ಜ್ವರ ಬಂದರೆ ಸ್ನಾನ ಮಾಡಬಾರದು, ತಂಡಿಯಾದರೆ ಮೊಸರು ತಿನ್ನಬಾರದು, ಶೀತವಾದರೆ ನಿಂಬೆ ಜ್ಯೂಸ್ ಕುಡೀಬಾರದು. ಊಟ ಆದ ಕೂಡಲೇ ನೀರು ಕುಡೀಬೇಕು... ಹೀಗೆ ಹತ್ತು ಹಲವು ಆರೋಗ್ಯ ಸಂಬಂಧಿ ವಿಷಯಗಳನ್ನು ಜೀವನದಲ್ಲಿ ಪಾಲಿಸುತ್ತಿರುತ್ತೇವೆ. ಕೆಲವೊಂದು ಒಳ್ಳೆ ಅಂಶಗಳಾದರೂ, ಮತ್ತೆ ಕೆಲವೊಂದಕ್ಕೆ ಅರ್ಥವೇ ಇಲ್ಲ. ಇವುಗಳಲ್ಲಿ ಕೆಲವು ಇವು...

  • ಜ್ವರ ಬಂದರೆ ಸೇ ನೂ ಟು ಮೊಸರು.. ಹಾಲಿನ ಪದಾರ್ಥಗಳು ನೆಗಡಿ ಅಥವಾ ಮೈ ಬಿಸಿ ಶಾಖ ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ. ಆದರೆ, ಇವನ್ನು ಸೇವಿಸಿದಾಗ ಬಾಯಿ ಹಾಗೂ ಗಂಟಲ ಸುತ್ತ ಲೇಯರ್‌ವೊಂದು ಸೃಷ್ಟಿಯಾಗಿ, ಯಾವುದೇ ಕಿರಿ ಕಿರಿಯಾಗದಂತೆ ನೋಡಿಕೊಳ್ಳುತ್ತದೆ.
  • ತಡ ರಾತ್ರಿ ತಿನ್ನುವ ಹವ್ಯಾಸವಿದ್ದರೆ ದೇಹದ ತೂಕ ಜಾಸ್ತಿಯಾಗುತ್ತದೆ ಎಂಬುದೂ ಕೇವಲ ಊಹಾಪೋಹ. ದೇಹದ ತೂಕ ಜಾಸ್ತಿಯಾಗುವುದಕ್ಕೂ, ಮಧ್ಯ ರಾತ್ರಿ ತಿನ್ನುವುದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಬರೀ ಕೂತ್ಕೊಂಡೇ ಇರುವವರಿಗೆ ಯಾವಾಗ ತಿಂದರೂ ಹೆಚ್ಚಾಗಿ, ಬೊಜ್ಜು ಬರುವುದು ಗ್ಯಾರಂಟಿ. ಮೈ ಮುರಿದು ದುಡಿಯುವವನಿಗೆ ಯಾವ ಆಹಾರವಾದರೂ ಸೈ, ಅನಗತ್ಯ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
  • ಸಲಾಡ್ ದೇಹದ ತೂಕ ಕಡಿಮೆ ಮಾಡುತ್ತದೆ, ಎಂದು ಊಟ ಬಿಟ್ಟು ಬರೀ ತರಕಾರಿ, ಕಾಳನ್ನೇ ಸೇವಿಸುವವರು ಇದ್ದಾರೆ. ಆದರೆ, ಈ ಸಲಾಡ್‌ನಲ್ಲಿ ಯಾವ ತರಕಾರಿ ನಮ್ಮ ದೇಹಕ್ಕೆ ಸೂಕ್ತ, ಎಣ್ಣೆ ಅಂಶಗಳಿವೆಯಾ ಎಂಬುದನ್ನು ಗಮನಿಸಿಕೊಳ್ಳಬೇಕು. ಕೆಲವೊಂದು ನಮ್ಮ ದೇಹಕ್ಕೆ ಹೊಂದುವಂಥ ಆಹಾರ ಪದಾರ್ಥಗಳು ಇದರಲ್ಲಿ ಇರುವುದಿಲ್ಲ.
  • ಮೊಟ್ಟೆ ತಿಂದ್ರೆ ಹೃದ್ರೋಗ ಕಾಡುವ ಸಂಭವ ಹೆಚ್ಚು, ಎಂದೂ ಹೇಳುತ್ತಾರೆ ಕೆಲವರು. ಮೊಟ್ಟೆಯಲ್ಲಿ ಹಲವಾರು ಪೌಷ್ಟಿಕಾಂಶಗಳಿದ್ದು, ಇದು ದೇಹದ ಅನೇಕ ಅಗತ್ಯಗಳನ್ನು ಪೂರೈಸುತ್ತದೆ. ಯಾವುದೇ ಆಹಾರ ಪದಾರ್ಥವನ್ನಾದರೂ ಸರಿ, ಮಿತಿ ಮೀರಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೇಯದಲ್ಲ.
  • ಶೀತವಾದರೆ ಲಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ಒಳ್ಳೆಯದು. ದೇಹಕ್ಕೆ ಅಗತ್ಯ ಸಿ ವಿಟಮಿನ್ ದೊರೆತು, ಶೀತ ಕಡಿಮೆಯಾಗುತ್ತದೆ.
  • ಸಿ ವಿಟಮಿನ್ ಒಳ್ಳೆಯದು ಎಂದು ಬರೀ ಅದನ್ನೇ ತಿಂದರೂ ಆಗುವುದಿಲ್ಲ. ದೇಹ ಇತರೆ ಪೌಷ್ಟಿಕಾಂಶಗಳನ್ನೂ ಬಯಸುತ್ತದೆ. ಎಲ್ಲ ರೀತಿಯ ಪೋಷಕಾಂಶಗಳೂ ದೇಹವನ್ನು ಸೇರುವಂಥ ಪಥ್ಯ ನಮ್ಮದಾಗಬೇಕು. ಆಗ, ಫಿಟ್ ಆಗಿರಬಹುದು.