ಮಂಗಳೂರು(ಏ.17): ಉದ್ಯೋಗ ನಿಮಿತ್ತ ಕಂಪನಿ ಆದೇಶದಂತೆ ಲಕ್ನೋಗೆ ತೆರಳಿದ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ತಂಬುತ್ತಡ್ಕ ನಿವಾಸಿ ಯುವಕ ಅಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಬಗ್ಗೆ ಯುವಕನ ಕುಟುಂಬಸ್ಥರು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಿದ್ದಾರೆ.

ತಂಬುತಡ್ಕ ನಿವಾಸಿ ಸುಲೈಮಾನ್‌ ಎಂಬುವರ ಪುತ್ರ ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಮಹಮ್ಮದ್‌ ಆಸಿಫ್‌ ಆನಾರೋಗ್ಯಕ್ಕೆ ಒಳಗಾಗಿ ಬಳಲುತ್ತಿರುವ ಯುವಕ. ಈತ ಉದ್ಯೋಗ ನಿಮಿತ್ತ ಉತ್ತರ ಪ್ರದೇಶ ರಾಜ್ಯದ ಲಕ್ನೋದಲ್ಲಿ ವಾಸವಾಗಿದ್ದಾರೆ.

ಲಾಕ್‌ಡೌನ್: ಶೌಚಾಲಯ, ಸ್ಮಶಾನದಲ್ಲಿ ದಿನ ಕಳೆದ ಯುವಕ

ಅವರು ಅನಾರೋಗ್ಯ ಪೀಡಿತರಾಗಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಳಿಕ ಊರಿಗೆ ಮರಳಲಾರದೆ ಅಲ್ಲಿನ ಗೆಸ್ಟ್‌ ಹೌಸ್‌ ಒಂದರಲ್ಲಿ ಉಳಿದುಕೊಂಡು ಸಂಕಷ್ಟಅನುಭವಿಸುತ್ತಿದ್ದಾರೆ. ಅವರು ಕಳೆದ ಎರಡು ವಾರದಿಂದ ಊಟವನ್ನು ಮಾಡಲಾರದೆ, ನಿದ್ದೆಯಿಲ್ಲದೆ ನೋವಿನಿಂದ ನರಕಯಾತನೆ ಅನುಭವಿಸುತ್ತಿದ್ದು, ಅಸಹಾಯಕರಾಗಿದ್ದಾರೆ.

ಆಹಾರ ಕಿಟ್‌ನಲ್ಲಿ ಸಿಕ್ಕ ಚಿನ್ನದ ಉಂಗುರ: ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಾಲಕ..!

ಜನ​ಪ್ರ​ತಿ​ನಿ​ಧಿ​ಗ​ಳಿಗೆ ಮೊರೆ: ಆಸಿಫ್‌ ಅವರ ಮಾವ ಎಸ್‌.ಪಿ.ಬಶೀರ್‌ ಶೇಕಮಲೆ ಅವರು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಕರೆ ಮಾಡಿ ಅಳಿ​ಯ​ನ​ನ್ನು ಕರೆತರುವ ಬಗ್ಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಶಾಸಕರು ಸಹಾ​ಯದ ಭರವಸೆ ನೀಡಿದ್ದಾರೆ. ಆಸಿಫ್‌ ಸಂಕಷ್ಟದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲಾಗಿದೆ. ಅಲ್ಲದೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಬಳಿ ದೂರವಾಣಿ ಮುಖಾಂತರ ಕರೆ ಮಾಡಿ ವಿಷಯ ತಿಳಿಸಿದ್ದಾಗಿ ಪುತ್ತೂರು ಬಿಜೆಪಿ ಮಂಡಲ ಪ್ರಧಾನ ಕಾರ್ಯ​ದರ್ಶಿ ನಿತೀಶ್‌ ಕುಮಾರ್‌ ಶಾಂತಿ​ವನ ತಿಳಿ​ಸಿ​ದ್ದಾ​ರೆ.