Asianet Suvarna News Asianet Suvarna News

ಪ್ಲಾಸ್ಟಿಕ್ ಸರ್ಜರಿಗೆ ಬಲಿಯಾದ ನಟಿ: ಚಿಪ್ಸ್ ತಿಂದು ಮೃತಪಟ್ಟ ಬಾಲಕ: ಆಡೋ ವಯಸ್ಸಲ್ಲಿ ಸರ್ಜರಿ ಮಾಡಿದ ಹುಡುಗ

2023ರ ಸೆಪ್ಟೆಂಬರ್ ತಿಂಗಳಲ್ಲಿ ಜೀವನಶೈಲಿ,  ಸೆಲೆಬ್ರಿಟಿಗಳ ವಿಚ್ಛೇದನ, ಸಂಸಾರಿಕಾ ಕಲಹ, ಆರೋಗ್ಯ,  ಕೋರ್ಟ್ ತೀರ್ಪು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸುದ್ದಿಯಾಗಿ ಸಂಚಲನ ಸೃಷ್ಟಿಸಿದ ಕೆಲ ಮಹತ್ವದ ಸುದ್ದಿಗಳು ಇಲ್ಲಿವೆ.

Actress dies after plastic surgery Boy who died after eating chips 8 year old Boy who made surgery News which created buzz in year 2023 akb
Author
First Published Dec 15, 2023, 3:39 PM IST

ಇನ್ಮುಂದೆ ಮದುವೆಯಾದ ಒಂದೇ ವರ್ಷದೊಳಗೆ ಡಿವೋರ್ಸ್ ಕೊಡಬಹುದು; ಹೈಕೋರ್ಟ್‌

ದಂಪತಿ ಮದುವೆಯಾದ ಒಂದು ವರ್ಷದೊಳಗೆ ಡಿವೋರ್ಸ್ ಪಡೆಯಲು ಬಯಸಿದರೆ ಆ ಅರ್ಜಿಯನ್ನು ಪರಿಗಣಿಸಬಹುದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಪರಸ್ಪರ ಒಪ್ಪಿಗೆ ವಿಚ್ಛೇದನಕ್ಕಾಗಿ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ಉಲ್ಲೇಖಿಸಲಾದ ಒಂದು ವರ್ಷದ ಕೂಲಿಂಗ್ ಆಫ್ ಅವಧಿಯು ಕಡ್ಡಾಯವಲ್ಲ ಎಂದು ಹೇಳಿದೆ. ಪತಿ-ಪತ್ನಿ ದೂರವಾಗಲು ಪ್ರಜ್ಞಾಪೂರ್ವಕ ನಿರ್ಧಾರದ ಹೊರತಾಗಿಯೂ ದಂಪತಿಗಳು ಅನಗತ್ಯವಾಗಿ ಕಾಯುವಂತೆ ಮಾಡುವುದು ಅವರ ಸಂಕಟವನ್ನು ಹೆಚ್ಚಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 

ಜಿ20 ವಿಶೇಷ ಔತಣಕೂಟ, ಸೀರೆಯಲ್ಲಿ ಕಂಗೊಳಿಸಿದ ವಿದೇಶಿ ಗಣ್ಯರು!
ಜಿ20 ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣಕೂಟ ಆಯೋಜಿಸಿದ್ದರು. ಈ ವಿಶೇಷ ಔತಣಕೂಟಕ್ಕೆ ಜಪಾನ್ ಪ್ರಧಾನಿ ಪತ್ನಿ, ಮಾರಿಷಸ್ ಪ್ರಧಾನಿ ಪತ್ನಿ ಸೇರಿದಂತೆ ಹಲವು ವಿದೇಶಿ ಗಣ್ಯರು ಸೀರೆಯಟ್ಟುಆಗಮಿಸಿ ಗಮನಸೆಳೆದಿದ್ದರು

ಲಿಫ್ಟ್‌ ಬಾಗಿಲಿಗೆ ಸಿಲುಕಿದ ನಾಯಿಮರಿಯ ಬೆಲ್ಟ್‌: ಪುಟ್ಟ ಬಾಲಕನ ಚಾಣಾಕ್ಷತೆಯಿಂದ ಬದುಕುಳಿದ ನಾಯಿಮರಿ
ಲಿಫ್ಟ್‌ಗೆ ಸಿಲುಕಿದ ನಾಯಿಮರಿಯೊಂದನ್ನು ಪುಟ್ಟ ಬಾಲಕ ಸಮಯಪ್ರಜ್ಞೆಯಿಂದ ರಕ್ಷಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಬಾಲಕನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು.
 
