ಕುವರಿಯ ಕಾಡೋ ಕಾರ್ಟಿಸಲ್

cortisol is a stress related hormone problem
Highlights

ಸ್ಟ್ರೆಸ್, ಸ್ಟ್ರೆಸ್....ಅಬ್ಬಾ ಎಲ್ಲಿ ಹೋಗಲಿ, ಏನೇ ಮಾಡಲಿ ನಮ್ಮನ್ನು ನೆರಳಿನಂತೆ ಕಾಡುತ್ತೆ ಈ ಒತ್ತಡ. ಅದರಲ್ಲಿಯೂ ಮನೆಗೆಲಸ ಮಾಡಿ, ಆಫೀಸಿಗೆ ಹೋಗೋ ಹೆಣ್ಣು ಮಕ್ಕಳಿಗಂತೂ ಮತ್ತಷ್ಟು ಬಾಧಿಸುತ್ತೆ ಈ ಸಮಸ್ಯೆ. ಇದರಿಂದ ಆರೋಗ್ಯಕ್ಕೆ ಕುತ್ತು. ಏನಾಗುತ್ತೆ, ಅದಕ್ಕೆ ಪರಿಹಾರವೇನು?

ಊಟ, ತಿಂಡಿಯಲ್ಲೇನೂ ವ್ಯತ್ಯಾಸವಾಗಿಲ್ಲ. ಬೆಳಗ್ಗೆದ್ದು ವಾಕಿಂಗ್ ಮಾಡ್ತೀನಿ, ಸಣ್ಣ ಪುಟ್ಟ ಎಕ್ಸರ್‌ಸೈಸ್ ಮಾಡ್ತೀನಿ. ಆದ್ರೂ ಯಾಕೆ ಹೀಗೆ ಆಗ್ತಿದೆ? ಸೋನುಗೆ ಅರ್ಥನೇ ಆಗ್ತಿಲ್ಲ.
ಆಫೀಸ್‌ನಲ್ಲೂ ಕೆಲಸದ ಒತ್ತಡ ಹೆಚ್ಚಾಗ್ತಿದೆ, ಇಂಥಾ ಟೈಂನಲ್ಲೇ ಹೀಗಾದ್ರೆ? ಏನಾಗಿದೆ ?
ಸುಸ್ತಾಗಿದೆ!
ಅಷ್ಟೇನಾ?
ಅಷ್ಟೇ ಅಲ್ಲ ..
ಆಗಾಗ ತಲೆನೋವು, ಮುಖದಲ್ಲಿ ಮೊಡವೆ, ತೂಕನೂ ಹೆಚ್ಚಾಗ್ತಿದೆ, ಊಟ, ತಿಂಡಿ, ವ್ಯಾಯಾಮ ಯಾವುದ್ರಲ್ಲೂ ವ್ಯತ್ಯಾಸ ಆಗ್ದೇ ತೂಕ ಯಾಕೆ ಹೆಚ್ಚಾಗುತ್ತೆ. ಒಂದೆರಡು
ದಿನದಲ್ಲಿ ಸರಿಹೋಗಬಹುದು ಅಂದುಕೊಂಡಿದ್ದು ಒಂದು ವಾರ ಆದ್ರೂ ಹಾಗೇ ಇದೆ. ಡಾಕ್ಟರ್ ಹತ್ರ ಹೋಗೋಣ ಅಂತ ಒಳ ಮನಸ್ಸು ಹೇಳ್ತಿದ್ರೂ, ಇಂಥ ಸಣ್ಣಪುಟ್ಟದ್ದಕ್ಕೆಲ್ಲ
ಯಾಕೆ ಡಾಕ್ಟರ್ ಅಂದ್ಕೊಂಡು ಸುಮ್ಮನಾಗೋದೇ ಆಯ್ತು. 
ಏನು ಸಮಸ್ಯೆ?
ಕಾರ್ಟಿಸಾಲ್!
ಹಾಗಂದ್ರೆ?
ಕಾರ್ಟಿಸಾಲ್ ಅಂದರೆ ಸ್ಟ್ರೆಸ್ ಹಾರ್ಮೋನ್. ನಾವು ಬಹಳ ಒತ್ತಡದಲ್ಲಿದ್ದಾಗ ರಿಲೀಸ್ ಆಗೋ ಹಾರ್ಮೋನ್ ಇದು. ‘ಫೈಟ್ ಆರ್ ಫ್ಲೈಟ್ ರೆಸ್ಪಾನ್ಸ್’ ಅನ್ನೋದೊಂದಿದೆ, ಹೀಗಾದಾಗ ಮೆದುಳಿನ ಒತ್ತಡ ದೇಹದ ಮೇಲೆ ಪರಿಣಾಮ ಬೀರುತ್ತೆ. ಅಂದ್ರೆ ಸಿಟ್ಟು ಏರಿದಾಗ ಹೃದಯ ಬಡಿತ ಏರುತ್ತೆ. ಕೈ ಕಾಲಿಗೆ ಅತಿಯಾಗಿ ರಕ್ತ ಸಪ್ಲೈ ಆಗುತ್ತೆ. ಮನಸ್ಸು ದೇಹ ನಮ್ಮ ನಿಯಂತ್ರಣ ಮೀರಿ ವರ್ತಿಸುತ್ತೆ.

