ನೈಟ್ ಡ್ಯೂಟಿ ಮಾಡೋರಿಗೆ ಒಂಚೂರು ಕಿವಿಮಾತು!

ರಾತ್ರಿ ಕೆಲಸ ಮಾಡೋರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಿರುತ್ತದೆ ಅಂತವರಿಗೆ ಇಲ್ಲಿದೆ ಒಂಚೂರು ಕಿವಿ ಮಾತು

Health effects of night shift work and extended hours of work
  • ಪ್ರಾಂಜಲಿ, ವಯಸ್ಸು 26ವರ್ಷ. ಮಹಾನಗರದ ಕಾಲ್ ಸೆಂಟರ್‌ನಲ್ಲಿ ದುಡಿಯುತ್ತಾಳೆ. ರಾತ್ರಿ 10ಕ್ಕೆಲ್ಲ ಕ್ಯಾಬ್ ಏರಿ ಹೊರಟರೆ ಇರುಳ ಹೊತ್ತೆಲ್ಲ ದುಡಿತ. ಮತ್ತೆ ಬೆಳಗಿನ ಜಾವ ಮನೆ ಸೇರೋದು. ಇದು ವಾರದಲ್ಲಿ ಮೂರು ದಿನ ಬರೋ ಶಿಫ್ಟ್. ಉಳಿದ ದಿನ ಬೆಳಗಿನ ಶಿಫ್ಟ್. ನೈಟ್ ಶಿಫ್ಟ್‌ನಲ್ಲಿ ನಿದ್ದೆ ಒತ್ತೊತ್ತಿ ಬರುತ್ತೆ. ಅದನ್ನು ತಡೆಯಲು ಐದಾರು ಸಲ ಟೀ, ಕಾಫಿ ಕುಡಿಯೋದು ಅನಿವಾರ್ಯ. ಹಸಿವಾದಾಗ ಬೇರೇನೂ ತಿನ್ನಲು ಸಿಗಲ್ಲ. ಫಾಸ್ಟ್‌ಫುಡೇ ಗತಿ. ಈ ಲೈಫ್‌ಸ್ಟೈಲ್‌ನಿಂದ ಏನೇನೆಲ್ಲ ಆರೋಗ್ಯ ಸಮಸ್ಯೆಗಳು ಬರುತ್ತಿವೆ. ಪೀರಿಯೆಡ್ಸ್‌ನಲ್ಲಿ ಏರುಪೇರು, ಅತಿಯಾದ ಹೊಟ್ಟೆನೋವು. ಇದಿಲ್ಲದಿದ್ದರೂ ಇಡೀ ದಿನ ಸುಸ್ತಾದಂತೆ ಇರುವುದು, ಲವಲವಿಕೆಯೇ ಇಲ್ಲ
  • ದೇವದತ್ತ ನೈಟ್ ಕ್ಯಾಬ್ ಡ್ರೈವರ್. ರಾತ್ರಿ ಹೊತ್ತು ವಾಹನ ಸಂಚಾರ ಕಡಿಮೆ ಇರುವ ಕಾರಣ ರೈಡಿಂಗ್ ಖುಷಿಯಾಗುತ್ತೆ. ಸಮಯ ಸಿಕ್ಕಾಗ ರಸ್ತೆ ಬದಿ ಗಾಡಿ ಪಾರ್ಕ್ ಮಾಡಿ ನಿದ್ದೆ ಮಾಡೋದು. ಆದರೆ ಓಡಾಡುವ ವಾಹನಗಳ ಪ್ರಖರ ಲೈಟ್‌ಗೆ ನಿದ್ದೆ ಬರಲ್ಲ. ನಿದ್ದೆ ಬರುವ ತನಕ ಮೊಬೈಲ್ನಲ್ಲಿ ಸಿನಿಮಾ ನೋಡೋದು, ಅಷ್ಟೊತ್ತಿಗೆ ಇದ್ದಬದ್ದ ನಿದ್ದೆಯೂ ಹಾರಿ ಹೋಗಿರುತ್ತೆ. ಹಗಲಲ್ಲೂ ಸರಿ ನಿದ್ದೆ ಬರಲ್ಲ. ಇದಕ್ಕಿಂತ ಹೆಚ್ಚು ಬೇಜಾರು ಅಂದರೆ ಕೆಲಸ ಮುಗಿಸಿ ಬೆಳಗ್ಗೆ ಮನೆಗೆ ಹೋದರೆ ಮಕ್ಕಳು ಆದಾಗಲೇ ಶಾಲೆಗೆ ಹೋಗಿ ಆಗಿರುತ್ತದೆ. ಸಂಜೆ ಟ್ಯೂಶನ್, ಬೇರೆ ಕ್ಲಾಸ್‌ಗಳನ್ನು ಮುಗಿಸಿ ಮನೆಗೆ ಬರುವಾಗ ಇವರು ಡ್ಯೂಟಿಗೆ ಹೊರಟಾಗಿರುತ್ತದೆ. ಆದರೆ ದೇವದತ್ತ್‌ಗೆ ಇದು ಹೊಟ್ಟೆಪಾಡು.