ಆತ್ಮಹತ್ಯೆ ತಡೆಗೆ ಕ್ರಮ: ಬ್ರಿಟನ್‌ನಲ್ಲಿ ಪ್ಯಾರಾಸಿಟಮಲ್‌ ಮಾತ್ರೆ ಮಾರಾಟಕ್ಕೆ ಕಡಿವಾಣ
ಆತ್ಮಹತ್ಯೆ ಪ್ರಕರಣವನ್ನು ಇನ್ನಷ್ಟು ಇಳಿಸಲು ಮುಂದಾಗಿರುವ ಬ್ರಿಟನ್‌ ಸರ್ಕಾರ, ಈ ನಿಟ್ಟಿನಲ್ಲಿ ಮೆಡಿಕಲ್‌ ಶಾಪ್‌ಗಳಲ್ಲಿ ಪ್ಯಾರಸಿಟಮಲ್‌ ಒಳಗೊಂಡಿರುವ ಮಾತ್ರೆಗಳ ಮಾರಾಟಕ್ಕೆ ಮತ್ತಷ್ಟು ಕಡಿವಾಣ ಹಾಕಲು ಚಿಂತನೆ ನಡೆಸಿತ್ತು..  ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಮಾಣದಲ್ಲಿ ಅಧಿಕ ಪ್ರಮಾಣದಲ್ಲಿ ಪ್ಯಾರಸಿಟಮಲ್‌ ಮಾತ್ರೆ (paracetamol pills) ತಿನ್ನುವವರ ಪ್ರಮಾಣ ಹೆಚ್ಚಿದೆ. ಹೀಗಾಗಿ 2018ರಿಂದಲೇ ಒಬ್ಬ ವ್ಯಕ್ತಿಗೆ ಮೆಡಿಕಲ್‌ ಶಾಪ್‌ಗಳಲ್ಲಿ ಗರಿಷ್ಠ 2 ಶೀಟ್‌ (500 ಎಂಜಿಯ 16 ಮಾತ್ರೆ) ಮಾರಾಟ ಮಾಡಲು ಅವಕಾಶವಿದೆ. ಈ ಕಡಿವಾಣ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ಮಾರಾಟಕ್ಕೆ ಮತ್ತಷ್ಟು ಕಡಿವಾಣ ಹೇರುವ ಬಗ್ಗೆ ಬ್ರಿಟನ್ ಸರ್ಕಾರ ಮುಂದಾಗಿತ್ತು..

ಪ್ಲಾಸ್ಟಿಕ್ ಸರ್ಜರಿ ಎಡವಟ್ಟಿಗೆ ಬಲಿಯಾದ ಖ್ಯಾತ ನಟಿ ಸಿಲ್ವಿನಾ
ಪ್ರಮುಖವಾಗಿ ಸೆಲೆಬ್ರೆಟಿಗಳು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಹೆಚ್ಚು. ಮೂಗು, ತುಟಿ ಸೇರಿದಂತೆ ಸಂಪೂರ್ಣ ಮುಖವನ್ನೇ ಪ್ಲಾಸ್ಟಿಕ್ ಸರ್ಜರಿ ಮಾಡಿ ಮತ್ತಷ್ಟು ಸುಂದರವಾಗಿ ಕಾಣಲು ಹಂಬಲಿಸುತ್ತಾರೆ. ಇದೀಗ ಇದೇ ಪ್ಲಾಸ್ಟಿಕ್ ಸರ್ಜರಿಯಿಂದ ಖ್ಯಾತ ನಟಿ ಸಿಲ್ವಿನಾ ಮೃತಪಟ್ಟಿದ್ದಾರೆ. ಅರ್ಜಂಟೈನಾದ ಖ್ಯಾತ ನಟಿ, ಮಾಡೆಲ್ ಹಾಗೂ ಟಿವಿ ನಿರೂಪಕಿ ಸಿಲ್ವಿನಾ ಲೂನಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಬಳಿಕ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಬಿಟ್ಟಿದ್ದರು. 

ಭಾರತ-ಪಾಕ್ ಪಂದ್ಯದ ವೇಳೆ ಬೆಂಗಳೂರಿಗನಿಂದ 62 ಬಿರಿಯಾನಿ ಆರ್ಡರ್
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅದರ ಕ್ರೇಜ್ ಮುಗಿಲು ಮುಟ್ಟಿರುತ್ತದೆ. ಅದೇ ರೀತಿ ಸೆಪ್ಟೆಂಬರ್‌ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ವೇಳೆ ಬೆಂಗಳೂರಿನ ಸೂಪರ್ ಫ್ಯಾನ್ ಒಬ್ಬ ಏಕಕಾಲದಲ್ಲಿ 62 ಬಿರ್ಯಾನಿ ಆರ್ಡರ್ ಮಾಡುವ ಮೂಲಕ ಸುದ್ದಿಯಾಗಿದ್ದರು.  ಸೆಪ್ಟೆಂಬರ್ 02ರಂದು ಕೊಲಂಬೋದ ಪಲ್ಲೆಕೆಲೆ ಮೈದಾನದಲ್ಲಿ ಏಷ್ಯಾಕಪ್ ಟೂರ್ನಿಯ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. 

ಕೇರಳಕ್ಕೆ ಮತ್ತೆ ಕಾಲಿಟ್ಟ ನಿಫಾ ವೈರಸ್‌
ಸೆಪ್ಟೆಂಬರ್ ತಿಂಗಳಲ್ಲಿ ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಪ್ರಕರಣ ಕಂಡು ಬಂದಿತ್ತು. 2018ರಲ್ಲಿ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ನಿಫಾ ವೈರಸ್‌ ಹಾವಳಿ ಸೃಷ್ಟಿಸಿತ್ತು. ಕೇರಳದ ಕೋಜಿಕ್ಕೋಡ್‌ ಮತ್ತು ಮಲಪ್ಪುರಂ ಜಿಲ್ಲೆಗಳು  ಹೆಚ್ಚಾಗಿ ಹಾನಿಗೊಳಗಾಗಿದ್ದವು. ಆದರೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮತ್ತೆ ಕೇರಳದಲ್ಲಿ ಈ ಕಾಯಿಲೆ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿತ್ತು. 

