ಚಿಕ್ಕಮಗಳೂರು(ಏ.29): ಹೊಟೇಲ್‌ನಲ್ಲಿ ಕೆಲಸದಲ್ಲಿದ್ದ ಯುವಕನೊಬ್ಬ ಕಾಲ್ನಡಿಗೆಯಲ್ಲಿಯೇ ಮಧ್ಯಪ್ರದೇಶಕ್ಕೆ ಹೊರಟ ವ್ಯಥೆಯ ಕಥೆ ಇದು. - ಮಧ್ಯಪ್ರದೇಶದ ಹಕ್ಕಂ ತೋಮರ್‌ ಎಂಬಾತ ಮಂಗಳೂರಿನ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಲಾಕ್‌ಡೌನ್‌ನಿಂದ ಹೋಟೆಲ್‌ನಲ್ಲಿ ಕೆಲಸ ಇಲ್ಲ, ಊರಿಗೆ ಹೋಗಲು ರೈಲಿನ ಸಂಪರ್ಕವೂ ಇಲ್ಲ, ಇದರಿಂದ ಆತ ಕಂಡುಕೊಂಡ ದಾರಿ ಚಿಕ್ಕಮಗಳೂರು ಮಾರ್ಗವಾಗಿ ಕಾಲ್ನಡಿಗೆಯಲ್ಲಿಯೇ ತಮ್ಮೂರಿಗೆ ಹೋಗುವುದು.

ಹೀಗೆ ಆಲೋಚಿಸಿ ಹಕ್ಕಂ ತೋಮರ್‌ ಕಳೆದ ಮೂರು ದಿನಗಳ ಹಿಂದೆ ಮಂಗಳೂರಿನಿಂದ ಮೂಡಿಗೆರೆ ತಾಲೂಕಿನ ಕಳಸಕ್ಕೆ ನಡೆದುಕೊಂಡು ಬಂದಿದ್ದಾರೆ. ಈ ವಿಷಯ ಕಳಸದಲ್ಲಿ ತಿಳಿಯುತ್ತಿದ್ದಂತೆ ಯುವಕನನ್ನು ಅಂಬುಲೆನ್ಸ್‌ನಲ್ಲಿ ಅಧಿಕಾರಿಗಳು ಮಂಗಳೂರಿಗೆ ವಾಪಸ್‌ ಕಳುಹಿಸಿದ್ದಾರೆ.

ಕೋಲಾರದಲ್ಲಿ ಮಳೆ: ಟೊಮೆಟೊ, ಕ್ಯಾಪ್ಸಿಕಂಗೆ ಹಾನಿ, ಕೆಜಿ ಗಾತ್ರದ ಆಲಿಕಲ್ಲು

ಆಗ ಉಡುಪಿ ಜಿಲ್ಲೆಯ ಮಾಳ ಚೆಕ್‌ಪೋಸ್ಟ್‌ನಲ್ಲಿ ಅಂಬುಲೆನ್ಸ್‌ ತಪಾಸಣೆಗೆ ಒಳಪಡಿಸುವ ವೇಳೆಯಲ್ಲಿ ಯುವಕ ನಡೆದು ಬಂದ ದಾರಿಯ ಬಗ್ಗೆ ತಿಳಿಸಿದಾಗ ಆತನನ್ನು ಚಿಕ್ಕಮಗಳೂರಿಗೆ ವಾಪಸ್‌ ಕರೆದುಕೊಂಡು ಹೋಗಿ ಎಂದು ಅದೇ ಅಂಬುಲೆನ್ಸ್‌ನಲ್ಲಿ ಕಳುಹಿಸಿದ್ದಾರೆ.

ಆಗ ಕಳಸಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ಬಸ್ರಿಕಲ್‌ ಚೆಕ್‌ ಪೋಸ್ಟ್‌ ಬಳಿ ಅಂಬುಲೆನ್ಸ್‌ ಚಾಲಕ ಸೋಮವಾರ ಮಧ್ಯ ರಾತ್ರಿ ಯುವಕನನ್ನು ಇಳಿಸಿ ಹೋಗಿದ್ದಾರೆ. ಆಗ ಬಸ್ರಿಕಲ್‌ ಚೆಕ್‌ ಪೋಸ್ಟ್‌ನಲ್ಲಿದ್ದವರು. ಜಿಲ್ಲೆಯ ಒಳಗೆ ಬಿಡುವುದು ಬೇಡವೆಂದು ಸ್ಥಳದಲ್ಲೇ ಕುಳಿತುಕೊಳ್ಳಲು ಹೇಳಿದ್ದಾರೆ.

ಜವಳಿ ನಗರದಲ್ಲಿ ಬಟ್ಟೆ ಅಂಗಡಿ ತೆರೆಯಲು ಇಲ್ಲ ಅನುಮತಿ, ಹೀಗಿದೆ ದಾವಣಗೆರೆ ಪರಿಸ್ಥಿತಿ

ಈ ವಿಷಯ ತಿಳಿಯುತ್ತಿದ್ದಂತೆ ಮೂಡಿಗೆರೆ ತಾಲೂಕು ತಹಸೀಲ್ದಾರ್‌ ರಮೇಶ್‌ ಯುವಕನ ಆರೋಗ್ಯ ತಪಾಸಣೆ ನಡೆಸಿ ಈಗ ಚಿಕ್ಕಮಗಳೂರಿನಲ್ಲಿ ಕ್ವಾರೆಂಟೈನ್‌ಗೆ ಕಳುಹಿಸಿಕೊಟ್ಟಿದ್ದಾರೆ.