ಬೆಂಗಳೂರು/ದೇವನಹಳ್ಳಿ: ಅಭಿವೃದ್ಧಿ ಕಾರ್ಯಗಳ ಹೆಸರಲ್ಲಿ ಗಿಡಮರಗಳಿಗೆ ಕೊಡಲಿ ಬೀಳುವುದೇ ಹೆಚ್ಚು. ಆದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ವಿಮಾನ ನಿಲ್ದಾಣದ ಕಾಮಗಾರಿಗಳಿಗೆ ಗುರುತಿಸಿರುವ ಸ್ಥಳದಲ್ಲಿನ ಸುಮಾರು ಏಳು ಸಾವಿರಕ್ಕೂ ಹೆಚ್ಚು ಗಿಡಮರಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಸ್ಥಳಾಂತರಿಸುವ ಕೆಲಸ ಆರಂಭಿಸಿದೆ.

ಬೆಂಗಳೂರು ವಿಮಾನ ನಿಲ್ದಾಣ(ಕೆ ಐಎ) 2ನೇ ಟರ್ಮಿನಲ್‌ ನಿರ್ಮಾಣ ಮತ್ತು ರಸ್ತೆ ಅಗಲೀಕರಣ ಸೇರಿದಂತೆ ಮುಂತಾದ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಸ್ತರಣೆ ಕಾಮಗಾರಿಗಾಗಿ ವಿಮಾನ ನಿಲ್ದಾಣದ ಆವರಣದಲ್ಲಿನ 7,095 ಮರ ಮತ್ತು ಗಿಡಗಳನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ವಿಶ್ವ ಪರಿಸರ ದಿನದ ಅಂಗವಾಗಿ ಬುಧವಾರವೇ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ದಿನ 200ಕ್ಕೂ ಹೆಚ್ಚು ಮರಗಳನ್ನು ಯಂತ್ರಗಳ ಸಹಾಯದಿಂದ ಬುಡ ಸಮೇತ ಎತ್ತಿ ನಿಗದಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ಬಿಐಎಎಲ್‌ ಮುಖ್ಯ ಯೋಜನಾಧಿಕಾರಿ ಟಾಮ್‌ ಶಿಮಿನ್‌ ಮಾತನಾಡಿ, ಮರ ವಿಜ್ಞಾನ ಸಂಸ್ಥೆ, ವೋಲ್ವೋ ಸಂಸ್ಥೆ ಸಹಯೋಗದಲ್ಲಿ ಮರ ಸ್ಥಳಾಂತರ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆಗೆ ಒಟ್ಟು 2.50 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.