ಹನುಮಸಾಗರ: ಕುಡುಕರ ತಾಣವಾದ ಕಪಿಲ ತೀರ್ಥ
ಕುಡುಕರ ಮೋಜಿನ ತಾಣವಾದ ಕಪಿಲ ತೀರ್ಥ| ನಿತ್ಯ ಇಲ್ಲಿ ಮದ್ಯ-ಮಾಂಸದ ಸಮಾರಾಧನೆ | ಸ್ಥಳಕ್ಕೆ ಸಭ್ಯಸ್ಥರು ಬಾರದಂತಹ ಪರಿಸ್ಥಿತಿ | ಪ್ರವಾಸಿಗರ ಆಕ್ರೋಶ| ಕುಡಿದ ಅಮಲಿನಲ್ಲಿಯೇ ನೀರಾಟವಾಡುವ ಯುವಕರು| ಮಹಿಳೆಯರು ಮಕ್ಕಳೆಂಬ ಅರಿವೇ ಇಲ್ಲದಂತೆ ವರ್ತಿಸುತ್ತಾರೆ| ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ|
ಏಕನಾಥ ಮೆದಿಕೇರಿ
ಹನುಮಸಾಗರ[ಅ.16]: ಇಲ್ಲಿಯ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣ ‘ಕಪಿಲ ತೀರ್ಥ ಜಲಪಾಲ’ ಇತ್ತೀಚಿಗೆ ಕುಡುಕರ ಮೋಜಿನ ತಾಣವಾಗುತ್ತಿದ್ದು, ಸಭ್ಯಸ್ಥರು ಸಂಸಾರ ಸಮೇತ ಇಲ್ಲಿ ಪ್ರವಾಸ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಪಿಲ ತೀರ್ಥ ಎಂದು ಕರೆಯಲ್ಪಡುವ ಈ ಕಪ್ಪಲೆಪ್ಪ ಜಲಪಾತ ಮಳೆಗಾಲದಲ್ಲಿ ಸುತ್ತಮುತ್ತಲಿನ ಜನರು ಕುಟುಂಬ ಸಮೇತ ಬಂದು ಖುಷಿ ಪಡುವ ಪ್ರೇಕ್ಷನೀಯ ಸ್ಥಳ. ಜತೆಗೆ ರೈತರು ಈ ಜಲಪಾತಕ್ಕೆ ಪೂಜಿಸಿ ಇಲ್ಲಿನ ನೀರನ್ನು ತೀರ್ಥದ ರೂಪದಲ್ಲಿ ತೆಗೆದುಕೊಂಡು ಹೋಗಿ ಬೆಳೆಗಳಿಗೆ ಚಿಮುಕಿಸುವಂತಹ ಪದ್ಧತಿ ಇರುವುದರಿಂದ ಶ್ರದ್ಧಾ ಕೇಂದ್ರವೂ ಹೌದು. ಆದರೆ ಸದ್ಯ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಪ್ರತಿ ನಿತ್ಯ ಆಗಮಿಸುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿದೆ. ಇಡೀ ವಾತಾವರಣದಲ್ಲಿ ಮದ್ಯದ ವಾಸನೆ ತುಂಬಿಕೊಂಡಿದೆ. ಮಾಂಸದ ತುಂಡುಗಳು ಅಲ್ಲಲ್ಲಿ ಬಿದ್ದು ವಾಕರಿಕೆ ತರಿಸುತ್ತಿವೆ. ಸದ್ಯ ಈ ಸ್ಥಳಕ್ಕೆ ಸಭ್ಯಸ್ಥರು ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಡೂಟ ಇಲ್ಲಿಯೇ ರೆಡಿ:
ಈ ಸ್ಥಳಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಜನರಲ್ಲಿ ಯುವಕರೇ ಹೆಚ್ಚು. ಯುವಕರು ಕೈಯಲ್ಲಿ ಮದ್ಯದ ಬಾಟಲಿ ಹಾಗೂ ಮಾಂಸ, ಅಡುಗೆ ತಯಾರಿಸಲು ಪಾತ್ರೆ ಪಗಡೆ, ಸಾಂಬಾರ್ ಪದಾರ್ಥಗಳ ಸಮೇತವಾಗಿಯೇ ಬರುತ್ತಾರೆ. ದೊಡ್ಡ ಸಂಖ್ಯೆಯ ಗುಂಪು ಇದ್ದರೆ ಮಾಂಸ ಬೇಯಿಸಲು ಒಬ್ಬ ಬಾಣಸಿಗನನ್ನೂ ಕರೆ ತಂದಿರುತ್ತಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕುಡಿದ ಅಮಲಿನಲ್ಲಿಯೇ ನೀರಾಟವಾಡುವ ಯುವಕರು ಮಹಿಳೆಯರು ಮಕ್ಕಳೆಂಬ ಅರಿವೇ ಇಲ್ಲದಂತೆ ವರ್ತಿಸುತ್ತಾರೆ. ಯಾರಾದರೂ ಇದನ್ನು ಪ್ರಶ್ನಿಸಿ, ಇದು ಸರಿಯಲ್ಲ ಎಂದು ಹೇಳಿದರೆ ಅದು ಇಲ್ಲಿ ಖಂಡಿತಾ ಅರಣ್ಯ ರೋದನವಾಗುತ್ತದೆ ಎಂಬ ಭಯದಿಂದ ಸುಮ್ಮನಾಗುತ್ತಿದ್ದೇವೆ, ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಇಳಕಲ್‌ನಿಂದ ಕುಟುಂಬ ಸಮೇತವಾಗಿ ಬಂದಿದ್ದ ಮನೋಹರ ಗೌಡ್ರ ನೋವು ತೋಡಿಕೊಂಡರು.