ಈ ಕಾರ್ಟಿಸಾಲ್ ಕೇಸೂ ಸ್ವಲ್ಪ ಹೀಗೆಯೇ. ಕಾರ್ಟಿಸಾಲ್ ಹಾರ್ಮೋನ್ ನಮ್ಮ ದೇಹದಲ್ಲಿ ಇರಲೇಬೇಕು. ನಮ್ಮನ್ನು ಉತ್ಸಾಹದಲ್ಲಿಡಲು, ಕರೆಕ್ಟ್ ಟೈಂಗೆ ಪ್ರತಿಕ್ರಿಯೆ ನೀಡಲು ಈ ಹಾರ್ಮೋನ್ ಇರಲೇ ಬೇಕು. ಆದರೆ ಇದರ ಕೌಂಟ್ ಏರಿದಾಗ ಅದು ದೈಹಿಕ ವೈಪರೀತ್ಯಕ್ಕೆ ಕಾರಣವಾಗುತ್ತೆ. 
ಮೊದಲು ಇರಲಿಲ್ವಾ?
ಇದ್ದಿರಬಹುದೇನೋ, ಆದರೆ ಅಷ್ಟಾಗಿ ಗಮನಕ್ಕೆ ಬರ್ತಿರಲಿಲ್ಲ. ಆದರೆ ಈಗಿನ ಆಧುನಿಕ ಬದುಕಲ್ಲಿ ಒತ್ತಡ ಸಿಕ್ಕಾಪಟ್ಟೆ ಏರ‌್ತಿದೆ. ಹಾಗಾಗಿ ಈ ಸಮಸ್ಯೆಯಿಂದ ನರಳುವವರ ಪ್ರಮಾಣವೂ ಹೆಚ್ಚಾಗಿದೆ. 

