ಬೆಂಗಳೂರು(ಫೆ.16): ಭಾವನನ್ನು ಬಾಮೈದನೇ ಹತ್ಯೆ ಮಾಡಿರುವ ಘಟನೆ ನಂದಿನಿ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಜೈಮಾರುತಿ ನಗರ ನಿವಾಸಿ ಹಾಜೀಂ ಮಲಾಂಗ್‌ (45) ಕೊಲೆಯಾದವ. ಈ ಸಂಬಂಧ ಆರೋಪಿ ಖಾದರ್‌ಖಾನ್‌ (24) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹಾಜೀಂ ಮಲಾಂಗ್‌ ಆರ್‌ಎಂಸಿ ಯಾರ್ಡ್‌ನಲ್ಲಿ ಲಾರಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ. ಹಾಜಿಂ ಮಲಾಂಗ್‌ ಕೆಲ ವರ್ಷಗಳ ಹಿಂದೆ ಶಾಹೀನಾ ಎಂಬುವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಹಜೀಮ್‌ ಮಲಾಂಗ್‌ ನಿತ್ಯ ಕುಡಿದು ಬಂದು ಪತ್ನಿ ಬಳಿ ಗಲಾಟೆ ಮಾಡುತ್ತಿದ್ದ. ಈ ಸಂಬಂಧ ನಂದಿನಿ ಲೇಔಟ್‌ ಠಾಣೆಯಲ್ಲಿ ಶಾಹೀನಾ ಪತಿ ವಿರುದ್ಧ ದೂರು ನೀಡಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ಕುಡಿದು ಜಗ​ಳ: ಯುವ​ಕನನ್ನ ಕೊಂದ ಚಿಕ್ಕಪ್ಪ ...

ಶಾಹೀನಾ ಕೂಡ ನಂದಿನಿ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಭಾನುವಾರ ಶಾಹೀನಾ ಮಕ್ಕಳೊಂದಿಗೆ ಪತಿಯ ಮನೆ ಹೋಗಿದ್ದರು. ಈ ವೇಳೆ ಕುಡಿದು ಮಲಾಂಗ್‌ ಪತ್ನಿ ಬಳಿ ಗಲಾಟೆ ಮಾಡಿದ್ದ. ಖಾದರ್‌ ಖಾನ್‌ ಬಂದು ಭಾವನಿಗೆ ಎಚ್ಚರಿಕೆ ನೀಡಿ ಹೋಗಿದ್ದ. ರಾತ್ರಿ 11.30ರ ಸುಮಾರಿಗೆ ಪುನಃ ಕುಡಿದು ಬಂದು ಪತ್ನಿ ಮೇಲೆ ಮಲಾಂಗ್‌ ಹಲ್ಲೆ ನಡೆಸಿದ್ದ. ಅಕ್ಕನ ಮಗ ಈ ವಿಚಾರವನ್ನು ಖಾದರ್‌ ಖಾನ್‌ಗೆ ಕರೆ ಮಾಡಿ ತಿಳಿಸಿದ್ದ. ಕೂಡಲೇ ಮನೆಗೆ ಬಂದ ಖಾದರ್‌ ಖಾನ್‌ ಮೇಲೆ ಹಾಜೀಂ ಮಲಾಂಗ್‌ ಜಗಳ ಮಾಡಿದ್ದಾನೆ. ಖಾದರ್‌ ಅಲ್ಲಿಯೇ ಇದ್ದ ಇಟ್ಟಿಗೆಯಿಂದ ಭಾವನ ತಲೆಗೆ ಹೊಡೆದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.