ದಾವಣಗೆರೆ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ವೈರಲ್ ಆಡಿಯೋ ಕುರಿತು ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಪ್ರತಿಕ್ರಿಯಿಸಿದ್ದಾರೆ. ಆಡಿಯೋದಲ್ಲಿನ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಅವರು, ಅದೊಂದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.
ದಾವಣಗೆರೆ (ಜೂ.02): ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಜಿಲ್ಲೆಯ ರಾಜಕೀಯ ವಲಯದಲ್ಲಿ ಈಗ ಜಮೀರ್ ಅಹ್ಮದ್ ಮತ್ತು ಮೊಹಮ್ಮದ್ ಸಿರಾಜ್ ನಡುವಿನದ್ದು ಎನ್ನಲಾದ ಆಡಿಯೋ ಸಂಭಾಷಣೆ ಭಾರಿ ಸಂಚಲನ ಮೂಡಿಸಿದೆ. ಈ ಆಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನನ್ನ ಬಗ್ಗೆ ಮಾತನಾಡಿರುವುದು ಸತ್ಯಕ್ಕೆ ದೂರವಾದದ್ದು:
ದಾವಣಗೆರೆಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, 'ವೈರಲ್ ಆಗಿರುವ ಆಡಿಯೋದಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ಆದರೆ ನನ್ನ ಬಗ್ಗೆ ಅಲ್ಲಿ ಮಾತನಾಡಿರುವ ವಿಚಾರಗಳು ಸತ್ಯಕ್ಕೆ ಮೈಲಿ ದೂರದಲ್ಲಿವೆ. ಮೊಹಮ್ಮದ್ ಸಿರಾಜ್ ಅವರು ಸುಮಾರು ಒಂದು ವರ್ಷದ ಹಿಂದೆ ಶಾಲೆಯೊಂದರ ಕಾರ್ಯಕ್ರಮದಲ್ಲಿ ಸಿಕ್ಕಾಗ ನಮಸ್ಕಾರ ಹೇಳಿದ್ದರು. ಅದು ಬಿಟ್ಟರೆ ಚುನಾವಣೆ ವೇಳೆಯಲ್ಲಿ ಅವರು ನನಗೆ ಎಲ್ಲಿಯೂ ಸಿಕ್ಕಿಲ್ಲ. ಇನ್ನು ಜಮೀರ್ ಅಹ್ಮದ್ ಅವರ ಪರಿಚಯವೇ ನನಗೆ ಇಲ್ಲ' ಎಂದು ಆಡಿಯೋ ಸಂಭಾಷಣೆಯನ್ನು ತಳ್ಳಿಹಾಕಿದರು.
ಒಪ್ಪಂದ ಮಾಡಿಕೊಂಡಿದ್ದರೆ ನಾವು ಗೆಲ್ಲುತ್ತಿದ್ದೆವು:
ಆಡಿಯೋದಲ್ಲಿ ಒಪ್ಪಂದದ ಕುರಿತು ಕೇಳಿಬರುತ್ತಿರುವ ಆರೋಪಗಳಿಗೆ ಕಿಡಿಕಾರಿದ ಅವರು, 'ಒಂದು ವೇಳೆ ನಾವು ಯಾರೊಂದಿಗಾದರೂ ಒಪ್ಪಂದ ಮಾಡಿಕೊಂಡಿದ್ದರೆ ಇವತ್ತು ನಾವೇ ಗೆಲ್ಲುತ್ತಿದ್ದೆವು. ನಾನೊಬ್ಬ ಬಡವನ ಮಗನಾಗಿ ಚುನಾವಣೆ ಮಾಡಿದ್ದೇನೆ. ದಾವಣಗೆರೆಯ ಜನ ನನಗೆ 64 ಸಾವಿರ ಮತಗಳನ್ನು ನೀಡಿದ್ದಾರೆ. ಅವರು ಹೇಗೆ ಚುನಾವಣೆ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಣ, ಹೆಂಡ ಮತ್ತು ಸೀರೆ ಹಂಚಿ ಚುನಾವಣೆ ಗೆದ್ದಿದ್ದಾರೆ' ಎಂದು ಎದುರಾಳಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು.
