ಮೂತ್ರಕೋಶ ಸೋಂಕು ತರುತ್ತೆ ಈ ಬ್ಯಾಕ್ಟೀರಿಯ! ಇರಲಿ ಎಚ್ಚರ
ಮೂತ್ರಕೋಶ ಸೋಂಕು ತರುವುದು ಇ-ಕೋಲಿ ಎಂಬ ಬ್ಯಾಕ್ಟೀರಿಯಾ. ಮೂತ್ರದ್ವಾರ ಮತ್ತು ಮೂತ್ರಕೋಶಗಳಲ್ಲಿ ಸೇರಿಕೊಂಡು ತೊಂದರೆ ಉಂಟುಮಾಡುತ್ತದೆ. ಈ ಸೋಂಕನ್ನು ಸಿಸ್ಟಿಟಿಸ್ ಎಂದೂ ಹೇಳಲಾಗುತ್ತದೆ
ಅಪರೂಪಕ್ಕೆ ಒಮ್ಮೊಮ್ಮೆ ಸೋಂಕು ಇಲ್ಲದಿದ್ದರೂ ಸಿಸ್ಟಿಟಿಸ್ ಅನುಭವದ ಸಾಧ್ಯತೆಗಳು ಇರುತ್ತವೆ. ಅಷ್ಟಕ್ಕೂ ಮೂತ್ರಕೋಶ ಸೋಂಕಿನ ಲಕ್ಷಣಗಳೇನು? ಮೂತ್ರಾಂಗಕ್ಕೆ ಸಂಬಂಧಿಸಿ ಶಸ್ತ್ರಚಿಕಿತ್ಸೆಗೆ ಒಳಗಾದವರು ಬಹುಬೇಗ ಈ ಸೋಂಕಿಗೆ ತುತ್ತಾಗುವ ಸಂಭವ ಇರುತ್ತದೆ. ಮೂತ್ರದ ಬಣ್ಣ ಬದಲಾಗಿದ್ದರೆ ಅಥವಾ ಮೂತ್ರದೊಂದಿಗೆ ರಕ್ತ ಬರುತ್ತಿದ್ದರೆ, ಮೂತ್ರದಿಂದ ವಾಸನೆ ಬರುತ್ತಿದ್ದರೆ, ಮೂತ್ರ ಮಾಡುವಾಗ ಉರಿ ಅಥವಾ ನೋವಿನ ಅನುಭವ ಆಗುತ್ತಿದ್ದರೆ, ಮೂತ್ರಾಶಯ ಖಾಲಿ ಇದ್ದಾಗ್ಯೂ ಮೂತ್ರ ವಿಸರ್ಜನೆಗೆ ಹೋಗಬೇಕೆಂಬ ಅನುಭವ ಆಗುತ್ತಿದ್ದರೆ, ಪದೇ ಪದೆ ಮೂತ್ರ ವಿಸರ್ಜನೆ, ಕಿಬ್ಬೊಟ್ಟೆ ಹಾಗೂ ಕೆಳಬೆನ್ನಿನಲ್ಲಿ ನೋವು ಇವೆಲ್ಲ ಮೂತ್ರಕೋಶ ಸೋಂಕಿನ ಲಕ್ಷಣಗಳು.
ಒಮ್ಮೊಮ್ಮೆ ದೀರ್ಘಕಾಲದ ಜ್ವರ ಸಹ ಮೂತ್ರಕೋಶ ಸೋಂಕಿನ ಸೂಚನೆಯೇ ಆಗಿರುತ್ತದೆ. ಯೂರಿನ್ ಅನಾಲಿಸಿಸ್ ಮೂಲಕ ವೈದ್ಯರು ಮೂತ್ರಕೋಶ ಸೋಂಕು ಪತ್ತೆ ಮಾಡುತ್ತಾರೆ. ಈ ಪರೀಕ್ಷೆ ಬಿಳಿ ರಕ್ತಕಣಗಳ ಸಂಖ್ಯೆ, ಕೆಂಪು ರಕ್ತಕಣಗಳ ಸಂಖ್ಯೆ, ನೈಟ್ರೇಟ್‌ಗಳು, ಜತೆಗೆ ಮೂತ್ರದಲ್ಲಿ ಇರಬಹುದಾದ ಇತರ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾಗಳ ಕುರಿತು ಮಾಹಿತಿ ನೀಡುತ್ತದೆ.
ಇ-ಕೋಲಿ ಸೋರಿಕೆಗೆ ಮುಖ್ಯ ಕಾರಣ ಮತ್ತು ಇತರ ಬ್ಯಾಕ್ಟೀರಿಯಾಗಳ ಬಗ್ಗೆ ಮಾಹಿತಿ ಪಡೆಯಲು ಯೂರಿನ್ ಕಲ್ಚರ್ ಎಂಬ ಮತ್ತೊಂದು ಪರೀಕ್ಷೆ ನಡೆಸಬಹುದು. ಇದು ಯಾವ ಬ್ಯಾಕ್ಟೀರಿಯಾದಿಂದ ಸೋಂಕು ತಗುಲಿದೆ ಎನ್ನುವುದನ್ನು ನಿಖರವಾಗಿ ತಿಳಿಸುತ್ತದೆ. ಆ ನಂತರವೇ ವೈದ್ಯರು ಚಿಕಿತ್ಸೆ ಬಗ್ಗೆ ನಿರ್ಧರಿಸುತ್ತಾರೆ.