Asianet Suvarna News Asianet Suvarna News

ಹೂವಿನಹಡಗಲಿ: 29 ಹಳ್ಳಿಗಳಲ್ಲಿ ಸ್ಮಶಾನಗಳೇ ಇಲ್ಲ..!

* ಮಸಣಗಳಾಗಿ ಮಾರ್ಪಟ್ಟ ಹೊಲ ಗದ್ದೆಗಳು
* 14 ಹಳ್ಳಿಗಳಿಗೆ 2017ರಲ್ಲಿ ಭೂಮಿ ಪ್ರಸ್ತಾವ ಸಲ್ಲಿಕೆ
* ಹಳ್ಳಿಗಳಲ್ಲಿ ಇಂದಿಗೂ ಸ್ಮಶಾನ ಅಭಿವೃದ್ಧಿ ಮರೀಚಿಕೆ 
 

No Cemetery in 29 Villages at Huvina Hadagali in Vijayanagara grg
Author
Bengaluru, First Published Aug 4, 2021, 11:28 AM IST
  • Facebook
  • Twitter
  • Whatsapp

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಆ.04): ಪ್ರತಿ ಹಳ್ಳಿಗೂ ಸ್ಮಶಾನ ಸೌಲಭ್ಯವನ್ನು ಒದಗಿಸಬೇಕೆಂಬ ಸಂವಿಧಾನದ ಆಶಯಕ್ಕೆ ಅಕ್ಷರಶಃ ಧಕ್ಕೆ ಉಂಟಾಗುತ್ತಿದ್ದು, ಸ್ಮಶಾನ ಸೌಲಭ್ಯ ಇಲ್ಲದೇ ಹೆಣ ಹೂಳಲು, ಸುಡಲು ಜನ ಪರದಾಡುವ ಸ್ಥಿತಿ ಎದುರಾಗಿದೆ. ತಾಲೂಕಿನ 95 ಹಳ್ಳಿಗಳಲ್ಲಿ 66 ಗ್ರಾಮಗಳಿಗೆ ಸ್ಮಶಾನ ಸೌಲಭ್ಯವಿದ್ದು, ಉಳಿದ 29 ಹಳ್ಳಿಗಳಲ್ಲಿ ಇಂದಿಗೂ, ಶವ ಸಂಸ್ಕಾರಕ್ಕೆ ಸ್ಮಶಾನಗಳೇ ಇಲ್ಲ. ಇದರಿಂದ ರೈತರು ತಮ್ಮ ಹೊಲ ಗದ್ದೆಗಳಲ್ಲೇ ಶವಗಳನ್ನು ಹೂಳುವ ಸ್ಥಿತಿ ಬಂದಿದೆ. ಇನ್ನು ಜಮೀನು ಇಲ್ಲದ ಬಡ ಕುಟುಂಬಗಳು ಹಳ್ಳ ಕೊಳ್ಳಗಳಲ್ಲಿ ಶವಗಳನ್ನು ಸುಡುತ್ತಿದ್ದಾರೆ.

ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಸರ್ಕಾರಿ ಜಮೀನುಗಳಲ್ಲಿ ಶವ ಸಂಸ್ಕಾರ ಮಾಡುತ್ತ ಬಂದಿದ್ದಾರೆ. ಆದರೆ, ನದಿ ಪ್ರವಾಹ ಬಂದಾಗ ಸ್ಮಶಾನಗಳು ಮುಳುಗಡೆಯಾಗಲಿದ್ದು, ರಸ್ತೆ ಬದಿಯಲ್ಲೇ ಶವ ಹೂಳುವುದು ಸುಡುವುದು ಸರ್ವೇ ಸಾಮಾನ್ಯವಾಗಿದೆ.

