ನಾವು ನಮ್ಮ ಲಾಭಕ್ಕೋಸ್ಕರ ಮರಗಳ ಕೈಕಾಲು ಮುರಿಯುತ್ತೇವೆ, ಅವುಗಳನ್ನು ಹೇಳಹೆಸರಿಲ್ಲದಂತೆ ಮಾಡಿಯೂ ಬಿಡುತ್ತೇವೆ. ಇನ್ನು ಪ್ರಕೃತಿ ವಿಕೋಪಕ್ಕೆ ಮರ, ನರ ಎಂಬ ಬೇಧವಿಲ್ಲ. ಮನುಷ್ಯರನ್ನು ಸಾರಾಸಗಟಾಗಿ ತೆಗೆದುಕೊಂಡು ಹೋಗುವಂತೆ ಮರಗಳನ್ನೂ ಬುಡಮೇಲು ಮಾಡಿಬಿಡುತ್ತವೆ. ನಮಗೇನೋ ಸರಕಾರ, ನೆರೆಯವರು ಪರಿಹಾರ ನೀಡಿ ಬದುಕಿಗೆ ಮರಳುವಂತೆ ನೋಡಿಕೊಳ್ಳುತ್ತಾರೆ. ಆದರೆ, ಮರಗಳ ಗೋಳನ್ನು ಕೇಳುವವರು ಯಾರು?

ಇರುತ್ತಾರೆ ಸ್ವಾಮಿ, ನಮ್ಮ ನಡುವೆಯೇ ಅಪರೂಪಕ್ಕೊಬ್ಬರು ಇರುತ್ತಾರೆ. ಪರಿಸರ ರಕ್ಷಣೆ ಬಗ್ಗೆ ಬರಿ ಬಾಯಿ ಮಾತನಾಡದೆ, ಕೈಂಕರ್ಯಕ್ಕಿಳಿವವರು. ಅಂಥವರಲ್ಲಿ ಒಬ್ಬರು ಚೆನ್ನೈನ ಪರಿಸರವಾದಿ ಅಬ್ದುಲ್ ಘನಿ. ಭಾರತದ ಹಸಿರು ವ್ಯಕ್ತಿ ಎಂದೇ ಜನಜನಿತವಾಗಿರುವ ಘನಿ ಮೊನ್ನೆ ಪರಿಸರ ದಿನದಂದು ದೇಶದಲ್ಲೇ ಮೊದಲ ಟ್ರೀ ಆ್ಯಂಬುಲೆನ್ಸ್‌ನ್ನು ಚೆನ್ನೈನಲ್ಲಿ ರಸ್ತೆಗಿಳಿಸಿದ್ದಾರೆ. ಈ ಆ್ಯಂಬುಲೆನ್ಸ್ ಮರಗಳಿಗೆ ಅಗತ್ಯ ಕಾಳಜಿ, ಆರೈಕೆ ನೀಡುವ ಗುರಿ ಹೊಂದಿದೆ. 

ಏನಿದು ಟ್ರೀ ಆ್ಯಂಬುಲೆನ್ಸ್?
ಬುಡಮೇಲಾದ ಮರಗಳ ಬೇರನ್ನು ಮರಳಿ ಮಣ್ಣಿನಲ್ಲಿ ಛಾಪಿಸುವ, ಅರೆ ಜೀವವಾದ ಮರಗಳಿಗೆ ಜೀವ ನೀಡುವ, ಸೀಡ್‌ಬಾಲ್‌ಗಳನ್ನು ವಿತರಿಸುವ, ಗಿಡಗಳನ್ನು ಹಂಚುವ, ಸತ್ತ ಮರಗಳಿಗೆ ಮುಕ್ತಿ ಕಾಣಿಸುವ ಹಾಗೂ ಮರಗಳ ಸ್ಥಳಾಂತರ ಮತ್ತು ಸರ್ವೆ ಕೆಲಸಗಳನ್ನು ಈ ಟ್ರೀ ಆ್ಯಂಬುಲೆನ್ಸ್ ಮಾಡಲಿದೆ. 