ಮಹಿಳೆಯರ- ಮಕ್ಕಳ ಪರಿವೆ ಇಲ್ಲದೆ ರಾಜಾರೋಷವಾಗಿ ಪಡ್ಡೆ ಹುಡುಗರು, ಯುವಕರು ಜಲಪಾತದಲ್ಲಿಯೇ ಕುಳಿತು ಮದ್ಯ ಸೇವಿಸುತ್ತಾರೆ. ಸಿಗರೇಟ್ ಸೇದುತ್ತಾರೆ. ಗುಟಕಾ ಉಗುಳುತ್ತಾರೆ. ಬೆಚ್ಚಿ ಬೀಳುವಂತೆ ಕೇಕೆ ಹಾಕುತ್ತಾರೆ. ಅಶ್ಲೀಲ ಪದಗಳನ್ನು ಬಳಸುತ್ತಾರೆ. ಕುಡಿದ ಮತ್ತು ಇಳಿಯುವವರೆಗೂ ಗಂಟೆಗಟ್ಟಲೆ ತಾವೇ ಗುಂಪಾಗಿ ಜಲಪಾತದ ಕೆಳಗೆ ಕುಳಿತುಕೊಳ್ಳುವುದರಿಂದ ಕುಟುಂಬ ಸಮೇತವಾಗಿ ಬಂದ ಪ್ರವಾಸಿಗರಿಗೆ ಜಲಪಾತದ ಕೆಳಗೆ ಕುಳಿತುಕೊಳ್ಳಲು ಅವಕಾಶ ದೊರೆಯದಂತಾಗಿದೆ. ಭಾನುವಾರ, ರಜೆಯ ದಿನಗಳು ಬಂದರೆ ಇದರ ಪರಿಸ್ಥಿತಿ ಇನ್ನಷ್ಟು ಅತಿರೇಕವಾಗಿರುತ್ತದೆ.
ಕಾಡಿಗೆ ಬೆಂಕಿಯ ಅಪಾಯ:
ಜಲಪಾತದ ಸುತ್ತಮುತ್ತ ಪೊದೆಗಳ ಪಕ್ಕದಲ್ಲಿ ಮಾಂಸ ಬೇಯಿಸುವುದು ನಡೆದಿರುತ್ತದೆ. ಜಲಪಾತದ ಮೇಲ್ಭಾಗದ ಹರಿಯುವ ನೀರಿನಲ್ಲಿ ಮಾಂಸ ತೊಳೆಯುವುದರಿಂದ ಕೆಳಗೆ ಸ್ನಾನ ಮಾಡುವವರ ತಲೆ ಮೇಲೆ ಅದೇ ನೀರು ಬೀಳುತ್ತದೆ. ಅಡುಗೆ ಮಾಡಿ ಬೆಂಕಿ ನಂದಿಸದೆ ಹೋಗುವುದರಿಂದ ಗಿಡಗಳಿಗೆ ಬೆಂಕಿ ತಗುಲಿ ಕಾಡಿಗೆ ಬೆಂಕಿ ಹೊತ್ತುವ ಸಾಧ್ಯತೆ ಇದೆ ಎಂದು ಛಾಯಾಗ್ರಾಹಕ ಬಸವರಾಜ, ಅಶೋಕ ಪಾಟೀಲ ಆತಂಕ ವ್ಯಕ್ತಪಡಿಸುತ್ತಾರೆ.
ಅರಣ್ಯ ಹಾಳಾದೀತು ಎಂದು ಕಪ್ಪಲೆಪ್ಪ ಜಲಪಾತಕ್ಕೆ ರಸ್ತೆ ಮಾಡಲು ಅಡೆತಡೆ ಒಡ್ಡಿ ಕಳಕಳಿ ತೋರಿರುವ ಅರಣ್ಯ ಇಲಾಖೆ ಈ ಸ್ಥಳದಲ್ಲಿ ನೂರಾರು ಕಡೆ ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಸುಮ್ಮನಿರುವುದು ಏಕೆ ? ಎಂದು ಪ್ರವಾಸಿಗರು ಅರಣ್ಯ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ. ಇಲ್ಲಿ ಅಡುಗೆ ಮಾಡುವವರ ಮೇಲೆ ಹಾಗೂ ಇಲ್ಲಿಯೇ ಕುಳಿತು ಮದ್ಯ ಸೇವನೆ ಮಾಡಿ ವಿಲಕ್ಷಣ ಪ್ರದರ್ಶಿಸುವವರ ಮೇಲೆ ಕಠಿಣ ಕ್ರಮ ಕೈಕೊಳ್ಳದಿದ್ದರೆ ಕಪ್ಪಲೆಪ್ಪ ಜಲಪಾತದ ವಾತಾವರಣ ಹಾಳಾಗಿ ಹೋಗುವುದರಲ್ಲಿ ಸಂದೇಹವಿಲ್ಲ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಬಗ್ಗೆ ಮಾತನಾಡಿದ ಹನುಮಸಾಗರದ ಅರಣ್ಯ ರಕ್ಷಕ ದಾನನಗೌಡ ಮಾಲಿಪಾಟೀಲ ಅವರು, ಪ್ರವಾಸಿಗರ ಮೇಲೆ ಗಮನ ಹರಿಸಲಾಗುತ್ತಿದೆ. ಪ್ಲಾಸ್ಟಿಕ್, ಮದ್ಯಪಾನ ನಿಷೇಧಿಸಲಾಗಿದೆ. ಅಂತಹ ದೂರುಗಳು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದ್ದಾರೆ.