ಎಷ್ಟೆಲ್ಲ ಸಮಸ್ಯೆ!

ನಿದ್ದೆಗೆಟ್ಟು ಡ್ಯೂಟಿ ಮಾಡುವುದರಿಂದ, ಆಹಾರ ಕ್ರಮದಲ್ಲಿ ವ್ಯತ್ಯಯವಾದಾಗ ಆರೋಗ್ಯ ಸಮಸ್ಯೆಬರೋದ್ರಲ್ಲಿ ಅನುಮಾನ ಇಲ್ಲ. ಅಷ್ಟೇ ಅಲ್ಲ, ನಿದ್ರಾಹೀನತೆಯಿಂದ ಸ್ಟ್ರೆಸ್ ಹೆಚ್ಚಾಗಬಹುದು. ಡಿಪ್ರೆಶನ್, ಉದ್ವೇಗ ಸೇರಿದಂತೆ ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ದೈಹಿಕವಾಗಿಯೂ ಸಮಸ್ಯೆಗಳಿವೆ. ನಿದ್ರೆಯ ಕೊರತೆಯಿಂದ ಪಚನ ಕ್ರಿಯೆಯಲ್ಲಿ ವ್ಯತ್ಯಯವಾಗಬಹುದು. ಅತಿಯಾದ ಗ್ಯಾಸ್ಟ್ರಿಕ್‌ನಿಂದ ಗ್ಯಾಸ್ಟ್ರೋ ಎಂಟ್ರೈಟಿಸ್ ನಂಥ ಸಮಸ್ಯೆ ಬರಬಹುದು. ಹೃದಯಾಘಾತದ ಪ್ರಮಾಣವೂ ಹೆಚ್ಚು. ರಾತ್ರಿಹೊತ್ತು ಫಾಸ್ಟ್‌ಫುಡ್ ತಿನ್ನೋದರಿಂದ ಬೊಜ್ಜು, ಮಧುಮೇಹ, ರಕ್ತದೊತ್ತಡ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಸಮಸ್ಯೆಗಳು ಬದಲಾಗಬಹುದು, ಹಾಗಂತ ಸಮಸ್ಯೆಯಿಂದ ಒದ್ದಾಡೋದು ತಪ್ಪೋದಿಲ್ಲ.

Health effects of night shift work and extended hours of work

ನೈಟ್‌ಡ್ಯೂಟಿ ಮಾಡಬೇಡಿ ಅನ್ನಲಿಕ್ಕಾಗಲ್ಲ!

ಮಹಾನಗರಗಳಲ್ಲಿ ನೈಟ್ ಡ್ಯೂಟಿ ಅನ್ನೋದು ಅನಿವಾರ್ಯ ಕರ್ಮ. ಇದು ಬೇಕೋ ಬೇಡವೋ ಅನ್ನುವ ಆಯ್ಕೆಗಳೇ ಇರಲ್ಲ. ಸಂಬಳ ಬೇಕು ಅಂದರೆ ರಾತ್ರಿಯೋ ಹಗಲೋ ನೋಡದೇ ಕೆಲಸ ಮಾಡಲೇ ಬೇಕು. ಹಾಗಂತ ಸಮಸ್ಯೆಗಳಿಂದ ಪಾರಾಗೋದಕ್ಕೆ ಕೆಲವೊಂದು ಚಿಕ್ಕಪುಟ್ಟ ಪರಿಹಾರಗಳಿವೆ. ತಕ್ಕಮಟ್ಟಿಗೆ ಇದು ಸಹಕಾರಿ. ಹಾಗಂತ ಸಂಪೂರ್ಣ ಹೆಲ್ದಿಯಾಗಿರಬೇಕು ಅಂದರೆ ಶಿಫ್ಟ್ ಬದಲಾಯಿಸಬೇಕಾದ್ದು ಅನಿವಾರ್ಯ. 

