ಸಿನಿಮಾ ಮಂದಿಗೆ ಬಣ್ಣದ ಜಗತ್ತು ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ಆಸಕ್ತಿ ಇರಲ್ಲ. ಪ್ರತಿ ದಿನ, ಪ್ರತಿ ಕ್ಷಣವೂ ನಟನೆಯನ್ನೇ ಧ್ಯಾನಿಸುತ್ತಿರುತ್ತಾರೆ ಎಂಬುದೇ ಬಹುತೇಕರು ಭಾವಿಸಿದ್ದಾರೆ. ಆದರೆ, ಸಿನಿಮಾ ಮಂದಿ ತೆರೆಯ ಆಚೆಗೂ ಒಳ್ಳೆಯ ಬ್ಯುಸಿನೆಸ್‌ ಮ್ಯಾನ್‌ಗಳು, ಉದ್ಯಮಿಗಳು. ಪಕ್ಕಾ ವ್ಯವರಸ್ಥರು ಹೌದು. ಹಾಗೆ ನೋಡಿದರೆ ಹಳೆಯ ಜನರೇಷನ್‌ಗೆ ಇಂಥ ವ್ಯವಹಾರದ ಚಾಣಕ್ಷತೆ ಇರಲಿಲ್ಲ. ಅವರು ಸಿನಿಮಾ ದುಡ್ಡನ್ನು ಮತ್ತೆ ಚಿತ್ರರಂಗಕ್ಕೆ ಹಾಕುತ್ತಿದ್ದರು. ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎನ್ನುವ ಪಾಲಿಸಿ ಅವರದ್ದು. ಆದರೆ, ಈಗಿನ ಸಿನಿಮಾ ಜನರೇಷನ್‌ ಹಾಗಿಲ್ಲ. ಕೆರೆಯ ನೀರನ್ನು ಗದ್ದೆಗೂ ಬಳಸಬಹುದು ಎಂಬುದು ಅವರ ಪಾಲಿಸಿ. ಹೀಗಾಗಿ ತಾವು ಚಿತ್ರರಂಗದಲ್ಲಿ ದುಡಿದ ಹಣವನ್ನು ಸಿನಿಮಾ ಆಚೆಗಿನ ಕ್ಷೇತ್ರಗಳಲ್ಲೂ ತೊಡಗಿಸುತ್ತಿದ್ದಾರೆ. ತೆಲುಗಿನ ಮಹೇಶ್‌ ಬಾಬು, ಹಿಂದಿಯ ಶಾರೂಖ್‌ ಖಾನ್‌ ಮುಂತಾದ ನಟರು ಚಿತ್ರಮಂದಿರಗಳ ನಿರ್ಮಾಣ, ರಿಯಲ್‌ ಎಸ್ಟೇಟ್‌ ಹಣ ಹೂಡಿದರೆ. ನಟಿಯರಾದ ಸಮಂತಾ, ರೆಜಿನಾ, ಅನುಷ್ಕಾ ಶೆಟ್ಟಿ, ಐಶ್ವರ್ಯ ರೈ, ಹನ್ಸಿಕಾ ಮೊಟ್ವಾನಿ, ರಕುಲ್‌ ಪ್ರೀತಿಸಿಂಗ್‌ ಮುಂತಾದ ಘಟಾನುಘಟಿ ನಟಿಯರು ಹೋಟೆಲ್‌ ಉದ್ಯಮ, ಇವೆಂಟ್‌ ಮ್ಯಾನೇಜ್‌ಮೆಂಟ್‌ ತೆರೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲೂ ಇದ್ದಾರೆ

