ಕೋಲಾರ ಜಿಲ್ಲಾಧಿಕಾರಿ ರವಿಕುಮಾರ್ ಅವರು 50 ಕೋಟಿ ರೂ. ಮೌಲ್ಯದ 14.37 ಎಕರೆ ಸರ್ಕಾರಿ ಜಮೀನನ್ನು ಕಾನೂನುಬಾಹಿರವಾಗಿ ಭೂಗಳ್ಳರಿಗೆ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಆರೋಪಿಸಿದ್ದಾರೆ. ಉಪವಿಭಾಗಾಧಿಕಾರಿಗಳ ಆದೇಶವನ್ನು ರದ್ದುಪಡಿಸಿ, ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ.
ಕೋಲಾರ: ಸರ್ಕಾರಿ ಆಸ್ತಿಯನ್ನು ಉಳಿಸಿದ್ದ ಉಪವಿಭಾಗಾಧಿಕಾರಿ ಆದೇಶವನ್ನು ಏಕಾಏಕಿ ರದ್ದು ಮಾಡಿದ ಜಿಲ್ಲಾಧಿಕಾರಿ ರವಿಕುಮಾರ್ ಅವರು ರಾಜಕಾರಣಿಗಳು ಮತ್ತು ಉಳ್ಳವರ ಲಾಬಿಗೆ ಮಣಿದು ಕಾನೂನು ಬಾಹೀರವಾಗಿ 50 ಕೋಟಿ ರು. ಮೌಲ್ಯದ 14.37 ಎಕರೆ ಜಮೀನನ್ನು ಭೂಗಳ್ಳರಿಗೆ ಬಿಟ್ಟುಕೊಟ್ಟಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಹೇಳಿದರು.
ಎಲ್ಲಿದೆ ಈ ಜಮೀನು?
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಂಗಾರಪೇಟೆ ತಾಲೂಕಿನ ಕೃಷ್ಣಾಪುರ ದಿನ್ನೆ ಗ್ರಾಮದ ಸರ್ವೇ ನಂಬರ್ 21ರಲ್ಲಿನ ಸರ್ಕಾರಿ ಖರಾಬು ಅಂಗಳ, ಕೊರಕಲು, ಕಲ್ಲುಬಂಡೆ, ಕೆರೆ ಅಂಗಳ, ಗೋಮಾಳ ಇರುವ 14.37 ಎಕರೆ ಜಮೀನನ್ನು 11.ಸೆ .2023ರಂದು ಖಾತೆ ಮಾಡಲು ಶ್ರೀರಾಮಯ್ಯಶೆಟ್ಟಿ, ರಘುನಾಥ ಶೆಟ್ಟಿ, ಮುನಿವೆಂಕಟಮ್ಮ, ಮಂಜುನಾಥ್ ಅವರು ಬಂಗಾರಪೇಟೆ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು.
ತಹಸೀಲ್ದಾರ್ ಸುಜಾತ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಂಜಯ್ ಆಮೀಶಕ್ಕೆ ಮಣಿದು ಕೋಲಾರ ಎಸಿ ಮುಂದೆ ಕಡತವನ್ನು ಮಂಡಿಸಿದ್ದರು. ಅರ್ಜಿ ಪರಿಶೀಲಿಸಿದ ಎಸಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್ ಅವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಂಡು ಕೇಸ್ ನಡೆಸಿ ಎದುರುದಾರರು ಸರ್ಕಾರಿ ಜಮೀನಿನ ಮೇಲೆ ತಮಗಿರುವ ಹಕ್ಕು ಬಾಧ್ಯತೆಗಳನ್ನು ನಿರೂಪಿಸದ ಕಾರಣ ಪಹಣಿಯಲ್ಲಿ ಸರ್ಕಾರಿ ಜಮೀನು ಎಂದು ಮುಂದುವರೆಸುವ ಜತೆಗೆ ಅನಧೀಕೃತ ಒತ್ತುವರಿದಾರರನ್ನು ಸ್ಥಳದಿಂದ ತೆರವುಗೊಳಿಸಲು ಬಂಗಾರಪೇಟೆ ತಹಸೀಲ್ದಾರ್‌ಗೆ ಆದೇಶ ಮಾಡಿದ್ದರು.
ಅಧಿಕಾರ ದುರ್ಬಳಕೆಯ ಆರೋಪ
ಈ ನಡುವೆ ಎದುರುದಾರರು ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸದಿದ್ದರೂ ಡಿಸಿ ರವಿಕುಮಾರ್ ಯಾವುದೇ ವಿಚಾರಣೆ ನಡೆಸದೆ ಉಪ ವಿಭಾಗಾಧಿಕಾರಿ ನ್ಯಾಯಾಲಯದ ಆದೇಶ ಏಕಪಕ್ಷೀಯವಾಗಿ 18.09.2026ರಂದು ಕಚೇರಿ ಆದೇಶದದ ಮೂಲಕ ರದ್ದು ಮಾಡಿದ್ದಾರೆ. ಜಿಲ್ಲಾಧಿಕಾರಿ ರವಿಕುಮಾರ್ ಖಾಸಗಿ ವ್ಯಕ್ತಿಗಳಿಗೆ ನೆರವು ನೀಡುವ ಉದ್ದೇಶದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ನ್ಯಾಯಿಕ ಪ್ರಕ್ರಿಯೆಗಳಿಗೆ ಅನ್ಯಾಯ ಮಾಡಿದ್ದಾರೆ ಎಂದರು.
ಸಾಮಾಜಿಕ ಹೋರಾಟಗಾರ ಮಾಲೂರು ನವೀನ್ ಇದ್ದರು.


