ಕಾರಟಗಿ(ಅ.29): ಕಳೆದ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಕಲ್ಲಿನ ಗೋಡೆ ಕುಸಿದು ಮಲಗಿದ್ದ ಮಗುವೊಂದು ಮೃತಪಟ್ಟು ದಂಪತಿ ಗಾಯಗೊಂಡ ಘಟನೆ ಭಾನುವಾರ ಮಧ್ಯರಾತ್ರಿ ಪಟ್ಟಣದಲ್ಲಿ ನಡೆದಿದೆ.

ಇಲ್ಲಿನ 3ನೇ ವಾರ್ಡಿನ ದುರುಗಪ್ಪ ಮತು ಲಕ್ಷ್ಮೀ ದಂಪತಿ ತಮ್ಮ ಮಗುವಿನೊಂದಿಗೆ ಮಲಗಿದ್ದಾಗ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಕಲ್ಲಿನ ಗೋಡೆ ಕುಸಿದು ಮಗು ಮೌನೇಶ (2) ಸ್ಥಳದಲ್ಲಿಯೇ ಮೃತಪಟ್ಟಿದ್ದು, ದಂಪತಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ದಂಪತಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ಕಳುಹಿಸಲಾಗಿತ್ತು.

ಕೃಷಿ ಕೂಲಿ ಕಾರ್ಮಿಕರಾದ ದಂಪತಿ 3ನೇ ವಾರ್ಡಿನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದು, ಹಳೆ ಕಲ್ಲಿನ ಕಟ್ಟಡದ ಗೋಡಗೆ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಮಧ್ಯರಾತ್ರಿ ದುರುಗಪ್ಪ ಮತ್ತು ಲಕ್ಷ್ಮೀ ದಂಪತಿ ತಮ್ಮ ಮಗು ಮೌನೇಶ ಹಾಗೂ ಅವರ ಅಣ್ಣನ ಮಗಳು ದೀಪಾಳೊಂದಿಗೆ ಶೆಡ್‌ನಲ್ಲಿ ಮಲಗಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದಿಢೀರ್‌ ದೊಡ್ಡ ದೊಡ್ಡ ಗಾತ್ರದ ಕಲ್ಲುಗಳು ಗಾಢ ನಿದ್ರೆಯಲ್ಲಿದ್ದವರ ಮೇಲೆ ಬಿದ್ದಿವೆ. ಒಂದು ಕಲ್ಲು ದೀಪಾಳ ಕಾಲಿನ ಮೇಲೆ ಬಿದ್ದಿದ್ದರಿಂದ ಎಚ್ಚೆತ್ತುಕೊಂಡಾಗ ಈ ಮೂವರು ಕಲ್ಲು ಮತ್ತು ಮಣ್ಣಿನ ಅಡಿಯಲ್ಲಿ ಸಿಲುಕಿದ್ದರು ಕೂಡಲೇ ಪಕ್ಕದ ಮನೆಗೆ ತೆರಳಿದ ದೀಪಾ ತನ್ನ ಪಾಲಕರನ್ನು ಕರೆತಂದಿದ್ದಾಳೆ. ಈ ವೇಳೆ ನಿರಂತರ ಮಳೆ ಸುರಿಯುತ್ತಿತ್ತು.

ನೆರೆಹೊರೆಯವರೆಲ್ಲ ಸೇರಿ ಕಲ್ಲುಗಳನ್ನು ತೆಗೆದು ಮೂವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಮಗು ಮೃತಪಟ್ಟಿದ್ದು, ದಂಪತಿಗೆ ಗಂಭೀರ ಗಾಯಗಳಾಗಿವೆ. ಮಗು ಕಳೆದುಕೊಂಡ ತಾಯಿ ಲಕ್ಷ್ಮೀ ಇದೀಗ 8 ತಿಂಗಳ ಗರ್ಭಿಣಿ.
ಸ್ಥಳಕ್ಕೆ ಕಾರಟಗಿ ತಹಸೀಲ್ದಾರ್‌ ಆರ್‌. ಕವಿತಾ ಕಂದಾಯ ಅಧಿಕಾರಿಗಳೊಂದಿಗೆ ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮನೆ ಮತ್ತು ಮಗು ಕಳೆದುಕೊಂಡು ಕುಟುಂಬಕ್ಕೆ ಅಗತ್ಯ ಪರಿಹಾರ ನೀಡಲು ಸಕಲ ವ್ಯವಸ್ಥೆ ಮಾಡಿದರು. ಜೊತೆಗೆ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ನೆರವಾದರು.

ಸತತ ಮಳೆಯಿಂದ ಗೋಡೆ ಕುಸಿದು ಮಗು ಮೃತಪಟ್ಟಿದ್ದು, ಸಂತ್ರಸ್ತ ಕುಟುಂಬಕ್ಕೆ ತಾತ್ಕಾಲಿಕವಾಗಿ ಪರಿಹಾರ ನೀಡಲಾಗಿದೆ. ಕಾರಟಗಿ ಪಿಎಸ್‌ಐ ವಿಜಯಕೃಷ್ಣ ಗೌಡ ಮತ್ತು ಸಿಪಿಐ ಸುರೇಶ ತಳವಾರ ಭೇಟಿ ನೀಡಿದ್ದರು.