ಸಿನಿಮಾ ಮಂದಿ ಹೀಗೆ ನಟನೆಯ ಆಚೆಗೂ ಉದ್ಯಮಿಗಳಾಗುತ್ತಿರುವುದು ಕೇವಲ ಪರಭಾಷೆಗಳಲ್ಲಿ ಮಾತ್ರವಲ್ಲ, ಕನ್ನಡ ಚಿತ್ರರಂಗದಲ್ಲೂ ವ್ಯವರಸ್ಥ ಸಿನಿಮಾ ಮಂದಿ ಇದ್ದಾರೆ. ನಟಿಯರಾದ ಸಂಜನಾ ಗರ್ಲಾನಿ ಅಕ್ಷಯ್‌ ಪವರ್‌ ಯೋಗ ಕೇಂದ್ರ ನಡೆಸುತ್ತಿದ್ದರೆ, ಹರ್ಷಿಕಾ ಪೂಣಚ್ಚ ಅವರು ಗ್ಲಾಮ್‌ ಗ್ರ್ಯಾಡ್‌ ಇವೆಂಟ್‌ ಮ್ಯಾನೇಜ್‌ಮೆಂಟ್‌ ಶುರು ಮಾಡಿದ್ದಾರೆ. ಮತ್ತೊಬ್ಬ ನಟಿ ಪ್ರಜ್ಞಾ ಕೂಡ ಇದೇ ಹಾದಿಯಲ್ಲಿ ಹೊರಟಿದ್ದಾರೆ. ಇನ್ನೂ ಪೂಜಾ ಗಾಂಧಿ ಅವರು ತಮ್ಮ ತಂದೆಯ ಸಾರಥ್ಯದಲ್ಲಿ ಟ್ರಾವೆಲ್‌ ಏಜೆನ್ಸಿ ನಡೆಸುತ್ತಿದ್ದಾರೆ. ನಟರಾದ ಸುದೀಪ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಹೋಟೆಲ್‌ ಬ್ಯುಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಹೋಟೆಲ್‌ ಉದ್ಯಮ, ಇವೆಂಟ್‌ ಮ್ಯಾನೇಜ್‌ಮೆಂಟ್‌, ಟ್ರಾವೆಲ್‌ ಏಜೆನ್ಸಿ, ನಟನಾ ತರಬೇತಿ ಕೇಂದ್ರಗಳ ಆರಂಭ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಸಿನಿಮಾ ಸಂಪಾದನೆಯನ್ನು ಹೂಡುತ್ತಿದ್ದಾರೆ. ಕನ್ನಡದಲ್ಲಿ ಈ ಪರಂಪರೆ ಕೊಂಚ ತಡವಾದರೂ ನಿಧಾನಕ್ಕೆ ಪ್ರವೇಶವಾಗುತ್ತಿದೆ. ಆ ಮೂಲಕ ನಟನೆಯ ಜತೆಗೆ ಸಿನಿಮಾ ಮಂದಿ ಬೇರೆ ಬೇರೆ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಹೊಸ ಟ್ರೆಂಡ್‌ ಆರಂಭವಾಗಿದೆ. ಈ ಸಾಲಿಗೆ ಈಗ ನಟಿ ಅನಿತಾ ಭಟ್‌ ಸೇರಿಕೊಂಡಿದ್ದಾರೆ.