ಈ ಹಿಂದೆಯೇ ಸರ್ಕಾರ ಪ್ರತಿಯೊಂದು ಹಳ್ಳಿಗೂ ಸಾರ್ವಜನಿಕ ಸ್ಮಶಾನ ಗುರುತಿಸಬೇಕೆಂದು ಆದೇಶಿಸಿತ್ತು. ಸ್ಮಶಾಸನ ವ್ಯವಸ್ಥೆ ಇಲ್ಲದ ಹಳ್ಳಿಗಳಲ್ಲಿ ಮಸಣಕ್ಕಾಗಿ ಸರ್ಕಾರಿ ಜಾಗ ಗುರುತಿಸುವ ಪ್ರಕ್ರಿಯೆ ನಡೆ​​ದಿ​ದೆ. ಈ ನಿಟ್ಟಿನಲ್ಲಿ ತಾಲೂಕಿನ ಹೊಳಗುಂದಿ-2.24 ಎಕರೆ, ಮುದೇನೂರು-2.24 ಎಕರೆ, ಉತ್ತಂಗಿ-2 ಎಕರೆ, ಮಹಾಜನದಹಳ್ಳಿ-4.1 ಎಕರೆ, ನಂದಿಹಳ್ಳಿ-1.12 ಎಕರೆ, ಹಿರೇಮಲ್ಲನಕೆರೆ-55 ಸೆಂಟ್ಸ್‌, ಹುಗಲೂರು-1.25 ಎಕರೆ, ವರಕನಹಳ್ಳಿ-2 ಎಕರೆ, ಹುಗಲೂರು ತಾಂಡಾ- 1.97 ಎಕರೆ, ಹೊಳಲು-98 ಸೆಂಟ್ಸ್‌, ಕುರುವತ್ತಿ-1 ಎಕರೆ, ಹೊಳಲು-3 ಎಕರೆ, ತಿಮ್ಲಾಪುರ-6.27 ಎಕರೆ ಜಮೀನು ಮಸಣಕ್ಕಾಗಿ ಮಂಜೂರು ಮಾಡಬೇಕೆಂದು ಈಗಾಗಲೇ 2017-18ರಲ್ಲಿ ಅಂದಿನ ಹೊಸಪೇಟೆ ಆಯುಕ್ತರ ಕಚೇರಿಗೆ ದಾಖಲಾತಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಈ ವರೆಗೂ ಸ್ಮಶಾನಕ್ಕಾಗಿ ನಿವೇಶನ ಮಂಜೂರಾಗಿಲ್ಲ.

ಗದಗ: ರಸ್ತೆಯ ಮೇಲೆಯೇ ಶವ ಸಂಸ್ಕಾರ..!

ತಾಲೂಕಿನ ಹರವಿ ಬಸಾಪುರ, ಬ್ಯಾಲಹುಣ್ಸಿ, ಪೋತಲಗಟ್ಟಿ, ಹುಗಲೂರು ತಾಂಡಾ, ಗೋವಿಂದಪುರ ತಾಂಡಾ, ಮುದೇನೂರು, ಬಸರಹಳ್ಳಿ, ಬಸರಹಳ್ಳಿ ತಾಂಡಾ, ಅಡವಿಮಲ್ಲನಕೆರೆ ತಾಂಡಾ, ದುಂಗಾವತಿ ತಾಂಡಾ, ಬಿತ್ಯಾನತಾಂಡಾ, ಬಾನ್ಯಾನತಾಂಡಾ, ಅಂಕ್ಲಿ, ಅಂಕ್ಲಿ ತಾಂಡಾ, ಅರಳಿಹಳ್ಳಿ ತಾಂಡಾ, ಅರಳಿಹಳ್ಳಿ, ಅಂಗೂರು, ಕೋಟಿಹಾಳ, ಹೊಸಹಳ್ಳಿ, ಮುದ್ಲಾಪುರ ಹಳೆ ತಾಂಡಾ, ಮುದ್ಲಾಪುರ ಸಣ್ಣತಾಂಡಾ, ಮುದ್ಲಾಪುರ ಹೊಸ ತಾಂಡಾ, ಹೊನ್ನೂರು, ಕೊಟ್ನಿಕಲ್ಲು, ಕಾಗನೂರು, ರಂಗಾಪುರ, ಮಾಗಳ ತಾಂಡಾ, ಕೊಯಿಲಾರಗಟ್ಟಿ, ಸೋವೇನಹಳ್ಳಿ ಸೇರಿದಂತೆ 29 ಹಳ್ಳಿಗಳಲ್ಲಿ ಇಂದಿಗೂ ಸ್ಮಶಾನಗಳೇ ಇಲ್ಲ.