ಚಟುವಟಿಕೆ ಹೆಚ್ಚಿಸಿ

- ರಾತ್ರಿ ಜಗತ್ತಿಡೀ ಮಲಗಿರುತ್ತದೆ. ನೀವು ಕೆಲಸ ಮಾಡುವ ಜಾಗದ ಹೊರತಾಗಿ ಹೊರಗೆಲ್ಲೂ ಓಡಾಟವಿರೋದಿಲ್ಲ. ಹಾಗಾಗಿ ದೇಹ, ಮನಸ್ಸು ಜಡವಾಗಿರುತ್ತೆ. ಇದರಿಂದ ಹೊರಬರಲು ಗಂಟೆಗೊಮ್ಮೆಯಾದರೂ ಫ್ರೆಂಡ್ಸ್ ಜೊತೆಗೆ ಮೆಟ್ಟಿಲಿಳಿಯುವುದು, ಹತ್ತುವುದು, ಓಡಾಡುವುದು ಇತ್ಯಾದಿಚಟುವಟಿಕೆ ಮಾಡಿ. ನಿಮಗೆ ನೀವೇ ಇದು ಹಗಲು ಎಂಬಂತೆ ಕನ್ವಿನ್ಸ್ ಮಾಡಿ. ಹಗಲಿನಂತೇ ಚುರುಕಾಗಿರಲು ಪ್ರಯತ್ನಿಸಿ. ಇದರಿಂದ ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ.

- ಕಾಫಿ, ಟೀ ಕಡಿಮೆ ಮಾಡಿ. ಮನೆ ಊಟಕ್ಕೆ ಪ್ರಯತ್ನಿಸಿ ಕಾಫಿ, ಟೀ ಸೇವನೆಯಲ್ಲಿ ಪ್ರಜ್ಞಾಪೂರ್ವಕವಾಗಿ ಇಳಿಸಿ. ಫ್ರೆಶ್ ಫೀಲ್ ಬರಲು ಗ್ರೀನ್‌ಟೀ, ಬಿಸಿನೀರು ಕುಡಿಯೋದು ರೂಢಿ ಮಾಡುತ್ತ ಬನ್ನಿ. ಫಾಸ್ಟ್‌ಫುಡ್ ತಿನ್ನೋದಂತೂ ಬಹಳ ಅಪಾಯಕಾರಿ. ಸಿಟಿಗಳಲ್ಲಿ ಮನೆ ಊಟ ಮಾಡಿಕೊಡುವವರಿರುತ್ತಾರೆ. ಅವರನ್ನು ಸಂಪರ್ಕಿಸಿ, ಆರೋಗ್ಯಕರ ಊಟ ಮಾಡಿ. ಹಗಲಲ್ಲಿ ತಿನ್ನುವ ರೀತಿಯಲ್ಲೇ ರಾತ್ರಿ ತಿನ್ನುವುದು ರೂಢಿಸಿಕೊಳ್ಳಿ. ನಿಧಾನಕ್ಕೆ ಪಚನಕ್ರಿಯೆ ಸರಿಯಾಗಿತ್ತೆ.

- ನಿದ್ದೆ ಸಂಪೂರ್ಣವಾಗಿರುವಂತೆ ನೋಡಿಕೊಳ್ಳಿ ಡ್ಯೂಟಿ ಮುಗಿಸಿ ಬಂದು ಮಲಗುವಾಗ ರೂಮ್‌ನಲ್ಲಿ ಕತ್ತಲಿರುವಂತೆ ಮಾಡಿ. ಹೊರಗಿನ ಶಬ್ದಗಳು ಡಿಸ್ಟರ್ಬ್ ಮಾಡದಂತೆ ನೋಡಿಕೊಳ್ಳಿ. ಒಂದೇ ಬಗೆಯ ಶಬ್ದ ಎಂದರೆ ಮೊಬೈಲ್‌ನಲ್ಲಿ ರಿಲ್ಯಾಕ್ಸಿಂಗ್ ಮ್ಯೂಸಿಕ್ ಹಾಕ್ಕೊಳ್ಳೋದು ಅಥವಾ ಫ್ಯಾನ್ ಜೋರಾಗಿಟ್ಟರೆ ಹೊರಗಿನ ಶಬ್ದಗಳಿಂದ ಸಮಸ್ಯೆಯಾಗಲ್ಲ. ದಿನವೂ ಸಂಪೂರ್ಣ ನಿದ್ದೆಯಾಗುವುದು ಬಹಳ ಮುಖ್ಯ. ಈ ಬಗ್ಗೆ ಮನೆಯವರಿಗೆ ತಿಳುವಳಿಕೆ ಮೂಡಿಸಿ, ಅವರಿಂದ ತೊಂದರೆಯಾಗದ ಹಾಗೆ ಮಾಡಿ. ಹಾಲು, ಹಸಿರು ತರಕಾರಿ ಸೇವನೆ ಉತ್ತಮ. ದಿನ 1 ಗಂಟೆಯಷ್ಟು ಹೊತ್ತನ್ನು ಸಂಗೀತ, ನೃತ್ಯ, ನಾಟಕದಂಥ ಹವ್ಯಾಸಗಳಲ್ಲಿ ತೊಡಗಿಸಿಕೊಂಡರೆ ಮಾನಸಿಕ ಸಮಸ್ಯೆಗಳಿಂದ ದೂರವಿರಬಹುದು.

 

 

 

Latest Videos
Follow Us:
Download App:
  • android
  • ios