Asianet Suvarna News Asianet Suvarna News

ಆಗ ಆ್ಯಂಬುಲೆನ್ಸ್ ಚಾಲಕಿ, ಈಗ 15 ಆ್ಯಂಬುಲೆನ್ಸ್ ಒಡತಿ

ಒಂಟಿ ಮಹಿಳೆಯೊಬ್ಬರು ಹಗಲು ರಾತ್ರಿ ಎನ್ನದೇ, ಮಳೆ-ಗಾಳಿ, ಬಿಸಿಲು ಎನ್ನದೇ ಇಬ್ಬರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ತೀರಿಕೊಂಡ ಪತಿಯ ವೃತ್ತಿಯನ್ನು, ಅವರ  ಆಸೆ ಕನಸುಗಳನ್ನು ಈಡೇರಿಸುವುದು ಸುಲಭದ  ಮಾತಲ್ಲ. ಅದೊಂದು ದೊಡ್ಡ ಸಾಹಸ. ಆ ಸಾಹಸದ  ಅಲೆಯಲ್ಲಿ ಸವಾಲಿನ ಸುಳಿಗಳನ್ನು ದಾಟಿ ಬಂದು  ನಿಂತಿರುವ ಇವರು ರಾಧಿಕಾ.

Ambulance Driver Radhika  heartrending story

ಇಬ್ಬರು ಹೆಣ್ಣು ಮಕ್ಕಳು ಮತ್ತು ಪತಿ ಸುರೇಶ್ ಜೊತೆಗೆ ನೆಮ್ಮದಿಯಿಂದ ಸಂಸಾರ ನಡೆಸುತ್ತಿದ್ದ ರಾಧಿಕಾ ಬದುಕಿನಲ್ಲಿ ಒಂದು ಹಂತದಲ್ಲಿ ಬಿರುಗಾಳಿಯೊಂದು ಎದುರಾಗುತ್ತದೆ. ಅದು ಪತಿಗೆ ಬಂದ ಕ್ಯಾನ್ಸರ್. ತೀವ್ರ ಸ್ವರೂಪ ಪಡೆದುಕೊಂಡ ಕಾಯಿಲೆ ವಾಸಿಗಾಗಿ ಮಾಡಿದ ಪ್ರಯತ್ನದಿಂದ ಕೈಯಲ್ಲಿದ್ದ ಕಾಸೆಲ್ಲಾ ಖಾಲಿಯಾಗಿ ಮೈ ತುಂಬ ಸಾಲವಾಯಿತು. ಇತ್ತ ಪತಿಯೂ ಉಳಿಯಲಿಲ್ಲ, ಬದುಕಲೂ ಸಾಧ್ಯವಾಗದಂತಹ ಪರಿಸ್ಥಿತಿ ಏರ್ಪಟ್ಟಿತು. ಆಗ ನೆರವಿಗೆ ಬಂದದ್ದು ಪತಿ ಮಾಡುತ್ತಿದ್ದ ಆ್ಯಂಬುಲೆನ್ಸ್ ವೃತ್ತಿ ಮತ್ತು ಪತಿ ಸುರೇಶ್ ಅವರೇ ಕಲಿಸಿಕೊಟ್ಟಿದ್ದ ಡ್ರೈವಿಂಗ್.

