ಮಹಾಭಾರತ ನಮ್ಮ ನೆಲದ ಅತ್ಯುತ್ತಮ ಕೃತಿಗಳಲ್ಲೊಂದು. ಕೌರವ ಪಾಂಡವರ ಆ ವೈರತ್ವ, ಕುರುಕ್ಷೇತ್ರ ಯುದ್ಧ, ಭಗವದ್ಗೀತೆ ಎಲ್ಲವೂ ಹಿಂದೂಗಳ ಮನೆಮನೆಯಲ್ಲೂ ದಿನಂಪ್ರತಿ ಮಾತು, ಗಾದೆ, ಸಂಸ್ಕೃತಿ, ಕತೆ ಇತ್ಯಾದಿ ರೂಪಗಳಲ್ಲಿ ಮಿಳಿತವಾಗಿಯೇ ಇರುತ್ತದೆ. ಈ ಮಹಾಭಾರತದ ಅತಿ ಜನಪ್ರಿಯ ಪಾತ್ರ, ಹಾಗೆಯೇ ಮುಖ್ಯ ವಿಲನ್ ಪಾತ್ರ ದುರ್ಯೋಧನನದು. ಬಾಲ್ಯದಿಂದಲೂ ಪಾಂಡವರ ಮೇಲೆ ಹಗೆ ಸಾಧಿಸುತ್ತಲೇ ಬಂದ ದುರ್ಯೋಧನ ಯಾರನ್ನೂ ಗೌರವಿಸುತ್ತಿರಲಿಲ್ಲ, ಹೊಟ್ಟೆಕಿಚ್ಚು ಹಾಗೂ ಅಧಿಕಾರದ ದುರಾಸೆಯ ಬುದ್ಧಿಯವ ಎಂಬುದು ಬಹುತೇಕರು ತಿಳಿದಿರುವ ವಿಷಯ. 

ಸದಾ ಕ್ರೂರ ಪಾತ್ರವಾಗಿಯೇ ಪೋಷಿತವಾಗಿ ಬಂದಿರುವ ದುರ್ಯೋಧನನ ಬಗ್ಗೆ ನೀವು ಹೆಚ್ಚು ಕೇಳಿಲ್ಲದ ವಿಷಯಗಳು ಇಲ್ಲಿವೆ. ಆನಂದ್ ನೀಲಕಂಠನ್ ಬರೆದ 'ಅಜಯ' ಪುಸ್ತಕದ ಪ್ರಕಾರ ದುರ್ಯೋಧನನ ಇತರೆ ಗುಣಲಕ್ಷಣಗಳು, ವಿಷಯಗಳನ್ನು ತಿಳಿದರೆ ಆಶ್ಚರ್ಯವಾದೀತು. ಕೇರಳದಲ್ಲಿ ದುರ್ಯೋಧನಿಗೊಂದು ದೇವಸ್ಥಾನ ಕೂಡಾ ಇದೆ ಎಂಬಂಥ ಆಶ್ಚರ್ಯಕರ ವಿಷಯಗಳನ್ನು ಲೇಖಕರು ತಿಳಿಸಿದ್ದಾರೆ. 

ಹ್ಯಾಂಡ್‌ಸಮ್ ಹಂಕ್ 
ಹಸ್ತಿನಾಪುರ ಆಳುತ್ತಿದ್ದ ಕೌರವರ ಮೊದಲ ರಾಜಕುಮಾರ ದುರ್ಯೋಧನ ಬಹಳ ಚೆಲುವ. ಬಲರಾಮನೊಂದಿಗೆ ಹಸ್ತಿನಾಪುರಕ್ಕೆ ಹೋಗಿದ್ದ ಕೃಷ್ಣ, ಬಲರಾಮರ ಸಹೋದರಿ ಸುಭದ್ರಾ ದುರ್ಯೋಧನನನ್ನು ನೋಡುತ್ತಲೇ ಆತನನ್ನು ಪ್ರೀತಿಸತೊಡಗಿದಳು. ಆದರೆ, ಕರ್ಣನನ್ನು ಗೆಳೆಯನನ್ನಾಗಿಸಿಕೊಂಡ ದುರ್ಯೋಧನ ಆತನಿಗೆ ಬೆಂಬಲ ಕೊಡುತ್ತಲೇ ಹಲವಷ್ಟು ಸಂಗತಿಗಳು ಬದಲಾಗಬೇಕಾಯಿತು. 

