ಆಹಾರ ಕಿಟ್‌ನಲ್ಲಿ ಸಿಕ್ಕ ಚಿನ್ನದ ಉಂಗುರ: ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಾಲಕ..!
ಆಹಾರದ ಕಿಟ್ ವಿತರಣೆ ಸಂದರ್ಭ ಕಿಟ್‌ನಲ್ಲಿ ಸಿಕ್ಕಿದ ಚಿನ್ನದ ರಿಂಗ್| ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಾಲಕ| ಉಂಗುರವನ್ನು ಮಾಲೀಕ ರಾಮಚಂದ್ರ ಘಾಟೆ ಎಂಬವರಿಗೆ ಹಿಂದಿರುಗಿಸಿದ ಬಾಲಕ ಹುಕಾಸ್|
ಪುತ್ತೂರು(ಏ.17): ಲಾಕ್‌ಡೌನ್‌ನಿಂದಾಗಿ ಕಷ್ಟದಲ್ಲಿರುವವರಿಗೆ ಶಾಸಕರ ವಾರ್ ರೂಮ್ ಮೂಲಕ ವಿವಿಧ ಸಂಘಟನೆಗಳು ಹಾಗೂ ದಾನಿಗಳಿಂದ ಸಂಗ್ರಹಿಸಿ ನೀಡಲಾದ ಆಹಾರದ ಕಿಟ್ ವಿತರಣೆ ಸಂದರ್ಭ ಕಿಟ್‌ನಲ್ಲಿ ಸಿಕ್ಕಿದ ಚಿನ್ನದ ಉಂಗುರವನ್ನು ಬಾಲಕನೊಬ್ಬ ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.
ಪುತ್ತೂರು ನಗರದ ಹೊರವಲಯದ ಕರ್ಮಲ ನಿವಾಸಿ ಹನೀಫ್ ಎಂಬವರ ಮನೆಗೆ ಒಂದು ವಾರದ ಹಿಂದೆ ಶಾಸಕರ ವಾರ್ ರೂಮ್ ಮುಖಾಂತರ ಪುತ್ತೂರಿನ ಬಂಟರ ಸಂಘದ ವತಿಯಿಂದ ನೀಡಲಾದ ಆಹಾರದ ಕಿಟ್ ನೀಡಲಾಗಿತ್ತು.
ಲಾಕ್‌ಡೌನ್: ತಾಯಿ ಸತ್ತಿದ್ದಾರೆಂದು ಸುಳ್ಳು ಹೇಳಿ ಸಿಕ್ಕಿ ಬಿದ್ದ ವ್ಯಕ್ತಿ..!
ಈ ಕಿಟ್ ಪ್ಯಾಕ್ ಮಾಡುವ ಸಂದರ್ಭ ಪ್ಯಾಕ್ ಮಾಡಿದ ವ್ಯಕ್ತಿಯ ಚಿನ್ನದ ಉಂಗುರ ಕಿಟ್‌ನ ಒಳಗೆ ಬಿದ್ದಿತ್ತು. ಕಿಟ್ ತೆರೆದ ಸಂದರ್ಭದಲ್ಲಿ ಹನೀಫ್ ಅವರ ಪುತ್ರ ಹುಕಾಸ್ ಎಂಬ ಬಾಲಕನಿಗೆ ಉಂಗುರ ಸಿಕ್ಕಿತ್ತು.
ಕೂಡಲೇ ಸ್ಥಳೀಯ ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ ಅವರಿಗೆ ಮಾಹಿತಿ ನೀಡಲಾಯಿತು. ಬಳಿಕ ಅವರ ಮೂಲಕ ಉಂಗುರವನ್ನು ಮಾಲೀಕ ರಾಮಚಂದ್ರ ಘಾಟೆ ಎಂಬವರಿಗೆ ಹಿಂದಿರುಗಿಸಲಾಗಿತ್ತು. ಶಾಸಕ ಸಂಜೀವ ಮಠಂದೂರು ಅವರು ಗುರುವಾರ ಬಾಲಕನ ಮನೆಗೆ ತೆರಳಿ ಆತನನ್ನು ಗೌರವಿಸಿದರು.