ಚಾಪ್ಲಿನ್ ಜೋಕಿಗೆ ನಗುವ ಮುನ್ನ...

First Published 5, Feb 2018, 7:46 PM IST
Charlie Chaplin jokes
Highlights

ನೋಡಿದರೆ ಬಿದ್ದು ಬಿದ್ದು ನಗುತ್ತೇವೆ. ಆದರೆ, ಜೋಕಿನ ಮೂಲಕವೇ ಜೀವನ ಪಾಠ ಹೇಳಿ ಕೊಡುತ್ತಾನೆ ಚಾರ್ಲಿ ಚಾಪ್ಲಿನ್.

ವಿಶ್ವವೇ ನನ್ನ ಕೈಗೊಂಬೆ ಅನ್ನುವ 'ಡಿಕ್ಟೇಟರ್' 'ದಿ ಗ್ರೇಟ್ ಡಿಕ್ಟೇಟರ್'ನಲ್ಲಿ ಚಾರ್ಲಿನ್ ಚಾಪ್ಲಿನ್ ನಿರ್ವಹಿಸಿರೋದು ಹಿಟ್ಲರ್ ಪಾತ್ರ. ಆತ ಡಿಕ್ಟೇಟರ್. ಆತನೆದುರಿಗೆ ಒಂದು ಗ್ಲೋಬ್ ಇದೆ. ಅದನ್ನೇ ಆತ ಜಗತ್ತು ಅಂತ ಪರಿಗಣಿಸುತ್ತಾನೆ. ಅದನ್ನೇ ದೃಷ್ಟಿಸುತ್ತ ಬೆರಳ ತುದಿಯಲ್ಲಿ ತಿರುಗಿಸುತ್ತಾನೆ. ಮೇಲಕ್ಕೆಸೆಯುತ್ತಾನೆ, ಫುಟ್‌ಬಾಲ್‌ನಂತೆ ಕಾಲಲ್ಲಿ ಒದೆಯುತ್ತಾನೆ, ತನ್ನ ಹಿಂಭಾಗದಿಂದ ದೂಕುತ್ತಾನೆ. ಹೀಗೆ ಆಡುತ್ತಿರುವಾಗಲೇ ಅದು ಒಡೆದು ಚೂರು ಚೂರಾಗುತ್ತದೆ, ಥೇಟ್, ಜಗತ್ತನ್ನೇ ಕೈಗೊಂಬೆಯಾಗಿ ಆಡುವ ಅವನ ಕನಸು ಚೂರಾದ ಹಾಗೆ!

ನಮ್ಮಲ್ಲೋ ಎಷ್ಟೋ ಜನ ಅಥವಾ ನಾವೇ ಆದರೂ ಬದುಕಿನಲ್ಲಿ ಮೇಲೆ ಹೋದಾಗ ಇಡೀ ಜಗತ್ತೇ ನನ್ನ ಅಂಗೈಯೊಳಗಿನ ಬಗುರಿ ಅಂತ ಅಹಂಕಾರದಿಂದ ಮೆರೆದಾಡುತ್ತಿರುತ್ತೇವೆ. ಕೆಳಗಿನದೇನೂ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಎಲ್ಲರನ್ನೂ ಕೇವಲವಾಗಿ ಕಾಣುತ್ತೇವೆ. ನಮಗೆ ಕಂಡದ್ದು ಮಾತ್ರ ಸತ್ಯ ಅನ್ನುವ ಭ್ರಮೆ ಇರುತ್ತದೆ. ಎಲ್ಲರೂ ತನ್ನ ಕೈಗೊಂಬೆಗಳು ಅನ್ನುವ ದುರಹಂಕಾರ ನಮ್ಮನ್ನು ಆಳುತ್ತಿರುತ್ತದೆ. ಅಂಥಾ ಹೊತ್ತಲ್ಲೇ ಣಚಾಪ್ಲಿನ್‌ನ ಗ್ಲೋಬ್ ಒಡೆದು ಚೂರಾದ ಹಾಗೆ ನಮ್ಮ ಅಹಂ ಒಡೆದು ಛಿದ್ರವಾಗುತ್ತದೆ. ಮುಂದಿರುವುದು ಕಟು ವಾಸ್ತವ. 