ಕಾರ್ಟಿಸಾಲ್ ಕೌಂಟ್ ಹೆಚ್ಚಾದ್ರೆ ಏನಾಗುತ್ತೆ?
ಸಿಕ್ಕಾಪಟ್ಟೆ ಏರಿಕೆಯಾದರೆ ಮೆಂಟಲ್ ಅಬ್‌ನಾರ್ಮಲಿಟಿ ಮಾನಸಿಕ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಹೀಗಾದರೆ ಸುದೀರ್ಘ ಕಾಲ ಇದರಿಂದ ಬಿಡುಗಡೆಯಿಲ್ಲ. ಕೋರ್ಟಿಕೊಸ್ಟಿರಾಯ್ಡ್‌ನ ಅತಿಯಾದ ಬಳಕೆ ಹಾಗೂ ಒತ್ತಡ ಇವೆರಡು ಕಾರಣಕ್ಕೆ ಕಾರ್ಟಿಸಾಲ್ ಕೌಂಟ್ ಹೆಚ್ಚಾಗುತ್ತೆ. ಈ ಸಮಸ್ಯೆ ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳಬಹುದು. ತೂಕ ಹೆಚ್ಚಳ, ಉದ್ವೇಗ, ನಿದ್ರಾ ಹೀನತೆ, ಹಾರ್ಮೋನು ವ್ಯತ್ಯಯ, ಫರ್ಟಿಲಿಟಿ ಸಮಸ್ಯೆ .. ಹೀಗೆ ಯಾವ ರೀತಿಯಿಂದಲಾದರೂ ಕಾಣಿಸಿಕೊಳ್ಳಬಹುದು. ಸೋನು ಅದೃಷ್ಟ ಚೆನ್ನಾಗಿದೆ , ಬಿಡಿ. ಯಾಕೆ ಅಂದ್ರೆ ಅವಳ ಸಮಸ್ಯೆಗೆ ಪರಿಹಾರ ಅವಳ ಮನೆ ಹಿತ್ತಲಲ್ಲೇ ಇದೆ. ತುಳಸಿ ರಸ ಪ್ರತಿದಿನ ಕುಡಿಯುತ್ತಿದ್ದರೆ ಕಾರ್ಟಿಸಾಲ್ ಕೌಂಟ್ ನಿಧಾನಕ್ಕೆ ಇಳಿಯುತ್ತ ಬರುತ್ತದೆ. 

ಅಶ್ವಗಂಧಕ್ಕೆ ನಮ್ಮ ವೈದ್ಯಕೀಯ ಪದ್ಧತಿಯಲ್ಲಿ 2500 ವರ್ಷಗಳ ಇತಿಹಾಸ ಇದೆ. ಇದು ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿ ಕಾರ್ಟಿಸಾಲ್ ಕೌಂಟ್ ಕಡಿಮೆ ಮಾಡುತ್ತೆ. ಇಂಥ ಗಿಡಮೂಲಿಕೆಗಳು ಕೆಲವಾರಿವೆ. ಅವುಗಳನ್ನು ನಿತ್ಯ ಸೇವಿಸಿದ್ರೆ ಕಾರ್ಟಿಸಾಲ್ ತೆಪ್ಪಗಿರುತ್ತೆ. 

ಔಷಧಿ ಮಾತ್ರ ಸಾಕಾ? 
ಖಂಡಿತಾ ಸಾಲದು. ಇದರ ಜೊತೆಗೆ ಆಹಾರ ಪದ್ಧತಿಯೂ ಬದಲಾಗಬೇಕು. 
- ಅತಿಯಾದ ಸಿಹಿತಿಂಡಿ ಸೇವನೆ, ಎಣ್ಣೆ ಪದಾರ್ಥ, ಪ್ಯಾಕ್ಡ್ ಫುಡ್ ಗೆಲ್ಲ ಸ್ವಲ್ಪದಿನ ಬೈ ಹೇಳ್ಬೇಕು.
- ಫ್ಯಾಟ್‌ನ ಅಂಶ ಇರೋ ತಿಂಡಿ ಕಡೆ ತಲೆ ಎತ್ತೂ ನೋಡಬಾರ್ದು.
- ಕಾಫಿ, ಆಲ್ಕೋಹಾಲ್ ಬೇಡ

ಇದರ ಜೊತೆಗೆ .. 
- ಒತ್ತಡ ಕಡಿಮೆ ಮಾಡಬೇಕು.
- ಪ್ರಾಣಾಯಾಮ ಶುರು ಮಾಡಬೇಕು.
-  ಧ್ಯಾನ ಮಾಡಬೇಕು.
- ನಿರಾಳತೆ ಅಭ್ಯಾಸ ಮಾಡ್ಕೊಳ್ಳಬೇಕು.
- ಆಫೀಸ್‌ನಲ್ಲಿ ಎಷ್ಟೇ ಒತ್ತಡ ಇರಲಿ, ಅದನ್ನು ಮ್ಯಾನೇಜ್ ಮಾಡುವುದನ್ನು ಮೊದಲು ಕಲಿಯಬೇಕು.

loader