ಹಳ್ಳಿಗಳಲ್ಲಿ ಇಂದಿಗೂ ಸ್ಮಶಾನ ಅಭಿವೃದ್ಧಿ ಮರೀಚಿಕೆಯಾಗಿದೆ, ಸ್ಮಶಾನದ ತುಂಬೆಲ್ಲಾ ಮುಳ್ಳು ಗಿಡಗಂಟಿಗಳಿಂದ ತುಂಬಿಕೊಂಡಿವೆ. ಅಲ್ಲಿ​ಗೆ ಹೋಗಿ ಬರುವ ದಾರಿ ಕೆಸರು ಗದ್ದೆಯಂತಿದೆ. ಹಳ್ಳಿಗಳಲ್ಲಿ ಇಂದಿಗೂ ಹಳ್ಳ, ಪಾಳು ಬಿದ್ದಿರುವ ಕೆರೆಯಂಗಳದಲ್ಲಿ ಶವ ಹೂಳುತ್ತಿದ್ದಾರೆ.

ನಮ್ಮೂರಿಗೆ ಸ್ಮಶಾನವೇ ಇಲ್ಲ ತಮ್ಮ ತಮ್ಮ ಹೊಲ ಗದ್ದೆಗಳಲ್ಲಿಯೇ ಅಂತ್ಯ ಸಂಸ್ಕಾರ ಮಾಡ​ಲಾ​ಗು​ತ್ತಿ​ದೆ. ಜಮೀನು ಇಲ್ಲದ ಬಡ ಕುಟುಂಬಗಳು 3-4 ಕಿ.ಮೀ ದೂರದ ಹಳ್ಳಗಳಲ್ಲಿ ಹೆಣಗಳನ್ನು ಸುಡುವಂತಹ ಪರಿಸ್ಥಿತಿ ಇದೆ. ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ನಿವೇಶನ ಸರ್ಕಾರದಿಂದ ಖರೀದಿ ಮಾಡಿ ಸ್ಮಶಾನ ಸೌಲಭ್ಯ ಕಲ್ಪಿಸಬೇಕಿದೆ ಎಂದು ಬ್ಯಾಲಹುಣ್ಸಿ ಗ್ರಾಮಸ್ಥರು ಹೇಳಿದ್ದಾರೆ. 

ಸ್ಮಶಾನ ಸೌಲಭ್ಯ ಕುರಿತು ಹಡಗಲಿ ತಹಸೀಲ್ದಾರರಿಂದ ಮಾಹಿತಿ ಪಡೆದು, 29 ಹಳ್ಳಿಗಳಿಗೆ ಸ್ಮಶಾನಕ್ಕೆ ಗ್ರಾಮಗಳ ಅಕ್ಕಪಕ್ಕದಲ್ಲಿ ಸರ್ಕಾರಿ ಭೂಮಿ ಲಭ್ಯ ಇದ್ದರೆ, ಆ ಹಳ್ಳಿಗಳಿಗೆ ಸ್ಮಶಾನ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಹರಪನಹಳ್ಳಿ ಉಪ ವಿಭಾಗದ ಸಹಾಯಕ ಆಯುಕ್ತ ಚಂದ್ರಶೇಖರಯ್ಯ ತಿಳಿಸಿದ್ದಾರೆ.  
 

Follow Us:
Download App:
  • android
  • ios