ಖಾರದ, ಮಸಾಲೆ ಚಿಪ್ಸ್ ತಿಂದು ಕೊನೆಯುಸಿರೆಳೆದ ಬಾಲಕ
ಸಾಮಾಜಿಕ  ಜಾಲತಾಣದಲ್ಲಿ ದಿನಕ್ಕೊಂದು ಚಾಲೆಂಜ್ ನಡೆಯುತ್ತಿರುತ್ತದೆ. ಅದೇ ರೀತಿಯಲ್ಲಿ ಶುರುವಾದ ಒನ್  ಚಿಪ್ಸ್ ಚಾಲೆಂಜ್ ಸದ್ಯ ಸುದ್ದಿಯಲ್ಲಿದೆ. ಅಮೆರಿಕಾದಲ್ಲಿ ಒನ್ ಚಿಪ್ಸ್ ಚಾಲೆಂಜ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಅದೇ ರೀತಿ ಈ ಚಾಲೆಂಜ್‌ನಲ್ಲಿ ಖಾರದ ಚಿಪ್ಸ್ ತಿಂದ ಬಾಲಕನೋರ್ವ ಪ್ರಾಣ ಬಿಟ್ಟಿದ್ದಾನೆ. ಹ್ಯಾರಿಸ್ ವೊಲೊಬಾ ಮೃತ ಬಾಲಕ

ಆಟ ಆಡೋ ವಯಸ್ಸಲ್ಲಿ ಸರ್ಜರಿ ಮಾಡಿ ಸಕ್ಸಸ್ ಆದ ಬಾಲಕ
ಹಿಮಾಚಲ ಪ್ರದೇಶದ ನೂರ್‌ಪುರದ ಹುಡುಗನೊಬ್ಬ 8 ವರ್ಷದ ಸುಟ್ಟಗಾಯದ ವ್ಯಕ್ತಿಯ ಕೈಗೆ ಶಸ್ತ್ರಚಿಕಿತ್ಸೆ ನಡೆಸಿ ವ್ಯಾಪಕ ಗಮನ ಸೆಳೆದಿದ್ದಾನೆ.  ಅದು ತನ್ನ ಏಳನೇ ವಯಸ್ಸಿನಲ್ಲಿ ಅನ್ನೋದು ವಿಶೇಷ. ಈತನ ಹೆಸರು ಆಕ್ರಿತ್‌ ಪ್ರಾಣ್ ಜಸ್ವಾಲ್‌. ಬಾಲ್ಯದಲ್ಲಿ ಜಸ್ವಾಲ್ ಅವರ ಅಸಂಭವವಾದ ಬುದ್ಧಿವಂತಿಕೆ ಆತನಿಗೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತು.  ಏಕೆಂದರೆ ಆತ ಪೌರಾಣಿಕ ಓಪ್ರಾ ವಿನ್ಫ್ರೇ ಆಯೋಜಿಸಿದ ವಿಶ್ವ ಪ್ರಸಿದ್ಧ ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದ.

ಮನೆ ಕೆಲ್ಸದ ಜವಾಬ್ದಾರಿ ಕಂಪ್ಲೀಟ್ ಹೆಂಡ್ತೀದೆ ಅನ್ನೋ ಮನಸ್ಥಿತಿ ಬಿಟ್ಬಿಡಿ; ಕೋರ್ಟ್
ಆಧುನಿಕ ಸಮಾಜದಲ್ಲಿ ಪತಿ-ಪತ್ನಿಯರ (Husband-wife) ನಡುವೆ ಮನೆಯ ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್ ನೀಡಿದ  ತೀರ್ಪು ಸಂಚಲನ ಸೃಷ್ಟಿಸಿತ್ತು. ವಿಚ್ಛೇದನ (Divorce) ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್‌ ನ್ಯಾಯಮೂರ್ತಿಗಳಾದ ನಿತಿನ್ ಸಾಂಬ್ರೆ ಮತ್ತು ಶರ್ಮಿಳಾ ದೇಶಮುಖ್ ಅವರನ್ನೊಳಗೊಂಡ ಪೀಠ, 'ಆಧುನಿಕ ಸಮಾಜದಲ್ಲಿ ಮನೆಯ ಜವಾಬ್ದಾರಿಯ ಭಾರವನ್ನು ಪತಿ-ಪತ್ನಿ ಇಬ್ಬರೂ ಸಮಾನವಾಗಿ ಹೊರಬೇಕು,  ಮಹಿಳೆ ಮಾತ್ರ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳೇಕು ಎಂಬ ಹಿಂದಿನ ಕಾಲದ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ. ಧನಾತ್ಮಕ ಬದಲಾವಣೆಗೆ ಒಳಗಾಗಿ' ಎಂದು ಕಿವಿ ಮಾತು ಹೇಳಿದ್ದರು.

ಉತ್ತರ ಭಾರತದಲ್ಲಿ ಭೀಕರ ಉಣುಗು ಕಾಟ, ಒಟ್ಟು 14 ಮಂದಿ ಸಾವು, 700 ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ!
ಒಡಿಶಾದಲ್ಲಿ  ಉಣುಗು ಕಾಟ ಮತ್ತು ಪ್ರಾಣಿಗಳಿಂದ ಹರಡುವ ಕಾಯಿಲೆ ಉಲ್ಬಣಗೊಂಡಿತ್ತು. ಈ ಭೀಕರ ಸಾಂಕ್ರಾಮಿಕ ಕಾಯಿಲೆಗೆ  14 ಮಂದಿ ಸಾವನ್ನಪ್ಪಿದ್ದರು., 700 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಉಣುಗು ಕೀಟವು ದನಕರುಗಳು, ಎಮ್ಮೆ, ಕುರಿ,ನಾಯಿ, ಕೋಳಿ ಮುಂತಾದ ಸಾಕುಪ್ರಾಣಿಗಳ ರೋಮ, ಗರಿಗಳಿಗೆ ಕಚ್ಚಿಕೊಂಡಿದ್ದು ಅವುಗಳ ರಕ್ತಹೀರಿ ಬದುಕುತ್ತದೆ. ಇದನ್ನು ಉಣ್ಣಿ ಎಂದು ಕೂಡ ಕರೆಯುತ್ತಾರೆ.