ಪತಿ ನೆನಪು ಹಸಿರಾಗಿಡಲು 73 ಸಾವಿರ ಗಿಡ ನೆಟ್ಟ ಪತ್ನಿ

ವಿಶ್ವಾದ್ಯಂತ ಮಾಲಿನ್ಯ ಹೆಚ್ಚುತ್ತಿರುವ, ಇಂಡಸ್ಟ್ರಿಯಲೈಸೇಶನ್‌ಗೆ ಹಸಿರು ಕಾಂಕ್ರೀಟಾಗುತ್ತಿರುವ ಈ ದಿನಗಳಲ್ಲಿ ಬೆಳೆದು ದೊಡ್ಡದಾದ ಮರಗಳನ್ನಾದರೂ ಉಳಿಸಿಕೊಳ್ಳುವ ಕೆಲಸ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಘನಿ, 2020ರ ಹೊತ್ತಿಗೆ ತಮ್ಮ ಈ ಟ್ರೀ ಆ್ಯಂಬುಲೆನ್ಸ್ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸುವ ಆಕಾಂಕ್ಷೆ ಹೊಂದಿದ್ದಾರೆ. ಜೂನ್ ಐದರಂದು ತಮಿಳುನಾಡುವಿನಾದ್ಯಂತ ಸಂಚಾರಿ ಕೆಲಸ ಆರಂಭಿಸಿರುವ ಟ್ರೀ ಆ್ಯಂಬುಲೆನ್ಸ್ ಇನ್ನೆರಡು ತಿಂಗಳಲ್ಲಿ ದೇಶದುದ್ದಕ್ಕೂ ಸಂಚರಿಸಿ, ನವದೆಹಲಿ ತಲುಪಲಿದೆ. ಶಾಲೆ, ಕಾಲೇಜುಗಳಿಗೆ ಭೇಟಿ ಕೊಟ್ಟು, ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಲಿದೆ. 

ತಮಿಳುನಾಡು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಹಲವಾರು ಪ್ರಕೃತಿ ವಿಕೋಪಕ್ಕೆ ಗುರಿಯಾಗಿದೆ. 2015ರ ಪ್ರವಾಹ, 2016ರಲ್ಲಿ ವರ್ದಾ ಚಂಡಮಾರುತ ಹಾಗೂ 2018ರಲ್ಲಿ ಗಜ ಚಂಡಮಾರುತಗಳ ಆರ್ಭಟಕ್ಕೆ ರಾಜ್ಯ ಬೆಜ್ಜಿ ಬಿದ್ದಿದೆ. ಈ ಸಂದರ್ಭಗಳಲ್ಲಿ ರಾಜ್ಯದ ಲಕ್ಷಾಂತರ ಮರಗಳು ತಲೆ ಕೆಳಗಾಗಿ ನಿಂತಿವೆ. ಇಂಥ ಮರಗಳನ್ನು ಮತ್ತೆ ಮೊದಲಿನಂತೆ ನಿಲ್ಲಿಸಿ, ಇರುವ ಮರಗಳನ್ನು ಕಾಪಾಡಿಕೊಳ್ಳುವ ಕೆಲಸಕ್ಕೆ ಟ್ರೀ ಆ್ಯಂಬುಲೆನ್ಸ್ ಮೊದಲ ಪ್ರಾಶಸ್ತ್ಯ ನೀಡಲಿದೆ. 

ಬೆಂಗಳೂರು ವಿಮಾನ ನಿಲ್ದಾಮದಲ್ಲಿ ಮರಗಳ ಸ್ಥಳಾಂತರ

'ಪ್ರಕೃತಿ ವಿಕೋಪಕ್ಕೆ ರಾಜ್ಯ ನಲುಗಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದ್ದರಿಂದಲೇ ಅಬ್ದುಲ್ ಘನಿ ಟ್ರೀ ಆ್ಯಂಬುಲೆನ್ಸ್ ಯೋಜನೆ ಹೇಳಿದಾಗ ಅದಕ್ಕೆ ಕೈ ಜೋಡಿಸಲು ತಕ್ಷಣ ಒಪ್ಪಿಕೊಂಡೆ. ಇಡೀ ದೇಶದಲ್ಲೇ ಈ ರೀತಿಯ ಚಿಂತನೆ ಮೊದಲನೆಯದಾಗಿದ್ದು, ಬುಡಮೇಲಾದ ಮರಗಳನ್ನು ತಿರುಗಿಸಿ ಕೂರಿಸಲು ನಮ್ಮ ಬಳಿ ಹೈಡ್ರಾಲಿಕ್ ಮೆಶಿನ್ ಇದೆ,' ಎನ್ನುತ್ತಾರೆ ಈ ಯೋಜನೆಯ ಅಧ್ಯಕ್ಷರಾಗಿರುವ ಸುರೇಶ್.

ಇತ್ತೀಚೆಗೆ ಪರಿಸರ ಪ್ರಜ್ಞೆ ಸ್ವಲ್ಪ ಜಾಗೃತವಾಗಿದ್ದು, ಭಾರತ ಹಾಗೂ ಚೀನಾ ಈ ಭೂಮಿಯನ್ನು ಮತ್ತೆ ಹಸಿರಾಗಿಸುವಲ್ಲಿ ಪ್ರಮುಖವೆನಿಸುವಂಥ ಪ್ರಯತ್ನ ಹಾಕುತ್ತಿವೆ ಎಂದು ನಾಸಾದ ಇತ್ತೀಚಿನ ಅಧ್ಯಯನ ವರದಿ ತಿಳಿಸಿತ್ತು. ಆದರೂ, ಅಭಿವೃದ್ಧಿಯತ್ತ ದಾಪುಗಾಲು ಹಾಕುವ ಸಂದರ್ಭದಲ್ಲಿ ಇರುವ ಹಸಿರನ್ನು ಉಳಿಸಿಕೊಂಡು ಮುನ್ನಡೆಯುವ ಜಾಣ್ಮೆ ತೋರುವುದು ಮುಖ್ಯ.