*  ನೈಟ್‌ ಕರ್ಫ್ಯೂ ಮಧ್ಯೆಯೂ ಕಾರಿನಲ್ಲಿ ಮೋಜು*  ಕೈಯಲ್ಲಿ ಮದ್ಯದ ಬಾಟಲ್‌ ಹಿಡಿದು ಕೂಗಾಟ*  ಪೊಲೀಸರಿಂದ ಸ್ವಯಂ ಕೇಸ್‌, ಕಾರು ವಶ 

ಬೆಂಗಳೂರು(ಸೆ.13): ನೈಟ್‌ ಕರ್ಫ್ಯೂ ಮಧ್ಯೆ ಕೂಡ ನಗರದಲ್ಲಿ ಐಷಾರಾಮಿ ಬೆಂಜ್‌ ಕಾರಿನ ರೂಫ್‌ ಟಾಪ್‌ ತೆರೆದುಕೊಂಡು ಸುತ್ತಾಡುತ್ತಿದ್ದ ಪುಂಡರ ವಿಡಿಯೋವೊಂದು ವೈರಲ್‌ ಆಗಿದೆ.

ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಸೇರಿದಂತೆ ಪ್ರತಿಷ್ಠಿತರು ನೆಲೆಸಿರುವ ಸದಾಶಿವನಗರದಲ್ಲಿ ತಡರಾತ್ರಿ ಯುವಕ-ಯುವತಿಯರು ಕಾರಿನಲ್ಲಿ ಕೂಗಾಡುತ್ತಾ ಜಾಲಿ ರೈಡ್‌ ಮಾಡಿದ್ದಾರೆ. ಇದೀಗ ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಕಾರಿನ ಮಾಲೀಕರ ವಿರುದ್ಧ ಸದಾಶಿವ ನಗರ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ತಡರಾತ್ರಿ ಕಾರಿನಲ್ಲಿದ್ದವರು ಕಾರಿನ ಎರಡು ಕಡೆ ಡೋರ್‌, ರೂಫ್‌ ಟಾಪ್‌ ತೆರೆದು ಡ್ಯಾನ್ಸ್‌ ಮಾಡುತ್ತ ಪೊಲೀಸರ ಎದುರಿಗೆ ಕೂಗಾಡುತ್ತಾ ಅತಿವೇಗವಾಗಿ ಕಾರು ಚಲಾಯಿಸಿದ್ದರು. ಜನವಸತಿ ಪ್ರದೇಶದಲ್ಲಿ ಜೋರಾಗಿ ಮ್ಯೂಸಿಕ್‌ ಹಾಕಿ, ಕೈಯಲ್ಲಿ ಮದ್ಯದ ಬಾಟಲು ಹಿಡಿದು ನೃತ್ಯ ಮಾಡುತ್ತಾ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಈ ಮೂಲಕ ಸಂಚಾರ ನಿಯಮ ಹಾಗೂ ನೈಟ್‌ ಕರ್ಫ್ಯೂ ನಿಯಮ ಉಲ್ಲಂಘಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಬೆಂಜ್‌ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್‌ ಬಿ.ಆರ್‌.ರವಿಕಾಂತೇಗೌಡ ಹೇಳಿದ್ದಾರೆ.

ಕೋರಮಂಗಲ ಅಪಘಾತ: ಜಾಲಿರೈಡ್‌ಗೂ ಮುನ್ನ ನಡೆದಿತ್ತು ಭರ್ಜರಿ ಪಾರ್ಟಿ?

ಜಪ್ತಿ ಮಾಡಲಾದ ಐಷಾರಾಮಿ ಬೆಂಜ್‌ ಕಾರು ಸಂಜಿತ್‌.ಎಸ್‌.ಶೆಟ್ಟಿ ಎಂಬುವವರಿಗೆ ಸೇರಿದ್ದಾಗಿದೆ. ಶುಕ್ರವಾರ ತಡರಾತ್ರಿ ಈ ಕಾರಿನಲ್ಲಿ ಯಾರು ಇದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸಂಬಂಧಪಟ್ಟವರಿಗೆ ನೋಟಿಸ್‌ ಕೂಡ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನೈಟ್‌ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಅಗತ್ಯ ಸೇವೆಗಳ ವಾಹನ ಹೊರತು ಪಡಿಸಿ ಇತರ ವಾಹನಗಳು ರಸ್ತೆಗಿಳಿಯುವಂತಿಲ್ಲ. ಆದರೆ ಬೆಂಜ್‌ ಕಾರಿನ ಮೇಲೆ ಪುಂಡರು ತುರ್ತು ಅಗತ್ಯ ಸೇವೆ ಎಂದು ಫಲಕ ಕೂಡ ಹಾಕಿ ಜಾಲಿ ರೈಡ್‌ ಮಾಡಿದ್ದಾರೆ. ಕಾರಿನ ಹಿಂಭಾಗ ಸೋಹಮ್‌ ರಿನವೆಬಲ್‌ ಎನರ್ಜಿ ಪ್ರೈ.ಲಿ. ನಾಮ ಫಲಕ ಇದೆ ಎಂದು ತಿಳಿದು ಬಂದಿದೆ.

ಕಳೆದ ಒಂದು ವಾರದ ಹಿಂದೆ ಕೋರಮಂಗಲದಲ್ಲಿ ಜಾಲಿ ರೈಡ್‌ ಹೋಗಿದ್ದ ವೇಳೆ ಸಂಭವಿಸಿದ್ದ ಅಪಘಾತದಲ್ಲಿ ತಮಿಳುನಾಡು ಶಾಸಕರ ಪುತ್ರ ಸೇರಿ ಏಳು ಮಂದಿ ಅಸುನೀಗಿದ್ದರು. ಘಟನೆಯಲ್ಲಿ ಐಷಾರಾಮಿ ಆಡಿ ಸಂಪೂರ್ಣ ಜಖಂಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.