ಇತಿಹಾಸದ ಪುಟ ಸೇರಿದ ಮುಂಬೈ ಡಬ್ಬಲ್ ಡೆಕ್ಕರ್ ಬಸ್‌

ಒಂದು ಕಾಲದಲ್ಲಿ ಮುಂಬೈ ಜನರ ಜೀವನಾಡಿ ಎನಿಸಿದ ಮುಂಬೈಯ ಲ್ಯಾಂಡ್ ಮಾರ್ಕ್ ಎನಿಸಿದ ಕೆಂಪು ಬಣ್ಣದ ಡಬ್ಬಲ್‌ ಡೆಕ್ಕರ್ ಬಸ್‌ಗೆ ಬೃಹನ್‌ ಮುಂಬೈ ಸಾರಿಗೆ ಇಲಾಖೆ ಗುಡ್‌ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಗುಡ್‌ ಬೈ ಹೇಳಿತ್ತು.  ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಜನ ಈ ಬಸ್‌ಗೆ ಭಾವಪೂರ್ಣ ವಿದಾಯ ಹೇಳಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ
ಸಲಿಂಗಕಾಮಿ ವಿವಾಹವನ್ನು ಭಾರತದಲ್ಲಿ ಕಾನೂನುಬದ್ಧವಾಗಿ ಗುರುತಿಸಲಾಗಿಲ್ಲ ಮತ್ತುಇದನ್ನು ನೋಂದಾಯಿಸಲಾಗುವುದಿಲ್ಲ. ಹೀಗಿದ್ದೂ ಹಲವಾರು ಮಂದಿ ಲಿವ್‌ ಇನ್ ರಿಲೇಶನ್‌ ಶಿಪ್‌ನಲ್ಲಿ ಇದ್ದಾರೆ. ಮತ್ತೆ ಕೆಲವರು ಶಾಸ್ತ್ರೋಕ್ತವಾಗಿ ಮದುವೆಯೂ ಆಗುತ್ತಿದ್ದಾರೆ. ಈ ಹಿಂದೆ ಕೋಲ್ಕತ್ತಾದಲ್ಲಿ ಸಲಿಂಗಕಾಮಿ ಜೋಡಿ ಅದ್ಧೂರಿ ಸಮಾರಂಭದಲ್ಲಿ ಮದುವೆಯಾಗಿದ್ದರು. ಅದೇ ರೀತಿ ಮುಂಬೈನ್‌ ಅವಿನಾಶ್‌ ಮತ್ತು ವರುಣ್‌ ಎಂಬವರು ಸಾಂಪ್ರದಾಯಿವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಸದಸ್ಯರು ಸಹ ಮದುವೆಯಲ್ಲಿ ಭಾಗಿಯಾಗಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ದಂಪತಿ ಮೈಯಲ್ಲಿ ವಾಸನೆ, ವಿಮಾನದಿಂದಲೇ ಕೆಳಗಿಳಿಸಿದ ಏರ್‌ಲೈನ್ಸ್!
ಅಮೆರಿಕನ್ ಏರ್ಲೈನ್ಸ್ ನಲ್ಲಿ ವಿಚಿತ್ರ ಘಟನೆ ನಡೆದಿದೆ. ಬೆವರಿನ ವಾಸನೆ ನೆಪ ಒಡ್ಡಿ ದಂಪತಿಗೆ ವಿಮಾನ ಪ್ರಯಾಣಕ್ಕೆ ಅನುಮತಿ ನೀಡದೇ ಅವರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಮಹಿಳೆ ದೇಹದಿಂದ ಕೆಟ್ಟ ಬೆವರು ವಾಸನೆ ಬರ್ತಾ ಇತ್ತು ಎನ್ನುವ ಕಾರಣ ಹೇಳಿ ವಿಮಾನ ಸಿಬ್ಬಂದಿ ದಂಪತಿಯನ್ನು ವಿಮಾನದಿಂದ ಕೆಳಗೆ ಇಳಿಸಿದ ಎನ್ನಲಾಗಿದೆ. ಈ ಘಟನೆ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ನಡೆದಿದೆ. ಅಮೆರಿಕನ್ ಏರ್ಲೈನ್ಸ್ ವಿರುದ್ಧ ದಂಪತಿ ದೂರು ದಾಖಲಿಸಿದ್ದಾರೆ. 

