ಆನೆಗೊಂದಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತದೆ: ಸಚಿವ ಸಿ ಟಿ ರವಿ
ಉತ್ಸವಕ್ಕೆ 60 ಲಕ್ಷ ಅನುದಾನ | ಪ್ರತಿ ವರ್ಷ ತಪ್ಪದೇ ಉತ್ಸವ : ಸಚಿವ ಸಿ.ಟಿ.ರವಿ|ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೈ ಬಿಟ್ಟಿರುವ ಉತ್ಸವಗಳನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ| ನಾಡಿನ ಕಲೆ, ಸಂಸ್ಕೃತಿಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿ ಹೇಳುವ ಕಾರ್ಯ ಮಾಡಲಾಗುವುದು|
ಗಂಗಾವತಿ[ನ.6]: ಪ್ರಸ್ತುತ ವರ್ಷ ಆನೆಗೊಂದಿ ಉತ್ಸವ ಆಚರಿಸಲು ಹಾಗೂ ದಿನಾಂಕ ನಿರ್ಧರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಹೇಳಿದ್ದಾರೆ.
ಸೋಮವಾರ ತಾಲೂಕಿನ ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಕೆಳಗೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಂಪಿ ಉತ್ಸವ ಆಚರಣೆಯ ಸಿದ್ಧತೆ ನಡೆಸಲು ಸೂಚಿಸಲಾಗಿದೆ. ಅದೇ ಮಾದರಿಯಲ್ಲಿ ಆನೆಗೊಂದಿ ಉತ್ಸವ ಆಚರಿಸಲಾಗುವುದು ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಿಜಯನಗರ ಸಾಮ್ರಾಜ್ಯದ ರಾಜಧಾನಿ ಎನಿಸಿಕೊಂಡಿರುವ ಆನೆಗೊಂದಿ ಉತ್ಸವವನ್ನು ಅದ್ಧೂರಿ ಆಚರಿಸಲಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೈ ಬಿಟ್ಟಿರುವ ಉತ್ಸವಗಳನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ. ನಾಡಿನ ಕಲೆ, ಸಂಸ್ಕೃತಿಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿ ಹೇಳುವ ಕಾರ್ಯ ಮಾಡಲಾಗುವುದು ಎಂದರು.
ಆನೆಗೊಂದಿ ಪ್ರದೇಶ ರಾಮಾಯಣದ ಕಥೆ ಹೇಳುವ ಪ್ರದೇಶವಾಗಿದ್ದು, ಅಲ್ಲದೇ ಪಂಪಾಸರೋವರ, ನವ ವೃಂದಾವನಗಡ್ಡೆ, ವಾಲಿಕಿಲ್ಲಾ, ದುರ್ಗಾದೇವಿ ದೇವಸ್ಥಾನ, ಗವಿ ರಂಗನಾಥ, ರಂಗನಾಥ ದೇವಸ್ಥಾನ ಸೇರಿದಂತೆ ಐತಿಹಾಸಿಕಸ್ಮಾರಕಗಳು ಇಲ್ಲಿವೆ. ಇಂತಹ ಪ್ರದೇಶದಲ್ಲಿ ಉತ್ಸವನ ಡೆಸಬೇಕೆಂಬುದು ಸರ್ಕಾರದ ಉದ್ದೇಶವಾಗಿದ್ದರಿಂದ ಈ ವರ್ಷದಿಂದ ಉತ್ಸವಕ್ಕೆ ಚಾಲನೆ ನೀಡಲಾವುದು ಎಂದರು.
ಉತ್ಸವಕ್ಕೆ 60 ಲಕ್ಷ ಅನುದಾನ:
ಆನೆಗೊಂದಿ ಉತ್ಸವ ಆಚರಿಸಲು 60 ಲಕ್ಷ ಅನುದಾನ ಇದೆಎಂದು ತಿಳಿಸಿದ ಅವರು, ಎರಡು ಭಾರಿ ಉತ್ಸವ ಆಚರಿಸದೇ ಇರುವುದರಿಂದ ಪ್ರತಿ ವರ್ಷದ 30 ಲಕ್ಷಗಳಂತೆ 60 ಲಕ್ಷ ಇದೆ. ಅಲ್ಲದೆ ಬಡ್ಡಿ ಮೊತ್ತವೂ ಬ್ಯಾಂಕಿನಲ್ಲಿದೆ. ಜತೆಗೆ ಸಿಎಸ್‌ಆರ್. ಕೆಕೆಆರ್‌ಡಿಬಿ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಕಾರ ಪಡೆದು ಅದ್ಧೂರಿಯಾಗಿ ಉತ್ಸವ ಆಚರಿಸಲಾಗುವುದು ಎಂದು ಹೇಳಿದರು. ಸ್ಥಳೀಯ ಕಲಾವಿದರು ಸೇರಿದಂತೆ ವಿವಿಧ ರಾಜ್ಯದ ಕಲಾವಿದರನ್ನು ಆಹ್ವಾನಿಸಲಾಗುವುದು. ಸಾಹಿತ್ಯ, ಸಂಗೀತ, ಕಲೆ, ನೃತ್ಯ ಸೇರಿದಂತೆ ವಿವಿಧ ಸಾಹಿತ್ಯ ಸಂಬಂಧಿಸಿದ ನೃತ್ಯ ರೂಪಕಗಳನ್ನು ಉತ್ಸವದಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.
