ಯಾರಾದರೂ ಅನೇಕ ವರ್ಷಗಳಿಂದ ಒಂದೇ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ‘ನಿನಗೆ ಆ ಕಂಪೆನಿಯನ್ನು ಕೊಳ್ಳುವ ಪ್ಲ್ಯಾನ್ ಇದೆಯೋ ಹೇಗೆ?’ ಎನ್ನುತ್ತ ಸ್ನೇಹಿತರು ಕಾಲೆಳೆಯುವುದನ್ನು ನೀವು ನೋಡಿರಬಹುದು. ಅಂದರೆ ಕಂಪೆನಿಯಿಂದ ಕಂಪೆನಿಗೆ ಹಾರುವ ವ್ಯಕ್ತಿ ಮಾತ್ರ ಜಾಣ ಎಂಬ ಅಭಿಪ್ರಾಯ ಬಹುತೇಕರಲ್ಲಿದೆ. ಇದಕ್ಕೆ ಕಾರಣವೂ ಇದೆ. ಒಂದೇ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಬೇರೂರಿಕೊಂಡು ಕುಳಿತವರಿಗಿಂತ ವರ್ಷಕ್ಕೋ ಇಲ್ಲ ಎರಡ್ಮೂರು ವರ್ಷಕ್ಕೋ ನೌಕರಿ ಬದಲಾಯಿಸುವ ವ್ಯಕ್ತಿ ವೇತನದಲ್ಲಿ ಹೆಚ್ಚಿನ ಏರಿಕೆಯಾಗುತ್ತದೆ. ಇದೇ ಕಾರಣಕ್ಕೆ ಉದ್ಯೋಗಿಗಳು ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ನಿರಂತರವಾಗಿ ಜಂಪ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಇದರಿಂದಾಗಿ ಕಳೆದೊಂದು ದಶಕದಿಂದ ನೇಮಕಾತಿ ಎನ್ನುವುದು ಸಂಸ್ಥೆಗಳಿಗೆ ಬರೀ ಉದ್ಯೋಗಿಗಳ ಆಯ್ಕೆಯಾಗಿ ಉಳಿದಿಲ್ಲ ಬದಲಿಗೆ ಅವರನ್ನು ತನ್ನತ್ತ ಆಕರ್ಷಿಸುವ ಅನಿವಾರ್ಯತೆಯನ್ನೂ ಸೃಷ್ಟಿಸಿದೆ ಎನ್ನುವುದನ್ನು ಅಧ್ಯಯನವೊಂದು
ಬಹಿರಂಗಪಡಿಸಿದೆ.

ಏನಿದು ಅಧ್ಯಯನ?: ‘ಸೈಕಿ’ ಎಂಬ ಸಂಸ್ಥೆ ನಡೆಸಿದ ‘ದಿ 2020 ಟ್ಯಾಲೆಂಟ್ ಟೆಕ್ನಾಲಜಿ ಔಟ್‍ಲುಕ್’ ಅಧ್ಯಯನದಲ್ಲಿ ಪ್ರತಿವರ್ಷ ಸಂಸ್ಥೆಯಿಂದ ಹೊರಹೋಗುತ್ತಿರುವ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪೆನಿಗಳಿಗೆ ನೇಮಕಾತಿ ಪ್ರಕ್ರಿಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ, ಟ್ಯಾಲೆಂಟ್ ಹೊಂದಿರುವ ಅಭ್ಯರ್ಥಿಗಳನ್ನು ಆಕರ್ಷಿಸುವುದು ಕಷ್ಟಕರವಾಗಿದೆ. ಈ ಅಧ್ಯಯನಕ್ಕಾಗಿ ನಡೆದ ಸಮೀಕ್ಷೆಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 2019ರಲ್ಲಿ ನೇಮಕಾತಿ ಹಾಗೂ ಉದ್ಯೋಗಿಗಳನ್ನು ಹಿಡಿದಿಟ್ಟುಕೊಳ್ಳುವುದು ಹೆಚ್ಚು ಕಷ್ಟಕರವಾಗಿತ್ತು ಎಂಬ ಅಭಿಪ್ರಾಯವನ್ನು ಶೇ.78ರಷ್ಟು ಕಂಪೆನಿಗಳು ವ್ಯಕ್ತಪಡಿಸಿವೆ. 

ಟೀಮಿನಲ್ಲಿ ಸ್ಮಾರ್ಟ್ ಆಗಲು ಈ ಗುಣಗಳು ನಿಮ್ಮಲ್ಲಿವೆಯೇ?