ಪತಿಯ ಕೆಲಸವನ್ನೇ ಮುಂದುವರೆಸುವೆ
‘ನನ್ನ ಯಜಮಾನರು ತೀರಿಕೊಂಡಾಗ ನಮಗೆ ಮೈ ತುಂಬಾ ಸಾಲ ಇತ್ತು. ಇಬ್ಬರು ಹೆಣ್ಣು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯೂ ನನ್ನ ಹೆಗಲ ಮೇಲಿತ್ತು. ಆದರೆ ಏನು ಮಾಡಬೇಕು ಎಂದು ದಾರಿ ಕಾಣದೇ ಕುಳಿತಿದ್ದೆ. ಈ ಜೀವನವೇ ಸಾಕು ಎನ್ನಿಸಿಬಿಟ್ಟಿತ್ತು. ಆದರೆ ಏನು ಮಾಡುವುದು ನನಗಾಗಿ ಅಲ್ಲದೇ ಇದ್ದರೂ ನನ್ನ ಮಕ್ಕಳಿಗಾಗಿ, ಅವರ ಭವಿಷ್ಯಕ್ಕಾದರೂ ದುಡಿಯಬೇಕಲ್ಲವೇ ಎಂದುಕೊಂಡು ನನ್ನ ಯಜಮಾನರು ಮಾಡುತ್ತಿದ್ದ ಆ್ಯಂಬುಲೆನ್ಸ್ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡೆ. ಆಗ ನಾನೊಬ್ಬ ಮಹಿಳೆ ಎನ್ನುವ ಕಾರಣಕ್ಕಾಗಿ ಸಾಕಷ್ಟು ಸವಾಲುಗಳು ಎದುರಾದವು. ಸ್ವತಃ ಆ್ಯಂಬುಲೆನ್ಸ್ ಚಾಲಕರು, ಆಸ್ಪತ್ರೆಯ ಸಿಬ್ಬಂದಿ ನೀವು ಈ ಕೆಲಸ ಮಾಡುವುದು ಸೂಕ್ತವಲ್ಲ ಎಂದರು.

ಆದರೆ ನನಗೆ ಅದನ್ನು ಬಿಟ್ಟು ಬೇರೆ ಕೆಲಸ ಮಾಡಲು ಆಸಕ್ತಿ ಬರಲಿಲ್ಲ. ಏನೇ ಸವಾಲುಗಳು ಬಂದರೂ ಸರಿಯೇ ನಾನಿದನ್ನು ಮಾಡಿಯೇ ತೀರುತ್ತೇನೆ ಎಂದು ನಿರ್ಧಾರ ಮಾಡಿ ಸತತ ಹದಿನೇಳು ವರ್ಷಗಳ ಕಾಲ ಬೆಳಿಗ್ಗೆ ಏಳು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೂ ಕೆಲಸ ಮಾಡುತ್ತಾ ಬಂದೆ. ಅದರ ಪರಿಣಾಮ ಇಂದು ಹದಿನೈದು ಆ್ಯಂಬುಲೆನ್ಸ್‌ಗಳ ಒಡತಿಯಾಗಿದ್ದೇನೆ’ ಎಂದು ತಮ್ಮ ಜರ್ನಿಯ ವಿವರ ತೆರೆದಿಡುವ ರಾಧಿಕಾ ಅವರ ಬದುಕು ಇಂದಿನ ಯುವಕ, ಯುವತಿಯರಿಗೆ ಸ್ಪೂರ್ತಿಯ ಸೆಲೆ.

ಒಂದಿಡೀ ರಾತ್ರಿ ಆ ಕಾಡಿನಲ್ಲಿ ಕಳೆದಿದ್ದೆ

‘ಈವಾಗ ಏನೇ ಕೆಲಸ ಮಾಡುತ್ತೇನೆ ಎಂದು ಹೊರಟರೂ ಅದು ಸುಲಭ. ಆದರೆ ಹದಿನೈದು ವರ್ಷಗಳ ಹಿಂದೆ ಹೀಗೆ ಇರಲಿಲ್ಲ. ಅದರಲ್ಲಿಯೂ ಒಂಟಿ ಮಹಿಳೆ  ಆ್ಯಂಬುಲೆನ್ಸ್ ಓಡಿಸುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಮೊದಲ ಎರಡು ವರ್ಷ ನನ್ನ ಜೀವವನ್ನು ಕೈಲಿ ಹಿಡಿದುಕೊಂಡು ಕೆಲಸ ಮಾಡಿದೆ. ಮಹಿಳೆ ಎನ್ನುವ ಕಾರಣಕ್ಕೆ ಹೆಚ್ಚಿನವರು ನನ್ನ ಮೇಲೆ ವಿಶ್ವಾಸವಿಡುತ್ತಿರಲಿಲ್ಲ. ಆಗ ಬೆಳಿಗ್ಗೆ ಆಸ್ಪತ್ರೆಗಳ ಬಳಿಗೆ ಹೋಗಿ ರೋಗಿಗಳನ್ನು ನೋಡಿಕೊಳ್ಳುವುದು, ಅವರಲ್ಲಿ ನನ್ನ ಬಗ್ಗೆ ವಿಶ್ವಾಸ  ಮೂಡಿಸುವ ಕೆಲಸ ಮಾಡುತ್ತಿದ್ದೆ.