ಜಿಂದಾಲ್‌ ಸ್ಫೂರ್ತಿ

‘ಸೈಕೋ’ ಚಿತ್ರದ ಮೂಲಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಬಂದವರು ನಟಿ ಅನಿತಾ ಭಟ್‌. ಆ ನಂತರ ಸಾಕಷ್ಟುಸಿನಿಮಾಗಳಲ್ಲಿ ನಟಿಸಿಕೊಂಡು ಬಂದವರು ಈಗ ವೆಲ್‌ನೆಸ್‌ ಕೇಂದ್ರದ ಒಡತಿ. ಹೌದು, ಸೋಹಮ್‌ ಅರ್ಪಣಾ ಯೋಗ ಆಂಡ್‌ ವೆಲ್‌ನೆಸ್‌ ಹೆಸರಿನಲ್ಲಿ ಹೆಲ್ತ್‌ ಕೇರ್‌ ಸೆಂಟರ್‌ ಆರಂಭಿಸಿದ್ದಾರೆ. ಬೆಂಗಳೂರಿನ ಕಮ್ಮನಹಳ್ಳಿ ಬಳಿ ಇರುವ ಕಲ್ಯಾಣ ನಗರದ ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿ ಈ ಯೋಗ ಕೇಂದ್ರ ಶುರುವಾಗಿದೆ. ಇಲ್ಲಿ ನುರಿತ ತಜ್ಞರಿಂದ ಲೈಫ್‌ ಸ್ಟೈಲ್‌ ಕೌನ್ಸಿಲಿಂಗ್‌, ಡಯಾಟ್‌ ಕೌನ್ಸಿಲಿಂಗ್‌, ವೈಟ್‌ ಮ್ಯಾನೇಜ್‌ಮೆಂಟ್‌, ಪಿಜಿಯೋ ಥೆರಪಿ, ಆರ್ಯುವೇದ ಕೌನ್ಸಿಲಿಂಗ್‌, ಮಸಾಜ್‌ ಥೆರಪಿ, ಯೋಗ ಥೆರಪಿ, ನೃತ್ಯ ಹಾಗೂ ಅಭಿನಯದ ತರಬೇತಿ ನೀಡಲಾಗುತ್ತದೆ. ಅಂದಾಹಗೆ ಅನಿತಾ ಭಟ್‌ ಅವರು ಇಂಥದ್ದೊಂದು ವೆಲ್‌ನೆಸ್‌ ಕೇಂದ್ರ ಆರಂಭಿಸುವುದಕ್ಕೆ ಸ್ಫೂರ್ತಿ ಜಿಂದಾಲ್‌ ನೇಚರ್‌ ಕ್ಯೂರ್‌. ‘ಬೆಂಗಳೂರಿನಲ್ಲೇ ಪ್ರಸಿದ್ಧ ಜಿಂದಾಲ್‌ ನೇಚರ್‌ ಕ್ಯೂರ್‌ ಕೇಂದ್ರ ಇದೆ. ಜಿಂದಾನ್‌ನಲ್ಲಿ ಸಿಗುವ ಸೌಲಭ್ಯಗಳು ಸಾಮಾನ್ಯರಿಗೂ ಸಿಗಬೇಕು. ಆಡ್ಮಿಟ್‌ ಆಗದೆ ಹೋದರೂ ಅಂಥ ನೇಚರ್‌ ಕ್ಯೂರ್‌ ಸೌಲಭ್ಯಗಳು ದೊರೆಯಬೇಕು ಎನ್ನುವ ಕಾರಣಕ್ಕೆ ನಾನು ಈ ಸೋಹಮ್‌ ಅರ್ಪಣಾ ಯೋಗ ಆಂಡ್‌ ವೆಲ್‌ನೆಸ್‌ ಕೇಂದ್ರ ಆರಂಭಿಸಿದೆ. ಅಲ್ಲಿ ಸಿಗುವ ಸೌಲಭ್ಯಗಳೇ ನಮ್ಮ ವೆಲ್‌ನೆಸ್‌ ಕೇಂದ್ರದಲ್ಲೂ ದೊರೆಯಲಿವೆ. ಇಲ್ಲಿ ಅಡ್ಮಿಟ್‌ ಆಗಬೇಕಿಲ್ಲ. ತುಂಬಾ ಕಡಿಮೆ ಅವಧಿಯ ಟಿಫ್ಸ್‌ಗಳೊಂದಿಗೆ ಸೋಹಮ್‌ ಅರ್ಪಣಾ ಯೋಗ ಆಂಡ್‌ ವೆಲ್‌ನೆಸ್‌ ಕೇಂದ್ರವನ್ನು ಆರಂಭಿಸಲಾಗಿದೆ. ಧರ್ಮಸ್ಥಳದ ಉಜಿರೆ, ಕೇರಳದ ನುರಿತ ತಜ್ಞರು ಇಲ್ಲಿದ್ದಾರೆ’ ಎಂಬುದು ನಟಿ ಅನಿತಾ ಭಟ್‌ ಅವರ ವಿವರಣೆ.