ಇಂದ್ರಾಸನ ಕೋರಲು ಹೋಗಿ ನಿದ್ರಾಸನ ವರ ಬೇಡಿದ ಕುಂಭಕರ್ಣ!

ಸಮಾಜದ ಕಟ್ಟಳೆಗೆ ಸವಾಲು
ದುರ್ಯೋಧನನನ್ನು ಹೀರೋವಾಗಿಸುವ ಗುಣವಿದು. ಆತ ಸಮಾಜದ ಕಟ್ಟುಪಾಡುಗಳು, ಅಸಮಾನತೆಯನ್ನು ಆಗಲೇ ಪ್ರಶ್ನಿಸಿದ್ದ. ಜಾತಿಯಾಧಾರಿತ ವಿಂಗಡಣೆ ಹಾಗೂ ಕೆಲ ವರ್ಗದ ಜನರನ್ನು ಕೀಳಾಗಿ ನೋಡುವ ಬಗ್ಗೆ ಆತನ ವಿರೋಧವಿತ್ತು. ಸಮಾಜವನ್ನು ಬದಲಾಯಿಸುವಂಥ ಸುಧಾರಣೆಗಳನನ್ನು ತಂದು ಸಮಾನ ಸಮಾಜ ತರಬೇಕೆಂಬ ಆಶಯ ಆತನದಾಗಿತ್ತು. ಇದೇ ಕಾರಣಕ್ಕೆ ದ್ರೋಣಾಚಾರ್ಯರ ಸಹೋದರನಾದರೂ, ಜಾತಿ ವಿಂಗಡಣೆ, ಅಸಮಾನತೆ ವಿರುದ್ಧ ಪ್ರಶ್ನೆ ಎತ್ತುತ್ತಿದ್ದ ಬ್ರಾಹ್ಣಣ ಕೃಪಾ ದುರ್ಯೋಧನನ ಗೆಳೆಯನಾಗಿದ್ದ. 

ದ್ರೋಣಾಚಾರ್ಯರಿಂದ ನಿರ್ಲಕ್ಷ್ಯ
ಗುರುಕುಲದಲ್ಲಿ ಅಧಿಕಾರ ಹಾಗೂ ಪ್ರತಿಭೆ ಬಗ್ಗೆ ಸೂಕ್ಷ್ಮ ಪ್ರಶ್ನೆಗಳನ್ನು ಕೇಳುತ್ತಿದ್ದ ಕಾರಣಕ್ಕಾಗಿ ದುರ್ಯೋಧನನ್ನು ಕಡೆಗಣಿಸಿದ್ದ ದ್ರೋಣಾಚಾರ್ಯರು, ಸದಾ ಆತನ ಬಗ್ಗೆ ಭೀಷ್ಮರಲ್ಲಿ ದೂರುಗಳನ್ನು ಹೇಳುತ್ತಲೇ ಇರುತ್ತಿದ್ದರು. 

ಪ್ರತಿಭೆಗೆ ಗೌರವ
ಕೆಳವರ್ಗದವರಲ್ಲಿ ಪ್ರತಿಭೆ ಇದ್ದರೂ ಅವರ ಜಾತಿಯ ಕಾರಣಕ್ಕಾಗಿ ಕಡೆಗಣಿಸುವ ಬಗ್ಗೆ ದುರ್ಯೋಧನ ಕೋಪಗೊಳ್ಳುತ್ತಿದ್ದ. ಏಕಲವ್ಯ ಬೇಟೆಗಾರನೆಂಬ ಕಾರಣಕ್ಕೆ ಆತನಿಗೆ ಬಿಲ್ವಿದ್ಯೆ ಕಲಿಸಲು ನಿರಾಕರಿಸಿದ ದ್ರೋಣಾಚಾರ್ಯರ ಬಗ್ಗೆ ಆತನಲ್ಲಿ ಸಿಟ್ಟಿತ್ತು. 

