ಮನೆ ಕಳೆದುಕೊಂಡವರಿಗೆ ಹಾಗೂ ನದಿ ತೀರದ ಎಲ್ಲಾ ನಿವಾಸಿಗಳಿಗೂ ಪುರ್ನವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿ ಜಾಗದ ಹುಡುಕಾಟ ನಡೆಸುತ್ತಿದ್ದೇವೆ. ಶೀಘ್ರದಲ್ಲಿ ಮನೆ ನಿರ್ಮಿಸಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಸಚಿವ ವಿ. ಸೋಮಣ್ಣ ಭರವಸೆ ನೀಡಿದ್ದಾರೆ.

ಕೊಡಗು(ಅ.19): ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ನದಿ ತೀರದ ನಿವಾಸಿಗಳು ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿ ಆಶ್ರಯ ಪಡೆದಿರುವ ನೆಲ್ಯಹುದಿಕೇರಿ ಸರ್ಕಾರಿ ಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಶುಕ್ರವಾರ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದ್ದಾರೆ.

ಸಿದ್ದಾಪುರ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಮನೆ ಕಳೆದುಕೊಂಡವರಿಗೆ ಹಾಗೂ ನದಿ ತೀರದ ಎಲ್ಲಾ ನಿವಾಸಿಗಳಿಗೂ ಪುರ್ನವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿ ಜಾಗದ ಹುಡುಕಾಟ ನಡೆಸುತ್ತಿದ್ದೇವೆ. ಶೀಘ್ರದಲ್ಲಿ ಮನೆ ನಿರ್ಮಿಸಿ ಪುನರ್ವಸತಿ ಕಲ್ಪಿಸಲಾಗುವುದು ಎಂದಿದ್ದಾರೆ.

ಕೊಡಗಿನಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

ಸಂತ್ರಸ್ತರು ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿರುವುದರಿಂದ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆ ಆಗುತ್ತಿರುವುದರಿಂದ ಶಾಲೆ ಬಿಟ್ಟು ಬಾಡಿಗೆ ಮನೆಗಳಿಗೆ ತೆರಳಲು ಮನವಿ ಮಾಡಿದರು. ಮುಂದಿನ ಹತ್ತು ತಿಂಗಳೊಳಗೆ ಜಾಗ ಗುರುತಿಸಿ ಮನೆ ನಿರ್ಮಾಣ ಮಾಡಿಕೊಡಲಾಗುವುದು. ತಾತ್ಕಾಲಿಕ ಬಾಡಿಗೆ ಹಣವಾಗಿ ತಿಂಗಳಿಗೆ 5 ಸಾವಿರ ರು.ನೀಡುತ್ತೇವೆ. ಅದನ್ನು 2 ಕಂತುಗಳಲ್ಲಿ 25 ಸಾವಿರ ರು.ಗಳಂತೆ ನೀಡಲಾಗುವುದು ಎಂದರು.

ವಿದ್ಯುತ್‌ ಬಿಲ್‌ ಬೇಡ:

ಬೆಳೆಗಾರರ ಪಂಪ್‌ ಸೆಟ್‌ಗೆ 10 ಎಚ್‌.ಪಿ.ವರೆಗಿನ ಬಳಕೆಗೆ ವಿದ್ಯುತ್‌ ಉಚಿತವಾಗಿದ್ದರೂ ಕೆಪಿಟಿಸಿಎಲ್‌ ಬಿಲ್‌ ನೀಡುತ್ತಿದೆ ಎಂಬ ಆರೋಪ ಬೆಳೆಗಾರರಿಂದ ಕೇಳಿ ಬಂದ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್‌ ಬಿಲ್‌ ನೀಡದಂತೆ ಸಂಸ್ಥೆಯವರಿಗೆ ಸೂಚಿಸಿದರು.

ಶಾಸಕ ಅಪ್ಪಚ್ಚು ರಂಜನ್‌, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಉಪವಿಭಾಗಾಧಿಕಾರಿ ಜವರೇ ಗೌಡ ಮತ್ತಿತರರು ಇದ್ದರು.

ವೈಯಕ್ತಿಕ ವಿಚಾರ ಸಾರ್ವಜನಿಕ ಆಗಬಾರದು: ಸೋಮಣ್ಣ