ಬ್ರೇಕಪ್​ಗೆ ಒಪ್ಪದಿದ್ದಕ್ಕೆ ಪ್ರಿಯಕರನ ಹತ್ಯೆ: ವಿಷ ನೀಡಿದ್ದ ಗ್ರೀಷ್ಮಾ ಕಾಟಕ್ಕೆ ಬೇಸತ್ತ ಕೈದಿಗಳು!
ಕೇರಳದ ಪರಸ್ಸಾಲ ಶರೋನ್ ಹತ್ಯೆ ಪ್ರಕರಣದ ಆರೋಪಿ ಗ್ರೀಷ್ಮಾ ಅವರನ್ನು ಅವರನ್ನು ಮತ್ತೊಂದು ಜೈಲಿಗೆ ಸ್ಥಳಾಂತರಿಸಲಾಗಿತ್ತು. ಕೇರಳದ ಅಟ್ಟಕುಳಂಗರ ಮಹಿಳಾ ಜೈಲಿನಲ್ಲಿದ್ದ ಗ್ರೀಷ್ಮಾ ಅವರನ್ನು ಮಾವೇಲಿಕ್ಕರ ವಿಶೇಷ ಜೈಲಿಗೆ ಸ್ಥಳಾಂತರಿಸಲಾಗಿದೆ.  ಸಹ ಕೈದಿಗಳ ದೂರಿನ ಮೇರೆಗೆ ಗ್ರೀಷ್ಮಾ ಸೇರಿದಂತೆ ಇಬ್ಬರು ಕೈದಿಗಳನ್ನು ಸ್ಥಳಾಂತರಿಸಲಾಗಿತ್ತು. ಈ ಪ್ರಕರಣದಲ್ಲಿ ಗ್ರೀಷ್ಮಾ ಬಂಧನವಾದಾಗಿನಿಂದ ಅಟ್ಟಕುಳಂಗರ ಜೈಲಿನಲ್ಲಿದ್ದರು ಎಂದು ತಿಳಿದುಬಂದಿದೆ. ಅಕ್ಟೋಬರ್ 14, 2022 ರಂದು ತಮಿಳುನಾಡಿನ ಪಲುಕಲ್‌ನಲ್ಲಿರುವ ತನ್ನ ಮನೆಯಲ್ಲಿ ಗ್ರೀಷ್ಮಾ ತನ್ನ ಪ್ರಿಯಕರ ಶರೋನ್‌ಗೆ ವಿಷವನ್ನು ನೀಡಿದ್ದರು. ಶರೋನ್‌ಗೆ ಅಸ್ವಸ್ಥತೆಯ ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಹಲವಾರು ದಿನಗಳ ಕಾಲ ಜೀವನದೊಂದಿಗೆ ಹೋರಾಡಿದ ನಂತರ ಶರೋನ್ ಅಕ್ಟೋಬರ್ 25 ರಂದು ನಿಧನರಾಗಿದ್ದರು.

ಮದುವೆಯಾದ ಶೇ.94 ಮಂದಿ ವಿಚ್ಛೇದನ, ಭಾರತದ ಡಿವೋರ್ಸ್ ರೇಟ್ ಎಷ್ಟಿದೆ?
ಸಂಬಂಧಕ್ಕೆ ಹೆಚ್ಚಿನ ಬೆಲೆ ಹಾಗೂ ಮೌಲ್ಯ ನೀಡುವ ಭಾರತದಲ್ಲಿ ಡಿವೋರ್ಸ್ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಆದರೆ ಪೋರ್ಚುಗಲ್‌ನಲ್ಲಿ ಮದುವೆಯಾದ ಶೇಕಡಾ 94 ರಷ್ಟು ಜೋಡಿ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ.  ಮೂಲಕ ವಿಶ್ವದ ಅತ್ಯಂತ ಗರಿಷ್ಠ ಡಿವೋರ್ಸ್ ಪ್ರಕರಣಗಳ ದೇಶ ಅನ್ನೋ ಕುಖ್ಯಾತಿಗೆ ಪೋರ್ಚುಗಲ್ ಪಾತ್ರವಾಗಿದೆ.

ಎಲಾನ್ ಮಸ್ಕ್ ಜೊತೆ ಅಕ್ರಮ ಸಂಬಂಧ, ಪತ್ನಿಗೆ ಡಿವೋರ್ಸ್ ಕೊಟ್ಟ ಗೂಗಲ್ ಸಹ ಸಂಸ್ಥಾಪಕ!
ಮತ್ತೊಂದು ಖ್ಯಾತನಾಮರ ಸಂಬಂಧ ಮುರಿದು ಬಿದ್ದಿದೆ. ಉದ್ಯಮಿ ಎಲಾನ್ ಮಸ್ಕ್ ಜೊತೆ ಅಫೇರ್ ಇಟ್ಟುಕೊಂಡ ಕಾರಣಕ್ಕೆ ಗೂಗಲ್ ಸಹ ಸಂಸ್ಥಾಪಕ ತನ್ನ ಪತ್ನಿಗೆ ಡಿವೋರ್ಸ್ ನೀಡಿದ್ದಾರೆ.  ಉದ್ಯಮಿ ಎಲಾನ್ ಮಸ್ಕ್ ಸೆಪ್ಟೆಂಬರ್‌ನಲ್ಲಿ ಮತ್ತೆ ಸುದ್ದಿಯಾಗಿದ್ದರು. ತನ್ನ ಪತ್ನಿಗೆ ಎಲಾನ್ ಮಸ್ಕ್ ಜೊತೆ ಅಫೇರ್ ಇದೆ ಅನ್ನೋ ಕಾರಣಕ್ಕೆ ಗೂಗಲ್ ಸಹ ಸಂಸ್ಥಾಪಕ ಸರ್ಗೆ ಬ್ರಿನ್ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಿದ್ದಾರೆ.  ಕೋರ್ಟ್ ಸರ್ಗೆ ಬ್ರಿನ್ ಹಾಗೂ ನಿಕೋಲ್ ಶನಹಾನ್ ಡಿವೋರ್ಸ್‌ಗೆ ಅಂಕಿತ ಹಾಕಿದೆ.

