ಅಂಶಿ ಪ್ರಸನ್ನಕುಮಾರ್

ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಕೆರೆಯ ಏರಿಯ ಮೇಲೆ ವಿದೇಶಿಯರ ವಾಕಿಂಗ್, ಬಿಡುವಿನ ವೇಳೆಯಲ್ಲಿ ಯೋಗ, ಧ್ಯಾನ, ನಂತರ ಜಮೀನಿನಲ್ಲಿ ಕಳೆ ಕೀಳುವುದು ಮತ್ತಿತರ ಕೃಷಿ ಕಾಯಕ!

- ಇದು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ರಾವಂ ದೂರಿನಲ್ಲಿ ಕಂಡು ಬರುವ ದೃಶ್ಯ. ಇದಕ್ಕೆಲ್ಲಾ ಕಾರಣ ಅಲ್ಲಿ ಆರ್.ವಿ. ಕಿರಣ್ ಎಂಬ ಯವಕ ತೆರೆದಿರುವ ‘ಅನಾಹತ’ ಹೀಲಿಂಗ್ ಕೇಂದ್ರ.

ಮೈಸೂರು- ಮಂಗಳೂರು ರಸ್ತೆಯಲ್ಲಿ ಸಾಗುವ ಕಂಪಲಾಪುರ ಬಳಿ ಬಲಕ್ಕೆ ತಿರುಗಿ ಸಾಗಿದರೆ ರಾವಂದೂರು ಸಿಗುತ್ತದೆ. ಈ ಗ್ರಾಮವೇನು ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಯಲ್ಲಿ ಬರುವುದಿಲ್ಲ. ರಾಜ್ಯ ಹೆದ್ದಾರಿಯಿಂದಲೂ ಗ್ರಾಮಕ್ಕೆ ಹೋಗಲು ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹೊರತುಪಡಿಸಿದರೆ ಸೂಕ್ತ ಸೌಕರ್ಯ ಇಲ್ಲ. ರಸ್ತೆ ನಮಗೆ ಪರವಾಗಿಲ್ಲ ಎನಿಸಿದರೂ ವಿದೇಶಿಯರಿಗೆ ತ್ರಾಸದಾಯಕ. ಅಲ್ಲಿ ಪೂರ್ವಿಕರ ಕಾಲದ ಮನೆಯಲ್ಲಿ ತೆರೆದಿರುವ ಅನಾಹತ ಯೋಗ ಕೇಂದ್ರದ ಬಗ್ಗೆ ಹೆಚ್ಚು ಪ್ರಚಾರವೂ ಇಲ್ಲ. ಮನೆಗೆ ಹೊಂದಿಕೊಂಡಂತೆ ಗ್ರಾಮದ ಕೆರೆಯ ದಂಡೆಯಲ್ಲಿ, ನಿಸರ್ಗದ ಮಡಿಲಿನಲ್ಲಿ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ನಿರ್ಮಿಸಿರುವ ಮಣ್ಣಿನ ಮನೆ, ಸ್ನಾನದ ಮನೆ, ಆಟದ ಮನೆ, ಊಟದ ಮನೆ ಬಗ್ಗೆ ಹೊರಗಿನವರಿಗಲಿ ಸ್ಥಳೀಯರಿಗೂ ಸರಿಯಾದ ಮಾಹಿತಿ ಇಲ್ಲ. ಆದರೆ ಕೇಂದ್ರದ ವೆಬ್ ಸೈಟ್, ಇಲ್ಲಿಗೆ ಬಂದು ಹೋಗುವ ವಿದೇಶಿಯರು ನೀಡಿರುವ ಫೀಡ್ ಬ್ಯಾಕ್‌ನಿಂದ ಬಾಯಿಂದ ಬಾಯಿಗೆ ಇದರ ಖ್ಯಾತಿ ಹಬ್ಬಿದೆ. ಅಲ್ಲದೇ ವಿದೇಶಿ ಪತ್ರಕರ್ತರೊಬ್ಬರು ಯುಕೆಯ ಪ್ರಸಿದ್ಧ ಪತ್ರಿಕೆಯಲ್ಲಿ ಈ ಕೇಂದ್ರದ ಬಗ್ಗೆ ಲೇಖನ ಪ್ರಕಟಿಸಿದ್ದಾರೆ. ಪರಿಣಾಮ ವರ್ಷದ ಎಲ್ಲಾ ಋತುಗಳಲ್ಲೂ ರಾವಂದೂರಿಗೆ ನೂರಾರು ವಿದೇಶಿಯರು ಬಂದು, ವಾರಗಟ್ಟ ಲೆ ಇದ್ದು ಹೋಗುತ್ತಿದ್ದಾರೆ. ಅನಾಹತ ಕೇಂದ್ರ ವಿದೇಶಿಯರ ಅಚ್ಚುಮೆಚ್ಚಿನ ತಾಣವಾಗಿ ಪರಿಣಮಿಸಿದೆ.

