನಿರ್ಧಾರಗಳು ಹೇಗಿದ್ದರೆ ಚೆನ್ನಾಗಿರುತ್ತಿತ್ತು, ಕೆಲ ಕೆಲಸಗಳನ್ನು ಅವರು ಹೇಳುವಂತೆ ಅಲ್ಲದೆ ಬೇರೆ ರೀತಿ ಮಾಡಿದರೆ ಎಷ್ಟು ಉತ್ತಮ ಫಲಿತಾಂಶ ದೊರೆಯುತ್ತದೆ, ಅವರಿಗಿಂತ ನಿಮ್ಮ ಯೋಚನೆಗಳು ಎಷ್ಟು ವಿಭಿನ್ನವಾಗಿವೆ, ದೃಷ್ಟಿಕೋನಗಳು ಬೇರೆ ಇದ್ದು, ನಿಮ್ಮ ರೀತಿಯಿಂದ ಹೆಚ್ಚು ಪ್ರಾಡಕ್ಟಿವ್ ಆಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಿ. 

ಕೆಲವೊಮ್ಮೆ ಕಂಪನಿಯು ನಿಮ್ಮ ಆದರ್ಶಗಳಿಗೆ ತಕ್ಕುದಾಗಿ ಸಾಗುತ್ತಿಲ್ಲ ಎಂದಾದಾಗ, ನಿಮ್ಮ ನೈತಿಕತೆ, ನಂಬಿ ಬಂದ ಮೌಲ್ಯಗಳಿಗೆ ಆ ಕಂಪನಿಯ ಆಡಳಿತ ವ್ಯವಸ್ಥೆ ವಿರುದ್ಧವಾಗಿರುವುದರಿಂದ ಅಲ್ಲಿ ಮಾಡುವ ಕೆಲಸದಲ್ಲಿ ಖುಷಿ ಸಿಗುತ್ತಿಲ್ಲ. ಆದರೆ, ಈಗ ಎದುರಿಗಿರುವ ಕಂಪನಿ ಹಾಗೂ ಉದ್ಯೋಗ ನಿಮ್ಮ ಮನೋಧರ್ಮಕ್ಕೆ ಸರಿಯಾದುದಾಗಿದೆ. ಜೊತೆಗೆ, ನಿಮ್ಮ ಕೌಶಲ್ಯ ಬಳಸಲೂ, ಬೆಳೆಸಿಕೊಳ್ಳಲೂ ಅನುಕೂಲಕರವಾಗಿದೆ ಎಂಬುದನ್ನು ವಿವರಿಸಿ. ಈ ವಿವರಣೆಯಲ್ಲಿ ಹಳೆ ಕಂಪನಿಯನ್ನು ದೂರುವುದನ್ನು ಸಾಧ್ಯವಾದಷ್ಟು ಮಿತಿಯಲ್ಲಿಡಿ. 

ಪಕ್ಕದಲ್ಲಿ ನಿಮ್ಮ ಬಾಸ್ ಕುಳಿತಿದ್ದಾರೆಂದುಕೊಳ್ಳಿ
ನಿಮ್ಮ ಉತ್ತರದ ಮೇಲೆ ಗಮನದಲ್ಲಿಟ್ಟುಕೊಳ್ಳಲು ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರೋ ಅವರೆಲ್ಲ ನಿಮ್ಮ ಪಕ್ಕದ ಕುರ್ಚಿಯಲ್ಲೇ ಕುಳಿತಿದ್ದಾರೆಂದು ಕಲ್ಪಿಸಿಕೊಳ್ಳಿ. ಯಾವುದನ್ನು ನೇರವಾಗಿ ಅವರಿಗೆ ಹೇಳಲಾರಿರೋ- ಅದನ್ನು ಸಂದರ್ಶನದಲ್ಲಿ ಕೂಡಾ ಹೇಳಕೂಡದು. 