ತಮಿಳುನಾಡು ದೇಗುಲಕ್ಕಿನ್ನು ಮಹಿಳಾ ಅರ್ಚಕಿಯರು: ಪಿಇಟಿ ಯೋಜನೆಯಡಿ ಶಾಸ್ತ್ರ ಕಲಿತಿರುವ ಮಹಿಳೆಯರು
ದೇಶದ ಇತಹಾಸದಲ್ಲೇ ಇದೇ ಮೊದಲ ಬಾರಿಗೆ ತಮಿಳುನಾಡಿನ ಮೂವರು ಮಹಿಳೆಯರು ದೇವಾಲಯದ ಮಹಿಳಾ ಅರ್ಚಕರಾಗಿ ಸೇವೆ ಸಲ್ಲಿಸಲಿದ್ದಾರೆ. ಎಲ್ಲಾ ಜಾತಿಯ ಜನರು ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲು ಪಿಇಟಿ ಯೋಜನೆ ಜಾರಿಗೆ ತಂದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರ ಪಿಇಟಿ ಯೋಜನೆಯಡಿ (PET scheme) ಮೊದಲಿಗೆ 3 ಮಹಿಳೆಯರಿಗೆ ಅರ್ಚಕರಾಗುವ ಅವಕಾಶ ಕಲ್ಪಿಸಿದೆ. ಈಗಾಗಲೇ ಈ ಯೋಜನೆಯಡಿ ಹಲವಾರು ಜಾತಿಗಳಿಗೆ ಸೇರಿದ ಪುರುಷರು ಶಾಸ್ತ್ರಗಳನ್ನು ಕಲಿತು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೈಯಲ್ಲಿ ಮಗು ಹಿಡಿದುಕೊಂಡು ಕಚೇರಿಯಲ್ಲಿ ಕೆಲಸ; ದೇಶದ ಅತ್ಯಂತ ಕಿರಿಯ ಮೇಯರ್ ಫೋಟೋ ವೈರಲ್‌
ಹೆಣ್ಣು ಕಚೇರಿಗೆ ಹೋಗುವುದರ ಜೊತೆಗೇ ಕುಟುಂಬವನ್ನೂ ನಿರ್ವಹಿಸಬಲ್ಲಳು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಕೇರಳದ ಮೇಯರ್ ಆರ್ಯ ರಾಜೇಂದ್ರನ್ ಕಚೇರಿಯಲ್ಲಿ ತಮ್ಮ ಒಂದು ತಿಂಗಳ ಮಗುವಿನೊಂದಿಗೆ ಕೆಲಸ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ದೇಶದ ಅತ್ಯಂತ ಕಿರಿಯ ಮೇಯರ್ ಎಂದು ಗುರುತಿಸಿಕೊಂಡಿದ್ದಾರೆ. ಸದ್ಯ ಅವರು ಕಚೇರಿಯಲ್ಲಿ ಒಂದು ತಿಂಗಳ ಮಗುವನ್ನು ಕೈಯಲ್ಲಿ ಹಿಡಿದಿರುವ ಫೋಟೋ ವೈರಲ್ ಆಗಿದೆ.  ಆರ್ಯ ರಾಜೇಂದ್ರನ್‌, ಸೆಪ್ಟೆಂಬರ್ 2022ರಲ್ಲಿ ಕೇರಳ ಅಸೆಂಬ್ಲಿಯ ಕಿರಿಯ ಶಾಸಕ ಸಚಿನ್ ದೇವ್ ಅವರೊಂದಿಗೆ ವಿವಾಹವಾದರು. ಕಳೆದ ತಿಂಗಳು ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಲೋಕಸಭೆಯಲ್ಲಿ ಮಂಡನೆಯಾಯ್ತು ಮಹಿಳಾ ಮೀಸಲಾತಿ ಮಸೂದೆ
ಮೋದಿ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ಈ ಬೆನ್ನಲ್ಲೇ  ಈ ಮಹತ್ವದ ಬಿಲ್‌ ಮಂಡನೆ ಆಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ಲೋಕಸಭೆಯಲ್ಲಿ ಹೊಸ ಸಂಸತ್ ಭವನದಲ್ಲಿ ಮಂಡಿಸಿದರು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸೀಟುಗಳನ್ನು ಮೀಸಲಿಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ  ಅನುಮೋದನೆ ನೀಡಿತ್ತು.

26 ಬೆರಳುಗಳಿರುವ ಹೆಣ್ಣು ಮಗು ಜನನ: ಲಕ್ಷ್ಮಿಯ ಪ್ರತಿರೂಪವೆಂದ ಕುಟುಂಬ
26 ಬೆರಳುಗಳನ್ನು ಹೊಂದಿರುವ ಹೆಣ್ಣು ಮಗುವೊಂದು ರಾಜಸ್ಥಾನದಲ್ಲಿ ಜನಿಸಿದ್ದು, ಮಗುವಿನ ಕುಟುಂಬವು ಆಕೆ ದೇವಿಯ ಪ್ರತೀಕವೆಂದು ನಂಬಿದ್ದಾರೆ.  ರಾಜಸ್ಥಾನದ ಡೀಗ್‌ ಜಿಲ್ಲೆಯಲ್ಲಿ ಈ ರೀತಿ 26 ಬೆರಳುಗಳನ್ನು ಹೊಂದಿದ್ದ ಅಪರೂಪದ ಮಗು ಜನಿಸಿದೆ. 

