ಆರೋಗ್ಯ ಹಾಗೂ ಕೆಲವು ಆಹಾರ ಪದಾರ್ಥಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಹಲವು ಬೇಕು, ಬೇಡಗಳು ಕೇಳಿ ಬರುತ್ತಲೇ ಇರುತ್ತವೆ. ಅದರಲ್ಲಿಯೂ ತುಪ್ಪದಂಥ ಪದಾರ್ಥಗಳನ್ನು ತಿನ್ನುವಾಗ ದೇಹದ ತೂಕ ಎಲ್ಲಿ ಹೆಚ್ಚಾಗುತ್ತೋ ಎಂಬ ಭಯದೊಂದಿಗೇ ಸೇವಿಸುತ್ತೇವೆ.

ಬದಲಾದ ಕಾಲ ಘಟ್ಟದಲ್ಲಿ ಮನೆಯಲ್ಲಿ ಮಾಡಿರುವ ತುಪ್ಪ, ಮೊಸರಿಗಿಂತಲೂ ಹೊರಗಡೆಯದ್ದೇ ಸೇವಿಸುವುದು ಹೆಚ್ಚಾಗುತ್ತಿದೆ. ಮನೆಯಲ್ಲಿ ಅದೂ ದೇಸಿ ತಳಿ ದನದ ಹಾಲು, ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಯಾವುದೂ, ಯಾವತ್ತೂ ಆರೋಗ್ಯಕ್ಕೆ ಕೆಡುಕಲ್ಲ. ಆದರೆ, ಯಾವಾಗ ಅದೂ ಕಲುಷಿತಗೊಳ್ಳಲು ಶುರುವಾಯಿತೋ, ಆಗಿನಿಂದಲೇ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಆರಂಭವಾಯಿತು. ಹಾಗಾಗಿಯೇ ಕೆಲವು ಡೈರಿ ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.

ಆದರಿದು ಒಳ್ಳೇಯದಲ್ಲ... ಆದರೆ, ಹಾಲಿನಿಂದ ತಯಾರಾದ ಯೋಗರ್ಟ್, ಚಾಕೋಲೇಟ್, ಐಸ್‌ಕ್ರೀಂ ದೇಹಕ್ಕೆ ಅಷ್ಟು ಒಳ್ಳೆಯದಲ್ಲ. ಅದರಲ್ಲಿಯೂ ಸಕ್ಕರೆ ಮಿಶ್ರಿತ ಪದಾರ್ಥಗಳು ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನೂ ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಸಂಶೋಧನೆಗಳು ಸಾಬೀತು ಪಡಿಸಿವೆ. ಇವನ್ನು ಬಳಸದಿದ್ದರೆ ಆರೋಗ್ಯಕ್ಕೆ ಹಿತ. ಹಾಗಂಥ ಹಾಲು ಉತ್ಪನ್ನಗಳನ್ನೇ ತ್ಯಜಿಸಿದರೆ ನಮ್ಮ ಎಲುಬು ಹಾಗೂ ತ್ವಚೆಯ ಆರೋಗ್ಯ ಹದಗೆಡುವುದರಲ್ಲಿ ಅನುಮಾನವೇ ಇಲ್ಲ.

ಅದೂ ಅಲ್ಲದೇ ಯೋಗರ್ಟ್‌ನಂಥ ಡೈರಿ ಉತ್ಪನ್ನಗಳನ್ನು ಮಕ್ಕಳು ತಿಂದರೂ ಅಷ್ಟು ಒಳ್ಳೆಯದಲ್ಲ. ಅಲ್ಪ ಸ್ವಲ್ಪ ತಿಂದರೆ ಓಕೆ. ಆದರೆ, ಇದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಎಂಬ ಜಾಹೀರಾತುಗಳಿಗೆ ಮಾರು ಹೋಗಿ, ಬೇಕಾ ಬಿಟ್ಟಿ ತಿಂದೀರೋ, ಆರೋಗ್ಯಕ್ಕೆ ಹಾನಿಯಾಗೋದು ಗ್ಯಾರಂಟಿ. ಎಲ್ಲವೂ ಮಿತಿಯಲ್ಲಿದ್ದರೆ, ಆರೋಗ್ಯಕ್ಕೆ ಹಿತ ಎಂಬುವುದು ನೆನಪಿರಲಿ.