ಕಿರುಕುಳ ತಪ್ಪಿಸಿ:
ಹಂಪಿ ಪ್ರಾಧಿಕಾರದವರು ಜನರಿಗೆ ಕಿರುಕುಳ ನೀಡುತ್ತಿದ್ದು, ಇದನ್ನು ತಪ್ಪಿಸಬೇಕೆಂದು ಆನೆಗೊಂದಿ ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿಕೊಂಡರು. ಹಂಪಿ ಪ್ರಾಧಿಕಾರಕ್ಕೆ ಅವೈಜ್ಞಾನಿಕವಾಗಿ 15 ಗ್ರಾಮಗಳನ್ನು ಸೇರ್ಪಡೆಮಾಡಿದ್ದಾರೆ. ಈ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗಿದ್ದು, ಕೂಡಲೆ ಈ ತೊಂದರೆ ತಪ್ಪಿಸಬೇಕೆಂದು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು ಕಮಮಾಪುರದಲ್ಲಿ ನಡೆಯುವ ಹಂಪಿ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಸಂತೋಷ, ಕಲೋಜಿ, ಎಚ್.ಎಂ.ಸಿದ್ದರಾಮಸ್ವಾಮಿ,ತಹಸೀಲ್ದಾರ ಚಂದ್ರಕಾಂತ ಇದ್ದರು.
ವಿರೂಪಾಪುರ ರೆಸಾರ್ಟ್ ತೆರವುಗೊಳಿಸುವಂತೆ ಮನವಿ
ತಾಲೂಕಿನ ವಿರೂಪಾಪುರಗಡ್ಡೆಯಲ್ಲಿರುವ ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸುವಂತೆ ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ಒತ್ತಾಯಿಸಿದ್ದಾರೆ. ಆನೆಗೊಂದಿಯ ಅಂಜನಾದ್ರಿ ಪರ್ವತಕ್ಕೆಆಗಮಿಸಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಅವರು, ವಿರೂಪಾಪುರಗಡ್ಡೆಯಲ್ಲಿ 200 ಕ್ಕೂ ಹೆಚ್ಚು ರೆಸಾರ್ಟ್‌ಗಳಿದ್ದು, ಈ ಪ್ರದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು. ಇಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಬರುತ್ತಿದ್ದಾರೆ. ರೆಸಾರ್ಟ್ ಮಾಲೀಕರು ಮಾದಕ ವಸ್ತುಗಳನ್ನುಸರಬರಾಜು ಮಾಡುತ್ತಾ ಪ್ರಸಿದ್ಧವಾಗಿರುವ ಸ್ಥಳಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದ್ದಾರೆ.
ನದಿ ಪ್ರವಾಹ ಬಂದ ಸಂದರ್ಭದಲ್ಲಿ 500 ಕ್ಕೂಹೆಚ್ಚು ಪ್ರವಾಗರಿಗೆ ಆಶ್ರಯ ನೀಡಿದ್ದ ರೆಸಾರ್ಟ್‌ಮಾಲೀಕರ ವಿರುದ್ಧ ಜಿಲ್ಲಾಧಿಕಾರಿಗಳು ದೂರುನೀಡಿದ್ದಲ್ಲದೆ 23 ಜನರ ಮೇಲೆ ದೂರು ದಾಖಲಿಸಿದ್ದರು. ಕೂಡಲೆ ಸಚಿವರು ಈ ಪ್ರದೇಶದಲ್ಲಿರುವರೆಸಾರ್ಟ್‌ಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು. ಆನೆಗೊಂದಿ ಸುತ್ತಮುತ್ತಲು ಪ್ರಸಿದ್ಧ ಐತಿಹಾಸಿಕ ಪ್ರದೇಶಗಳಿದ್ದು,ಇದರ ರಕ್ಷಣೆಯಾಗಬೇಕಾಗಿದೆ ಅಲ್ಲದೆ ಅಂಜನಾದ್ರಿ ಪರ್ವತಕ್ಕೆ ಸೌಲಭ್ಯ ಕಲ್ಪಿಸಬೇಕೆಂದು ಪಂಪಣ್ಣ ನಾಯಕ ಮತ್ತು ಪದಾಧಿಕಾರಿಗಳು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಾಸಕ ಪರಣ್ಣಮುನವಳ್ಳಿ,ಬಿಜೆಪಿ ಜಿಲ್ಲಾದ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಸಂತೋಷ ಕೆಲೋಜಿ ಇದ್ದರು.