ಎಲ್ಲಪ್ಪ ನಿಮ್ ಹೆಂಡ್ರು... ಎಲಾನ್ ಮಸ್ಕ್ ಕೇಳಿದ ಟರ್ಕಿ ಅಧ್ಯಕ್ಷ: ವೀಡಿಯೋ ವೈರಲ್
ಎಲಾನ್ ಮಸ್ಕ್‌ ಟರ್ಕಿಯ ಅಧ್ಯಕ್ಷರೊಂದಿಗೆ ಆಯೋಜಿಸಿದ್ದ ಸಭೆಗೆ ತಮ್ಮ ಪುಟ್ಟ ಕಂದನನ್ನು ಕರೆದುಕೊಂಡು ಬಂದು ಸುದ್ದಿಯಾಗಿದ್ದಾರೆ. ಈ ವೇಳೆ ಎಲಾನ್‌ ಮಸ್ಕ್‌ಗೆ ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ನಿಮ್ಮ ಹೆಂಡ್ತಿ ಎಲ್ಲಿ ಎಂದು ಕೇಳಿದ್ದು, ಎಲಾನ್ ಮಸ್ಕ್ ಹಾಗೂ ಟರ್ಕಿ ಅಧ್ಯಕ್ಷರ ವೀಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು

ಶಕ್ತಿ ಯೋಜನೆಗೆ 100 ದಿನದ ಸಂಭ್ರಮ: 62 ಕೋಟಿ ಮಹಿಳಾ ಪ್ರಯಾಣಕ್ಕೆ ಖರ್ಚಾದ ಹಣವೆಷ್ಟು ಗೊತ್ತಾ?
 ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಮೊಟ್ಟ ಮೊದಲನೆಯದಾಗಿ ಶಕ್ತಿ ಯೋಜನೆ (ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ) ಜಾರಿಗೊಳಿಸಿದ್ದು, ಸೆಪ್ಟೆಂಬರ್‌ನಲ್ಲಿ ಈ ಯೋಜನೆ 100 ದಿನಗಳನ್ನು ಪೂರೈಸಿತು. ಈ ಶಕ್ತಿ ಯೋಜನೆಯಡಿ 100 ದಿನದಲ್ಲಿ 62,55 ಕೋಟಿ ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಮಾಡಿದ್ದು, ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ 1,456 ಕೋಟಿ ರೂ.ಗೆ ತಲುಪಿದೆ.

ಒಂದೇ ವರ್ಷದಲ್ಲಿ 45 ಕೆಜಿ ತೂಕ ಇಳಿಸಿಕೊಂಡ ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ ಸಾವು
ಬ್ರೆಜಿಲ್‌ನ ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ ಮಹಿಳೆಯೊಬ್ಬರು ಒಂದೇ ವರ್ಷದಲ್ಲಿ 45 ಕೇಜಿ ತೂಕ ಇಳಿಸಿಕೊಂಡಿದ್ದು, ನಿಗೂಢವಾಗಿ ಸಾವನ್ನಪ್ಪಿದ್ದಾರೆ.  49 ವರ್ಷದ ಆಡ್ರಿಯಾನಾ ಥೈಸೆನ್ ಸಾವಿಗೀಡಾದವರು. ಇವರು ಕೇವಲ ಒಂದೇ ವರ್ಷದಲ್ಲಿ 45 ಕೇಜಿ ತೂಕ ಇಳಿಸಿಕೊಂಡು ಫೇಮಸ್ ಆಗಿದ್ದರು. ಇವರು ಸಾವಿಗೀಡಾಗಿರುವ ಬಗ್ಗೆ ಇವರ ಸೋದರ ಸಂಬಂಧಿ ಇನ್ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದರು.

70ರ ಅಜ್ಜಿಗೆ ಪಾಕಿಸ್ತಾನಿ ಯುವಕನ ಮೇಲೆ ಲವ್! ಕೊನೆಗೇನಾಯ್ತು?

32 ವರ್ಷದ ಪಾಕಿಸ್ತಾನಿ ವ್ಯಕ್ತಿ 70 ವರ್ಷದ ಕೆನಡಾ ಮಹಿಳೆ ಕೈ ಹಿಡಿದಿದ್ದಾನೆ. ಪ್ರೀತಿಗೆ ದೇಶ, ಭಾಷೆಯ ಮಿತಿಯಿಲ್ಲ. ವಯಸ್ಸಿನ ಅಂತರವೂ ಇದಕ್ಕಿಲ್ಲ. ಭಾಷೆ ಬರದ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಅನೇಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೀಮಾ ಹೈದರ್ ನಂತಹ ಪ್ರೇಮ ಪ್ರಕರಣಗಳು ಹೆಚ್ಚಾಗ್ತಿದೆ. ಪಾಕಿಸ್ತಾನದ ಸೀಮಾ ಹೈದರ್, ಭಾರತದ ಪ್ರೇಮಿಗಾಗಿ ಪಾಕಿಸ್ತಾನ ತೊರೆದಿದ್ದರೆ, ಅಂಜು ತನ್ನ ಪಾಕಿಸ್ತಾನಿ ಪ್ರೇಮಿಗಾಗಿ ಭಾರತ ಬಿಟ್ಟಿದ್ದಾಳೆ. ಈಗ ಇಂಥಹದ್ದೇ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. ಇದು ಮತ್ತಷ್ಟು ಭಿನ್ನವಾಗಿದೆ. ಇಲ್ಲಿ ದೇಶ ಒಂದೇ ಅಲ್ಲ ವಯಸ್ಸು ಕೂಡ ಪ್ರೀತಿ ಮುಂದೆ ಸೋತಿದೆ. ಪಾಕಿಸ್ತಾನದ ವ್ಯಕ್ತಿಯೊಬ್ಬ ಕೆನಡಾ ಮಹಿಳೆ ಪ್ರೀತಿಗೆ ಬಿದ್ದಿದ್ದಲ್ಲದೆ ಆಕೆಯನ್ನು ಮದುವೆಯಾಗಿದ್ದ. ಇಬ್ಬರ ಮಧ್ಯೆ ಇರುವ ವಯಸ್ಸಿನ ಅಂತರ ಇಲ್ಲಿ ಗಮನ ಸೆಳೆದಿದೆ. 

