Asianet Suvarna News Asianet Suvarna News

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ, ಯಾತ್ರಿಕರಿಗೆ ಸುಸಜ್ಜಿತ ವಸತಿ ವ್ಯವಸ್ಥೆ

ಕೊಪ್ಪಳದ ಕುಂಭಮೇಳಕ್ಕೆ 8 ದಿನ ಬಾಕಿ| ಅಜ್ಜನ ಜಾತ್ರೆ: ಯಾತ್ರಿಕರಿಗೆ ವಸತಿ ವ್ಯವಸ್ಥೆ| 10 ಸಾವಿರ ಜನರಿಗೆ ಸುಸಜ್ಜಿತ ವಾಸ್ತವ್ಯಕ್ಕೆ ಅವಕಾಶ| ನಗರದ ನಾಲ್ಕು ಮಾರ್ಗದಿಂದ ಬರುವ ವಾಹನಗಳಿಗೆ ಆಯಾ ಮಾರ್ಗದಲ್ಲಿಯೇ ಪಾರ್ಕಿಂಗ್‌ ವ್ಯವಸ್ಥೆ|

Accommodation Arrangement for Pilgrims in Gavisiddeshwara Fair in Koppal
Author
Bengaluru, First Published Jan 4, 2020, 8:00 AM IST

ಕೊಪ್ಪಳ(ಜ.04): ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಇದೆ. ಇದಕ್ಕಾಗಿ ಇರುವ ಮೈದಾನ ಸಾಲದಾಗುತ್ತಿದೆ ಎನ್ನುವ ಭಾವನೆ ಮೂಡುತ್ತಿದೆ. ಈ ನಡುವೆಯೂ ಬಂದ ಭಕ್ತರಿಗೆ ವಾಸ್ತವ್ಯಕ್ಕೆ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಪ್ರಸಕ್ತ ವರ್ಷ ಸುಮಾರು 10 ಸಾವಿರ ಜನರಿಗೆ ಸುಸಜ್ಜಿತ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.
ವಾಸ್ತವ್ಯದ ವ್ಯವಸ್ಥೆಯ ಜತೆಗೂ ಮಿತಿಮೀರಿ ಜನಸಂದಣಿಯಾಗುವುದರಿಂದ ಗಲಾಟೆ ಹಾಗೂ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಳೆದ ಬಾರಿ ಕೆಲವೇ ಕೆಲವು ಸ್ಥಳಗಳಿಗೆ ಮಾತ್ರ ಸೀಮಿತವಾಗಿದ್ದ ಸಿಸಿ ಕ್ಯಾಮೆರಾ ಕಣ್ಣು ಈ ಬಾರಿ ಬಹುತೇಕ ಎಲ್ಲೆಡೆ ಗಮನ ಹರಿಸಲಿದೆ.

ಜ. 12ರಿಂದ 14ರ ವರೆಗೂ ವಸತಿ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ ಕೇವಲ 12 ಸ್ಥಳಗಳಲ್ಲಿ ಮಾಡಲಾಗಿದ್ದ ವ್ಯವಸ್ಥೆಯನ್ನು ಬೇಡಿಕೆಯ ಮೇರೆಗೆ 22 ಸ್ಥಳಗಳಿಗೆ ವಿಸ್ತರಣೆ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸೇವಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಜಾತ್ರೆಗೆ ಬರುವ ದೂರದೂರಿನ ಯಾತ್ರಿಕರು ಮೊದಲೇ ಮಠದ ಕಚೇರಿಯ ಸಂಖ್ಯೆಗೆ ಕರೆ ಮಾಡಿ, ತಮ್ಮ ವಸತಿಯನ್ನು ನೋಂದಾಯಿಸಿಕೊಳ್ಳಬಹುದಾಗಿದೆ.ಕಳೆದ ವರ್ಷ 6 ಸಾವಿರ ಜನರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಬಾರಿ ಅದನ್ನು ಹತ್ತು ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.

ವೈದ್ಯಕೀಯ ಸೇವೆಗಳು

ಜಾತ್ರೆಯಲ್ಲಿ ತುರ್ತು ಚಿಕಿತ್ಸೆಯ ಅವಶ್ಯಕತೆಯನ್ನು ಮನಗಂಡು ಉಚಿತ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತದೆ. ಜಾತ್ರೆಯುದ್ದಕ್ಕೂ 24 ಗಂಟೆಗಳ ವೈದ್ಯಕೀಯ ಸೇವೆ ಮತ್ತು ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ.
ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸ್ಥಳೀಯ ವೈದ್ಯಕೀಯ ಸಿಬ್ಬಂದಿ ಸಹಯೋಗದೊಂದಿಗೆ ಭಕ್ತಾದಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.