ನೇಮಕಾತಿ ಕಷ್ಟ ಕಷ್ಟ: ಸೂಕ್ತ ಅಭ್ಯರ್ಥಿಗಳನ್ನು ಹುಡುಕಲು ದೀರ್ಘ ಸಮಯ ಹಿಡಿಯುವುದು, ಸಂಸ್ಥೆಯಿಂದ ಹೊರಹೋಗುತ್ತಿರುವ ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಕೌಶಲ್ಯ ಹೊಂದಿರದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳದಿಂದ ನೇಮಕಾತಿ ಪ್ರಕ್ರಿಯೆ ಕಷ್ಟವಾಗಿರುವುದರ ಜೊತೆಗೆ ದುಬಾರಿಯೂ ಆಗಿದೆ. ಸೂಕ್ತ ಅಭ್ಯರ್ಥಿಗಳನ್ನು ಆಕರ್ಷಿಸಲು ವಿಫಲವಾಗುತ್ತಿರುವುದು ಸಂಸ್ಥೆಯ ಬ್ಯುಸಿನೆಸ್ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.

ಟ್ಯಾಲೆಂಟ್ ಕೊರತೆಯಿಂದ ನಷ್ಟ: ಕೆಲವು ಕಂಪೆನಿಗಳಿಗೆ ಉದ್ಯೋಗಿಗಳೇನೂ ಸಿಗುತ್ತಿದ್ದಾರೆ. ಆದರೆ, ಅವರಲ್ಲಿ ನಿರೀಕ್ಷಿತ ಟ್ಯಾಲೆಂಟ್ ಇರುವುದಿಲ್ಲ. ಈ ಅಧ್ಯಯನದ ಪ್ರಕಾರ ಶೇ.68ರಷ್ಟು ಉದ್ಯೋಗಿಗಳು ಅಲ್ಪಕಾಲಿಕವಾಗಿ ಅಥವಾ ಪೂರ್ಣಕಾಲಿಕವಾಗಿ ಯಾವುದೇ ಕಾರ್ಯದಲ್ಲಿ ತೊಡಗಿಲ್ಲ. ಇದರಿಂದ ಉತ್ಪಾದನೆಯಲ್ಲಿ ಶತಕೋಟಿ ಡಾಲರ್‍ಗಳಷ್ಟು ನಷ್ಟ ಉಂಟಾಗುತ್ತಿದೆ. 

ಬ್ರ್ಯಾಂಡಿಂಗ್‍ಗೆ ಒತ್ತು: ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿರುವ ಕಂಪೆನಿಗಳು 2020ರಲ್ಲಿ ಜಾಗೃತಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ನೇಮಕಾತಿ ಪ್ರಕ್ರಿಯೆಗೆ ಹೊಸ ಪರಿಹಾರವೊಂದನ್ನು ಹುಡುಕಿಕೊಳ್ಳಲಿವೆ. ಟ್ಯಾಲೆಂಟೆಡ್ ಉದ್ಯೋಗಿಗಳನ್ನು ಆಕರ್ಷಿಸಲು ಕಂಪೆನಿಗಳು ಬ್ರ್ಯಾಂಡಿಂಗ್ ಹಾಗೂ ಮಾರ್ಕೆಟಿಂಗ್ ಎಕ್ಸ್‌ಪರ್ಟ್‌ಗಳನ್ನು ನೇಮಿಸಿಕೊಳ್ಳಲಿವೆ. ಇದರಿಂದ ಅಭ್ಯರ್ಥಿಗಳಿಗೆ ಆ ಕಂಪೆನಿಯ ಪ್ರೋಫೈಲ್ ಹಾಗೂ ವರ್ಕಿಂಗ್ ನೇಚರ್ ಬಗ್ಗೆ ಸಮರ್ಪಕ ಮಾಹಿತಿ ಸಿಗಲಿದೆ. ಅಲ್ಲದೆ, ಅಭ್ಯರ್ಥಿಗಳಲ್ಲಿರುವ ಟೆಕ್ನಿಕಲ್ ಟ್ಯಾಲೆಂಟ್‍ಗೆ ನೇಮಕಾತಿ ಸಂದರ್ಭದಲ್ಲಿ ಹೆಚ್ಚಿನ ಒತ್ತು ನೀಡುವ ಹಿನ್ನೆಲೆಯಲ್ಲಿ ಅರ್ಹರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. 