ಈ ರಾಜ್ಯದ ಪಾಲಾಯ್ತು ದೇಶದ ಮೊದಲ ಕೇಸರಿ ವಂದೇ ಭಾರತ್‌ ರೈಲು

ವಂದೇ ಭಾರತ್‌ ಮೊದಲ ಕೇಸರಿ ರೈಲು ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಯಾಗಿದ್ದು, ಅದು ಕೇರಳದ ಪಾಲಾಗಿದೆ. ಕೇರಳದ ಕಾಸರಗೋಡು - ತಿರುವನಂತಪುರಂ ಮಾರ್ಗದಲ್ಲಿ ಹೊಸ ಕೇಸರಿ ವಂದೇ ಭಾರತ್ ರೈಲು ಚಲಿಸುತ್ತಿದೆ. ಅದೇ ರೀತಿ ಸೆಪ್ಟೆಂಬರ್‌ನಲ್ಲಿಯೇ ಪ್ರಧಾನಿ ಮೋದಿ 9 ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡಿದ್ದರು. 11 ರಾಜ್ಯಗಳಾದ ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್‌ಗಳಲ್ಲಿ ಈ ರೈಲುಗಳು ಸಂಪರ್ಕವನ್ನು ಹೆಚ್ಚಿಸುತ್ತವೆ.

ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ವಿಶ್ವ ಮಾನ್ಯತೆ: ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ಯುನೆಸ್ಕೋ ಮಾನ್ಯತೆ ಅಥವಾ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಮಾನ್ಯತೆ ದೊರೆತಿರುವುದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಮೈಸೂರಿಗೆ ರಾಖಿ ಸಾವಂತ್​: ಜೆಸಿಬಿ ಮೂಲಕ ಅತ್ತೆ ಮನೆಗೆ ಭರ್ಜರಿ ಎಂಟ್ರಿ! ವಿಡಿಯೋ ವೈರಲ್
ಡ್ರಾಮಾ ಕ್ವೀನ್​ ರಾಖಿ ಸಾವಂತ್​  ತಮ್ಮ ಪತಿಯ ತವರು ಮೈಸೂರಿಗೆ ಜೆಸಿಬಿ ಮೂಲಕ ಸಕಲ ಬಾಜಾ ಬಜಂತ್ರಿಯೊಂದಿಗೆ ಬಂದಿರುವ ಅವರ ವೀಡಿಯೋ ಸಖತ್ ವೈರಲ್ ಆಗಿತ್ತು. 

ಏರ್‌ ಇಂಡಿಯಾದಿಂದ ಮರೆಯಾಗಲಿದೆ ಸೀರೆ ಟ್ರೆಂಡ್‌, ಗಗನಸಖಿಯರಿಗೆ ಡಿಸೈನರ್‌ ಡ್ರೆಸ್‌!
ಕಳೆದ 60 ವರ್ಷಗಳಿಂದ ಏರ್‌ ಇಂಡಿಯಾದ ಗಗನಸಖಿಯರು ಸಾಂಪ್ರದಾಯಿಕವಾಗಿ ಸೀರೆ ಧರಿಸಿ ವಿಮಾನದ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು. ಈಗ ಏರ್‌ ಇಂಡಿಯಾ ಮತ್ತೆ ಟಾಟಾ ತೆಕ್ಕೆಗೆ ಬಂದ ಬಳಿಕ ಸೀರೆ ಟ್ರೆಂಡ್‌ ಬದಲಾಗಿದೆ.

ದೇಶದ 12ಕ್ಕಿಂತ ಚಿಕ್ಕ ಶೇ. 42ರಷ್ಟು ಮಕ್ಕಳಿಂದ ದಿನಕ್ಕೆ 4 ಗಂಟೆ ಮೊಬೈಲ್‌ ಬಳಕೆ: ಆತಂಕಕಾರಿ ವರದಿ
ಹನ್ನೆರಡರ ವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಶೇ 42ರಷ್ಟು ಮಕ್ಕಳು ದಿನದ ಎರಡರಿಂದ ನಾಲ್ಕು ತಾಸು ತಮ್ಮ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ ಪರದೆಯಲ್ಲೇ ಕಳೆಯುತ್ತಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. 

ವಿಶ್ವದಲ್ಲಿ ಅತೀ ಹೆಚ್ಚು ಬುದ್ಧಿವಂತರಿರುವ ಟಾಪ್‌ 10 ದೇಶಗಳಿವು, ಭಾರತಕ್ಕೆ ಎಷ್ಟನೇ ಸ್ಥಾನ?
ಐಕ್ಯೂ ಅನ್ನೋದು ಮನುಷ್ಯನ  ಬುದ್ಧಿವಂತಿಕೆಯ ಮಟ್ಟವನ್ನು ಅಳೆಯುವ ರೀತಿಯಾಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. 2023ರಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಬುದ್ಧಿವಂತರಿರುವ ಟಾಪ್‌ 10 ದೇಶಗಳ ಪಟ್ಟಿ ಬಿಡುಗಡೆಯಾಗಿದೆ.   ಜಪಾನ್, ತೈವಾನ್, ಸಿಂಗಾಪುರ, ಹಾಂಗ್ ಕಾಂಗ್, ಚೀನಾ, ಸಿಯೋಲ್, ದಕ್ಷಿಣ ಕೊರಿಯಾ, ಬೆಲಾರಸ್, ಫಿನ್‌ಲ್ಯಾಂಡ್‌, ಲಿಚ್ಟೆನ್‌ಸ್ಟೈನ್‌, ಜರ್ಮನಿ ಮೊದಲ 10 ಸ್ಥಾನಗಳಲ್ಲಿ ಇವೆ. 
 

Latest Videos
Follow Us:
Download App:
  • android
  • ios