ಒಂದೇ ಮನಸ್ಸು- ಒಂದೇ ಭೂಮಿ- ಒಂದೇ ಮಾನವತ್ವ ಎಂಬ ಘೋಷವಾಕ್ಯದೊಂದಿಗೆ ಸುಸ್ಥಿರತೆ ಮತ್ತು ಮಾನವೀಯತೆಯ ವಿಶ್ವವನ್ನು ನಿರ್ಮಿಸುವುದು ಈ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಉದ್ದೇಶ. ಅನಾಹತ ಯೋಗದ ನಾಲ್ಕನೇ ಚಕ್ರ. ಪ್ರೀತಿ, ವಿಶ್ವಾಸ, ಅಂತಃಕರಣವನ್ನು ಪ್ರತಿಬಿಂಬಿಸುತ್ತದೆ.

ಈ ಕೇಂದ್ರದ ಸಂಸ್ಥಾಪಕ ಕಿರಣ್ ಮೂಲತಃ ರಾವಂದೂರು ಗ್ರಾಮದವರೇ. ಮೈಸೂರಿನ ಇಂಡಸ್ ವ್ಯಾಲಿಯಲ್ಲಿ ಯೋಗ ಮತ್ತು ಪಂಚಕರ್ಮ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದರು. ವಿದೇಶದಲ್ಲಿ ಕೂಡ ಯೋಗ ತರಬೇತುದಾರರಾಗಿ ಕೆಲಸ ಮಾಡಿದ್ದರು. ಶ್ವಾಸ ಯೂನಿವರ್ಸಿಟಿಯಲ್ಲಿ ಶಿಕ್ಷಕ ತರಬೇತಿ ಪಡೆದು, ಮಸಾಜ್, ಪಂಚಕರ್ಮ, ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯನ್ನು ಕರಗತ ಮಾಡಿಕೊಂಡರು. ಮಸ್ತಕ್, ಒಮಾನ್‌ನಲ್ಲಿ ಸೇವೆ ಸಲ್ಲಿಸಿದರು. ಯುರೋಪ್‌ನ ಜಫ್ ಕ್ರಾಬ್ ಎಂಬವರ ಪ್ರೇರಣೆಯಿಂದ ಚೀನಾದ ತೈಚಿ ಯೋಗ ಕಲಿತರು.

ಹೃದ್ರೋಗಕ್ಕೆ ಮೊಳಕೆ ಕಾಳೆಂಬ ಮದ್ದು..

ಮೈಸೂರಿನ ವಿಜಯನಗರದ ಮನೆಯೊಂದರ ಕಾರ್ ಶೆಡ್‌ನಲ್ಲಿ ಆರಂಭದಲ್ಲಿ ಅನಾಹತ ಕೇಂದ್ರ ತೆರೆದಿದ್ದರು. ಆದರೆ ಅವರ ಮನಸ್ಸು ಹಳ್ಳಿಯ ಕಡೆ ತುಡಿಯುತ್ತಿತ್ತು. ಹೀಗಾಗಿ ೨೦೧೪ರಲ್ಲಿ ತಮ್ಮ ಹಳ್ಳಿಗೆ ಹಿಂದಿರುಗಿ, ಅನಾಹತ ಕೇಂದ್ರವನ್ನು ಅಲ್ಲಿ ಆರಂಭಿಸಿದರು. ಇದು ದೇಣಿಗೆ ಆಧಾರಿತ ಡೇಟಾಕ್ಸ್ ಮತ್ತು ವೆಲ್‌ನೆಸ್ ರೀಟ್ರೀಟ್ ಕೇಂದ್ರ. ಇಲ್ಲಿ ಅವರಿಗೆ ಆಯುರ್ವೇದ ಚಿಕಿತ್ಸೆ ಕೂಡ ನೀಡಲಾಗುತ್ತದೆ. ವಿದೇಶಿಯರು ಈ ಕೇಂದ್ರದಲ್ಲಿ ತಯಾರಾಗುವ ಸಾವಯವ, ಪೌಷ್ಟಿಕಾಂಶವುಳ್ಳ, ರುಚಿಕರವಾದ ಸಸ್ಯಾಹಾರವನ್ನು ಸೇವಿಸುತ್ತಾರೆ. ಆಹಾರವೇ ಔಷಧ ಎಂಬ ಪರಿಕಲ್ಪನೆ ಈ ಕೇಂದ್ರದ್ದು. ದೇಹದ ಶುದ್ಧೀಕರಣದಿಂದಲೇ ಎಲ್ಲಾ ರೋಗವನ್ನು ಗುಣಪಡಿಸಬಹುದು. ಮಾನಸಿಕ, ದೈಹಿಕ ಶುದ್ಧತೆಗೆ ನೈಸರ್ಗಿಕ ಆಹಾರ ಪದ್ಧತಿ, ಯೋಗ, ಧ್ಯಾನ ಮುಖ್ಯ ಎನ್ನುತ್ತಾರೆ ಕಿರಣ್. ಇದರಿಂದ ಮನಸ್ಸು ನಿಯಂತ್ರಣ ಸಾಧ್ಯ, ರೋಗಗಳು ಗುಣವಾಗುತ್ತವೆ ಎಂಬುದು ಅವರ ಅಭಿಮತ.