ಅನಿತಾ ಭಟ್‌ ಕೂಡ ಯೋಗ ಪಟು

ಸ್ವತಃ ನಟಿ ಅನಿತಾ ಭಟ್‌ ಕೂಡ ಯೋಗ ಪಟು. ಶಾಲೆಯಲ್ಲಿರುವಾಗಲೇ ಯೋಗ ಕಲಿತವರು. ಹಾಗೆ ನೋಡಿದವರಿಗೆ ಅವರಿಗೆ ಕರಾಟೆ ಕಲಿಯುವ ಆಸೆ ಇತ್ತಂತೆ. ಆದರೆ, ಮನೆಯಲ್ಲಿ ಒಪ್ಪದಿದ್ದಾಗ ಕೊನೆಗೆ ಹೋಗಿದ್ದು ಯೋಗ ಕ್ಲಾಸ್‌ಗೆ. ಸಾಕಷ್ಟುಸ್ಪರ್ಧೆಗಳಲ್ಲಿ ಭಾಗವಹಿಸಿ, ಯೋಗ ಪಟು ಎನಿಸಿಕೊಂಡರು. ಜಿಲ್ಲಾ ಮಟ್ಟದಲ್ಲಿ ಶಿವಮೊಗ್ಗದಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಆಗಿನಿಂದಲೂ ಅವರಿಗೆ ಯೋಗ ಕೇಂದ್ರ ಸ್ಥಾಪಿಸುವ ಆಸೆ ಇತ್ತಂತೆ. ‘ನನ್ನ ಜೀವನದಲ್ಲಿ ಎದುರಾದ ಸಾಕಷ್ಟುಒತ್ತಡಗಳನ್ನು ನಿಭಾಯಿಸುವುದಕ್ಕೆ ಸಾಧ್ಯವಾಗಿದ್ದು ಇದೇ ಯೋಗ. ಚಿತ್ರರಂಗಕ್ಕೆ ಬಂದ ಮೇಲೆ ನನ್ನ ನಾನು ಗಟ್ಟಿಮಾಡಿಕೊಳ್ಳುವುದಕ್ಕೆ ಯೋಗ ಮೊರೆ ಹೋಗುತ್ತಿದ್ದೆ. ಯೋಗ ಎಂಬುದು ನಮ್ಮ ಬದುಕಿನ ಭಾಗವಾದರೇ ಎಂಥದ್ದೇ ಸಮಸ್ಯೆಗಳು ಎದುರಾದರೂ ಸುಲಭಕ್ಕೆ ಅವುಗಳಿಂದ ಬಚಾವ್‌ ಆಗುತ್ತೇವೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ’ ಎನ್ನುವ ಅನಿತಾ ಭಟ್‌, ಈಗ ತಾವೇ ಸ್ಥಾಪಿಸಿರುವ ವೆಲ್‌ನೆಸ್‌ ಕೇಂದ್ರದಲ್ಲಿ ಯೋಗ ಟೀಚರ್‌ ಕೂಡ ಹೌದು.

ವೆಲ್‌ನೆಸ್‌ನಲ್ಲಿ ಏನೆಲ್ಲ ಇವೆ?

ಯೋಗ ಕ್ಲಾಸ್‌, ಎರೋಬಿಕ್ಸ್‌, ಪವರ್‌ ಯೋಗ. ಡಯಾಟ್‌, ವೈಟ್‌ ಲಾಸ್‌, ಒತ್ತಡ ನಿರ್ವಾಹಣೆ. ನ್ಯಾಚುರೋಪತಿ ಹಾಗೂ ಆರ್ಯವೇದಿಕ್‌. ಪಂಚಕರ್ಮ ಟ್ರೀಟ್‌ಮೆಂಟ್‌.

ಹೆಣ್ಣು ಮಕ್ಕಳಿಗಾಗಿ ಸೆಲ್ಫೆ ಡಿಫೆನ್ಸ್‌ ತರಬೇತಿ. ಮಕ್ಕಳಿಗಾಗಿ ಸಮ್ಮರ್‌ ಕ್ಯಾಂಪ್‌. ಮಸಾಜ್‌ ಥೆರಪಿ. ಇದರ ಜತೆಗೆ 15 ದಿನಗಳಿಗೊಮ್ಮೆ ಆರೋಗ್ಯ ಹಾಗೂ ಯೋಗಾ ಕುರಿತು ಶಿಭಿರಗಳನ್ನು ಆಯೋಜಿಸಲಾಗುತ್ತದೆ. ಇದರ ಜತೆಗೆ ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭಾವಂತರಿಗೆ ನಟನಾ ತರಬೇತಿಯನ್ನೂ ನೀಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ನಿರ್ದೇಶಕರು, ಹಿರಿಯ ನಟರ ಬಳಿ ಮಾತನಾಡಿದ್ದು, ಸದ್ಯದಲ್ಲೇ ಇಲ್ಲಿ ನೃತ್ಯ ಹಾಗೂ ಅಭಿನಯ ತರಬೇತಿ ಕೂಡ ಶುರುವಾಗಲಿದೆ.

ಎಲ್ಲಿದೆ?

ನಂ.415, 9ನೇ ಮುಖ್ಯ ರಸ್ತೆ, ಎಚ್‌ಬಿಆರ್‌ ಲೇಔಟ್‌,

1 ಬ್ಲಾಕ್‌, ಕಲ್ಯಾಣ್‌ ನಗರ, ಬೆಂಗಳೂರು.

ವೆಬ್‌: www.sohamarpana.com

ಮೊ.ಸಂ. 8073130503