ಸೋಷಿಯಲ್ ಮೀಡಿಯಾವೇ ಎಚ್‍ಆರ್: ಫೇಸ್‍ಬುಕ್, ವಾಟ್ಸ್ಆಪ್‍ಗಳು ಈಗಾಗಲೇ ಉದ್ಯೋಗಕ್ಕೆ ಸಂಬಂಧಿಸಿದ ಸಂದೇಶಗಳನ್ನು ಬೃಹತ್ ಪ್ರಮಾಣದಲ್ಲಿ ರವಾನಿಸುತ್ತಿವೆ. ಬಹುತೇಕ ಮಂದಿಗೆ ಇವುಗಳ ಮೂಲಕವೇ ಉದ್ಯೋಗ ಮಾಹಿತಿ ಸಿಗುತ್ತಿದೆ. 2020ರಲ್ಲಿ ಸೋಷಿಯಲ್ ಮೀಡಿಯಾಗಳು ಈ ಕಾರ್ಯವನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವನ್ನು ಅಧ್ಯಯನ ವ್ಯಕ್ತಪಡಿಸಿದೆ.  

ಯಶಸ್ಸು ಬೆನ್ನೇರಿದ ಮೇಲೆ ಅಟ್ಟ ಹತ್ತಿ ಕೂತ್ಕೋಬೇಡಿ

ಕಾಂಟ್ರ್ಯಾಕ್ಟ್ ವರ್ಕರ್ಸ್‍ಗೆ ಬೇಡಿಕೆ: ಪೂರ್ಣಕಾಲಿಕಾ ಉದ್ಯೋಗಿಗಳ ವೇತನ ಕಂಪೆನಿಗಳಿಗೆ ದುಬಾರಿಯಾಗಿ ಪರಿಣಮಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಟ್ರ್ಯಾಕ್ಟ್ ಆಧರಿತ ನೇಮಕಾತಿಗೆ 2020ರಲ್ಲಿ ಕಂಪೆನಿಗಳು ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ. ಇದರಿಂದ ಉದ್ಯೋಗಿಗಳು ಪೂರ್ಣಕಾಲಿಕಾ ಉದ್ಯೋಗದ ಬದಲು ಕಾಂಟ್ರ್ಯಾಕ್ಟ್ ಆಧರಿತ ಕೆಲಸಗಳಿಗೆ ಶಿಫ್ಟ್ ಆಗಬೇಕಾದಂತಹ ಅನಿವಾರ್ಯತೆ ಸೃಷ್ಟಿಯಾದರೂ ಆಗಬಹುದು. ಒಟ್ಟಾರೆ 2020ರಲ್ಲಿ ಉದ್ಯೋಗದಾತರು ಹಾಗೂ ಉದ್ಯೋಗಿಗಳ ಮೈಂಡ್‍ಸೆಟ್‍ನಲ್ಲಿ ದೊಡ್ಡ ಪರಿವರ್ತನೆಯಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಕಾಸ್ಟ್ ಕಟಿಂಗ್ ಪರಿಣಾಮ ಉದ್ಯೋಗಿಗಳಿಗೆ ಕೋಕ್: 2019ರಲ್ಲೇ ಕಾಸ್ಟ್ ಕಟಿಂಗ್ ಹೆಸರಲ್ಲಿ ಅನೇಕ ಸಂಸ್ಥೆಗಳು ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿವೆ. 2020ರಲ್ಲೂ ಈ ಟ್ರೆಂಡ್ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಟ್ಯಾಲೆಂಟ್ ಇರುವ ಉದ್ಯೋಗಿಗಳಿಗಷ್ಟೇ ಮಣೆ ಹಾಕುವ ಮೂಲಕ ಹೆಚ್ಚುವರಿ ಆರ್ಥಿಕ ಭಾರವನ್ನು ತಗ್ಗಿಸುವ ಪ್ರಯತ್ನ ಕಾರ್ಪೋರೇಟ್ ವಲಯದಲ್ಲಿ ನಡೆಯುತ್ತಿರುವ ಕಾರಣ ಕೆಲಸ ಬದಲಾವಣೆಗೂ ಮುನ್ನ ಯೋಚಿಸಿ ಮುಂದಡಿಯಿಡುವುದು ಉತ್ತಮ. 

ಲೇಆಫ್ ಯುಗದಲ್ಲಿ ಕೆಲಸ ಉಳಿಸಿಕೊಳ್ಳುವುದು ಹೇಗೆ?