ಪ್ರೀತಿಯ ಬಗ್ಗೆ ನಿಲುವು
ದೂರದ ಮರದಲ್ಲಿ ಏನು ಕಾಣುತ್ತಿದೆ ಎಂದು ದ್ರೋಣರು ತಮ್ಮ ವಿದ್ಯಾರ್ಥಿಗಳನ್ನು ಕೇಳಿದಾಗ ಅರ್ಜುನನ ಜಾಣ ಉತ್ತರ ಪ್ರಶಂಸೆ ಗಳಿಸಿದ್ದು ಗೊತ್ತೇ ಇದೆ. ಗುರಿಯ ಹೊರತಾಗಿ ಅರ್ಜುನನಿಗೆ ಬೇರೇನೂ ಕಾಣಿಸುತ್ತಿರಲಿಲ್ಲ. ಆದರೆ, ದುರ್ಯೋಧನನಿಗೆ ಅಲ್ಲಿ ಪ್ರೀತಿ ಕಾಣಿಸಿತ್ತು. ವಿದ್ಯೆ ಕಲಿವ ಸಲುವಾಗಿ ಪಾಪದ ಪಾರಿವಾಳವನ್ನು ಕೊಲ್ಲುವುದು ಆತನಿಗೆ ಇಷ್ಟವಿರಲಿಲ್ಲ. 

ಕಡೆಗಣಿಸಲ್ಪಟ್ಟವರ ಪರ
ಅಧಿಕಾರದಲ್ಲಿರುವವರಿಂದ ಕಡೆಗಣನೆಗೆ ಒಳಗಾದವರ ಪರ ದುರ್ಯೋಧನ ನಿಲ್ಲುತ್ತಿದ್ದ. ಅದೇ ಕಾರಣಕ್ಕೆ ಭೀಷ್ಮರಿಗೆ ದುರ್ಯೋಧನನ ಮೇಲೆ ಹೆಚ್ಚಿನ ಪ್ರೀತಿ ಇತ್ತು. ದುರ್ಯೋಧನ ಕೂಡಾ ಸದಾ ಭೀಷ್ಮರನ್ನು ಗೌರವಿಸುತ್ತಾ, ಅವರ ಮಾತುಗಳಿಗೆ ಬೆಲೆ ಕೊಡುತ್ತಿದ್ದ. 

ರಾಮನ ಅಕ್ಕ ಶಾಂತಾ ಕಿಗ್ಗ ಋಷ್ಯಶೃಂಗರ ಮಡದಿ ಎಂಬುವುದು ಗೊತ್ತಾ?

ಗದಾಯುಧ ಪರಿಣತ
ಕೃಷ್ಣನ ಅಣ್ಣ ಬಲರಾಮನೇ ದುರ್ಯೋಧನನಿಗೆ ಗದೆಯಲ್ಲಿ ಹೋರಾಡುವುದು ಕಲಿಸಿದ್ದು. ಈ ವಿದ್ಯೆಯಲ್ಲಿ ದುರ್ಯೋಧನ ಪರಿಣತಿ ಹೊಂದಿದ್ದ. ಕಿರೀಟಧಾರಣೆ ಸಂದರ್ಭದಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಾಗ ದುರ್ಯೋಧನನು ಭೀಮನ ಸಮನಾಗಿ ಗದೆಯೊಂದಿಗೆ ಹೋರಾಡಿದ್ದ. 

ಕರ್ಣನ ಏಕೈಕ ಗೆಳೆಯ
ಕಿರೀಟ ಧಾರಣೆ ಸಂದರ್ಭದಲ್ಲಿ ಕರ್ಣ ಕೆಳ ಜಾತಿಯವನೆಂದು ಬ್ರಾಹ್ಮಣರೆಲ್ಲ ಅವನನ್ನು ಅವಮಾನಿಸಿದರು. ಆಗ ಕರ್ಣನನ್ನು ಪ್ರತಿಭೆಯಿಂದಾಗಿ ಗುರುತಿಸಬೇಕೆಂದು ನಿರ್ಧರಿಸಿದ ದುರ್ಯೋಧನ ಆತನನ್ನು ಅಂಗ ದೇಶದ ದೊರೆಯಾಗಿಸಿ ಅವಮಾನಿಸಿದವರಿಗೆ ಉತ್ತರ ನೀಡಿದ. 

"