ಲಯನ್ ಕೇಜ್‌ನ ಹುಂಬ ಚಾಪ್ಲಿನ್ ಒಬ್ಬ ಕೆಲಸಗಾರ. ಕುದುರೆಗೆ ಮದ್ದು ತಿನಿಸಲು ಹೋಗಿ ಯಡವಟ್ಟಿನಿಂದ ಆ ಮದ್ದು ಇವನ ಹೊಟ್ಟೆ ಸೇರುತ್ತದೆ. ಕುದುರೆ ಇವನನ್ನು ಅಟ್ಟಿಸಿಕೊಂಡು ಬರುತ್ತದೆ. ಕುದುರೆಯಿಂದ ತಪ್ಪಿಸಿಕೊಳ್ಳಲು ಎದುರು ಸಿಕ್ಕ ಪಂಜರದೊಳಗೆ ನುಗ್ಗುತ್ತಾನೆ. ಒಳಹೋದ ಮೇಲೆ ತಿಳಿಯುತ್ತದೆ ಅದರೊಳಗಿರೋದು ಸಿಂಹ ಅಂತ. ಇವನ ಪುಣ್ಯಕ್ಕೆ ಸಿಂಹ ನಿದ್ರಿಸಿರುತ್ತದೆ. ಪಂಜರದೊಳಗಿಂತ ಹೊರಗೆ ಕೈ ಹಾಕಿ ಪಂಜರದ ಬಾಗಿಲು ತೆಗೆಯಲು ಯತ್ನಿಸಿದರೆ ಚಿಲಕ ಬಿದ್ದು ಇವನು ಒಳಗೇ ಲಾಕ್ ಆಗಿ ಬಿಡುತ್ತಾನೆ. ಪಕ್ಕದ ಬಾಗಿಲು ತೆರೆದರೆ ಗುರ್ರೆನ್ನುವ ಚಿರತೆ, ತಲೆ ತಾಗಿ ಇನ್ನೇನು ಕೆಳ ಬೀಳಲಿರುವ ನೀರಿನ ಬಟ್ಟಲು, ಹೊರಗಿನಿಂದ ಇವನನ್ನು ಕಂಡು ಒಂದೇ ಸವನೆ ಬೊಗಳುವ ನಾಯಿ ಆ ಕ್ಷಣಕ್ಕೆ ಅವನಿಗೆ ಸಿಂಹಕ್ಕಿಂತ ದೊಡ್ಡ ಶತ್ರುಗಳು. ಆ ಗಲಾಟೆಯಲ್ಲಿ ಸಿಂಹಕ್ಕೆ ಎಚ್ಚರವಾಗುತ್ತೆ.

ಹೊಟ್ಟೆ ತುಂಬಿದ ಕಾರಣಕ್ಕೋ ಏನೋ ಇವನಿಗೇನೂ ಮಾಡದೇ ತನ್ನ ಪಾಡಿಗೆ ತಾನಿರುತ್ತದೆ. ಅಷ್ಟೊತ್ತಿಗೆ ಹೊರಗೆ ಸುಂದರಿಯೊಬ್ಬಳು ಚಾಪ್ಲಿನ್ ಸಿಂಹದ ಬೋನಿನೊಳಗೆ ಇರೋದನ್ನ ನೋಡ್ತಾಳೆ. ಆ ಕ್ಷಣ ಗಾಬರಿಯಿಂದ ಮೂರ್ಛೆ ಹೋದರೂ, ಎಚ್ಚರವಾದ ಕೂಡಲೇ ಪಂಜರದ ಚಿಲಕ ತೆರೆಯುತ್ತಾರೆ. ಈ ಚಾಪ್ಲಿನ್ ಗೋ ಸಿಂಹ ಏನೂ ಮಾಡದ್ದು ಕಂಡು ಹುಂಬ ಧೈರ್ಯ. ಜೊತೆಗೆ ಸುಂದರಿಯ ಕಣ್ಣಲ್ಲಿ ಗ್ರೇಟ್ ಅನಿಸಿಕೊಳ್ಳಲು ಇದು ಸದವಕಾಶ. ಸಿಂಹದೆದುರು ಮಹಾ ಶೂರನಂತೆ ಪೋಸ್ ಕೊಡುತ್ತಾ, ಸಲಿಗೆಯಿಂದ ಅದರ ಮೈಮುಟ್ಟಲು ಹೋಗಿತ್ತಾನೆ. ಕಿರಿಕಿರಿಯಿಂದ ಸಿಂಹ ಘರ್ಜಿಸಿದಾಗ ಈ ಪುಕ್ಕಲ ಎಸ್ಕೇಪ್. ವಾಯುವೇಗದಲ್ಲಿ ಹೊರಗೋಡಿ ಮರಹತ್ತಿಬಿಡುತ್ತಾನೆ ಚಾಪ್ಲಿನ್!

ಕಷ್ಟಗಳು ಬಂದರೆ ಹೇಗೆ ಬರುತ್ತವೆ ನೋಡಿ, ಒಂದು ಕಡೆ ಅಟ್ಟಿಸಿಕೊಂಡು ಬರುವ ಕುದುರೆ, ಅದರಿಂದ ಹೇಗಾದ್ರೂ ಪಾರಾಗೋಣ ಅಂದುಕೊಳ್ಳುವ ಹೊತ್ತಿಗೆ ಸೇರುವುದು ಸಿಂಹವಿರುವ ಪಂಜರಕ್ಕೆ. ಅಲ್ಲಿಂದ ಹೊರ ಬರೋಣ ಅಂದರೆ ಚಿಲಕ ಬಿದ್ದಿದೆ. ಸಿಂಹ ಮಲಗಿದ್ದರೂ ಪಕ್ಕದಲ್ಲಿ ಹಸಿದ ಚಿರತೆ ಇದೆ, ಮತ್ತೊಂದು ಕಡೆಯಿಂದ ಇವನನ್ನು ಕಂಡು ನಾಯಿ ಯದ್ವಾತದ್ವಾ ಬೊಗಳುತ್ತಿದೆ. ಇಷ್ಟೆಲ್ಲ ಕಷ್ಟಗಳಿದ್ದರೂ ಆ ವ್ಯಕ್ತಿಯ ಲಕ್ ಚೆನಾಗಿದೆ. ಸಿಂಹ ಎದ್ದರೂ ಇವನತ್ತ ನುಗ್ಗಿಲ್ಲ. ಈಗ ಎಲ್ಲ ಸುಗಮವಿದೆ, ಅಷ್ಟಾಗುವಾಗ ತನ್ನನ್ನು ಬದುಕಲು ಬಿಟ್ಟ ಸಿಂಹದ ಮೇಲೇ ಸವಾರಿ ಮಾಡುವ ದುರಾಸೆ! ಮನುಷ್ಯನ ಬುದ್ಧಿಯ ಸ್ಪಷ್ಟ ಚಿತ್ರಣ.