ಕೆಲಸ ಬದಲಾವಣೆಗೆ ಕಾರಣವಾಗಿ 'ಬೆಳವಣಿಗಾಗಿ ಹೊಸ ಅವಕಾಶಗಳನ್ನು ಹುಡುಕುತ್ತಿದ್ದೇನೆ,' ಎಂದು ನೀವು ಹೇಳುವುದು ಒಳ್ಳೆಯದೇ. ಆದರೆ, ಅಷ್ಟೇ ಹೇಳಿದರೆ ಸಾಲದು. ಬದಲಿಗೆ ಈಗ ಅಪ್ಲೈ ಮಾಡಿರುವ ಉದ್ಯೋಗ ಹೇಗೆ ನಿಮಗೆ ಬೆಳವಣಿಗೆ ಅವಕಾಶಗಳನ್ನು ಒದಗಿಸುತ್ತದೆ ಎಂಬುದನ್ನೂ ವಿವರಿಸಬೇಕು. ಈ ಹೊಸ ಉದ್ಯೋಗದಲ್ಲಿ ಯಾವೆಲ್ಲ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ನಿಮಗೆ ಅವಕಾಶವಾಗಲಿದೆ ಎಂದು ಹೇಳಿ. ಹಳೆಯ ಕಂಪನಿ ನೀಡದ ಪ್ರಾಜೆಕ್ಟ್‌ಗಳನ್ನು ಹೊಸ ಕಂಪನಿ ನೀಡುತ್ತದೆ ಎಂದಾದಲ್ಲಿ ಅದನ್ನೇ ಉತ್ತರದ ಸರಕಾಗಿಸಿ. 

ನಿಮ್ಮ ಬೆಳವಣಿಗೆಯಾದ್ರೆ ಸಾಲದು
ಕೇವಲ ನಿಮ್ಮ ಬೆಳವಣಿಗೆ ಕುರಿತೇ ಮಾತನಾಡುತ್ತಿದ್ದರೆ ಸಂದರ್ಶಕರಿಗೆ ನೆಗೆಟಿವ್ ಇಂಪ್ರೆಶನ್ ಮೂಡಬಹುದು. ಪ್ರತಿ ಕೆಲ ವರ್ಷಗಳಿಗೊಮ್ಮೆ ವೈಯಕ್ತಿಕ ಬೆಳವಣಿಗಾಗಿ ನೀವು ಕಂಪನಿ ಬದಲಿಸುವವರು ಎನಿಸಬಹುದು. 

ಕೃಷಿ ಮಾಡಿದ್ರೆ ಇಲ್ಲ ಲಾಸ್; ಕೋಟಿ ದುಡಿದ ರೈತರು ಖುಷ್!...

ಹಾಗಾಗಿ, ನಿಮ್ಮ ಬೆಳವಣಿಗೆ ಜೊತೆ, ನೀವು ಹೋಗುವ ಕಂಪನಿಯ ಬೆಳವಣಿಗೆಗಾಗಿ ನೀವು ಶ್ರಮ ವಹಿಸುವುದಾಗಿಯೂ ತಿಳಿಸಿ. ಕ್ಲೈಂಟ್‌ಗಳ ಜೊತೆ ಧೀರ್ಘಕಾಲೀಕ ಸಂಬಂಧ ನಿರ್ವಹಿಸುವ ಇರಾದೆ ಇದೆ ಎಂದು ತಿಳಿಸಿ. ಯಾವಾಗಲೂ ಬದಲಿಸುವ ಕೆಲಸಕ್ಕಾಗಿ ನೀವು ಹೇಗೆ ತಯಾರಿ ನಡೆಸುತ್ತಿದ್ದೀರಾ ಎಂಬುದನ್ನು ಕೇಳಲು ಸಂದರ್ಶಕರು ಇಷ್ಟ ಪಡುತ್ತಾರೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

Latest Videos
Follow Us:
Download App:
  • android
  • ios