How to store coconut without fridge: ಫ್ರಿಡ್ಜ್ ಇಲ್ಲದೆಯೂ ಒಡೆದ ತೆಂಗಿನಕಾಯಿಯನ್ನು ತಿಂಗಳುಗಟ್ಟಲೆ ಕೆಡದಂತೆ ತಾಜಾವಾಗಿಡಬಹುದು ಅಂದ್ರೆ ನಂಬ್ತೀರಾ? ಹೌದು, ಇದಕ್ಕೆ ಕರೆಂಟ್ ಕೂಡ ಬೇಡ, ದುಬಾರಿ ಬಾಕ್ಸ್ ಕೂಡ ಬೇಡ! ನಮ್ಮ ಅಜ್ಜಿಯ ಕಾಲದ ಈ ಒಂದು ಸಿಂಪಲ್ ಟ್ರಿಕ್ ಗೊತ್ತಿದ್ರೆ ಸಾಕು, ಕೊಬ್ಬರಿ ಎಂದಿಗೂ ಹಾಳಾಗಲ್ಲ.
ಪ್ರತಿದಿನದ ಅಡುಗೆಗೆ ತೆಂಗಿನಕಾಯಿ ಅತ್ಯಗತ್ಯ. ಆದರೆ ಒಡೆದ ತೆಂಗಿನಕಾಯಿ ಒಂದೆರಡು ದಿನಗಳಲ್ಲೇ ಜಿಡ್ಡಾಗಿ, ಬೂಸ್ಟು ಹಿಡಿದು ವಾಸನೆ ಬರಲು ಶುರುವಾಗುತ್ತದೆ. ಹಬ್ಬ-ಹರಿದಿನಗಳಲ್ಲಿ ಹೆಚ್ಚು ಕಾಯಿ ಉಳಿದುಕೊಂಡಾಗ ಅದನ್ನು ಕಾಪಾಡುವುದೇ ದೊಡ್ಡ ತಲೆನೋವು. ಆದರೆ, ಕೆಲವು ಸರಳ ಮನೆಮದ್ದು ಹಾಗೂ ಟ್ರಿಕ್ಸ್ಗಳನ್ನು ಅನುಸರಿಸಿದರೆ ತೆಂಗಿನಕಾಯಿಯನ್ನು ವಾರಗಳಲ್ಲ, ತಿಂಗಳುಗಟ್ಟಲೆ ಹಾಳಾಗದಂತೆ ತಾಜಾವಾಗಿಡಬಹುದು.
ರೂಮ್ ಟೆಂಪರೇಚರ್ನಲ್ಲಿ (ಫ್ರಿಡ್ಜ್ ಇಲ್ಲದೆ) ಇಡುವ ವಿಧಾನ
ನೀರಿನಲ್ಲಿ ಮುಳುಗಿಸಿಡಿ: ತೆಂಗಿನಕಾಯಿ ಒಡೆದ ನಂತರ, ಆ ಹೋಳನ್ನು ಒಂದು ಪಾತ್ರೆಗೆ ಹಾಕಿ, ಅದು ಪೂರ್ತಿಯಾಗಿ ಮುಳುಗುವಷ್ಟು ನೀರು ಹಾಕಿ ಇಡಿ.
ನೀರು ಬದಲಾಯಿಸುವುದು ಮುಖ್ಯ: ದಿನ ಬಿಟ್ಟು ದಿನ (ಅಥವಾ ಪ್ರತಿದಿನ) ಆ ನೀರನ್ನು ಬದಲಾಯಿಸುತ್ತಿರಬೇಕು. ಹೀಗೆ ಮಾಡುವುದರಿಂದ ತೆಂಗಿನಕಾಯಿ ಜಿಡ್ಡುಗಟ್ಟುವುದಿಲ್ಲ, ವಾಸನೆ ಬರುವುದಿಲ್ಲ ಹಾಗೂ ರೂಮ್ ಟೆಂಪರೇಚರ್ನಲ್ಲೇ ಹಲವು ದಿನಗಳ ಕಾಲ ತಾಜಾವಾಗಿರುತ್ತದೆ.
ಅತ್ಯಂತ ಸರಳ ಮತ್ತು ಹಳೆಯ ಮನೆಮದ್ದು
ತೆಂಗಿನಕಾಯಿ ಒಡೆದ ನಂತರ ಅದರ ಬಿಳಿ ಭಾಗಕ್ಕೆ (ತಿರುಳಿಗೆ) ಸ್ವಲ್ಪ ಪುಡಿ ಉಪ್ಪನ್ನು ಸವರಿ ಇಟ್ಟರೆ, ಅದಕ್ಕೆ ಬ್ಯಾಕ್ಟೀರಿಯಾ ಅಥವಾ ಬೂಸ್ಟು ಹಿಡಿಯುವುದಿಲ್ಲ. ಇದು ವಾರಗಟ್ಟಲೆ ಕೆಡದಂತೆ ತಡೆಯುವ ಅತ್ಯಂತ ಸರಳ ಮತ್ತು ಹಳೆಯ ಮನೆಮದ್ದು.
