ಸೂಲಿಬೆಲೆ(ಫೆ.03): ಬಸ್‌ನಲ್ಲಿ ಸೀಟಿನ ವಿಚಾರಕ್ಕೆ ಶುರುವಾದ ಕ್ಷುಲ್ಲಕ ಜಗಳಕ್ಕೆ ಗುಂಪೊಂದು ಬಿಎಂಟಿಸಿ ಬಸ್‌ನ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿ, ಬಸ್‌ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಸೂಲಿಬೆಲೆಯಲ್ಲಿ ನಡೆದಿದೆ.

ಹೊಸಕೋಟೆ 39ನೇ ಡಿಪೋಗೆ ಸೇರಿದ ಬಿಎಂಟಿಸಿ ಬಸ್‌ನ ಕಂಡಕ್ಟರ್‌ ಬಸವರಾಜು ಅವರಿಗೆ ಗಾಯವಾಗಿದೆ. ಘಟನೆ ಸಂಬಂಧ ದಾಂಧಲೆ ನಡೆಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಪರಾರಿ ಆಗಿರುವ ಆರೋಪಿಗಳ ಪತ್ತೆ ಮೂರು ತಂಡಗಳನ್ನು ರಚಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಎಂಟಿಸಿ ಬಸ್‌ ಹೊಸಕೋಟೆಯಿಂದ ದೊಡ್ಡಬಳ್ಳಾಪುರಕ್ಕೆ ಹೊರಟಿತ್ತು. ಸೂಲಿಬೆಲೆಯಲ್ಲಿ ಬಸ್‌ ಹತ್ತಿದ ವ್ಯಕ್ತಿಯೊಬ್ಬ ಲೇಡೀಸ್‌ ಸೀಟಿನಲ್ಲಿ ಕುಳಿತಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳಾ ಪ್ರಯಾಣಿಕರೊಬ್ಬರು ಸೀಟನ್ನು ಬಿಡಿಸಿ ಕೊಡುವಂತೆ ಕಂಡಕ್ಟರ್‌ಗೆ ಹೇಳಿದ್ದಾರೆ. ಕಂಡಕ್ಟರ್‌ ಲೇಡೀಸ್‌ ಸೀಟ್‌ನಲ್ಲಿ ಕುಳಿತ್ತಿದ್ದ ವ್ಯಕ್ತಿಯನ್ನು ಸೀಟು ತೆರವು ಮಾಡುವಂತೆ ಹೇಳಿದ್ದು, ಈ ವಿಚಾರಕ್ಕೆ ಬಸ್ಸಿನಲ್ಲಿದ್ದ ಒಂದು ಕೋಮಿ ಯುವಕರು ತಗಾದೆ ತೆಗೆದಿದ್ದಾರೆ. ಸೀಟಿನಲ್ಲಿ ಕುಳಿತ ಪ್ರಯಾಣಿಕ ತಮಿಳುನಾಡಿನವನಾಗಿದ್ದು, ಆತ ತನ್ನ ಪಾಡಿಗೆ ತಾನು ಹೋಗಿದ್ದಾನೆ. ಆದರೆ ಇದೇ ವಿಚಾರಕ್ಕೆ ವೈಮನಸ್ಸು ಬೆಳೆಸಿಕೊಂಡ ಯುವಕರು, ಮತ್ತೆ ಬಸ್‌ ಹಿಂತಿರುಗುವವರೆಗೆ ಕಾದಿದ್ದಾರೆ.

ಸಂಜೆ 5.50ಕ್ಕೆ ವಾಪಸ್‌ ಬಂದ ಬಸನ್ನು ಯುವಕರ ಗುಂಪು ಹಿಂಬಾಲಿಸುತ್ತಿರುವುದು ಅರಿತ ಕಂಡಕ್ಟರ್‌ ಪೊಲೀಸ್‌ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾರೆ. ತಕ್ಷಣ ಇಬ್ಬರು ಪೊಲೀಸರು ಬಸ್‌ ಹತ್ತಿದ್ದಾರೆ. ಬಳಿಕ ಬಸ್‌ ನಿಲ್ದಾಣಕ್ಕೆ ಹೋಗುತ್ತಿರುವಾಗ ಸೂಲಿಬೆಲೆಯ ಟೌನ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಜನರ ಗುಂಪು ಬಸ್‌ ಸುತ್ತುವರಿದು, ಕಲ್ಲು ತೂರಾಟ ನಡೆಸಿದೆ. ಅಲ್ಲದೆ ಬಸ್‌ ಒಳನುಗ್ಗಿ ಪೊಲೀಸರನ್ನೇ ತಳ್ಳಾಡಿ ಕಂಡಕ್ಟರ್‌ ಬಸವರಾಜುಗೆ ಹಿಗ್ಗಾಮುಗ್ಗಾ ಥಳಿಸಿದೆ. ಇಬ್ಬರು ಪೊಲೀಸರು ಬಸವರಾಜು ಅವರನ್ನು ರಕ್ಷಿಸಿ, ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಗುಂಪನ್ನು ಚದುರಿಸಿದೆ.

ವಿಡಿಯೋ ಮಾಡಿದವರ ಮೇಲೆ ಹಲ್ಲೆ:

ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಪೊಲೀಸರನ್ನು ಯುವಕರ ಗುಂಪು ತಳ್ಳಾಡಿ ಹಲ್ಲೆಗೆ ಯತ್ನಿಸಿದೆ. ಅಲ್ಲದೆ ಸಾರ್ವಜನಿಕರು ವಿಡಿಯೋ ಮಾಡುತ್ತಿದ್ದಾಗ, ಅವರ ಮೇಲೂ ಹಲ್ಲೆ ಮಾಡಿದೆ. ಸ್ಥಳಕ್ಕೆ ಹೆಚ್ಚುವರಿ ಎಎಸ್ಪಿ ಸುಜಿತ್‌, ಡಿವೈಎಸ್ಪಿ ಸಕ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ವೇಳೆ ಕಂಡಕ್ಟರ್‌ ಬಳಿಯಿದ್ದ ಹಣ ದೋಚಲಾಗಿದೆ.

ಈ ಬಗ್ಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಎಎಸ್ಪಿ ಸುಜಿತ್‌ ಅವರು, ಘಟನೆಗೆ ಸಂಬಂಧಪಟ್ಟಂತೆ ನಾಲ್ವರನ್ನು ಬಂಧಿಸಲಾಗಿದೆ. ಕೆಲವರು ಪರಾರಿಯಾಗಿದ್ದಾರೆ. ಅವರು ಯಾವುದೇ ಗುಹೆಯಲ್ಲಿ ಅಡಗಿಕೊಂಡರೂ ಬಿಡುವುದಿಲ್ಲ. ಇಂತ ಘಟನೆಗಳು ನಡೆಯುತ್ತಿದ್ದರೆ ಪೊಲೀಸರು ಕೈಕಟ್ಟಿಕೂರುವುದಿಲ್ಲ. ಕಾನೂನು ಕ್ರಮ ಶತಃಸಿದ್ಧ ಎಂದು ತಿಳಿಸಿದ್ದಾರೆ.