'ಸರ್ಕಸ್'ನ ಹಗ್ಗದ ಮೇಲಿನ ನಡಿಗೆ ಸರ್ಕಸ್ ಕಂಪೆನಿಯ ಪ್ರದರ್ಶನ. ಎತ್ತರದಲ್ಲಿ ಹಗ್ಗ ಕಟ್ಟಿದ್ದಾರೆ. ಅದರಲ್ಲಿ ಚಾಪ್ಲಿನ್ ರೋಪ್ ವಾಕ್ ಮಾಡ್ಬೇಕು. ಚಾಪ್ಲಿನ್ ಶೂಗೆ ಹಗ್ಗ ಕಟ್ಟಲಾಗಿದೆ. ಅದರ ಸೂತ್ರ ಇನ್ನೊಬ್ಬನ ಕೈಯಲ್ಲಿದೆ. ಆತ ಆಡಿಸಿದ ಹಾಗೆ ಈತ ಆಡುತ್ತಿದ್ದಾನೆ. ಇದ್ದಕ್ಕಿದ್ದ ಹಾಗೆ ಒಂದು ಶೂ ಕಳಚುತ್ತೆ. ಒಂದು ಕಾಲಲ್ಲಷ್ಟೇ ಹಗ್ಗ ಇದೆ. ಅದನ್ನೇ ಬ್ಯಾಲೆನ್ಸ್ ಮಾಡುವ ಹೊತ್ತಿಗೆ ಮೇಲಿಂದ ಕೋತಿ ಬಂದು ಇವನ ಮೂಗು ಕಚ್ಚುತ್ತೆ. ಇವನ ಪ್ಯಾಂಟ್‌ಅನ್ನೂ ಹಿಡಿದೆಳೆಯುತ್ತದೆ. ಪ್ಯಾಂಟ್, ಶೂ ಎರಡೂ ಕಳಚುತ್ತೆ. ಹಗ್ಗದ ಮಧ್ಯಭಾಗದಲ್ಲಿರುವ ಚಾಪ್ಲಿನ್ ಗೆ ಇನ್ನೊಂದು ಬದಿಗೆ ಹೋಗಲು ಸಣ್ಣ ಆಧಾರವೂ ಇಲ್ಲ.

ಈಗ ಚಮತ್ಕಾರ ನಡೆಯಲ್ಲ, ಜೀವ ಉಳಿಯಬೇಕಂದರೆ ಸ್ವಯಂ ಸಾಮರ್ಥ್ಯ ಮೆರೆಯಬೇಕು. ಹೇಗೋ ಚಾಪ್ಲಿನ್ ಇದರಿಂದ ಪಾರಾಗ್ತಾನೆ. ಲೈಫೇ ಸರ್ಕಸ್, ರೋಪ್ ವೇಯಲ್ಲಿ ನಮ್ಮ ಪಯಣ, ಇದ್ದಕ್ಕಿದ್ದ ಹಾಗೆ ಎಲ್ಲ ಆಧಾರಗಳೂ ಕಳಚಿ ಜಗತ್ತಿನೆದುರು ಬೆತ್ತಲಾದರೆ. ಚಾಪ್ಲಿನ್‌ನ ಹೆಚ್ಚಿನೆಲ್ಲ ಕಾಮಿಡಿಗಳು ಹೀಗೆ.. ಆ ಕ್ಷಣ ನಮ್ಮನ್ನು ನಕ್ಕು ನಗಿಸಿದರೂ ಅದರ ಹಿಂದೆ ಒಂದು ಗೂಡಾರ್ಥ ಇರುತ್ತದೆ. ಅದು ನಮ್ಮ ಬದುಕಿನ ಸತ್ಯಗಳನ್ನು ಹೇಳುತ್ತದೆ. ನಗುವ ಜೊತೆಗೆ ಆ ಸತ್ಯಗಳನ್ನೂ ಅರ್ಥ ಮಾಡಿಕೊಳ್ಳೋಣ. ಲೈಫ್ ಜರ್ನಿಯಲ್ಲೆಲ್ಲೋ ಕುಸಿದಾಗ ಇವು ನಮಗೆ ಚೈತನ್ಯ ನೀಡುತ್ತವೆ. 

loader