ಒಂದು ಘಟನೆ ನನ್ನ ಜೀವನದಲ್ಲಿ ದೊಡ್ಡ ಗಟ್ಟಿತನವನ್ನು ತಂದುಕೊಟ್ಟಿತು. ಕಾರ್ಕಳದ ಹಳ್ಳಿಯೊಂದಕ್ಕೆ ರಾತ್ರಿ ವೇಳೆಯಲ್ಲಿ ಶವವೊಂದನ್ನು ತೆಗೆದುಕೊಂಡು ಹೋಗಿದ್ದೆ. ಅಲ್ಲಿಗೆ ತಲುಪುವ ವೇಳೆಗೆ ರಾತ್ರಿ  ಹನ್ನೆರಡಾಗಿತ್ತು. ಅವರ ಮನೆಗೆ ಸೇತುವೆ ಮೇಲೆ ಹೋಗಬೇಕಿದ್ದರಿಂದ ಸ್ಟ್ರೆಚ್ಚರ್ ತೆಗೆದುಕೊಂಡು ಹೋಗಿದ್ದರು. ಅವರ ವಾಪಸ್ ಬರುವವರೆಗೂ ನಾನೊಬ್ಬಳೇ ಆ  ಯಾರೂ ಇಲ್ಲದ ಪ್ರದೇಶದಲ್ಲಿ ಒಂಟಿಯಾಗಿಯೇ ಇದ್ದೆ. ಸುತ್ತಲೂ ಏನೇನೋ ಶಬ್ದ, ಸರ‌್ರನೆ ಏನೋ ಹೋದಂತೆ ಅಕ್ಷರಶಃ ನಾನು ಆಗ ತುಂಬಾ ಭಯಪಟ್ಟಿದ್ದೆ.

ನನ್ನೊಬ್ಬಳನ್ನೇ ಬಿಟ್ಟು ಹೋದ ಅವರಿಗೆಲ್ಲಾ ಸ್ವಲ್ಪವೂ ಕರುಣೆಯೇ ಇಲ್ಲವೇ ಎಂದು ಬೈದುಕೊಂಡೆ. ಆಮೇಲೆ ಅವರ ಕಷ್ಟ ಅವರಿಗೆ ಪಾಪ ಎಂದುಕೊಂಡು ಸುಮ್ಮನಾದೆ. ರಾತ್ರಿ ಮೂರು ಗಂಟೆಗೆ ಅವರು ಬಂದರು. ನನ್ನನ್ನು ಒಬ್ಬಳನ್ನೇ ಬಿಟ್ಟು ಹೋದದ್ದಕ್ಕೆ  ಕ್ಷಮೆ ಕೇಳಿ ಮೇನ್ ರೋಡ್‌ವರೆಗೂ ಜೊತೆಗೆ ಬರುತ್ತೇವೆ ಎಂದೂ ಹೇಳಿದರು. ಆದರೆ ಅಷ್ಟರಲ್ಲಿ ನಾನು ತುಸು ಗಟ್ಟಿಯಾಗಿದ್ದೆ. ಬೇಡ ಇದುವರೆಗೂ ದೇವರು ಕಾಪಾಡಿದ್ದಾನೆ. ಮುಂದೆಯೂ ಅವನೇ ಕಾಪಾಡುತ್ತಾನೆ ಎಂದುಕೊಂಡು ಗೊತ್ತಿಲ್ಲದ ಆ ದಾರಿಯಲ್ಲಿ  ಒಬ್ಬಳೇ ಬಂದೆ. ಆವಾಗಿನಿಂದ ನನ್ನಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಯಿತು’ ಎಂದು ತಾವು ಎದುರಿಸಿದ ಸವಾಲುಗಳನ್ನು ತೆರೆದಿಡುತ್ತಾರೆ ರಾಧಿಕಾ.

