ಮಡಿಕೇರಿ (ನ.06): ಮಗಳ ಮದುವೆಯನ್ನು ಕಣ್ತುಂಬಿಕೊಳ್ಳಬೇಕೆಂದು ಆಸೆ ಕಂಗಳಿಂದ ಕಾಯುತ್ತಿದ್ದ ತಂದೆ ಮದುವೆ ಹಿಂದಿನ ರಾತ್ರಿ ಕೊನೆಯುಸಿರೆಳೆದಿದ್ದು, ಮದುವೆ ನಿಲ್ಲಬಾರದೆಂಬ ಕಾರಣಕ್ಕೆ ಮಗಳಿಂದ ಈ ವಿಷಯ ಮುಚ್ಚಿಟ್ಟು ಮದುವೆ ನಡೆಸಿದ ಮನಕಲಕುವ ಘಟನೆ ತಿರು​ಪ​ತಿ​ಯಲ್ಲಿ ನಡೆದಿದೆ.

ಮಡಿಕೇರಿ ಮೂಲದ ದಾಮೋದರ ಇಚ್ಛೆಯಂತೆ ಅವರ ಮಗಳ ಮದುವೆಗೆ ತಿರುಪತಿಯ ತಿಮ್ಮನದ ಸನ್ನಿದಾನದಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಇದರಂತೆ ನ.3ರಂದು ಮಹೂರ್ತ ನಿಗದಿಯಾಗಿತ್ತು, ಎಲ್ಲರೂ ನ.2ರಂದೇ ತಿರುಪತಿ ತಲುಪಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ನ.2 ಶನಿವಾರ ಮಧ್ಯರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ ಕೆಲ ಕ್ಷಣಗಳಲ್ಲೇ ಕೊನೆಯುಸಿರೆಳೆದಿದ್ದಾರೆ. ಕೊನೆಗೆ ಮಗಳಿಂದ ತಂದೆ ಸಾವಿನ ಸುದ್ದಿ ಮುಚ್ಚಿಟ್ಟು, ತಂದೆಗೆ ಹುಷಾರಿಲ್ಲ ನಂತರ ಬರುತ್ತಾರೆಂದು ಆಕೆಯನ್ನು ನಂಬಿಸಿ ಧಾರೆ ನೆರವೇರಿಸಿದ್ದಾರೆ. ಬಳಿಕ ಆಕೆಗೆ ನಿಜವನ್ನು ತಿಳಿಸಿದ್ದು, ತಂದೆಯ ದಾರಿ ಕಾಯುತ್ತಿದ್ದ ಆಕೆಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ದಾಮೋದರ ಅವರ ಮೃತದೇಹವನ್ನು ಸೋಮವಾರ ಮಡಿಕೇರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.