ಇಲ್ಲಿವರೆಗೂ ದೇವಸ್ಥಾನಗಳು ಹಾಗೂ ಸಂಬಂಧಿಸಿದ ಚಿತ್ರ ವಿಚಿತ್ರ ಪರಂಪರೆ ಬಗ್ಗೆ ಕೇಳಿರುತ್ತೀರಿ. ಆದರೆ, ಎಲ್ಲವಕ್ಕೂ ವಿಭಿನ್ನ ಎನ್ನುವಂತ ಸಂಪ್ರದಾಯದ ಬಗ್ಗೆ ಈಗ ತಿಳಿದು ಕೊಳ್ಳುವಿರಿ. ಇಲ್ಲಿ ದೇವರನ್ನು ಪೂಜಿಸುವುದಿಲ್ಲ. ಬದಲಾಗಿ ಪ್ರಾಣಿಗಳನ್ನು ಪೂಜಿಸಲಾಗುತ್ತದೆ. 

ನಾಯಿ ದೇವಸ್ಥಾನ: ಹಿಂದೂ ಧರ್ಮದಲ್ಲಿ ನಾಯಿಯನ್ನು ಭೈರವನ ವಾಹನವಾಗಿ ಗೌರವಿಸಲಾಗುತ್ತದೆ. ಶನಿ ದೋಷ ನಿವಾರಿಸಲು ನಾಯಿಗೆ ತಿಂಡಿ ನೀಡುತ್ತಾರೆ. ಬುಲಂದ್ ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ದೇವಾಲಯವೊಂದರಲ್ಲಿ ನಾಯಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. 100 ವರ್ಷಗಳ ಹಳೆಯ ಈ ಮಂದಿರದಲ್ಲಿ ನಾಯಿ ಸಮಾಧಿಯ ಮೇಲೆ ಮೂರ್ತಿಯನ್ನು ಕೆತ್ತಿ ಅದಕ್ಕೆ ಪೂಜಿಸಲಾಗುತ್ತದೆ. ಈ ಶ್ವಾನದ ಮೂರ್ತಿ ಕಾಲಿಗೆ ಕಪ್ಪು ಹಗ್ಗ ಕಟ್ಟಿದರೆ, ಎಲ್ಲ ಇಚ್ಛೆಗಳೂ ಈಡೇರುತ್ತವೆ ಎಂದೇ ನಂಬಲಾಗುತ್ತದೆ. 

ಬೆಕ್ಕಿಗೆ ದೇವೀ ಸ್ವರೂಪ: ಬೆಕ್ಕು ಅಡ್ಡ ಬಂದರೇ ಅಪಶಕುನ ಎಂದು ನಂಬುವ ಮಂದಿ ಅದೇ ಪ್ರಾಣಿಯನ್ನು ಪೂಜಿಸುತ್ತಾರೆ! ಕರ್ನಾಟಕದ ಮಂಡ್ಯದಿಂದ 35 ಕಿ.ಮೀ ದೂರದಲ್ಲಿ ಬೆಕ್ಕಾಲಲೆ ಎನ್ನುವ ಹಳ್ಳಿಯಲ್ಲಿ ಬೆಕ್ಕಿನ ದೇವಾಲಯವಿದೆ. ಇಲ್ಲಿ ಬೆಕ್ಕನ್ನು ಮಂಗಮ್ಮ ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಸುಮಾರು 1000 ವರ್ಷಗಳಿಂದ ಈ ಆಚರಣೆ ಜಾರಿಯಲ್ಲಿದೆ. ಬೆಕ್ಕಿನ ರೂಪದಲ್ಲಿ ದೇವಿಯನ್ನು ಆರಾಧಿಸಲಾಗುತ್ತಿದೆ. 

ಕರೆದರೆ ಸಾಕು ಪ್ರಸಾದ ತಿಂದು ಹೋಗೋ ಮೊಸಳೆ!

ಮೂಷಕನ ವಾಹನವೇ ಇಲ್ಲಿ ದೈವ: ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಕರಣಿ ಮಾತಾ ಮಂದಿರದಲ್ಲಿ ಸುಮಾರು 20 ಸಾವಿರ ಇಲಿಗಳಿವೆ. ಇಲ್ಲಿ ದೇವಿಗೆ ನೈವೇದ್ಯ ನೀಡುವುದರ ಜೊತೆ ಜೊತೆಗೆ ಇಲಿಗಳಿಗೂ ನೀಡಲಾಗುತ್ತದೆ. ಕರಣಿ ದೇವಿ ಜಗದಾಂಬೆಯ ಅವತಾರ. ಆ ದೇವಿ ಇಲ್ಲಿನ ಗುಹೆಯಲ್ಲಿ 650 ವರ್ಷಗಳ ಹಿಂದೆ ತಪಸ್ಸು ಮಾಡಿದ್ದಾರೆಂಬ ನಂಬಿಕೆ ಇದೆ. ಆ ಗುಹೆಯೂ ಇಲ್ಲೇ ಇದೆ ಎಂದು ಹೇಳಲಾಗುತ್ತದೆ. 

ಬಾವಲಿ ಪೂಜೆ: ಬಿಹಾರದ ವೈಶಾಲಿ ಜಿಲ್ಲೆಯ ರಾಜಾಪಾಕರ್ ಪ್ರಖಂಡದ ಸಾರಾಸಾಯಿ ಗ್ರಾಮದಲ್ಲಿ ಬಾವಲಿಗಳನ್ನು ಅಭಿವೃದ್ಧಿ ಸಂಕೇತ ಎಂದು ಪೂಜಿಸಲಾಗುತ್ತದೆ. ಎಲ್ಲಿ ಬಾವಲಿ ಇರುತ್ತದೋ, ಅಲ್ಲಿಯೇ ಲಕ್ಷ್ಮಿಯೂ ಕಾಲು ಮುರಿದುಕೊಂಡು ಬಿದ್ದಿರುತ್ತಾಳೆ ಎನ್ನುವ ನಂಬಿಕೆ ಇದೆ. ಶಕುನಕ್ಕೆ ಸಂಬಂಧಿಸಿದ ಏನೇ ಕೆಲಸವಿದ್ದರೂ ಈ ಊರಿನ ಜನರು ಬಾವಲಿಗೆ ಪೂಜಿಸುತ್ತಾರೆ.