ಪಾರ್ಕಿಂಗ್‌ ವ್ಯವಸ್ಥೆ

ಜಾತ್ರೆಗೆ ಲಕ್ಷಾಂತರ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ನಗರದ ನಾಲ್ಕು ಮಾರ್ಗದಿಂದ ಬರುವ ವಾಹನಗಳಿಗೆ ಆಯಾ ಮಾರ್ಗದಲ್ಲಿಯೇ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೊಸಪೇಟೆ, ಗಂಗಾವತಿ ಮಾರ್ಗದಿಂದ ಬರುವ ವಾಹನಗಳಿಗಾಗಿ ಕುಟೀರ ಫ್ಯಾಮಿಲಿ ರೆಸ್ಟೋರೆಂಟ್‌ ಪಕ್ಕದಿಂದ ಗೋವನಕೊಪ್ಪ ಆಸ್ಪತ್ರೆಯ ಬದಿಯ ಮೂಲಕ ಡಾಲರ್ಸ್‌ ಕಾಲೋನಿಯಿಂದ ನೇರವಾಗಿ ಮಠಕ್ಕೆ ಬರಲು ಹೊಸ ರಸ್ತೆ ನಿರ್ಮಾಣವಾಗಿದೆ. ದ್ವಿಚಕ್ರ, ಕಾರು, ಟ್ರ್ಯಾಕ್ಟರ್‌, ಲಾರಿ ಇವುಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಕುಷ್ಟಗಿ ರಸ್ತೆಯಿಂದ ಬರುವ ವಾಹನಗಳಿಗಾಗಿ ಕುಷ್ಟಗಿ ರೈಲ್ವೆ ಗೇಟ್‌ ಮತ್ತು ಹೊಂಡಾ ಶೋರೂಮ್‌ ಎದುರುಗಡೆ ಬಳಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಗದಗ ರಸ್ತೆಯಿಂದ ಬರುವ ವಾಹನಗಳಿಗಾಗಿ ಹಳೆಯ ಸಾರ್ವಜನಿಕ ಮೈದಾನ ಮತ್ತು ಎಪಿಎಂಸಿ ಯಾರ್ಡ್‌ನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಕುಣಿಕೇರಿ ಮತ್ತು ಹಾಲವರ್ತಿ ರಸ್ತೆಗಳಿಂದ ಬರುವ ವಾಹನಗಳಿಗಾಗಿ ಶ್ರೀಮಠದ ಹಿಂಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಸಿಂದೋಗಿ, ಗೊಂಡಬಾಳ ಕಡೆಯಿಂದ ಗಡಿಯಾರ ಕಂಬದ ಮೂಲಕ ಬರುವ ವಾಹನಗಳಿಗೆ ಪಾಂಡುರಂಗ ದೇವಸ್ಥಾನದ ಹಿಂಭಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಶ್ರೀಗವಿಮಠದ ಜಾತ್ರೆ ಅಂಗವಾಗಿ ಜ. 11ರಂದು ಲಘು ರಥೋತ್ಸವ ನಡೆಯಲಿದೆ. ಮಹಾರಥೋತ್ಸವದ ಚಾಲನೆಯನ್ನು ಬೆಂಗಳೂರಿನ ಏಕಲವ್ಯ ಅರ್ಜುನ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಅವರು ಸಂ. 5.45 ಮಾಡಲಿದ್ದಾರೆ.

ಸಂಜೆ 6 ಗಂಟೆಗೆ ಕೈಲಾಸ ಮಂಟಪದಲ್ಲಿ ಧಾರ್ಮಿಕ ಗೋಷ್ಠಿ ಅನುಭಾವಿಗಳ ಅಮೃತಚಿಂತನ ಗೋಷ್ಠಿ ಜರುಗಲಿದೆ. ಶ್ರೀ ಗುರುಮಹಾಂತ ಮಹಾಸ್ವಾಮಿಗಳು, ಶ್ರೀ ವಿಶ್ವರಾಧ್ಯ ಕರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಕರಿಸಿದ್ಧೇಶ್ವರ ಮಠ ಬುಕ್ಕಸಾಗರ, ಶ್ರೀ ಬೂದೀಶ್ವರ ಮಹಾಸ್ವಾಮಿಗಳು ಹೊಸಳ್ಳಿ, ಶ್ರೀ ಸಹಜಾನಂದ ಮಹಾಸ್ವಾಮಿಗಳು, ಸಿದ್ದಾರೂಢಮಠ, ಮಹಾಲಿಂಗಪುರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಾ. ವಿಜಯ ಸಂಕೇಶ್ವರ, ಡಾ. ವೀಣಾ ಭಾಗವಹಿಸುವರು. ಗಾನ ಸುನಾದ ಎಂಬ ಸಂಗೀತ ಕಾರ್ಯಕ್ರಮದಲ್ಲಿ ವಾಸು ದಿಕ್ಷೀತ್‌, ಜಾದು ಪ್ರದರ್ಶನವನ್ನು ಪ್ರಕಾಶ ಹಾಗೂ ನೇತ್ರಾವತಿ ಹೆಮ್ಮಾಡಿ, ವಾದ್ಯ ವೈಭವ-ಸಂಗೀತ ಕಾರ್ಯಕ್ರಮವನ್ನು ಸುಕನ್ಯಾ ರಾಮಗೋಪಾಲ್‌ ಹಾಗೂ ವೃಂದದವರು ನೀಡುವರು. ಯೋಗ ಪ್ರದರ್ಶನವನ್ನು ಖುಷಿಗೌಡ, ಮೈಸೂರು ತಂಡದಿಂದ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಶರಣರ ದೀರ್ಘದಂಡ ನಮಸ್ಕಾರ:

ಸಂಸ್ಥಾನ ಶ್ರೀ ಗವಿಮಠದಲ್ಲಿ ಜಾತ್ರೆಯ ಅಂಗವಾಗಿ ಜ. 13ರಂದು ಶ್ರೀ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ ಹಾಕಲಿದ್ದಾರೆ.

ಎಲ್ಲೆಲ್ಲಿ ವ್ಯವಸ್ಥೆ?

1. ಶ್ರೀಮತಿ ಶಾರದಮ್ಮ ಕೊತಬಾಳ ಬಿಬಿಎಂ, ಬಿಸಿಎ, ಬಿಕಾಂ ಕಾಲೇಜು, ಕೊಪ್ಪಳ
2. ಶ್ರೀ ಗವಿಸಿದ್ಧೇಶ್ವರ ಪದವಿಪೂರ್ವ ಕಾಲೇಜು, ಕೊಪ್ಪಳ
3. ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆ, ಕೊಪ್ಪಳ
4. ಶ್ರೀ ಗವಿಸಿದ್ಧೇಶ್ವರ ಬಿಇಡಿ ಕಾಲೇಜು, ಕೊಪ್ಪಳ
5. ಶ್ರೀ ಶಿವಶಾಂತವೀರ ಪಬ್ಲಿಕ್‌ ಸ್ಕೂಲ್‌, ಕೊಪ್ಪಳ
6. 2000 ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ, ಕೊಪ್ಪಳ
7. ಶ್ರೀ ಶಿವಶಾಂತವೀರ ಮಂಗಲ ಭವನ, ಕೊಪ್ಪಳ
8. ಶ್ರೀ ಗವಿಸಿದ್ಧೇಶ್ವರ ಎಸಿ ಹಾಲ್‌, ಕೊಪ್ಪಳ
9. ಯಾತ್ರಿ ನಿವಾಸ, ಕೊಪ್ಪಳ
10. ಮಹಾಂತಯ್ಯನ ಮಠ ಕಲ್ಯಾಣ ಮಂಟಪ, ಕೊಪ್ಪಳ
11. ಪಾಂಡುರಂಗ ಕಲ್ಯಾಣ ಮಂಟಪ, ಕೊಪ್ಪಳ
12. ಶ್ರೀ ಪಾನಘಂಟಿ ಕಲ್ಯಾಣ ಮಂಟಪ, ಕೊಪ್ಪಳ
13. ಮಾಸ್ತಿ ಪಬ್ಲಿಕ್‌ ಸ್ಕೂಲ್‌, ಕೊಪ್ಪಳ
14. ತೇರಾಪಂತಿ ಭವನ, ಕೊಪ್ಪಳ
15. ಕುವೆಂಪು ಸ್ಕೂಲ್‌, ಕೊಪ್ಪಳ
16. ನಿವೇದಿತಾ ಸ್ಕೂಲ್‌, ಕೊಪ್ಪಳ
17. ಜೈನ ಸ್ಥಾನಕ ಭವನ, ಕೊಪ್ಪಳ
18. ಮೇದಾರ ಕೇತೇಶ್ವರ ಕಲ್ಯಾಣ ಮಂಟಪ, ಕೊಪ್ಪಳ
19. ಗಾಣಿಗರ ಸಮುದಾಯ ಭವನ, ಕೊಪ್ಪಳ
20. ವೃದ್ಧಾಶ್ರಮ, ಕೊಪ್ಪಳ
21. ಶ್ರೀ ಮಳೆಮಲ್ಲೇಶ್ವರ ಕಲ್ಯಾಣ ಮಂಟಪ, ಕೊಪ್ಪಳ
22. ಮಹಿಳಾ ವಸತಿ ನಿಲಯ, ಕೊಪ್ಪಳ
 

Follow Us:
Download App:
  • android
  • ios