ಕೋಲಾರ, [ಏ.29]: ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಹೆಸರಿನ ಕಂಪನಿ ಹಣ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಮೋಸ ಹೋದ ಜನರು ಕಛೇರಿಗೆ ಮುತ್ತಿಗೆ ಹಾಕಿ, ಕಂಪನಿ ಮಾಲೀಕನಿಗೆ ಥಳಿಸಿದ ಘಟನೆ ನಡೆದಿದೆ. 

ತಿರುಮಲ ಸೌಹಾರ್ದ ಕ್ರೆಡಿಟ್ ಕೋಪರೇಟಿವ್ ಲಿಮಿಟೆಡ್ ಎಂಬ ಹೆಸರಿನ ಕಂಪನಿ, ಚೀಟಿ ವ್ಯವಹಾರ, ಹಣ ಡೆಪಾಸಿಟ್, ಲಾಟರಿ ಚೀಟಿ ಹಣ ಪಡೆದು ಒಂದುವರೆ ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. 

ಕೋಲಾರ ನಗರ ಹೊರವಲಯದಲ್ಲಿ ಈ ಕಂಪನಿ ಕಛೇರಿ ಇದ್ದು. ವೇಮಗಲ್ ಹೋಬಳಿಯ ನೂರಾರು ಜನರಿಗೆ ಹಣ ನೀಡದೇ ಈ ಕಂಪನಿ ವಂಚಿಸಿದೆ ಎನ್ನಲಾಗಿದೆ. 

ಹೀಗಾಗಿ ಮೋಸ ಹೋದ ವೇಮಗಲ್ ನಿವಾಸಿಗಳು, ಇಂದು ಕಚೇರಿಗೆ ನುಗ್ಗಿ ಕಂಪನಿ ಮಾಲಿಕ ಶ್ರೀನಿವಾಸ್‌ಗೆ ಥಳಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕೋಲಾರ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.