ಜೀವನಕ್ಕೆ ಆಯಿತು, ಈಗೇನಿದ್ದರೂ ಸಮಾಜಕ್ಕೆ

‘ಮೊದ ಮೊದಲು ನನಗೆ ಈ ಕೆಲಸ ಮಾಡಲು ಸಾಕಷ್ಟು ತೊಂದರೆಗಳಿದ್ದದ್ದು ನಿಜ. ಅದೇ ರೀತಿ ನನಗೆ ಪ್ರೋತ್ಸಾಹ ಮಾಡಿದವರೂ ಸಾಕಷ್ಟಿದ್ದಾರೆ. ನನ್ನ ತಾಯಿ, ಸಂಬಂಧಿಗಳು, ಸ್ನೇಹಿತರು ಸಾಕಷ್ಟು ಸಹಾಯ ಮಾಡಿದ್ದಾರೆ. ನನ್ನ ಮೇಲೆ ನಂಬಿಕೆ ಇಷ್ಟರ ಮಟ್ಟಕ್ಕೆ ಬೆಳೆಸಿದ್ದಾರೆ. ಹಾಗಾಗಿ ಈಗ ನನ್ನ ಜೀವನಕ್ಕೆ ಯಾವುದೇ ತೊಂದರೆ ಇಲ್ಲ. ಮೂರು ಹೊತ್ತು ಊಟಕ್ಕೆ, ನೆಮ್ಮದಿಯ ಜೀವನಕ್ಕೆ ಸಾಕಾಗುವಷ್ಟು ಸಂಪತ್ತಿದೆ. ಆದರೆ ನನಗೆ ಪ್ರೋತ್ಸಾಹ ನೀಡಿದ ಸಮಾಜಕ್ಕೆ ಏನಾದರೂ ಮಾಡಬೇಕು. ಯಾವುದೇ ರೋಗಿಗೂ ಸೂಕ್ತ ಸಂದರ್ಭದಲ್ಲಿ ಸೂಕ್ತ ಸೇವೆ ಮಿಸ್ ಆಗಬಾರದು ಎನ್ನುವ ಕಾರಣಕ್ಕಾಗಿಯೇ ಆ್ಯಂಬುಲೆನ್ಸ್, ವೆಂಟಿಲೇಟರ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತಾ ಬಂದಿದ್ದೇನೆ. ಒಂದು ಸಲ ವೆಂಟಿಲೇಟರ್ ಸಮಸ್ಯೆಯಾಗಿ ರೋಗಿಗೆ ತುಂಬಾ ಸಮಸ್ಯೆಯಾಯಿತು.

ಆಗ ನನಗೆ ಅನ್ನಿಸಿದ್ದು ಛೇ, ನನ್ನಿಂದಲೇ ಅವರಿಗೆ ತೊಂದರೆಯಾಗಿದ್ದು ಎನ್ನಿಸಿ ಮುಂದೆ ಈ ರೀತಿಯ ಸಮಸ್ಯೆಯಾಗಲೇ ಬಾರದು ಎಂದು ನಿರ್ಧಾರ ಮಾಡಿದೆ. ಯಾವುದೇ ಸಮಯದಲ್ಲಿ ಯಾರೇ ಎಲ್ಲಿಗೇ ಕರೆದರೂ ಹೋಗಿ ಸೇವೆ ನೀಡುತ್ತಾ ಬಂದಿದ್ದೇವೆ’ ಎನ್ನುವ ರಾಧಿಕಾ ಅವರು ತೀರಾ ಬಡವರಿಗೆ ಉಚಿತವಾಗಿ ಸೇವೆ ನೀಡುವುದರ ಜೊತೆಗೆ ಅಸಹಾಯಕ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡುತ್ತಾ ಬಂದಿದ್ದಾರೆ. ಅವರೊಂದಿಗೆ ನೀವೂ ಮಾತನಾಡಿ ದೂ: 9448117755
 

Follow Us:
Download App:
  • android
  • ios