ಕೇಂದ್ರದಲ್ಲಿ ವಿದೇಶಿಯರಿಗೆ ಯೋಗ, ಧ್ಯಾನ ಥೆರಪಿ, ಪಂಚಕರ್ಮ ಚಿಕಿತ್ಸೆ ನೀಡಲಾಗುತ್ತದೆ. ವಿದೇಶಿಯರಿಗೆ ಯಜ್ಞ, ಯಾಗಾದಿಗಳನ್ನು ಪರಿಚಯಿಸುವ ಮೂಲಕ ನಮ್ಮ ಸಂಸ್ಕೃತಿಯ ಮಹತ್ವವನ್ನು ತಿಳಿಸಿಕೊಡಲಾಗುತ್ತದೆ.

ತೂಕ ಇಳಿಸೋಕೆ ನಟಿಯರು ಎಷ್ಟು ನೀರು ಕುಡೀತಾರೆ ?

ಯುರೋಪ್, ಜರ್ಮನಿ, ಫ್ರಾನ್ಸ್, ಇಟಲಿ, ಅಮೆರಿಕಾ, ಸ್ವಿಟ್ಜರ್ ಲ್ಯಾಂಡ್, ನೆದರ್‌ಲ್ಯಾಂಡ್, ಮೆಕ್ಸಿಕೋ ಮೊದಲಾದ ದೇಶಗಳ ನೂರಾರು ಮಂದಿ ಬಂದು, ಇಲ್ಲಿ ಒಂದು ವಾರಕ್ಕೂ ಹೆಚ್ಚು ಸಮಯ ಇದ್ದು ಹೋಗಿದ್ದಾರೆ. ಆ ಮೂಲಕ ತಮ್ಮ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಪಡೆದಿದ್ದಾರೆ.  ನಂತರ ‘ದಿಸ್ ಇಸ್ ರಿಯಲ್ ಇಂಡಿಯಾ’. ‘ಈ ಕೇಂದ್ರದಲ್ಲಿ ಸ್ಥಳೀಯರೊಂದಿಗೆ ಸಂಪಹನ ನಡೆಸಿ, ಸಂಸ್ಕೃತಿಯ ಬಗ್ಗೆ ತಿಳಿಯಲು ಸಹಾಯಕವಾಗಿದೆ’ ಎಂಬ ಫೀಡ್‌ಬ್ಯಾಕ್ ನೀಡಿದ್ದಾರೆ. ವಿದೇಶಿ ವೈದ್ಯರೊಬ್ಬರು ಪುನರ್ವಸತಿ ಕೇಂದ್ರದ ಅಂಗವಿಕಲ ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರೆ.

ಬುದ್ಧಿಮಾಂದ್ಯರಿಗೆ ಪುನರ್ವಸತಿ, ಮಹಿಳಾ ಸಬಲೀಕರಣ ಕೇವಲ ವಿದೇಶಿಯರಿಗೆ ಯೋಗ, ಧ್ಯಾನ ಕಲಿಸಿದರೆ ತಮ್ಮ ಕರ್ತವ್ಯ ಮುಗಿಯುವುದಿಲ್ಲ ಎಂದು ಭಾವಿಸಿರುವ ಕಿರಣ್ ರಾವಂದೂರಿನ ಸುತ್ತಮುತ್ತಲಿನ ಗ್ರಾಮಗಳ ಬುದ್ಧಿಮಾಂದ್ಯರಿಗಾಗಿ ಪುನರ್ವಸತಿ ಕೇಂದ್ರವನ್ನು ನಡೆಸುತ್ತಿದ್ದಾರೆ. ಅಲ್ಲಿ ಅಂಗವಿಕಲ ಮಕ್ಕಳಿಗೆ ಕಲಿಕೆಯ ಜೊತೆಗೆ ಥೆರಪಿ ನೀಡುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಹೊಲಿಗೆ ಮತ್ತಿತರ ತರಬೇತಿ ನೀಡುತ್ತಿದ್ದಾರೆ.