ಕಾಲು ಬಿದ್ದಿದ್ದರೆ ಅದು ವೈರಲ್ ಆಗುತ್ತಿರಲಿಲ್ಲವೇ?
ಆಡಿಯೋದಲ್ಲಿ ಶ್ರೀನಿವಾಸ ದಾಸಕರಿಯಪ್ಪ ನನಗೆ ಕಾಲು ಬಿದ್ದರು ಎಂಬ ಮಾತಿನ ಬಗ್ಗೆ ಪ್ರಶ್ನಿಸಿದ ಅವರು, 'ನಾನು ಯಾರ ಕಾಲಿಗೂ ಬಿದ್ದಿಲ್ಲ. ಒಂದು ವೇಳೆ ಸಿರಾಜ್ ಅವರ ಕಾಲು ಬಿದ್ದಿದ್ದರೆ ಅದು ಅಂದೇ ಫೋಟೋ ಅಥವಾ ವಿಡಿಯೋ ಮೂಲಕ ವೈರಲ್ ಆಗುತ್ತಿರಲಿಲ್ಲವೇ? ಇದೆಲ್ಲವೂ ಸುಳ್ಳು ಸುದ್ದಿ' ಎಂದರು. ಅಲ್ಲದೆ, ಮುಸ್ಲಿಂ ಮತಗಳ ಧ್ರುವೀಕರಣದ ಬಗ್ಗೆ ಮಾತನಾಡುತ್ತಾ, 'ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಅವರು ಎಸ್‌ಡಿಪಿಐಗೆ ಮತ ಹಾಕಿದ್ದಾರೆಯೇ ಹೊರತು, ಬಿಜೆಪಿಯನ್ನು ಗೆಲ್ಲಿಸಬೇಕು ಎಂಬ ಉದ್ದೇಶದಿಂದ ಅಲ್ಲ' ಎಂದು ವಿಶ್ಲೇಷಿಸಿದರು.
ಎಐ (AI) ಸೃಷ್ಟಿ ಬಗ್ಗೆ ತನಿಖೆಯಾಗಲಿ:
ಮೊಹಮ್ಮದ್ ಸಿರಾಜ್ ಅವರು ಈ ಆಡಿಯೋ 'ಎಐ ಸೃಷ್ಟಿ' (Deepfake) ಎಂದು ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ದಾಸಕರಿಯಪ್ಪ, 'ಈ ಬಗ್ಗೆ ಕೂಲಂಕುಷ ತನಿಖೆಯಾಗಲಿ. ಅಸಲಿಗೆ ಈ ಆಡಿಯೋವನ್ನು ಯಾರು ಹೊರಗೆ ಬಿಟ್ಟಿದ್ದಾರೆ ಎಂಬುದು ಪತ್ತೆಯಾಗಬೇಕು. ಅವರು ನನಗೇಕೆ ಫೋನ್ ಮಾಡುತ್ತಾರೆ ಮತ್ತು ನಾನು ಅವರ ಹತ್ತಿರ ಮಾತನಾಡುವ ಅಗತ್ಯವೇನಿದೆ? ಸತ್ಯಾಸತ್ಯತೆ ಹೊರಬರಲು ಉನ್ನತ ಮಟ್ಟದ ತನಿಖೆ ಅಗತ್ಯ' ಎಂದು ಒತ್ತಾಯಿಸಿದರು.
ಒಟ್ಟಾರೆಯಾಗಿ, ಈ ವೈರಲ್ ಆಡಿಯೋ ದಾವಣಗೆರೆ ರಾಜಕೀಯದಲ್ಲಿ ಹೊಸ ಆಯಾಮ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.