ಚಿಪ್ಪಿನಿಂದ ಕಾಯಿ ಸುಲಭವಾಗಿ ಬಿಡಿಸಲು ಟ್ರಿಕ್
ಮೊದಲನೇಯ ವಿಧಾನ: ತೆಂಗಿನಕಾಯಿಯನ್ನು ಚಿಪ್ಪಿನಿಂದ ತೆಗೆಯುವುದು ಕಷ್ಟವೆನಿಸಿದರೆ, ಅದನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ ಅಥವಾ ಫ್ರೀಜರ್ನಲ್ಲಿ ಸ್ವಲ್ಪ ಹೊತ್ತು ಇಟ್ಟು ತೆಗೆಯಿರಿ. ಹೀಗೆ ಮಾಡಿದಾಗ ತೆಂಗಿನಕಾಯಿ ಚೂರಿಯಿಂದ ಚುಚ್ಚಿದ ತಕ್ಷಣ ಚಿಪ್ಪಿನಿಂದ ಪೂರ್ತಿಯಾಗಿ ಸುಲಭವಾಗಿ ಕಿತ್ತು ಬರುತ್ತದೆ.
ಎರಡನೇಯ ವಿಧಾನ: ತೆಂಗಿನಕಾಯಿ ಹೋಳನ್ನು ಗ್ಯಾಸ್ ಒಲೆಯ ಮೇಲೆ (ಚಿಪ್ಪಿನ ಭಾಗ ಕೆಳಗಿರುವಂತೆ) ಕೇವಲ 1- 2 ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಬಿಸಿಯಾದ ನಂತರ ಚಾಕುವಿನಿಂದ ತುದಿಯನ್ನು ಸ್ವಲ್ಪ ಸರಿಸಿದರೆ ಸಾಕು, ಸಂಪೂರ್ಣ ಕೊಬ್ಬರಿ ಚಿಪ್ಪಿನಿಂದ ಒಂದೇ ಪೀಸ್ ಆಗಿ ಸುಲಭವಾಗಿ ಕಳಚಿಕೊಳ್ಳುತ್ತದೆ.
ಫ್ರಿಡ್ಜ್ನಲ್ಲಿ ತಿಂಗಳುಗಟ್ಟಲೆ ಸ್ಟೋರ್ ಮಾಡುವ ವಿಧಾನ
ತೆಂಗಿನಕಾಯಿಯನ್ನು ಚಿಪ್ಪಿನಿಂದ ಬೇರ್ಪಡಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಅದರಲ್ಲಿ ನೀರಿನಂಶವಿಲ್ಲದಂತೆ ಒಣ ಬಟ್ಟೆಯಲ್ಲಿ ಒರೆಸಿ. ನಂತರ ಒಂದು ಏರ್ಟೈಟ್ ಬಾಕ್ಸ್ (Air-tight container) ಅಥವಾ ಜಿಪ್ಲಾಕ್ (Ziploc) ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ಗಾಳಿ ಆಡದಂತೆ ಮುಚ್ಚಿ ಫ್ರಿಡ್ಜ್ನಲ್ಲಿಡಿ. ಹೀಗೆ ಮಾಡಿದರೆ 3 ರಿಂದ 4 ತಿಂಗಳುಗಳ ಕಾಲ ತೆಂಗಿನಕಾಯಿ ಸ್ವಲ್ಪವೂ ಹಾಳಾಗದೆ ಹಾಗೇ ಇರುತ್ತದೆ. ಅಡುಗೆಗೆ ಬೇಕಾದಾಗ ಅಷ್ಟೇ ತುಂಡುಗಳನ್ನು ಹೊರತೆಗೆದು ಬಳಸಬಹುದು.
ತೆಂಗಿನ ನೀರನ್ನು ವ್ಯರ್ಥ ಮಾಡಬೇಡಿ
ಕಾಯಿ ಒಡೆದಾಗ ಬರುವ ನೀರನ್ನು ಸೋಸಿ ಫ್ರಿಡ್ಜ್ನಲ್ಲಿಟ್ಟರೆ ಎರಡು ದಿನಗಳವರೆಗೆ ಕೆಡುವುದಿಲ್ಲ. ಇದನ್ನು ದೋಸೆ ಹಿಟ್ಟಿಗೆ ಅಥವಾ ಅಡುಗೆಗೆ ಬಳಸಿದರೆ ರುಚಿ ದುಪ್ಪಟ್ಟಾಗುತ್ತದೆ.
ಕ್ಯೂಬ್ ಮಾಡಿಕೊಳ್ಳಬಹುದು
ಪ್ರತಿದಿನ ಕಾಯಿ ತುರಿಯಲು ಸಮಯವಿಲ್ಲದಿದ್ದರೆ, ಒಮ್ಮೆಲೆ ಎಲ್ಲಾ ಕಾಯಿಯನ್ನು ತುರಿದುಬಿಡಿ.
ಈ ತುರಿಯನ್ನು ಐಸ್ ಕ್ಯೂಬ್ ಟ್ರೇ (Ice Cube Tray) ನಲ್ಲಿ ಹಾಕಿ ಫ್ರೀಜರ್ನಲ್ಲಿಡಿ.
ಗಟ್ಟಿಯಾದ ಮೇಲೆ ಆ ಕ್ಯೂಬ್ಗಳನ್ನು ತೆಗೆದು ಜಿಪ್ಲಾಕ್ ಕವರ್ನಲ್ಲಿ ಹಾಕಿಡಿ. ಸಾಂಬಾರ್, ಪಲ್ಯ ಅಥವಾ ಚಟ್ನಿ ಮಾಡುವಾಗ ಬೇಕಾದಷ್ಟು ಕ್ಯೂಬ್ಗಳನ್ನು ನೇರವಾಗಿ ಬಳಸಬಹುದು (ಇದು ಕೆಲಸಕ್ಕೆ ಹೋಗುವವರಿಗೆ ಬೆಸ್ಟ್ ಟಿಪ್).